/newsfirstlive-kannada/media/post_attachments/wp-content/uploads/2025/03/AFTER-MAHAKUMBA-3.jpg)
ಸುತ್ತ ನೋಡಿದರು ಒಂದು ನರಪಿಳ್ಳೆಯೂ ಕಾಣುವುದಿಲ್ಲ, ಕಣ್ಣು ಹಾಯಿಸಿದ ಕಡೆಯಲ್ಲೆಲ್ಲಾ ಖಾಲಿ ಖಾಲಿತನ ತುಂಬಿಕೊಂಡಿದೆ. ಬಿಕೋ ಎನ್ನುತ್ತಿರುವ ಸ್ಥಳ. ಕೆಲವೇ ದಿನಗಳ ಹಿಂದೆ ಇಲ್ಲಿ ಕಾಲಿಡಲಾಗದಷ್ಟು ಜನದಟ್ಟಣೆ. ಎಲ್ಲರ ಬಾಯಲ್ಲಿಯೂ ಹರ ಹರ ಮಹಾದೇವ ಎಂಬ ಘೋಷಣೆ, ಗಂಗೆಯಲ್ಲಿ ಮಿಂದೆಳುವ ಹವಣಿಕೆ. ಈಗ ಆ ಮಹಾಸಂಭ್ರಮ ಮುಗಿದು ಬರೀ ಖಾಲಿತನವನ್ನು ಹೊತ್ತುಕೊಂಡು ಕುಳಿತಿದೆ ಉತ್ತರಪ್ರದೇಶದ ಪ್ರಯಾಗರಾಜ್.
ನಾವು ಈಗ ಮಾತನಾಡುತ್ತಿರುವುದು ಮಹಾಕುಂಭಮೇಳದ ಬಗ್ಗೆ ಸತತ 45 ದಿನಗಳ ಕಾಲ ನಿರಂತರವಾಗಿ ನಡೆದ ಮಹಾಕುಂಭಮೇಳದಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು. ಜನವರಿ 13 ರಿಂದ ಆರಂಭಗೊಂಡ ಮಹಾಕುಂಭಮೇಳದ ಪವಿತ್ರ ಸ್ನಾನ, ಫೆಬ್ರವರಿ 26 ರಂದು ಮಹಾಶಿವರಾತ್ರಿಯ ಪುಣ್ಯಸ್ನಾನದೊಂದಿಗೆ ಕೊನೆಗೊಂಡಿತು. ಆಗ ಅಲ್ಲಿ ಮೇಳೈಸಿದ್ದ ಭಕ್ತಸಾಗರ. ಗದ್ದಲ ಗಲಾಟೆ, ಜನರ ಓಡಾಟ, ಮಂತ್ರಘೋಷಗಳ ಪಠಣೆ. ಸದ್ಯ ಇದ್ಯಾವುದು ಇಲ್ಲದೇ ಅಕ್ಷರಶಃ ಸಂಪೂರ್ಣವಾಗಿ ಖಾಲಿಯಾಗಿದೆ ಪ್ರಯಾಗರಾಜ್
ಇದನ್ನೂ ಓದಿ: 66 ಕೋಟಿ ಭಕ್ತರ ತೀರ್ಥಸ್ನಾನ.. 144 ವರ್ಷಗಳ ಮಹಾಕುಂಭಮೇಳಕ್ಕೆ ತೆರೆ; ಟಾಪ್ 10 ಫೋಟೋಗಳು ಇಲ್ಲಿದೆ
ಈಗ ಪ್ರಯಾಗರಾಜ್ನಲ್ಲಿ ಎಲ್ಲಿ ನೋಡಿದರು ಖಾಲಿಯಾಗ ನೇತಾಡುತ್ತಿರುವ ತಾತ್ಕಾಲಿಕ ಬ್ರಿಡ್ಜ್, ಘಾಟ್ಗಳು ಇವೇ ಕಾಣಸಿಗುತ್ತವೆ, ಮಹಾಸಂಭ್ರಮವೊಂದು ಮುಗಿದಿದ್ದು ಈಗ ನಿರಂತರವಾಗಿ ಧಾರಾಕಾರವಾಗಿ ಸುರಿದ ಮಳೆ ಏಕಾಏಕಿ ನಿಂತ ಅನುಭವವನ್ನು ನೀಡುತ್ತಿದೆ. ಸದ್ಯ ಉತ್ತರಪ್ರದೇಶದ ಸರ್ಕಾರ ಶುಕ್ರವಾರದಿಂದ ವಿಶೇಷ ಸ್ವಚ್ಛತಾ ಕಾರ್ಯಕ್ರಮಕ್ಕೆ ಸೂಚನೆ ನೀಡಿದೆ. ಕುಂಭಮೇಳ ನಡೆದ ಜಾಗದಲ್ಲಿ ಇರುವ ತ್ಯಾಜ್ಯಗಳನ್ನು ಸ್ವಚ್ಛ ಮಾಡುವಂತೆ ಆದೇಶ ನೀಡಲಾಗಿದೆ. ಮುಂದಿನ 15 ದಿನಗಳ ಕಾಲ ಸಂಗಮ ಘಾಟ್ಗಳು ಹಾಗೂ ಕುಂಭಮೇಳದ ಮೈದಾನಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ಉತ್ತರಪ್ರದೇಶದ ಸರ್ಕಾರ ಹೇಳಿದೆ.
ಮಹಾಕುಂಭಮೇಳ ಹೆಸರಿನ ಹಾಗೆ ಏಕಕಾಲಕ್ಕೆ ಮಹಾಮಾನವ ಸಾಗರ ಸಂಗಮಿಸುವ ಒಂದು ಅಪರೂಪದ ಕ್ಷಣವಾಗಿ ಇತಿಹಾಸದಲ್ಲಿ ದಾಖಲಾಯಿತು. ಸುಮಾರು 66 ಕೋಟಿ ಜನರು ಮಹಾಕುಂಭಮೇಳಕ್ಕೆ ಬಂದು ಗಂಗೆಯಲ್ಲಿ ಮಿಂದೆದ್ದು ಪುನೀತರಾಗಿ ಹೋಗಿದ್ದಾರೆ. ಸದ್ಯ ಈಗ ಗಂಗೆಯ ತೀರವನ್ನು ಹಾಗೂ ಒಡಲನ್ನು ಸ್ವಚ್ಛಗೊಳಿಸಲೆಂದೇ ಯೋಗಿ ಆದಿತ್ಯನಾಥ್ ಸರ್ಕಾರ 15 ಸಾವಿರ ಸ್ವಚ್ಛತಾ ಕಾರ್ಮಿಕರನ್ನು ನೇಮಿಸಿದೆ. ಮತ್ತು 2 ಸಾವಿರ ಗಂಗಾ ಸೇವಾ ದೂತರನ್ನು ಕೂಡ ನಿಯೋಜಿಸಲಾಗಿದೆ.
ವಿಶೇಷ ಅಧಿಕಾರಿ ಆಕಾಂಕ್ಷಾ ರಾಣಾ ಅವರನ್ನು ಈ ಸ್ವಚ್ಛತಾ ಕಾರ್ಯಕ್ರಮದ ಉಸ್ತುವಾರಿಯಾಗಿ ನೇಮಿಸಲಾಗಿದೆ. ಇದರಲ್ಲಿ ಸ್ವಚ್ಛತಾ ಮಿತ್ರ ಮತ್ತು ಗಂಗಾ ಸೇವಾ ದೂತರು ತುಂಬಾ ಚಟುವಟಿಕೆಯಿಂದ ಪಾಲ್ಗೊಂಡು ನದಿಯಲ್ಲಿ ಮೊದಲಿನ ಶುದ್ಧತೆಯನ್ನು ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಆಕಾಂಕ್ಷಾ ರಾಣಾ ಹೇಳಿದ್ದಾರೆ.
ಇದನ್ನೂ ಓದಿ:ಯಶಸ್ವಿಯಾದ ಮಹಾ ಕುಂಭಮೇಳ.. ಉತ್ತರ ಪ್ರದೇಶಕ್ಕೆ ಎಷ್ಟು ಲಕ್ಷ ಕೋಟಿ ಆದಾಯ ಬಂದಿದೆ ಗೊತ್ತಾ?
ಮಹಾಕುಂಭಮೇಳ ಸಾಂಗವಾಗಿ ನೇರವೇರಲು ಅನೇಕ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಲಾಗಿತ್ತು. ತಾತ್ಕಾಲಿಕ ಪೈಪ್ಲೈನ್, ಬೀದಿ ದೀಪಗಳು, ಟೆಂಟ್ ಮತ್ತು ಮಂಟಪಗಳು, ಸೇತುವೆಗಳು, 1.5 ಲಕ್ಷದಷ್ಟು ತಾತ್ಕಾಲಿಕ ಶೌಚಾಲಯಗಳು ಹೀಗೆಲ್ಲಾ ಅನೇಕ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಇವೆಲ್ಲವನ್ನೂ ಈಗ ಅಲ್ಲಿಂದ ತೆಗೆದು ಹಾಕುವ ಕೆಲಸವನ್ನು ಕೂಡ ಮಾಡಬೇಕಿದ್ದು, ಆ ಕಾರ್ಯವೂ ಕೂಡ ಈಗ ಜಾರಿಯಲ್ಲಿದೆ.