/newsfirstlive-kannada/media/post_attachments/wp-content/uploads/2025/04/GILL_SAI.jpg)
ಗುಜರಾತ್ ಟೈಟನ್ಸ್ ಪ್ರಸಕ್ತ ಐಪಿಎಲ್ನ ಮೋಸ್ಟ್ ಸಕ್ಸಸ್ಫುಲ್ ಟೀಮ್. ನೋಡಲು ತಂಡದಲ್ಲಿ ಬಿಗ್ ಸ್ಟಾರ್, ಟಿ20 ಸ್ಪೆಷಲಿಸ್ಟ್ಗಳಿಲ್ಲ. ಆದ್ರೆ, ಇವರ ಆಟ, ಗೆಲುವಿನ ಓಟ ಮಾತ್ರ ಟಿ20 ಸ್ಪೆಷಲಿಸ್ಟ್ಗಳಿದ್ದ ತಂಡಗಳನ್ನೇ ನಾಚಿಸುವಂತಿದೆ. ಸೈಲೆಂಟ್ ಆಟದಿಂದಲೇ ಗುಜರಾತ್ ಟೈಟನ್ಸ್ ಸಕ್ಸ್ಸ್ ಕಂಡಿದ್ದೇಗೆ, ಈ ಸಕ್ಸಸ್ ಹಿಂದಿರೋ ಆಟಗಾರರು ಯಾರು?.
ಐಪಿಎಲ್ನಲ್ಲಿ ತಂಡ ಯಶಸ್ಸು ಕಾಣಬೇಕಾದ್ರೆ. ಟಿ20 ಸ್ಪೆಷಲಿಸ್ಟ್ಗಳು ಇರಬೇಕು. ಸ್ಪೆಷಲಿಸ್ಟ್ ಮ್ಯಾಚ್ ಫಿನಿಷರ್ಸ್ಗಳ ದಂಡಿನ ಜೊತೆಗೆ ಡೆತ್ ಓವರ್ ಸ್ಪೆಷಲಿಸ್ಟ್ ಬೌಲರ್ಸ್, ಶಾರ್ಪ್ ಫೀಲ್ಡರ್ಸ್ ಇರಬೇಕು ಎಂಬ ಮಾತಿದೆ. ಆದ್ರೆ, ಈ ಮಾತನ್ನ ಗುಜರಾತ್ ಟೈಟನ್ಸ್ ಸುಳ್ಳಾಗಿಸಿದೆ. ಗೆಲುವಿನ ನಾಗಲೋಟ ನಡೆಸ್ತಿರೋ ಗುಜರಾತ್ ಟ್ರೋಫಿ ಗೆಲ್ಲೋ ಹಾಟ್ ಫೇವರಿಟ್ ಆಗಿ ಗುರುತಿಸಿಕೊಂಡಿದೆ. ಗುಜರಾತ್ ಟೈಟನ್ಸ್ ಯಶಸ್ಸಿಗೆ ಕಾರಣ ಈ ನಾಲ್ವರ ಆಟ. ಅವ್ರೇ ಶುಭ್ಮನ್ ಗಿಲ್, ಸಾಯಿ ಸುದರ್ಶನ್, ಜೋಸ್ ಬಟ್ಲರ್ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ.
ಸೀಸನ್-17ರ ಐಪಿಎಲ್ನಲ್ಲಿ ಪ್ಲೇ ಆಫ್ ಹಂತಕ್ಕೇರುವಲ್ಲಿ ವಿಫಲವಾಗಿದ್ದ ಗುಜರಾತ್ ಟೈಟನ್ಸ್, ಈ ಸಲ ಅಗ್ರಸ್ಥಾನಿಯಾಗಿ ಪ್ಲೇ ಆಫ್ಗೆ ಎಂಟ್ರಿ ನೀಡಿದೆ. ಖ್ಯಾತ ನಾಮ ಆಟಗಾರರ ಹೊರತಾಗಿಯೂ ಗುಜರಾತ್ ತಂಡದ ಈ ಸಾಧನೆ ಮಾಡಿದೆ. ಈ ಯಶಸ್ಸಿಗೆ ಇವರ ಕಾಣಿಕೆ ದೊಡ್ಡಿದೆ.
12 ಮ್ಯಾಚ್.. 1718 ರನ್.. 1 ಶತಕ.. 16 ಅರ್ಧಶತಕ.!
ಟಿ20 ಕ್ರಿಕೆಟ್ ಅಂದ್ರೆನೇ ರಿಸ್ಕ್ ಗೇಮ್. ರಿಸ್ಕ್ ತೆಗೆದುಕೊಂಡ್ರಷ್ಟೇ ರಸ್ಕ್. ಆದ್ರೆ, ಈ ರಿಸ್ಕ್ ಇಲ್ದೇ ಗೆಲ್ಲೋ ಕಲೆಗಾರಿಗೆ ಗುಜರಾತ್ ಟೈಟನ್ಸ್ನ ಬ್ಯಾಟಿಂಗ್ ಯುನಿಟ್ಗೆ ಚೆನ್ನಾಗಿ ಗೊತ್ತು. ಅಬ್ಬರ, ಆರ್ಭಟವಿಲ್ಲದೆ, ರನ್ ಶಿಖರವನ್ನು ಕಟ್ಟೋ ಗುಜರಾತ್ ಟಾಪ್ ಆರ್ಡರ್ ಜುಗಲಬಂದಿ, ಕ್ಲಾಸ್ ಬ್ಯಾಟಿಂಗ್ ನಿಜಕ್ಕೂ ಕಣ್ಣಿಗೆ ಹಬ್ಬ..
ಬಿಗ್ ಪಾರ್ಟ್ನರ್ ಶಿಪ್ ಬ್ಯುಲ್ಡ್ ಮಾಡೋ ಆರಂಭಿಕರಾದ ಶುಭ್ಮನ್ ಗಿಲ್, ಸಾಯಿ ಸುದರ್ಶನ್ ಗುಜರಾತ್ ಗೆಲುವಿನಲ್ಲಿ ಭದ್ರಬುನಾದಿ ಹಾಕ್ತಿದ್ದಾರೆ. ಅಕಸ್ಮಾತ್ ಇಬ್ಬರಲ್ಲಿ ಒಬ್ಬರ ಔಟಾದ್ರೆ, ಜವಾಬ್ದಾರಿ ವಹಿಸಿಕೊಂಡು ಆಡುವ ಜೋಸ್ ಬಟ್ಲರ್, ರನ್ ಗಳಿಕೆಗೆ ವೇಗ ನೀಡುವ ಜೊತೆಗೆ ಎದುರಾಳಿ ಮೇಲೆ ದಂಡಯಾತ್ರೆ ನಡೆಸ್ತಾರೆ. ಈ ಟಾಪ್ ಆರ್ಡರ್ನ ಟಾಪ್ ಕ್ಲಾಸ್ ಬ್ಯಾಟಿಂಗ್ಗೆ ಟಿ20 ಸ್ಪೆಷಲಿಸ್ಟ್ ಬೌಲರ್ಗಳು ಸುಸ್ತಾಗಿದ್ದಾರೆ. ಗುಜರಾತ್ ಗೆಲುವಿನ ಸೀಕ್ರೆಟ್ ಪಾರ್ಟ್ನರ್ಶಿಪ್ & ಪರ್ಫಾಮೆನ್ಸ್.!
ಟಾಪ್ ಆರ್ಡರ್ ಬ್ಯಾಟರ್ಗಳ ಜೊತೆಯಾಟ
ಆರಂಭಿಕರಾಗಿ 12 ಇನ್ನಿಂಗ್ಸ್ಗಳಿಂದ 839 ರನ್ಗಳ ಜೊತೆಯಾಟ ಆಡಿರುವ ಸಾಯಿ ಸುದರ್ಶನ್, ಶುಭಮನ್ ಗಿಲ್ 76.27ರ ಬ್ಯಾಟಿಂಗ್ ಅವರೇಜ್ನಲ್ಲಿ ರನ್ ಗಳಿಸಿದ್ದಾರೆ. ಇವರಿಬ್ಬರ ಜುಗಲ್ಬಂದಿಯಲ್ಲಿ 4 ಅರ್ಧಶತಕ, 1 ಶತಕದ ಜೊತೆಯಾಟ ನಿರ್ಮಾಣವಾಗಿದೆ. ಜೋಸ್ ಬಟ್ಲರ್, ಸಾಯಿ ಸುದರ್ಶನ್ ಜೊತೆಯಾಗಿ 6 ಇನ್ನಿಂಗ್ಸ್ಗಳಿಂದ 352 ರನ್ ಗಳಿಸಿದ್ದಾರೆ. 58.66ರ ಬ್ಯಾಟಿಂಗ್ ಅವರೇಜ್ನಲ್ಲಿ 5 ಅರ್ಧಶತಕಗಳು ಮೂಡಿಬಂದಿವೆ. ಇನ್ನು ಶುಭ್ಮನ್ ಗಿಲ್, ಬಟ್ಲರ್ 5 ಇನ್ನಿಂಗ್ಸ್ಗಳಿಂದ 53.40 ಬ್ಯಾಟಿಂಗ್ ಅವರೇಜ್ನಲ್ಲಿ 267 ರನ್ಗಳ ಗಳಿಸಿದ್ದಾರೆ. ಈ ಪೈಕಿ 5 ಅರ್ಧಶತಕದ ಜೊತೆಯಾಟಗಳು ಬಂದಿವೆ. ಇದಿಷ್ಟೇ ಅಲ್ಲ. ವೈಯಕ್ತಿಕವಾಗಿಯೂ ನಾನಾ.. ನೀನಾ ಎಂಬಂತೆಯೇ ರನ್ ಗಳಿಸ್ತಿದ್ದಾರೆ.
ಗುಜರಾತ್ ಟೈಟನ್ಸ್ ಟಾಪ್ ಆರ್ಡರ್ ಬ್ಯಾಟಿಂಗ್
ಆಡಿರೋ 12 ಪಂದ್ಯಗಳಿಂದ ಸಾಯಿ ಸುದರ್ಶನ್, 56.9ರ ಬ್ಯಾಟಿಂಗ್ ಅವರೇಜ್ನಲ್ಲಿ 617 ರನ್ ಕೊಳ್ಳೆ ಹೊಡೆದಿದ್ದಾರೆ. ಈ ಪೈಕಿ 5 ಅರ್ಧಶತಕ, 1 ಶತಕ ದಾಖಲಿಸಿರುವ ಸುದರ್ಶನ್, 156.99ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಗುಜರಾತ್ ಟೈಟನ್ಸ್ ನಾಯಕ ಶುಭ್ಮನ್ ಗಿಲ್, 601 ರನ್ ಸಿಡಿಸಿದ್ದಾರೆ. ಈ ಪೈಕಿ 6 ಅರ್ಧಶತಕ ಸಿಡಿಸಿರುವ ಶುಭ್ಮನ್, 155.69ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸೋ ಜೋಸ್ ಬಟ್ಲರ್, 71.43ರ ಬ್ಯಾಟಿಂಗ್ ಅವರೇಜ್ನಲ್ಲಿ 500 ರನ್ ಸಿಡಿಸಿದ್ದಾರೆ. 5 ಅರ್ಧಶತಕ ಗಳಿಸಿರುವ ಇಂಗ್ಲೆಂಡ್ ಬ್ಯಾಟರ್, 163.93ರ ಬ್ಯಾಟಿಂಗ್ ಸ್ಟ್ರೈಕ್ರೇಟ್ ಹೊಂದಿದ್ದಾರೆ.
ಟಾಪ್ ಆರ್ಡರ್ ಬ್ಯಾಟರ್ಗಳ ಈ ಟಾಪ್ ಕ್ಲಾಸ್ ಬ್ಯಾಟಿಂಗ್ ಮಾತ್ರವೇ ಗುಜರಾತ್, ಯಶಸ್ಸಿಗೆ ಕಾರಣವಲ್ಲ. ಸಕ್ಸಸ್ಗೆ ಮತ್ತೊಬ್ಬ ಕೊಡುಗೆಯೂ ಇದೆ. ಅದೇ ಕನ್ನಡಿಗ ಪ್ರಸಿದ್ಧ್ ಕೃಷ್ಣ. ತಂಡದ ಮ್ಯಾಚ್ ವಿನ್ನರ್ ಆಗಿ ರೂಪುಗೊಂಡ ಕನ್ನಡಿಗ ಪ್ರಸಿದ್ಧ್, ಪ್ರತಿ ಮ್ಯಾಚ್ನಲ್ಲಿ ಇಂಪ್ಯಾಕ್ಟ್ ಫುಲ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಪವರ್ ಪ್ಲೇ, ಮಿಡಲ್ ಓವರ್ಸ್, ಡೆತ್ ಓವರ್ಸ್ ಯಾವುದೇ ಆಗಲಿ ರನ್ ಗಳಿಕೆಗೆ ಕಡಿವಾಣ ಹಾಕ್ತಿರುವ ಪ್ರಸಿದ್ಧ್, ವಿಕೆಟ್ ಬೇಟೆಯಾಡ್ತಿದ್ದಾರೆ.
ಇದನ್ನೂ ಓದಿ:ಕೊಹ್ಲಿ ಬಳಿ ಇಲ್ಲವೇ ಇಲ್ಲ; RCB ಇಂದ ಕೈ ಜಾರಿದ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್.. ಯಾರ ಹತ್ತಿರ ಇವೆ?
ಪ್ರಸಕ್ತ ಐಪಿಎಲ್ನಲ್ಲಿ ಪ್ರಸಿದ್ಧ್ ಕೃಷ್ಣ
12 ಪಂದ್ಯಗಳಿಂದ 47 ಓವರ್ ಬೌಲ್ ಮಾಡಿರುವ ಪ್ರಸಿದ್ಧ್, 21 ವಿಕೆಟ್ ಉರುಳಿಸಿದ್ದಾರೆ. 7.85ರ ಎಕಾನಮಿ ಕಾಯ್ದುಕೊಂಡಿದ್ದಾರೆ. ಪ್ರಸಿದ್ಧ್ ಕೃಷ್ಣರ ಈ ಎಕಾನಮಿ ಹಾಗೂ ಈ ವಿಕೆಟ್ ಟೇಕಿಂಗ್ ಎಬಿಲಿಟಿ ಗುಜರಾತ್ ಬೌಲಿಂಗ್ ವಿಭಾಗಕ್ಕೆ ಹೊಸ ಮೆರುಗು ತಂದಿದೆ. ಪ್ರಸಿದ್ಧ್ಗೆ ಟೂರ್ನಿಯುದ್ದಕ್ಕೂ ಸಿರಾಜ್, ಸಾಯಿ ಕಿಶೋರ್ ಉತ್ತಮವಾಗಿ ಸಾಥ್ ನೀಡಿದ್ದಾರೆ. ಇಬ್ಬರೂ ತಲಾ 15 ವಿಕೆಟ್ ಬೇಟೆಯಾಡಿದ್ದಾರೆ. ಆ ಮೂಲಕ ಗುಜರಾತ್ ಸಕ್ಸಸ್ನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.
ಆರಂಭದಲ್ಲಿ ಟಿ20 ಸ್ಪೆಷಲಿಸ್ಟ್ಗಳು ಇಲ್ಲದ ಗುಜರಾತ್ ತಂಡವನ್ನು ನೋಡಿ, ಪ್ಲೇ ಆಫ್ಗೆ ಎಂಟ್ರಿ ನೀಡುತ್ತಾ ಎಂಬ ಅನುಮಾನ ಹಲವರಲ್ಲಿತ್ತು. ಆದ್ರೆ, ಈ ನಾಲ್ವರು ಆಟಗಾರರ ಕನ್ಸಿಸ್ಟೆನ್ಸಿ ಆಟ ಇಡೀ ತಂಡದ ಚರೀಷ್ಮಾನೇ ಬದಲಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ