‘ಗಂಗಾ ನದಿ ನೀರು ಸ್ನಾನಕ್ಕೆ ಯೋಗ್ಯವಲ್ಲ’- ಮಾಲಿನ್ಯ ನಿಯಂತ್ರಣ ಮಂಡಳಿ ಪರೀಕ್ಷೆಯ ವರದಿ ಹೇಳಿದ್ದೇನು?

author-image
admin
Updated On
‘ಗಂಗಾ ನದಿ ನೀರು ಸ್ನಾನಕ್ಕೆ ಯೋಗ್ಯವಲ್ಲ’- ಮಾಲಿನ್ಯ ನಿಯಂತ್ರಣ ಮಂಡಳಿ ಪರೀಕ್ಷೆಯ ವರದಿ ಹೇಳಿದ್ದೇನು?
Advertisment
  • ಮಹಾಕುಂಭಮೇಳ ಆರಂಭದ ದಿನವೇ ನೀರಿನ ಸ್ಯಾಂಪಲ್‌ ಪರೀಕ್ಷೆ
  • ಇದುವರೆಗೂ 54 ಕೋಟಿ ಜನರಿಂದ ಕುಂಭಮೇಳದಲ್ಲಿ ತೀರ್ಥಸ್ನಾನ
  • ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯಿಂದ ಬಹಿರಂಗ

ಪ್ರಯಾಗ್‌ರಾಜ್‌ ಮಹಾಕುಂಭಮೇಳದಲ್ಲಿ ಇದುವರೆಗೂ 54 ಕೋಟಿ ಜನರು ತೀರ್ಥಸ್ನಾನ ಮಾಡಿದ್ದಾರೆ. ಪ್ರತಿನಿತ್ಯ ಸರಾಸರಿ 80 ಲಕ್ಷದಿಂದ 1 ಕೋಟಿ ಜನರು ತ್ರಿವೇಣಿ ಸಂಗಮಕ್ಕೆ ಭೇಟಿ ಕೊಟ್ಟು ಪುಣ್ಯಸ್ನಾನದಲ್ಲಿ ಮಿಂದೇಳುತ್ತಿದ್ದಾರೆ. ಪವಿತ್ರ ಮಹಾಕುಂಭಮೇಳ ನಡೆಯುತ್ತಿರುವ ಮಧ್ಯೆ ಆಘಾತಕಾರಿ ಮಾಹಿತಿಯೊಂದು ಬಯಲಾಗಿದೆ.

ಕೋಟಿಗಟ್ಟಲೆ ಜನರು ತೀರ್ಥಸ್ನಾನ ಮಾಡಿದ ಗಂಗಾ ನದಿ ನೀರು ಸ್ನಾನಕ್ಕೆ ಯೋಗ್ಯವಲ್ಲ. ಈ ಮಾತನ್ನು ಹೇಳಿದ್ದು ವಿರೋಧ ಪಕ್ಷದ ನಾಯಕರಲ್ಲ. ಹಾದಿ ಬೀದಿಯಲ್ಲಿ ಹೋಗುವವರೂ ಅಲ್ಲ. ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿ ಗಂಗಾ ನದಿ ನೀರಿನ ಸ್ಯಾಂಪಲ್ ಪರೀಕ್ಷೆ ಮಾಡಿದ್ದು, ಅದರಲ್ಲಿ ಪ್ರಯಾಗ್‌ ರಾಜ್‌ನ ಗಂಗಾ ನದಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಬ್ಯಾಕ್ಟಿರಿಯಾಗಳಿವೆ ಎಂದು ವರದಿಯಾಗಿದೆ.

ಕಳೆದ ಜನವರಿ 13ರಂದು ಪ್ರಯಾಗ್‌ರಾಜ್‌ನಲ್ಲಿ 144 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳ ಆರಂಭವಾಗಿದೆ. ಇನ್ನೂ 8 ದಿನಗಳ ಕಾಲ ಮಹಾಕುಂಭ ಮೇಳ ನಡೆಯುತ್ತಿದ್ದು, ಫೆಬ್ರವರಿ 26ರ ಶಿವರಾತ್ರಿ ಅಂದು ವಿದ್ಯುಕ್ತ ತೆರೆ ಬೀಳಲಿದೆ.

ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿ ಜನವರಿ 12, 13ರಂದೇ ಗಂಗಾ ನದಿಯ ನೀರಿನ ಸ್ಯಾಂಪಲ್‌ ತೆಗೆದುಕೊಂಡು ಪರೀಕ್ಷೆ ನಡೆಸಿತ್ತು. ಇದೀಗ ನೀರಿನ ಸ್ಯಾಂಪಲ್ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ (NGT) ಸಲ್ಲಿಕೆ ಮಾಡಿದೆ.

ಇದನ್ನೂ ಓದಿ: ಆ ಅಘೋರಿ ಭವಿಷ್ಯವೇ ನಿಜವಾಯ್ತಾ? 30 ದಿನದ ಕುಂಭಮೇಳದಲ್ಲಿ 7 ಸಲ ಅಗ್ನಿ ಪ್ರಮಾದ! ಕಾರ್ಣಿಕದ ಪ್ರಭಾವವೇ? 

ಮಾಲಿನ್ಯ ವರದಿಯಲ್ಲಿ ಏನಿದೆ?
ಗಂಗಾ ನದಿಯ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇವೆ. ನೀರಿನ ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ ಸ್ನಾನಕ್ಕೆ ಯೋಗ್ಯವಾಗಿಲ್ಲ. ಕುಂಭಮೇಳದಲ್ಲಿ ಕೋಟಿಗಟ್ಟಲೆ ಜನರು ಸ್ನಾನ ಮಾಡುವುದರಿಂದ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಹೆಚ್ಚಾಗುತ್ತೆ ಎಂದು ವರದಿಯಲ್ಲಿ ಹೇಳಲಾಗಿದೆ.

publive-image

ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿಯು ಗಂಗಾ ನದಿ ನೀರು ಪರೀಕ್ಷೆಯ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಜಸ್ಟೀಸ್ ಪ್ರಕಾಶ್ ಶ್ರೀವಾಸ್ತವ್ ಪರಿಶೀಲನೆ ನಡೆಸಿದ್ದಾರೆ.

ನಾಳೆ ಕೂಡ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಬಗ್ಗೆ ಎನ್‌ಜಿಟಿಯಲ್ಲಿ ವಿಸ್ತೃತ ವಿಚಾರಣೆ ನಡೆಯಲಿದೆ. ಎನ್‌ಜಿಟಿ ಗಂಗಾ ನದಿ ನೀರಿನ ಶುದ್ದೀಕರಣದ ಬಗ್ಗೆ ಸಮಗ್ರ ವರದಿ ಸಲ್ಲಿಕೆಗೆ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದೆ. ಧಾರ್ಮಿಕ ಸಮ್ಮೇಳನದ ವೇಳೆ ಗಂಗಾ ನದಿ ನೀರಿನ ಗುಣಮಟ್ಟ ಕಾಪಾಡಲು ಹಿಂದಿನಿಂದಲೂ ಎನ್‌ಜಿಟಿ ಸೂಚನೆ ನೀಡಿತ್ತು. ನೀರಿನ ಗುಣಮಟ್ಟ, ತ್ಯಾಜ್ಯ ನೀರಿನ ಶುದ್ದೀಕರಣ, ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ಕೇಳಿದೆ. ನಾಳಿನ ವಿಚಾರಣೆಗೆ ಯುಪಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಹಾಜರಿಗೆ ಸಮನ್ಸ್ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment