/newsfirstlive-kannada/media/post_attachments/wp-content/uploads/2024/10/Grilahakshmi-Scheme-Belagavi-mother.jpg)
ಬೆಳಗಾವಿ: ಸಿಎಂ ಸಿದ್ದರಾಮಯ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಆಗಾಗ ಸದ್ದು ಮಾಡುತ್ತಲೇ ಇದೆ. ಗೃಹಲಕ್ಷ್ಮಿ ಹಣ ಕೂಡಿಟ್ಟ ಮನೆ ಯಜಮಾನಿಯರು ಟಿವಿ, ಫ್ರಿಡ್ಜ್ ಖರೀದಿಸಿದ್ದರು. ಅತ್ತೆ ಸೊಸೆಗೆ ಫ್ಯಾನ್ಸಿ ಸ್ಟೋರ್ ಮಾಡಿಕೊಟ್ಟಿದ್ದರು. ಮತ್ತೊಬ್ಬರು ಊರಿನವರಿಗೆಲ್ಲಾ ಹೋಳಿಗೆ ಊಟ ಹಾಕಿಸಿ ಸಿಎಂ ಸಿದ್ದರಾಮಯ್ಯ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಗೃಹಲಕ್ಷ್ಮಿ ಹಣ ಕೂಡಿಟ್ಟ ತಾಯಿ ಮಗನಿಗೆ ಹೊಸ ಬೈಕ್ ಕೊಡಿಸಿ ಸುದ್ದಿಯಾಗಿದ್ದಾರೆ.
ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವ ಸಣ್ಣಕ್ಕಿ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಮಗನಿಗೆ ದಸರಾ ಉಡುಗೊರೆ ಕೊಟ್ಟಿದ್ದಾರೆ. ತನ್ನ ಮಗ ರಮೇಶ ನೀಲಪ್ಪ ಸಣ್ಣಕ್ಕಿಗೆ ಇಂದು ದ್ವಿಚಕ್ರ ವಾಹನ ಕೊಡಿಸಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ ಹಣದಿಂದ ಸೊಸೆಗಾಗಿ ಫ್ಯಾನ್ಸಿ ಸ್ಟೋರ್ ಹಾಕಿಕೊಟ್ಟ ಅತ್ತೆ; ಕೂಲಿ ಕೆಲಸಕ್ಕೆ ಹೋಗ್ತಿದ್ದ ಸೊಸೆಗೆ ಅದೃಷ್ಟ!
ಬಾಗವ್ವ ತನ್ನ ಮಗ ಹೊಸ ಬೈಕ್ ಖರೀದಿಸಲು ಮುಂಗಡ ಹಣವನ್ನು ನೀಡಿದ್ದಾರೆ. ಇಂದು ಹೊಸ ಬೈಕ್‌ಗೆ ಬಾಗವ್ವ ಪೂಜೆ ಸಲ್ಲಿಸಿ, ಬೈಕ್ ಕೀಯನ್ನು ಮಗನಿಗೆ ಹಸ್ತಾಂತರ ಮಾಡಿದ್ದಾರೆ. ಗೃಹಲಕ್ಷ್ಮಿ ಹಣ ಕೂಡಿಟ್ಟು ಮಗನಿಗೆ ಬೈಕ್ ಕೊಡಿಸಿರೋ ಸುದ್ದಿ ಕೇಳಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಬಾಗವ್ವ ಸಣ್ಣಕ್ಕಿ ಅವರಿಗೆ ಪತ್ರ ಬರೆದಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪತ್ರದಲ್ಲಿ ಏನಿದೆ?
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ತಮ್ಮ ಮಗನಾದ ರಮೇಶ ನೀಲಪ್ಪ ಸಣ್ಣಕ್ಕಿಯವರಿಗೆ ದ್ವಿಚಕ್ರ ವಾಹನ ಖರೀದಿಸಲು ಮುಂಗಡ ಹಣವನ್ನು ತಾವು ನೀಡಿರುವ ವಿಷಯ ಕೇಳಿದ್ದೇನೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂತ್ರಿಯಾದ ನನಗೆ ಇದು ಅತೀವ ಖುಷಿ ತಂದಿದೆ. ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯದ ಮಹಿಳೆಯರು ಸಾವಲಂಬಿ ಜೀವನ ನಡೆಸುವುದರ ಜೊತೆಯಲ್ಲಿ ಮನೆಯ ಪುರುಷರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿರುವುದು ನಿಜಕ್ಕೂ ಮಹಿಳೆಯರ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ.
ವಿಜಯದಶಮಿ ಹಬ್ಬದ ಈ ಶುಭ ಸಂದರ್ಭದಲ್ಲಿ ತಮ್ಮ ಈ ಕಾರ್ಯವು ನಿಜಕ್ಕೂ ಈ ಯೋಜನೆಯ ರೂವಾರಿಗಳಾದ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರರವರ ಮೇಲೆ ತಮ್ಮ ಪ್ರೀತಿ ವಿಶ್ವಾಸ ಹೀಗೆಯೇ ಮುಂದುವರಿಯಲೆಂದು ಬಯಸುತ್ತಾ, ತಮಗೆ ಈ ಮೂಲಕ ಹೊಸ ವಾಹನ ಖರೀದಿಸುತ್ತಿರುವ ಶುಭ ಸಂದರ್ಭದಲ್ಲಿ ಅಭಿನಂದನೆಯನ್ನು ಸಲ್ಲಿಸುತ್ತೇನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ