/newsfirstlive-kannada/media/post_attachments/wp-content/uploads/2025/05/SCHOOL_JOBS_1.jpg)
ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪದೋಷಗಳಿವೆ. ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಪಾಠ ಕಲಿಯಲು ಹೋಗ್ತಾರೆ. ಆದರೇ, ಶಾಲಾ ಕಾಲೇಜಿನಿಂದ ಮನೆಗೆ ಬಂದ ಬಳಿಕ ವಿದ್ಯಾರ್ಥಿಗಳು ಮತ್ತೆ ಟ್ಯೂಷನ್, ಕೋಚಿಂಗ್ ಇನ್ಸ್ ಟಿಟ್ಯೂಷನ್ಗೂ ಹೋಗ್ತಾರೆ. ಎರಡೆರಡು ಕಡೆ ವಿದ್ಯಾರ್ಥಿಗಳು ಕಲಿಯುವ ಸ್ಥಿತಿಯಲ್ಲಿದ್ದಾರೆ. ಶಾಲಾ ಕಾಲೇಜಿನಲ್ಲಿ ಚೆನ್ನಾಗಿ ಪಾಠ ಮಾಡಿದರೇ, ಟ್ಯೂಷನ್, ಕೋಚಿಂಗ್ ಇನ್ಸ್ ಟಿಟ್ಯೂಷನ್ಗೆ ಹೋಗುವ ಪ್ರಮೇಯವೇ ಬರಲ್ಲ.
ನಮ್ಮ ದೇಶದ ಶಾಲಾ ಕಾಲೇಜುಗಳಲ್ಲಿ ಸಾಕಷ್ಟು ಸಮಸ್ಯೆಗಳೂ ಇರೋದು ಇದರಿಂದ ದೃಢಪಡುತ್ತೆ. ಇನ್ನೂ ಐಐಟಿ, ಐಐಎಂ ನಂಥ ಪ್ರೀಮಿಯರ್ ಎಜುಕೇಷನ್ ಇನ್ಸ್ ಟಿಟ್ಯೂಷನ್ಗಳಲ್ಲಿ ಕಡಿಮೆ ಸಂಖ್ಯೆಯ ಸೀಟುಗಳಿಂದಾಗಿ ಕೋಚಿಂಗ್ ಹೋಗಿಯೇ ಎಂಟ್ರೆನ್ಸ್ ಎಕ್ಸಾಂ ಕ್ಲಿಯರ್ ಮಾಡಬೇಕಾದ ಸ್ಥಿತಿಯಲ್ಲಿ ವಿದ್ಯಾರ್ಥಿಗಳಿದ್ದಾರೆ. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪರಿಣಾಮಕಾರಿತನದ ಬಗ್ಗೆಯೂ ಪ್ರಶ್ನೆಗಳಿವೆ. ಇವೆಲ್ಲವುಗಳಿಂದ ಒತ್ತಡಕ್ಕೆ ಒಳಗಾಗಿ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳುವ ಹಾದಿ ಹಿಡಿಯುತ್ತಿದ್ದಾರೆ. ರಾಜಸ್ಥಾನದ ಕೋಟಾದಲ್ಲಿ ಪ್ರತಿ ವರ್ಷ 10-15 ವಿದ್ಯಾರ್ಥಿಗಳು ಜೀವ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ.
11 ಜನ ಇರುವ ಸಮಿತಿ ರಚನೆ
ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯು ಈಗ ಕೋಚಿಂಗ್ ಅವಲಂಬನೆ, ಟ್ಯೂಷನ್ ಅವಲಂಬನೆ ತಗ್ಗಿಸಲು ಮಾರ್ಗೋಪಾಯಗಳನ್ನು ಹುಡುಕುತ್ತಿದೆ. ದೇಶದ ಶಿಕ್ಷಣ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಲು ಮುಂದಾಗಿದೆ. ಇದಕ್ಕಾಗಿ ಕೇಂದ್ರದ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಹಾಗೂ ಯುಜಿಸಿ ಅಧ್ಯಕ್ಷರೂ ಆದ ವಿನೀತ್ ಜೋಷಿ ಅಧ್ಯಕ್ಷತೆಯಲ್ಲಿ 11 ಮಂದಿಯ ಸಮಿತಿ ರಚಿಸಿದೆ.
ಈ ಸಮಿತಿಯು ಪ್ರತಿ ತಿಂಗಳು ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಗೆ ತನ್ನ ವರದಿ, ಶಿಫಾರಸ್ಸುಗಳನ್ನು ಸಲ್ಲಿಸಬೇಕು. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ಹಿನ್ನಲೆಯಲ್ಲಿ ಇಟ್ಟುಕೊಂಡು ಐಐಟಿ, ಜೆಇಇ, ನೀಟ್, ಯುಪಿಎಸ್‌ಸಿ ಎಕ್ಸಾಂಗಳ ಪರಿಣಾಮಕಾರಿತನದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಬೇಕು. ಈ ಎಕ್ಸಾಂಗಳು ಹೇಗೆ ಕೋಚಿಂಗ್ ಸೆಂಟರ್ಗಳ ಬೆಳವಣಿಗೆಗೆ ಕಾರಣವಾಗಿವೆ ಎನ್ನುವ ಬಗ್ಗೆ ವರದಿ ನೀಡಬೇಕು.
ಕಳೆದ ವರ್ಷ ಕೇಂದ್ರ ಶಿಕ್ಷಣ ಇಲಾಖೆಯು ಕೋಚಿಂಗ್ ಸೆಂಟರ್ಗಳ ನಿಯಂತ್ರಣಕ್ಕಾಗಿ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. 16 ವರ್ಷದೊಳಗಿನ ಮಕ್ಕಳನ್ನು ಕೋಚಿಂಗ್ ಸೆಂಟರ್ಗಳು ದಾಖಲು ಮಾಡಿಕೊಳ್ಳಬಾರದೆಂದು ಹೇಳಿದೆ. ಕೋಚಿಂಗ್ ಸೆಂಟರ್ಗಳು ತಪ್ಪು ದಾರಿಗೆಳೆಯುವ, ಸುಳ್ಳು ಭರವಸೆಗಳನ್ನು ನೀಡಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ. ಕೋಚಿಂಗ್ ಸೆಂಟರ್ಗಳಲ್ಲಿ ಸಿಸಿಟಿವಿ ಆಳವಡಿಸಬೇಕು. ಕೋಚಿಂಗ್ ಸೆಂಟರ್ಗಳಲ್ಲಿ ಪದವೀಧರ ಶಿಕ್ಷಕರು ಇರಬೇಕೆಂದು ಹೇಳಿದೆ.
ಇದನ್ನೂ ಓದಿ:ಈ ಮಾರ್ಗದ ಮೆಟ್ರೋ ಸಂಚಾರದಲ್ಲಿ ಜೂನ್ 22 ರಂದು ವ್ಯತ್ಯಯ.. ಕಾರಣವೇನು?
ದೇಶದ ಶಾಲೆಗಳ ವ್ಯವಸ್ಥೆಯ ಕೊರತೆಗಳ ಬಗ್ಗೆ ಅಧ್ಯಯನ
ರಾಜಸ್ಥಾನದ ಕೋಟಾದಲ್ಲಿ 2023ರಲ್ಲಿ ನೀಟ್, ಜೆಇಇ ಕೋಚಿಂಗ್ಗೆ ಬಂದಿದ್ದ 26 ಮಂದಿ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ 2024 ರಲ್ಲಿ 32 ಮಂದಿ ವಿದ್ಯಾರ್ಥಿಗಳು ನಿಧನ ಹೊಂದಿದ್ದರು. ಈಗ ಕೇಂದ್ರ ಸರ್ಕಾರದಿಂದ ನೇಮಕವಾಗಿರುವ ಸಮಿತಿಯು ಕೋಚಿಂಗ್ ಸೆಂಟರ್ಗಳ ಜಾಹೀರಾತು ವಿಧಾನದ ಬಗ್ಗೆ ಪರಿಶೀಲನೆ ನಡೆಸಲಿದೆ. ಜೊತೆಗೆ ಸೂಕ್ತ ಜಾಹೀರಾತು ವಿಧಾನದ ಬಗ್ಗೆ ಶಿಫಾರಸ್ಸು ಮಾಡಲಿದೆ. ಶಾಲಾ ಕಾಲೇಜುಗಳಲ್ಲಿ ಕೆರಿಯರ್ ಕೌನ್ಸಿಲಿಂಗ್ ಲಭ್ಯತೆ, ಪರಿಣಾಮಕಾರಿತನದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲಿದೆ. ದೇಶದ ಸ್ಕೂಲ್ ವ್ಯವಸ್ಥೆಯ ಕೊರತೆಗಳ ಬಗ್ಗೆ ಅಧ್ಯಯನ ನಡೆಸಿ ಅವುಗಳನ್ನು ಸರಿಪಡಿಸಲು ಸೂಕ್ತ ಶಿಫಾರಸ್ಸು ಮಾಡಲಿದೆ.
ನಮ್ಮ ದೇಶದಲ್ಲಿ ಡಮ್ಮಿ ಸ್ಕೂಲ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇವುಗಳಿಂದಾಗಿ ಕೋಚಿಂಗ್ ಸೆಂಟರ್ಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಸಿಬಿಎಸ್‌ಇ ಇತ್ತೀಚೆಗೆ ದೇಶದಲ್ಲಿ 300 ಡಮ್ಮಿ ಸ್ಕೂಲ್ಗಳ ವಿರುದ್ಧ ಕ್ರಮ ಕೈಗೊಂಡಿದೆ. ನಮ್ಮ ಸ್ಕೂಲ್ನಿಂದ ಜೆಇಇ ಟಾಪರ್ ಹೊರಹೊಮ್ಮಿದ್ದಾರೆ ಅಂತ ಸುಳ್ಳು ಜಾಹೀರಾತುಗಳನ್ನು ಈ ಡಮ್ಮಿ ಸ್ಕೂಲ್ಗಳೇ ನೀಡಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ಕೆಲಸ ಮಾಡಿವೆ.
ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್(ನ್ಯಾಷನಲ್ ಬ್ಯೂರೋ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ