/newsfirstlive-kannada/media/post_attachments/wp-content/uploads/2025/01/Gavisiddeshwara-Jathra-Mahotsav.jpg)
ಕೊಪ್ಪಳ: ಇಂದು ದೇಶದಲ್ಲಿ ಧರ್ಮ ಜಾತಿಯೆಂದು ಕೋಮುಗಲಭೆ ಸೃಷ್ಟಿಸುವ ದುಷ್ಟ ಶಕ್ತಿಗಳೇ ಹೆಚ್ಚು. ಇದರ ಮಧ್ಯೆ ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಶ್ರೀ ಜಾತ್ರಾಮಹೋತ್ಸವ ಸರ್ವಧರ್ಮೀಯರ ಭಕ್ತ ಸಾಗರದಲ್ಲಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗುತ್ತದೆ. ಜಾತ್ರೆ ಹಿನ್ನೆಲೆ ಮಠದ ಆವರಣದಲ್ಲಿ ಈಗಾಗಲೇ ಸಕಲ ಸಿದ್ಧತೆಗಳು ನಡೆದಿದ್ದು, ಜನವರಿ 15ರಂದು ಸಂಜೆ ಮಹಾರಥೋತ್ಸವ ಜರುಗಲಿದೆ. ಈ ಬಾರಿ ರಥೋತ್ಸವಕ್ಕೆ 6 ಲಕ್ಷಕ್ಕೂ ಹೆಚ್ಚು ಭಕ್ತರು ಸಾಕ್ಷಿಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೊಪ್ಪಳದ ಆರಾಧ್ಯದೈವ ಶ್ರೀಗವಿಸಿದ್ದೇಶ್ವರ ಅದ್ದೂರಿ ಜಾತ್ರೆ ನಡೆಯುತ್ತಿದೆ. ಈ ವರ್ಷ ವಿಶೇಷವಾಗಿ ಜಾತ್ರೆ ಅಂಗವಾಗಿ ಕ್ರೀಡೋತ್ಸವವನ್ನು ಸಂಘಸಂಸ್ಥೆಗಳು, ಜನಪ್ರತಿನಿಧಿಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಇಂದಿನಿಂದ ಜನವರಿ 17 ರವರೆಗೆ ಕ್ರೀಡೋತ್ಸವ ಜರುಗಲಿದೆ. ಜಾತ್ರೆ ಹಿನ್ನೆಲೆ ಈಗಾಗಲೇ ಮಹಾದಾಸೋಹ ಮಂಟಪದಲ್ಲಿ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಜಾತ್ರೆ ಹಿನ್ನೆಲೆ ಮಠದಲ್ಲಿ ಭರ್ಜರಿ ತಯಾರಿ ನಡೆದಿದೆ. ಪಾರ್ಕಿಂಗ್, ಭಕ್ತರ ಬರುವ ಮಾರ್ಗ, ವಸತಿ ವ್ಯವಸ್ಥೆ, ಬರುವ ಭಕ್ತರಿ ಆರೋಗ್ಯ ತಪಾಸಣೆ, ಕುಡಿಯುವ ನೀರಿನ ವ್ಯವಸ್ಥೆಯ ಸಿದ್ಧತೆ ನಡೆದಿದೆ.
ಇನ್ನು ಇಂದು ಸಂಜೆ ತೆಪ್ಪೋತ್ಸವ ನಡೆಯಲಿದ್ದು, ನಾಳೆ ಶ್ರೀಗವಿಸಿದ್ದೇಶ್ವರ ಮೂರ್ತಿ ಪಲ್ಲಕಿ ಉತ್ಸವ, ನಾಡಿದ್ದು ಲಘು ರಥೋತ್ಸವ ಜನವರಿ 15ಕ್ಕೆ ಮಹಾರಥೋತ್ಸವ ನಡೆಯಲ್ಲಿದ್ದು ಲಕ್ಷಾಂತರ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ರಥೋತ್ಸವಕ್ಕೆ ಚಾಲನೆಯನ್ನು ಖ್ಯಾತ ಹಿಂದೂಸ್ಥಾನ ಗಾಯಕರಾದ ವೆಂಕಟೇಶ್ ಅವರು ನೀಡಲಿದ್ದಾರೆ.
ಇನ್ನು ಜನವರಿ 16ರಂದು ಬಳಗಾನೂರು ಶ್ರೀಶಿವಶಾಂತವೀರ ಶರಣರ ದೀರ್ಘದಂಡ ನಮಸ್ಕಾರ, ಧಾರ್ಮಿಕ ಗೋಷ್ಠಿ, ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ಜನವರಿ 17 ರಂದು ಜಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಈ ವರ್ಷವೂ ಸಮಾಜಲ್ಲಿ ವಿಭಿನ್ನವಾಗಿ ಸಾಧನೆಗೈದ ಸಾಧಕರು ತಮ್ಮ ಹಿತ ನುಡಿಗಳಿಂದ ಕಲ್ಮಷ ತುಂಬಿರುವ ಮನಸ್ಸುಗಳ ಪರಿವರ್ತನೆ ಮಾಡಲಿದ್ದಾರೆ. ಮಠದ ಕೈಲಾಸ ಮಂಟಪದಲ್ಲಿ ಮೂರು ದಿನಗಳ ಕಾಲ ಅದ್ದೂರಿ ಕಾರ್ಯಕ್ರಮಗಳು ನಡೆಯಲಿವೆ. ಅಮಾವಾಸ್ಯೆ ಮುಗಿಯುವವರೆಗೂ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಇರುತ್ತದೆ.
ಜಾತಿ, ಧರ್ಮ ಮೀರಿ ನಡೆಯೋ ಜಾತ್ರೆ
ಗವಿಮಠದ ಜಾತ್ರೆಯ ವಿಶೇಷತೆ ಎಂದರೆ ಈ ಜಾತ್ರೆಯನ್ನು ಭಕ್ತರ ನಡೆಸುತ್ತಾರೆ. ಮಹಾದಾಸೋಹಕ್ಕೆ ಬೇಕಾದ ಎಲ್ಲವನ್ನು ಭಕ್ತರು ಪೂರೈಸುತ್ತಾರೆ. ಜಾತಿ, ಧರ್ಮವನ್ನು ಮೀರಿ ಎಲ್ಲರೂ ಒಂದಾಗಿ ಜಾತ್ರೆ ನಡೆಸುವುದು ಗವಿಮಠ ಜಾತ್ರೆಯ ವಿಶೇಷತೆ.
ಇನ್ನು ಕಲ್ಮಶ, ದ್ವೇಷ, ಧರ್ಮ, ಜಾತಿಯ ಮದ, ದುರಾಹಂಕಾರ, ದುರಾಸೆ, ಹೊಟ್ಟೆಕಿಚ್ಚು, ಅಸೂಯೆ ತುಂಬಿಕೊಂಡ ಮನಸ್ಸುಗಳನ್ನು ಗವಿಮಠದ ಜಾತ್ರೆ ಒಂದೊಮ್ಮೆ ಯೋಚಿಸುವಂತೆ ಮಾಡುತ್ತೆ. ದುಷ್ಟ ಮನಸ್ಸುಗಳಲ್ಲಿ ಬದಲಾವಣೆಯ ಬೀಜ ಬಿತ್ತುತ್ತೆ. ಹಾಗಾಗಿ ಕೊಪ್ಪಳದ ಗವಿಮಠದ ಜಾತ್ರೆಯನ್ನು ಇಡೀ ವಿಶ್ವವೇ ತಿರುಗಿ ನೋಡುತ್ತೆ.
ಸರ್ವಧರ್ಮೀಯರು ಸೇರಿ ನಡೆಸುವ ಜಾತ್ರೆ ಭಾವೈಕ್ಯತೆಗೆ ಒಂದಡೆ ಸಾಕ್ಷಿಯಾದ್ರೆ, ಇನ್ನೊಂದಡೆ ಸಮಾಜದಲ್ಲಿ ಪರಿವರ್ತನೆಗೆ ಪ್ರತಿ ವರ್ಷ ನಾಂದಿ ಹಾಡುತ್ತದೆ. ಯುವ ಸಮೂಹ, ವಿದ್ಯಾರ್ಥಿಗಳ ಮಧ್ಯೆ ಧರ್ಮ- ಜಾತಿ ವಿಷಬೀಜ ಬಿತ್ತುವ ದುಷ್ಟಶಕ್ತಿಗಳ ಮಧ್ಯೆ ಸಾಮಾಜಿಕ ಕಳಕಳಿಯನ್ನು ಜಾಥಾ ಮೂಲಕ ಮೂಡಿಸಿ ನಾವೆಲ್ಲರೂ ಒಂದೇ ಎನ್ನುವ ಭಾವೈಕ್ಯತೆಯ ಬೀಜವನ್ನು ಗವಿಮಠದ ಜಾತ್ರೆ ಬಿತ್ತುತ್ತದೆ. ಹಾಗಾಗಿ ಪ್ರತಿ ವರ್ಷ ಗಮಿಮಠದ ಜಾತ್ರೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಜಾತ್ರೆಗೆ ಬಂದು ಪರಿವರ್ತನೆಯಾಗಿರುವ ನಿದರ್ಶನಗಳು ಸಹ ಇವೆ.
ಗವಿಮಠದ ಪೀಠಾಧಿಪತಿ ಅಭಿನಗವಿಸಿದ್ದೇಶ್ವರ ಶ್ರೀಗಳು ಸದಾ ಸಾಮಾಜಿಕ ಕಳಕಳಿಯಿಂದ ಜಾತ್ರೆಯನ್ನು ನಡೆಸುತ್ತಿದ್ದು, ಮುಂದಿನ ಪೀಳಿಗೆಗೆ ಬೇಕಾದ ಜ್ಞಾನದ ಬುತ್ತಿಯನ್ನು ಬಿತ್ತುತ್ತಿದ್ದಾರೆ. ಅದು ಪರಿಸರ, ಜಲ, ಮಾನವೀಯತೆ, ಆರೋಗ್ಯ, ದಾನ, ಆಸರೆ, ಸಹಾಯ ಹೀಗೆ ಹಲವು ಸಾಮಾಜಿಕ ಮೌಲ್ಯಗಳನ್ನು ಮಠದ ಶ್ರೀಗಳು ಬಿತ್ತುತ್ತಿದ್ದಾರೆ. ಈ ಕಾರ್ಯಕ್ಕೆ ಪ್ರತಿಯೊಬ್ಬರು ಶ್ರೀಗಳಿಗೆ ಕೈಜೋಡಿಸಿದ್ದಾರೆ. ಇಂತಹ ಶ್ರೀಗಳು ಸಿಕ್ಕಿರುವುದು ನಮ್ಮಪುಣ್ಯ ಎಂದು ಇಲ್ಲಿನ ಭಕ್ತರು ಗವಿಮಠಕ್ಕೆ ಭಕ್ತಿಯಿಂದ ನಡೆದುಕೊಂಡು ಪ್ರತಿವರ್ಷ ಅದ್ದೂರಿ ಜಾತ್ರೆ ಮಾಡುತ್ತಾರೆ. ಹಾಗಾಗಿ ನೀವು ಜಾತ್ರೆಗೆ ಬನ್ನಿ ಎಂದು ಮಠದ ಉಚಿತ ಶಿಕ್ಷಣ ದಾಸೋಹ ವಸತಿ ನಿಲಯದ ಮೂರು ಸಾವಿರ ಮಕ್ಕಳ ವಿಶೇಷವಾಗಿ ಎಲ್ಲರನ್ನು ಸ್ವಾಗತಿಸಿದ್ದಾರೆ.
ವರದಿ:ರಾಜು ಬಿ.ಆರ್, ನ್ಯೂಸ್​ಫಸ್ಟ್​​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us