/newsfirstlive-kannada/media/post_attachments/wp-content/uploads/2024/07/Kerala7.jpg)
ದೇವರನಾಡು ಕೇರಳದಲ್ಲಿ ಸಂಭವಿಸಿದ ಭೂಕುಸಿತ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಒಂದೇ ರಾತ್ರಿಯಲ್ಲಿ ಇಡೀ ಊರಿಗೇ ಊರೇ ಸಮಾಧಿಯಾಗಿದೆ. ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗ್ತಿದ್ದು, ದುರಂತದಲ್ಲಿ ಇದುವರೆಗೂ 143ಕ್ಕೂ ಹೆಚ್ಚು ಮಂದಿ ಮೃತಪಟ್ಟಿರಿದ್ದಾರೆ. ಅದರಲ್ಲೂ ಕೇರಳದಲ್ಲಿ ಬದುಕು ಕಟ್ಟಿಕೊಂಡಿದ್ದ ಕರ್ನಾಟಕದ ನಾಲ್ವರು ಭೂಕುಸಿತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಚಾಮರಾಜನಗರ ಮೂಲದ ನಾಲ್ವರು ಭೂಕುಸಿತಕ್ಕೆ ಬಲಿ
ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿರುವ ಭೂಕುಸಿತದಲ್ಲಿ ಕರ್ನಾಟಕದ ನಾಲ್ವರು ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆಯ ಇರಸವಾಡಿ ಗ್ರಾಮದ ರಾಜೇಂದ್ರ (50), ರತ್ನಮ್ಮ (45), ಪುಟ್ಟಸಿದ್ದಶೆಟ್ಟಿ (62), ರಾಣಿ (50 ಮೃತಪಟ್ಟಿದ್ದಾರೆ. ಸದ್ಯ ಪುಟ್ಟಸಿದ್ದಶೆಟ್ಟಿ ಹಾಗೂ ರಾಣಿ ಎಂಬುವವರ ಮೃತದೇಹಗಳನ್ನು ರಕ್ಷಣಾ ಪಡೆಗಳು ಹೊರತೆಗೆದಿದ್ದಾರೆ. ತ್ರಯಂಬಕಪುರದ ಸ್ವಾಮಿಶೆಟ್ಟಿ ಎಂಬುವವರು ಗಾಯಗೊಂಡಿದ್ದಾರೆ. ವಯನಾಡು ಜಿಲ್ಲೆಯ ಮೆಪ್ಪಾಡಿಯ ವೈತ್ರಿ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆದಿದ್ದು ಮೃತರ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದ್ದಾರೆ.
ಕೇರಳದಲ್ಲಿ ಸಂಕಷ್ಟಕ್ಕೆ ಸಿಲುಕಿದ ಮಂಡ್ಯದ ಕುಟುಂಬ
ಮತ್ತೊಂದೆಡೆ ಮಂಡ್ಯ ಮೂಲದ ಕುಟುಂಬವೊಂದು ಮುಂಡಕೈ ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಝಾನ್ಸಿ ಎಂಬುವವರ ಕುಟುಂಬ ಸಂಕಷ್ಟದಲ್ಲಿದೆ. ಮೈಸೂರಿನ ಸರಗೂರಿನ ಅನಿಲ್ ಕುಮಾರ್ ಎಂಬುವರನ್ನು ಮದುವೆಯಾಗಿದ್ದ ಝಾನ್ಸಿರಾಣಿ ಕುಟುಂಬ ಕೇರಳದಲ್ಲಿ ನೆಲೆಸಿತ್ತು. ಭೂಕುಸಿತದಲ್ಲಿ ಗಂಭೀರ ಗಾಯಗೊಂಡಿರುವ ಅನಿಲ್, ಪತ್ನಿ ಝಾನ್ಸಿ ಹಾಗೂ ತಂದೆ ದೇವರಾಜುರನ್ನು ಕೇರಳದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇನ್ನು, ಝಾನ್ಸಿರಾಣಿ ಪುತ್ರ ಎರಡೂವರೆ ವರ್ಷದ ಕಂದಮ್ಮ ನಿಹಾಲ್ ಹಾಗೂ ಅತ್ತೆ ಲೀಲಾವತಿ (55) ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಝಾನ್ಸಿರಾಣಿ ಕುಟುಂಬಸ್ಥರನ್ನ ಕಾಣಲು ಕೆ.ಆರ್.ಪೇಟೆಯಿಂದ ಕೇರಳಕ್ಕೆ ತೆರಳಿದ್ದಾರೆ. ಘಟನೆ ನೆನೆದು ಆಸ್ಪತ್ರೆಯಲ್ಲಿ ಗಾಯಾಳು ಅನಿಲ್ ಕಣ್ಣೀರಿಟ್ಟಿದ್ದಾರೆ.
ಕೇರಳದಲ್ಲಿ ಕನ್ನಡಿಗರ ರಕ್ಷಣೆಗೆ ಸಹಾಯವಾಣಿ ತೆರೆದ ಸರ್ಕಾರ
ವಯನಾಡು ಭೂ-ಕುಸಿತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಕರ್ನಾಟಕ ಸರ್ಕಾರ ಇಬ್ಬರು ಅಧಿಕಾರಿಗಳ ನೇಮಕ ಮಾಡಿದೆ. ಐಎಎಸ್ ಪಿ.ಸಿ ಜಾಫರ್ ಹಾಗೂ ದಿಲೀಶ್ ಶಶಿ ನಿಯೋಜನೆ ಮಾಡಿದೆ. ಇಬ್ಬರು ಅಧಿಕಾರಿಗಳು, ಸಿಎಂ ಸಿದ್ದರಾಮಯ್ಯಗೆ ಪ್ರತಿಕ್ಷಣದ ಮಾಹಿತಿ ನೀಡಲಿದ್ದಾರೆ. ಇದರ ಜೊತೆಗೆ 94483 55577, 94460 00514 ನಂಬರಿನ ಸಹಾಯವಾಣಿ ಸ್ಥಾಪಿಸಿದೆ. ಮತ್ತೊಂದೆಡೆ ವಯನಾಡು ಸುಲ್ತಾನ್ ಬತ್ತೇರಿ ಭಾಗಕ್ಕೆ ಕೂಲಿ ಅರಸಿ ಹೋಗಿರುವ ಚಾಮರಾಜನಗರ, ಗುಂಡ್ಲುಪೇಟೆ ಜನರಿಗೆ ಅನುಕೂಲ ಆಗುವ ದೃಷ್ಟಿಯಿಂದ ಈ ಸಹಾಯವಾಣಿ ಕೂಡ ಆರಂಭಿಸಲಾಗಿದೆ. ಕೇರಳದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಬದ್ಧ ಅಂತ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಿಂದ ಕೇರಳಕ್ಕೆ ಬಸ್ಗಳ ಸಂಚಾರ ಸ್ಥಗಿತ
ರಣಭೀಕರ ಮಳೆಗೆ ವಯನಾಡು ಭೂಕುಸಿತದ ಬೆನ್ನಲ್ಲೇ ಬೆಂಗಳೂರಿನಿಂದ ಕೇರಳಕ್ಕೆ ಸಂಚಾರ ಮಾಡೋ ಬಹುತೇಕ ಬಸ್ಗಳ ಸಂಚಾರ ಸ್ಥಗಿತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಎರಡು ರಾಜ್ಯಗಳ ಬಸ್ ಸಂಚಾರ ಸ್ಥಗಿತಗೊಂಡಿದೆ. ಕಣ್ಣೂರು, ನಿಲಂಬೂರು, ಕೋಝಿಕ್ಕೋಡ್, ವಡಗಾರ, ತಲಚೇರಿ ಸೇರಿದಂತೆ ಕೆಲ ಭಾಗಗಳಿಗೆ ಮಾತ್ರ ಬೇರೆ ಬೇರೆ ಮಾರ್ಗಗಳ ಮೂಲಕ ಬಸ್ಗಳು ಸಂಚರಿಸುತ್ತಿವೆ. ಒಟ್ಟಾರೆ, ವಿವಿಧ ಕಾರಣಗಳಿಗಾಗಿ ಕೇರಳಕ್ಕೆ ಹೋಗಿದ್ದ ಕರ್ನಾಟಕದ ಪ್ರಜೆಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಕೃತಿ ಮುನಿದರೆ ಯಾವುದೂ ಉಳಿಯಲ್ಲ ಎಂಬ ಮಾತಿಗೆ ಸದ್ಯ ವಯನಾಡಿನಲ್ಲಿ ಸಂಭವಿಸಿರುವ ದುರಂತವೇ ಸಾಕ್ಷಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ