/newsfirstlive-kannada/media/post_attachments/wp-content/uploads/2025/03/GDG_SWAMIJI_3.jpg)
ಗದಗ: ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಪ್ರಶ್ನೆ ಮಾಡಿದ್ದಕ್ಕೆ ಆದರಹಳ್ಳಿ ಗ್ರಾಮದ ಗವಿಸಿದ್ದೇಶ್ವರ ಮಠದ ಕುಮಾರ ಮಹಾರಾಜ ಶ್ರೀಯನ್ನ, ಭೋವಿ ಸಮುದಾಯದ ಭಕ್ತರು ಹೊರ ಹಾಕಿದ್ದಾರೆ. ಸದ್ಯ ಈ ಸಂಬಂಧ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತ ವಾತಾವರಣ ಸೃಷ್ಟಿಯಾಗಿದೆ.
ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿನ ಗವಿಸಿದ್ದೇಶ್ವರ ಮಠದ ಕುಮಾರ ಮಹಾರಾಜ ಶ್ರೀಯನ್ನ ಭೋವಿ ಸಮುದಾಯದವರು ಹೊರಗೆ ಹಾಕಿದ್ದಾರೆ. ಸ್ವಾಮೀಜಿ ತಂಗುವ ಕೊಠಡಿಗೆ ಬೀಗ ಜಡಿದು ಸ್ವಾಮೀಜಿ ನಮಗೆ ಬೇಡ. ಈ ಮಠಕ್ಕೆ ಈ ಸ್ವಾಮೀಜಿಯನ್ನು ನಾವೇ ಕರೆತಂದಿದ್ದೇವೆ. ಆದರೆ ನಮ್ಮ ವಿರುದ್ಧವೇ ಸ್ವಾಮೀಜಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗವಿಸಿದ್ದೇಶ್ವರ ಮಠದ ಕುಮಾರ ಮಹಾರಾಜ ಶ್ರೀ ಅವರು ಅಕ್ರಮ ಗಣಿಗಾರಿಕೆಯನ್ನು ಪ್ರಶ್ನಿಸಿ ಸುಮಾರು 14 ಯುವಕರ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದರು. ಇದನ್ನೇ ವಿರೋಧಿಸಿರುವ ಯುವಕರು, ಮಠದಲ್ಲೇ ಬೀಡು ಬಿಟ್ಟಿದ್ದಾರೆ. ಇನ್ನೊಂದೆಡೆ ಸ್ವಾಮೀಜಿಯವರು, ಮಠದಿಂದ ನನ್ನನ್ನು ಹೊರ ಹಾಕಲು ಒಬ್ಬ ದೊಡ್ಡ ರಾಜಕಾರಣಿ ಕೈವಾಡ ಇದೆ ಎಂದು ಆರೋಪ ಮಾಡಿದ್ದಾರೆ.
ಸದ್ಯ ಸ್ವಾಮೀಜಿಯವರು ಗ್ರಾಮದ ಸೇವಾಲಾಲ್ ದೇವಸ್ಥಾನದಲ್ಲಿ ಬೆಂಬಲಿಗರೊಂದಿಗೆ ತಂಗಿದ್ದಾರೆ. ಅಕ್ರಮ ಕಲ್ಲು ಗಣಿಗಾರಿಕೆ, ಮರಳು ದಂಧೆಯಿಂದ ಗ್ರಾಮಸ್ಥರಿಗೆ ಸಾಕಷ್ಟು ಸಮಸ್ಯೆ ಆಗಿದೆ. ರೈತರ ಜಮೀನಿನಲ್ಲಿ ರಾತ್ರಿ ಹೊತ್ತು ಅಕ್ರಮ ಚಟುವಟಿಕೆ ನಡೆಸಲಾಗುತ್ತಿದೆ. ಇದರಿಂದ ಬಿತ್ತಿ, ಬೆಳೆಯುವ ರೈತರ ಭೂಮಿ ಹಾಳು ಆಗುತ್ತಿದೆ. ಕಲ್ಲು ಗಣಿಗಾರಿಕೆ ಸಮಯದಲ್ಲಿ ಬ್ಲಾಸ್ಟ್ ಮಾಡುವುದರಿಂದ ಮನೆಗಳು ಬಿರುಕು ಬಿಡುತ್ತಿವೆ. ಶಬ್ಧ ಕೇಳಿ ಮಕ್ಕಳು ಏನಾಯಿತೋ ಎಂದು ಗಾಬರಿ ಬೀಳುತ್ತಿವೆ. ಇವುಗಳನ್ನೆಲ್ಲಾ ಪ್ರಶ್ನೆ ಮಾಡಿ, ಪೊಲೀಸರಿಗೆ ದೂರು ಕೊಟ್ಟಿದ್ದಕ್ಕೆ ಈ ಷಡ್ಯಂತ್ರ ನಡೆದಿದೆ ಎಂದು ಶ್ರೀ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ಛಾವಾ ಸಿನಿಮಾ ನೋಡಿ ರಾತ್ರೋರಾತ್ರಿ ಭೂಮಿ ಅಗೆದ ಜನ.. ಸಿಕ್ಕೇ ಬಿಡ್ತಾ ರಾಶಿ ರಾಶಿ ಚಿನ್ನ..?
ಭೋವಿ ಸಮಾಜದವರು ಶ್ರೀಯನ್ನ ಹೊರಗೆ ಹಾಕಿದ್ರೆ ಬಂಜಾರ ಸಮುದಾಯದವರು ಶ್ರೀಯನ್ನ ಮಠಕ್ಕೆ ಸೇರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬೆಂಬಲಿಗರನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಬೆಂಬಲಿಗರ ಮಧ್ಯೆ ವಾಗ್ವಾದ ನಡೆದಿದ್ದು ಎರಡು ಕಡೆಯವರನ್ನು ನಿಯಂತ್ರಿಸಲು ಶಿರಹಟ್ಟಿ ಠಾಣೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ