/newsfirstlive-kannada/media/post_attachments/wp-content/uploads/2024/12/LONG-TERM-MARRIEGES.jpg)
ಸೆಲೆಬ್ರೆಟಿಗಳ ಬದುಕು ಅಷ್ಟು ಸರಳವಲ್ಲ. ಒಂದು ಬಾರಿ ಜನಪ್ರಿಯತೆಯ ಉತ್ತುಂಗ ಏರಿದ ಮೇಲೆ ಅವರು ಲಕ್ಷಾಂತರ ಜನರ ಆರಾಧ್ಯ ದೈವವಾಗಿ ಬಿಡುತ್ತಾರೆ. ಹಲವರ ಬದುಕಿಗೆ ಪ್ರೇರಣೆಯಾಗಿ ನಿಲ್ಲುತ್ತಾರೆ. ಅವರ ವೃತ್ತಿ ಹಾಗೂ ವೈಯಕ್ತಿಕ ಬದುಕು ಕೂಡ ತಿಳಿದುಕೊಳ್ಳುವ ಆಸಕ್ತಿಯ ಒಂದು ಭಾಗವಾಗಿ ಉಳಿದಕೊಂಡು ಬಿಡುತ್ತದೆ. ಜನರಿಗೆ ಅವರ ಬದುಕಿನ ಎಲ್ಲಾ ಘಟನೆಗಳು ಪ್ರಮುಖವಾಗಿ ಕಾಣುತ್ತವೆ. ಅದರಲ್ಲೂ ಅವರ ಸೆಲೆಬ್ರೆಟಿಗಳ ಲವ್ ಸ್ಟೋರಿ, ಅವರ ಮದುವೆ ಇವೆಲ್ಲವೂ ಕೂಡ ತುಂಬಾನೇ ಸುದ್ದಿಯಾಗುತ್ತವೆ.
ಹೀಗೆ ಅನೇಕ ಜನಪ್ರಿಯ ನಾಯಕರು ಮದುವೆಯಾಗಿದ್ದಾರೆ ಹಾಗೆಯೇ ಬೇರೆ ಕೂಡ ಆಗಿದ್ದಾರೆ. ಅವರ ಅಗಲಿಕೆಗೆ ಹಲವು ಕಾರಣಗಳಿರುತ್ತವೆ. ವರ್ಷ ಕಳೆದಂತೆ ಒಲವಿನ ಒರೆತೆಯಲ್ಲಿ ಬತ್ತಿ ಹೋಗುವ ಪ್ರೇಮದ ದ್ರವವಿರಬಹುದು. ಇಲ್ಲವೇ ಇಂಗ್ಲೀಷ್ನಲ್ಲಿ ಕರೆಯುವ ಸೆವೆನ್ ಇಯರ್ ಇಚ್ ಅಂದ್ರೆ ಏಳು ವರ್ಷದ ನವೆ ಎಂಬ ಗಾದೆಯೂ ನಿಜವಿರಬಹುದು ಒಟ್ಟಿನಲ್ಲಿ ದೂರವಾಗುತ್ತಾರೆ. ಹಾಗಾದ್ರೆ ಈ ಸೆವನ್ ಇಯರ್ ಇಚ್ ಎನ್ನುವುದು ನಿಜವಾ..? ಇದರಿಂದಲೇ ದೀರ್ಘಕಾಲದ ದಾಂಪತ್ಯಗಳು ಮುರಿದು ಬೀಳುತ್ತಿವೆಯಾ? ಎಂಬುದನ್ನು ನೋಡುತ್ತಾ ಹೋದರೆ ಅದರ ಹಿಂದೆ ಇರುವ ಒಂದು ಅಧ್ಯಯನವೇ ತೆರೆದುಕೊಳ್ಳುತ್ತದೆ.
ಕೆಂಬ್ರಿಡ್ಜ್ ವಿಶ್ವಿವಿದ್ಯಾಲಯದ ನಿಘಂಟು ಸಾಮಾನ್ಯವಾಗಿ ಬದುಕಲ್ಲಿ ಬಂದು ಹೋಗುವ ಒಂದು ಹಂತವಾದ ಈ ಸೆವೆನ್ ಇಯರ್ ಇಚ್ ಬಗ್ಗೆ ವರ್ಣನೆ ಮಾಡಿದ್ದಾರೆ. ಮದುವೆಯಾದ ವ್ಯಕ್ತಿಯಲ್ಲಿ ಈ ಸೆವೆನ್ ಇಯರ್ ಇಚ್ ಕಾಣಿಸಿಕೊಂಡರೆ ಆತ ದಾಂಪತ್ಯಕ್ಕೆ ಕಾಲಿಟ್ಟ ಏಳನೇ ವರ್ಷಕ್ಕೆ ತನ್ನ ಸಂಗಾತಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ. ಸಂತೋಷ ಕಳೆದುಕೊಳ್ಳುತ್ತಾನೆ. ದಾಂಪತ್ಯದಾಚೆಗೆ ಒಂದು ದೈಹಿಕ ಸಂಬಂಧವನ್ನು ಹುಡುಕಿಕೊಂಡು ಹೊರಡುತ್ತಾನೆ. ಕೊನೆಗೆ ಅದು ವಿಚ್ಛೇಧನದಲ್ಲಿ ಕೊನೆಗೊಳ್ಳುತ್ತದೆ.
ಇದನ್ನೂ ಓದಿ:ಟೆನ್ಷನ್ ಬಿಟ್ಹಾಕಿ ಕೂಲ್ ಆಗಿರಿ.. ಈ 4 ಮಾರ್ಗಗಳನ್ನ ಪಾಲಿಸಿದ್ರೆ ಒತ್ತಡದಿಂದ ಪಾರಾಗಬಹುದು; ನೀವೂ ಟ್ರೈ ಮಾಡಿ!
ನಮಗೆ ಇತ್ತೀಚೆಗೆ ಇಂತಹ ಸಮಸ್ಯೆಗಳನ್ನು ಹಲವು ಸೆಲೆಬ್ರಿಟಿಗಳ ಬದುಕಲ್ಲಿ ಕಾಣಸಿಗುತ್ತಿವೆ. ಹಲವಾರು ವರ್ಷ ಜೊತೆಯಾಗಿ ಇದ್ದ ಜೋಡಿಗಳು ನೂರಾರು ಕಾರಣದಿಂದ ಬೇರೆ ಬೇರೆ ಆಗುತ್ತಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಬಿಲ್ ಗೇಟ್ಸ್ ಕೂಡ 2021ರಲ್ಲಿ ದೊಡ್ಡ ಶಾಕ್ ಕೊಟ್ಟಿದ್ದರು. ತಮ್ಮ 21 ವರ್ಷಗಳ ದಾಂಪತ್ಯಕ್ಕೆ ತೀಲಾಂಜಲಿಯನ್ನಿಟ್ಟು ಬೇರೆಯಾಗಿದ್ದರು. ಅಮೆಜಾನ್ನ ಸಂಸ್ಥಾಪಕ ಜೆಫ್ ಬೇಜೋಸ್ ಮಕೆಂಜಿ ಸ್ಕಾಟ್ನ್ನು ಮದುವೆಯಾಗಿ 25 ವರ್ಷದ ಬಳಿಕ ಬೇರೆಯಾಗಿದ್ದರು. ಇದನ್ನು ವಿಶ್ವದ ಅತ್ಯಂತ ದುಬಾರಿ ವಿಚ್ಛೇದನ ಎಂದೇ ಜಗತ್ತು ಗುರುತಿಸಿತ್ತು.
ಇದನ್ನೂ ಓದಿ: 45 ಸಾವಿರ ಕೋಟಿ ಆಸ್ತಿ ಬಿಟ್ಟು ಸನ್ಯಾಸಿಯಾದ ಕೋಟ್ಯಾಧಿಪತಿಯ ಒಬ್ಬನೇ ಮಗ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಭಾರತದಲ್ಲಿಯೂ ಕೂಡ ಇಂತಹ ಅನೇಕ ವಿಚ್ಛೇಧನಗಳನ್ನು ನಾವು ಗುರುತಿಸಬಹುದು. ಸಿನಿಮಾ ಸಂಗೀತ ದಿಗ್ಗಜ ಎ. ಆರ್ ರೆಹಮಾನ್ ಬಾಳಿನಲ್ಲಿಯೂ ಇತ್ತೀಚೆಗೆ ಡಿವೋರ್ಸ್ ಎಂಬ ಬಿರುಗಾಳಿ ಎದ್ದು ದೊಡ್ಡ ಸುದ್ದಿಯಾಗಿತ್ತು. 18 ವರ್ಷ ಕೂಡಿ ಬಾಳಿದ ಜೋಡಿಗಳು ಏಕಾಏಕಿ ದೂರವಾದವು.ಐಶ್ವರ್ಯ ರಜಿನಿಕಾಂತ್ ಧನುಷ್, ಮಲೈಕಾ ಅರೋರಾ ಅರ್ಬಾಜ್, ರವಿಶಾಸ್ತ್ರಿ-ರಿಜು ಸಿಂಗ್ ಹೀಗೆ ಹಲವು ಜೋಡಿಗಳು ತಮ್ಮ ದೀರ್ಘಕಾಲದ ದಾಂಪತ್ಯದ ಬದುಕಿಗೆ ಫುಲ್ಸ್ಟಾಪ್ ಇಟ್ಟುಕೊಂಡು ತಮ್ಮದೇ ಬೇರೆಯದಾದ ಒಂದು ದಾರಿಯಲ್ಲಿ ನಡೆಯುತ್ತಿದ್ದಾರೆ. ಹಾಗಿದ್ದರೆ ಈ ರೀತಿಯ ವಿಚ್ಛೇಧನಗಳು ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚಾಗುತ್ತಿರುವುದು ಏಕೆ. ? ಕಾರಣವೇನು ಎಂದು ನೋಡಿದಾಗ ಡಾ ಕೌಸರ್ ಶೇಖ್ ಅವರು ಕೆಲವು ಕಾರಣಗಳನ್ನು ತೆರದಿಟ್ಟಿದ್ದಾರೆ.
ಆರ್ಥಿಕ ಸ್ವಾತಂತ್ರ್ಯ
ಇಂದಿನ ಸಾಮಾಜಿಕ ಆರ್ಥಿಕ ಪರಿಸರದಲ್ಲಿ ಬಹುತೇಕ ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವಾತಂತ್ರ್ಯ ಹೊಂದಿದ್ದಾರೆ. ಅವರಿಗೆ ಇನ್ನೊಬ್ಬರ ಮೇಲೆ ಅವಲಂಬನೆ ಇಲ್ಲ. ಬದುಕಿನ ಭದ್ರತೆಯೂ ಕೂಡ ಇರುವುದರಿಂದ ದಾಂಪತ್ಯದಲ್ಲಿ ಸಂತೋಷ ಕೊನೆಗೊಳ್ಳುತ್ತದೆ ಅನಿಸಿದಾಗ ಅವರು ತುಂಬಾ ಸರಳವಾಗಿ ಎದ್ದು ನಡೆದು ಬಿಡುತ್ತಾರೆ.
ಖಾಲಿ ಗೂಡು
ಇತ್ತೀಚಿನ ದಿನಮಾನಗಳಲ್ಲಿ ಮದುವೆಗಳು ಕೇವಲ ಸಂತಾನಭಿವೃದ್ಧಿಗಾಗಿ, ವಂಶ ಬೆಳೆಸುವ ಉದ್ದೇಶಕ್ಕಾಗಿ ಮಾತ್ರ ನಡೆಯುತ್ತಿವೆ. ಒಂದು ಬಾರಿ ಮಕ್ಕಳಾಗಿ ಅವರು ದೊಡ್ಡವರಾಗಿ ಸ್ವತಂತ್ರಗೊಂಡ ಮೇಲೆ ವಿಚ್ಛೇಧನೆ ಎನ್ನುವುದು ಸರಳವಾಗಿ ನಡೆದುಕೊಂಡು ಬಂದು ದಾಂಪತ್ಯದ ಅಂಗಳದಲ್ಲಿ ಕುಳಿತುಕೊಂಡು ಬಿಡುತ್ತದೆ.
ಅಪೇಕ್ಷೆಗಳಲ್ಲಿ ಬದಲಾವಣೆ
ಈಗ ಮದುವೆ ಹಾಗೂ ದಾಂಪತ್ಯ ಎಂದರೆ ಸಮಾಜದಲ್ಲಿ ವಿಪರೀತ ಎನಿಸುವಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಜೀವನ ಎಂದರೆ ಏರುಪೇರಿನ ಗಾಯನ. ಆದ್ರೆ ಈಗ ಎಲ್ಲದರಲ್ಲೂ ಎಲ್ಲ ರೀತಿಯಲ್ಲೂ ಸಂತೋಷವೊಂದೇ ನಮ್ಮಲ್ಲಿ ತುಂಬಿರಬೇಕು ಎಂದು ಬಯಸುತ್ತಾರೆ . ಕೊಂಚ ಕಠಿಣ ಪರಿಸ್ಥಿತಿಗಳು ಬಂದರೂ ಕೂಡ ಅದನ್ನು ಎದುರಿಸಲಾಗದಂತಹ ಸೂಕ್ಷ್ಮ ಮನಸ್ಥಿತಿಗೆ ಸಂಬಂಧಗಳು ಬಂದು ತಲುಪಿವೆ.
ದಾಂಪತ್ಯ ದ್ರೋಹ
ಇತ್ತೀಚಿನ ದಿನಮಾನಗಳಲ್ಲಿ ಇವು ಹೆಚ್ಚು ಆಗುತ್ತಿವೆ. ಕಾಯಾ, ವಾಚಾ, ಮನಸಾ ನಾ ನಿನಗೆ ಎಂಬ ಹಳೆಯ ಪದ್ಧತಿಗಳು ಮುರಿದು ಬಿದ್ದು ಸ್ವಾತಂತ್ರ್ಯ ಎಂಬ ಹೆಸರಿನ ಸ್ವೇಚ್ಛೆಯಲ್ಲಿ ಇಂದಿನ ತಲೆಮಾರು ಬದುಕುತ್ತಿದೆ. ಇದು ಕೂಡ ವಿಚ್ಛೇಧನಕ್ಕೆ ಒಂದು ಕಾರಣ ಎಂದು ವೈದ್ಯರು ಹೇಳುತ್ತಾರೆ.
ಹೀಗೆ ಹತ್ತು ಹಲವು ಕಾರಣಗಳಿಂದ ದೀರ್ಘಕಾಲದ ದಾಂಪತ್ಯಗಳು ಮುರಿದು ಬೀಳುತ್ತಿವೆ. ನೀನಿಲ್ಲದೇ ನಾನಿಲ್ಲ ಎನ್ನುವಂತಿರುವ ದಾಂಪತ್ಯಗಳು ನೀ ನನಗೇನೂ ಅಲ್ಲ ಎನ್ನುವವರೆಗೆ ಬಂದು ನಿಲ್ಲುತ್ತಿವೆ. ಕಾಯ, ವಾಚಾ,ಮನಸಾ ಬುನಾದಿ ಮೇಲೆ ನಿಲ್ಲುತ್ತಿದ್ದ ಹಳೆಯ ದಾಂಪತ್ಯಗಳ ಪರಂಪರೆಯ ಕೊಂಡಿ ಕಳಚಿಕೊಳ್ಳುತ್ತಿದೆ. ಆಧುನಿಕತೆಯ ಹೆಸರಲ್ಲಿ ದಾಂಪತ್ಯವು ಅರ್ಥವನ್ನು ಕಳೆದುಕೊಳ್ಳುತ್ತಿದೆ. ಹೊಸ ಹಾದಿಯನ್ನು ಹಿಡಿದಿದೆ. ಜೊತೆಗೆ ನಡೆದು ಜೊತೆಗೆ ಇರುವ ಮಾತುಗಳನ್ನು ಕೊಟ್ಟು ನಡುದಾರಿಯಲ್ಲಿಯೇ ಬದುಕಿನ ಹಾದಿ ಕವಲೊಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ