/newsfirstlive-kannada/media/post_attachments/wp-content/uploads/2025/07/mining.jpg)
ಭಾರತ ಹಾಗೂ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಈಗ ಅಪರೂಪದ ಖನಿಜಗಳ ಕೊರತೆ ಎದುರಾಗಿದೆ. ಆಟೋಮೊಬೈಲ್ ಉತ್ಪನ್ನಗಳಾದ ಕಾರ್, ಬೈಕ್, ಎಲೆಕ್ಟ್ರಿಕ್ ಕಾರ್, ಸ್ಮಾರ್ಟ್ ಪೋನ್, ಬಲ್ಪ್, ಎಲ್‌ಇಡಿ, ಐ ಪೋನ್ ಸೇರಿದಂತೆ ಎಲ್ಲ ಎಲೆಕ್ಟ್ರಿಕ್ ಉಪಕರಣಗಳ ಉತ್ಪಾದನೆಗೆ ಮ್ಯಾಗ್ನೆಟ್ ಸೇರಿದಂತೆ ಅಪರೂಪದ ಖನಿಜಗಳು ಬೇಕೇ ಬೇಕು. ಈ ಅಪರೂಪದ ಖನಿಜದ ಮ್ಯಾಗ್ನೆಟ್ ಇಲ್ಲದಿದ್ದರೇ, ಈ ಯಾವುದೇ ಉತ್ಪನ್ನಗಳನ್ನು ಉತ್ಪಾದಿಸಲು ಸಾಧ್ಯವಾಗಲ್ಲ.
ಭಾರತ, ಅಮೆರಿಕಾ, ರಷ್ಯಾ ಸೇರಿದಂತೆ ಪ್ರಮುಖ ರಾಷ್ಟ್ರಗಳು ಈ ಅಪರೂಪದ ಖನಿಜಗಳಿಗಾಗಿ ಚೀನಾ ದೇಶವನ್ನು ಅವಲಂಬಿಸಿದ್ದವು. ಆದರೇ, ಚೀನಾ ಕಳೆದ ಕೆಲ ತಿಂಗಳಿನಿಂದ ವಿಶ್ವದ ಪ್ರಮುಖ ರಾಷ್ಟ್ರಗಳ ಆರ್ಥಿಕತೆಗೆ ಹೊಡೆತ ಕೊಡಲು ಅಪರೂಪದ ಖನಿಜವನ್ನು ಬ್ಲಾಕ್ ಮೇಲ್ ಅಸ್ತ್ರವನ್ನಾಗಿ ಬಳಸುತ್ತಿದೆ. ಭಾರತ, ಅಮೆರಿಕಾದಂಥ ದೇಶಗಳಿಗೆ ಅಪರೂಪದ ಖನಿಜದ ರಫ್ತು ಅನ್ನೇ ನಿಲ್ಲಿಸಿಬಿಟ್ಟಿದೆ. ರಾಜತಾಂತ್ರಿಕ ಮಾರ್ಗಗಳ ಮೂಲಕ ಏನೇ ಮಾತುಕತೆ ನಡೆಸಿದರೂ ಈ ಅಪರೂಪದ ಖನಿಜಗಳನ್ನು ಭಾರತ, ಅಮೆರಿಕಾಕ್ಕೆ ರಫ್ತು ಮಾಡುತ್ತಿಲ್ಲ. ಇದರಿಂದ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಕಾರ್, ಎಲೆಕ್ಟ್ರಿಕ್ ಕಾರ್, ಬೈಕ್, ಐ ಪೋನ್, ಸ್ಮಾರ್ಟ್ ಪೋನ್ ಉತ್ಪಾದನೆಗೆ ಹೊಡೆತ ಬಿದ್ದಿದೆ.
ಚೀನಾಕ್ಕೆ ಮಾಸ್ಟರ್ ಸ್ಟ್ರೋಕ್ ಕೊಡಲು ಭಾರತ ಸಿದ್ಧ
ಭಾರತದ ಆಟೊಮೊಬೈಲ್ ಕಂಪನಿಗಳೆಲ್ಲಾ ಭಾರತದ ಪ್ರಧಾನಿ ಕಚೇರಿ, ವಿದೇಶಾಂಗ ಇಲಾಖೆಯ ಮೂಲಕ ಚೀನಾ ಜೊತೆ ಮಾತುಕತೆ ನಡೆಸುವಂತೆ ಒತ್ತಾಯ ಮಾಡಿವೆ. ಕೇಂದ್ರ ಸರ್ಕಾರದ ಮೇಲೂ ಅಪರೂಪದ ಖನಿಜ ಅಮದು ಮಾಡಿಕೊಡುವಂತೆ ಒತ್ತಡ ಹೇರಿವೆ. ಆದರೇ, ಯಾವುದೇ ಯಶಸ್ಸು ಸಿಕ್ಕಿಲ್ಲ. ಈಗ ಕೇಂದ್ರ ಸರ್ಕಾರವು ಈ ಸಮಸ್ಯೆಗೆ ಪರಿಹಾರವೊಂದನ್ನು ಕಂಡುಕೊಂಡಿದೆ. ಈ ಅಪರೂಪದ ಖನಿಜಗಳಿಗಾಗಿ ಚೀನಾದ ಮೇಲೆ ಅವಲಂಬನೆ ಆಗೋದೇ ಬೇಡ. ಭಾರತದಲ್ಲೇ ಸ್ವದೇಶಿಯಾಗಿ ಅಪರೂಪದ ಖನಿಜಗಳನ್ನು ಉತ್ಪಾದಿಸಿ, ವಿವಿಧ ವಲಯಗಳಿಗೆ ಪೂರೈಕೆ ಮಾಡೋಣ ಎಂಬ ನಿರ್ಧಾರಕ್ಕೆ ಬಂದಿದೆ. ಮ್ಯಾಗ್ನೆಟ್ ಸೇರಿದಂತೆ ಅಪರೂಪದ ಖನಿಜ ಉತ್ಪಾದಿಸುವ ಕಂಪನಿಗಳಿಗೆ ಇನ್ಸೆಂಟೀವ್ ಅರ್ಥಾತ್ ಪೋತ್ಸಾಹ ಧನವನ್ನು ನೀಡಲು ಕೂಡ ಕೇಂದ್ರ ಸರ್ಕಾರ ನಿರ್ಧರಿಸಿದೆ.
ಭಾರತದಲ್ಲೇ ಮ್ಯಾಗ್ನೆಟ್ ಸೇರಿದಂತೆ ಅಪರೂಪದ ಖನಿಜ ಉತ್ಪಾದಿಸುವ ಕಂಪನಿಗಳಿಗೆ 1,345 ಕೋಟಿ ರೂಪಾಯಿ ಸಬ್ಸಿಡಿ ನೀಡಲು ಕೇಂದ್ರದ ಭಾರೀ ಕೈಗಾರಿಕಾ ಇಲಾಖೆ ಯೋಜನೆ ಮಾಡಿದೆ. ಇದರ ಬಗ್ಗೆ ಈಗ ಅಂತರ್ ಇಲಾಖಾ ಚರ್ಚೆ, ಸಮಾಲೋಚನೆಗಳು ನಡೆಯುತ್ತಿವೆ ಎಂದು ಕೇಂದ್ರದ ಭಾರಿ ಕೈಗಾರಿಕಾ ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. ಸದ್ಯಕ್ಕೆ ಅಪರೂಪದ ಖನಿಜ ಉತ್ಪಾದನೆಗೆ 2 ಕಂಪನಿಗಳು ಮುಂದೆ ಬಂದಿವೆ. ಈ ಸಬ್ಸಿಡಿ ಸ್ಕೀಮ್ ತಯಾರಾಗಿ ಜಾರಿಯಾಗುವ ವೇಳೆಗೆ ಇದರಲ್ಲಿ ಬದಲಾವಣೆಯಾಗಿ ಮತ್ತಷ್ಟು ಕಂಪನಿಗಳು ಮುಂದೆ ಬರಬಹುದು ಎಂಬ ವಿಶ್ವಾಸದಲ್ಲಿ ಕೇಂದ್ರದ ಭಾರಿ ಕೈಗಾರಿಕಾ ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಇದ್ದಾರೆ.
ಕಂಪನಿಗಳು ಮ್ಯಾಗ್ನೆಟ್ ಆಗಿ ತಯಾರಿಸಿ ಕೊಡಬೇಕು
ಅಪರೂಪದ ಖನಿಜಗಳನ್ನು ಸ್ವದೇಶಿಯಾಗಿ ಉತ್ಪಾದಿಸಲು ಸಾರ್ವಜನಿಕ ಸ್ವಾಮ್ಯ ಹಾಗೂ ಖಾಸಗಿ ಕಂಪನಿಗಳೆರಡಕ್ಕೂ ಕೇಂದ್ರ ಸರ್ಕಾರ ಸಬ್ಸಿಡಿಯ ಮೂಲಕ ಬೆಂಬಲ ನೀಡಲಿದೆ. ಸಬ್ಸಿಡಿ ಪಡೆಯಬಯಸುವ ಅರ್ಹ ಕಂಪನಿಗಳು, ಎಂಡ್ ಟು ಎಂಡ್ ಪ್ರೊಸೆಸಿಂಗ್ ಮಾಡಬೇಕು. ಅಂದರೇ, ಅಪರೂಪದ ಖನಿಜಗಳನ್ನು ಭೂಮಿಯಿಂದ ತೆಗೆದು ಅಂತಿಮ ಮ್ಯಾಗ್ನೆಟ್ ಆಗಿ ತಯಾರಿಸಿ ಕೊಡಬೇಕು ಎಂದು ಕೇಂದ್ರದ ಭಾರಿ ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಕುಮ್ರಾನ್ ರಿಜ್ವಿ ಹೇಳಿದ್ದಾರೆ. ನಾವು ಮ್ಯಾಗ್ನೆಟ್ ಬಗ್ಗೆ ಆಸಕ್ತಿ ಹೊಂದಿದ್ದೇವೆ. ಮ್ಯಾಗ್ನೆಟ್ ಉತ್ಪಾದಿಸಿ ಕೊಡುವವರಿಗೆ ಇನ್ಸೆಂಟೀವ್ ನೀಡುತ್ತೇವೆ ಎಂದು ಕುಮ್ರಾನ್ ರಿಜ್ವಿ ಹೇಳಿದ್ದಾರೆ.
ಚೀನಾ ದೇಶವು ಅಪರೂಪದ ಖನಿಜಗಳ ಉತ್ಪನ್ನಗಳನ್ನು ರಫ್ತು ಮಾಡುವುದಕ್ಕೆ ನಿರ್ಬಂಧ ವಿಧಿಸಿದೆ. ಇದರಿಂದಾಗಿ ಜಗತ್ತಿನಲ್ಲಿ ಆಟೋಮೇಕರ್ಸ್, ಟೆಕ್ ಕಂಪನಿಗಳಿಗೆ ಪೂರೈಕೆ ಸರಪಳಿಯಲ್ಲಿ ಸಂಕಷ್ಟ ಎದುರಾಗಿದೆ. ಸದ್ಯ ಚೀನಾ ದೇಶವು ಮತ್ತೆ ಅಮೆರಿಕಾ, ಯೂರೋಪ್ ದೇಶಗಳಿಗೆ ಅಪರೂಪದ ಖನಿಜ ಪೂರೈಕೆಯನ್ನು ಫುನರ್ ಆರಂಭಿಸಿದೆ. ಆದರೇ, ಭಾರತದ ಕಂಪನಿಗಳಿಗೆ ಇನ್ನೂ ರಫ್ತು ಮಾಡಲು ಚೀನಾ ಸರ್ಕಾರ ಕ್ಲಿಯರೆನ್ಸ್ ನೀಡಿಲ್ಲ.
ಇದನ್ನೂ ಓದಿ: ಇಂಗ್ಲೆಂಡ್ ಬ್ಯಾಟರ್ಸ್ ಬೆನ್ನೆಲುಬು ಮುರಿದ ಬುಮ್ರಾ.. ಆಲೌಟ್, ಮುಂಬೈಕರ್ಗೆ ಮತ್ತೊಮ್ಮೆ 5 ವಿಕೆಟ್ ಗೊಂಚಲು!
ಖನಿಜಗಳನ್ನ ಭೂಮಿಯಿಂದ ತೆಗೆದು ಸಂಸ್ಕರಿಸುವುದು ಚಾಲೆಂಜ್
ಆದರೇ, ಜಾಗತಿಕವಾಗಿ ಭಾರತವು ಅಪರೂಪದ ಖನಿಜಗಳ ಸಂಪತ್ತಿನಲ್ಲಿ 5ನೇ ಅತಿ ದೊಡ್ಡ ದೇಶವಾಗಿದೆ. ಆದರೇ ಭೂಮಿಯಿಂದ ಮ್ಯಾಗ್ನೆಟ್ ಸೇರಿದಂತೆ ಅಪರೂಪದ ಖನಿಜಗಳನ್ನು ಹೊರತೆಗೆದು ಸಂಸ್ಕರಿಸುವುದು ದೊಡ್ಡ ಸವಾಲು. ಇದಕ್ಕೆ ರೆಗ್ಯುಲೇಟರಿ ಮತ್ತು ಅಪರೇಷನಲ್ ತೊಂದರೆಗಳು ಇವೆ.
ಸದ್ಯ ಭಾರತದಲ್ಲಿ ಸಾರ್ವಜನಿಕ ಸ್ವಾಮ್ಯದ ಇಂಡಿಯನ್ ರೇರ್ ಅರ್ತ್ಸ್ ಲಿಮಿಟೆಡ್ ಎಂಬ ಕಂಪನಿಯನ್ನು ಅಪರೂಪದ ಖನಿಜಗಳ ಗಣಿಗಾರಿಕೆ ನಡೆಸುತ್ತಿದೆ. 2024 ರಲ್ಲಿ ಈ ಕಂಪನಿಯು ಸುಮಾರು 2,900 ಟನ್ ಅಪರೂಪದ ಖನಿಜದ ಅದಿರು ಹೊರ ತೆಗೆದು ಗಣಿಗಾರಿಕೆ ನಡೆಸಿತ್ತು.
ಇದರಲ್ಲಿ ಬಹುತೇಕ ಪಾಲು ಅನ್ನು ಭಾರತದ ನ್ಯೂಕ್ಲಿಯರ್ ಮತ್ತು ಡಿಫೆನ್ಸ್ ಅಗತ್ಯತೆಗಳಿಗಾಗಿ ನೀಡಲಾಗಿತ್ತು. ಸ್ಪಲ್ಪ ಪ್ರಮಾಣವನ್ನು ಜಪಾನ್ಗೆ ರಫ್ತು ಮಾಡಲಾಗಿತ್ತು. ಚೀನಾದಿಂದ ಅಪರೂಪದ ಖನಿಜ ರಫ್ತಿಗೆ ನಿರ್ಬಂಧ ವಿಧಿಸಿದ ಬಳಿಕ, ಇಂಡಿಯನ್ ರೇರ್ ಅರ್ತ್ಸ್ ಲಿಮಿಟೆಡ್ ಕಂಪನಿಯು ವಿದೇಶಕ್ಕೆ ರಫ್ತು ಅನ್ನು ನಿಲ್ಲಿಸಿದೆ. ಈಗ ತನ್ನ ಗಣಿಗಾರಿಕೆ ಮತ್ತು ಸಂಸ್ಕರಣೆಯ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ಇನ್ನೂ ಭಾರತದಲ್ಲಿ ಮಹೀಂದ್ರಾ, ಉನೋ ಮಿಂಡಾ, ಸೋನಾ ಕೋಮಸ್ಟಾರ್ ಕಂಪನಿಗಳು ಸ್ವದೇಶಿಯಾಗಿ ಅಪರೂಪದ ಖನಿಜ ಉತ್ಪಾದನೆಗೆ ಮುಂದೆ ಬಂದಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ