/newsfirstlive-kannada/media/post_attachments/wp-content/uploads/2025/04/SAI_SUDARSHAN.jpg)
ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ 23ನೇ ಐಪಿಎಲ್ ಪಂದ್ಯದಲ್ಲಿ ಓಪನರ್ ಸಾಯಿ ಸುದರ್ಶನ್ ಅವರ ಅದ್ಭುತವಾದ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್ 58 ರನ್ಗಳಿಂದ ವಿಜಯಶಾಲಿಯಾಗಿದೆ. ಇನ್ನು ಟೂರ್ನಿಯಲ್ಲಿ ಶುಭ್ಮನ್ ಗಿಲ್ ಪಡೆಯ ಗೆಲುವಿನ ಓಟ ಮುಂದುವರೆದಿದೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಗುಜರಾತ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನ ಮಾಡಿದರು. ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಸಾಯಿ ಸುದರ್ಶನ್ ಹಾಗೂ ಗುಜರಾತ್ ನಾಯಕ ಗಿಲ್ ಅವರ ಬ್ಯಾಟಿಂಗ್ ಆರಂಭ ಚೆನ್ನಾಗಿರಲಿಲ್ಲ.
ಗಿಲ್ ಕೇವಲ 2 ರನ್ಗೆ ಕ್ಲೀನ್ ಬೋಲ್ಡ್ ಆಗಿ ಹೊರ ನಡೆದರು. ಬಳಿಕ ಬಂದ ಜೋಶ್ ಬಟ್ಲರ್ ಸಾಯಿ ಸುದರ್ಶನ್ಗೆ ಒಳ್ಳೆಯ ಸಾಥ್ ಕೊಟ್ಟರು. ಇದರಿಂದ ಸಾಯಿ ಸುದರ್ಶನ್ ಅಮೋಘವಾದ ಅರ್ಧಶತಕ ಸಿಡಿಸಿದರು. 53 ಎಸೆತಗಳಲ್ಲಿ ಭರ್ಜರಿ 82 ರನ್ ಗಳಿಸಿದರು. ಬಟ್ಲರ್ ಹಾಗೂ ಶಾರುಖ್ ಖಾನ್ ತಲಾ 36 ರನ್ಗೆ ವಿಕೆಟ್ ಒಪ್ಪಿಸಿದರು. ರಾಹುಲ್ ತೆವಾಟಿಯಾ 24, ರಶೀದ್ ಖಾನ್ ಅವರ 12 ರನ್ಗಳ ಕಾಣಿಕೆಯಿಂದ ಗುಜರಾತ್ 6 ವಿಕೆಟ್ಗೆ 218 ರನ್ಗಳ ಬಿಗ್ ಟಾರ್ಗೆಟ್ ನೀಡಿತ್ತು.
ಈ ಗುರಿ ಬೆನ್ನು ಹತ್ತಿದ್ದ ರಾಜಸ್ಥಾನ್ ಪಂದ್ಯದಲ್ಲಿ ಹೋರಾಡಿ ಕೊನೆಗೆ ತಲೆ ಬಾಗಿದೆ. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ ಮತ್ತೆ ಬ್ಯಾಟಿಂಗ್ನಲ್ಲಿ ವಿಫಲವಾಗಿ 6 ರನ್ಗೆ ಔಟ್ ಆಗಿದ್ದಾರೆ. ಕ್ಯಾಪ್ಟನ್ ಸಂಜು 41 ರನ್ಗಳಿಂದ ಗುಜರಾತ್ ಬೌಲರ್ಗಳನ್ನು ಕಾಡಿದರು. ಆದರೆ ನಿತೀಶ್ ರಾಣ, ಶುಭಂ ದುಬೆ ತಲಾ ಒಂದೊಂದು ರನ್ಗೆ ಔಟ್ ಆಗಿ ಹೊರ ನಡೆದರು. ರಿಯಾನ್ 26, ಧೃವ್ ಜುರೆಲ್ 05 ರನ್ನಿಂಗ್ ಬ್ಯಾಟಿಂಗ್ ಚೆನ್ನಾಗಿ ಮಾಡಲಿಲ್ಲ. ಜೋಫ್ರಾ ಆರ್ಚರ್ 1 ರನ್ಗೆ ಔಟ್ ಆದರು.
ಇದನ್ನೂ ಓದಿ: RCB ಜೊತೆ ರೋಹಿತ್ ಶರ್ಮಾ ಬ್ಯಾಟಿಂಗ್.. ಕಾಮೆಂಟರಿ ಮಾಡುವವರಿಗೂ ಬೇಸರನಾ, ಏನಂದ್ರು?
ಶಿಮ್ರಾನ್ ಹೆಟ್ಮೆಯರ್ ಅವರು ಕೊನೆಯಲ್ಲಿ ಭರ್ಜರಿ ಹೋರಾಟ ಮಾಡಿದರೂ ಬಾಲ್ಗಳಿಗಿಂತ ರನ್ಗಳು ಅಧಿಕವಾಗಿದ್ದರಿಂದ ತಂಡವನ್ನು ಗೆಲ್ಲಿಸುವಲ್ಲಿ ವಿಫಲವಾದರು. ಆದರೆ ಭರ್ಜರಿ ಬ್ಯಾಟಿಂಗ್ ಮಾಡಿದ ಹೆಟ್ಮೆಯರ್ 32 ಎಸೆತಗಳಿಗೆ 52 ರನ್ ಗಳಿಸಿ ಪ್ರಸಿದ್ಧ್ ಕೃಷ್ಣ ಬೌಲಿಂಗ್ನಲ್ಲಿ ಕ್ಯಾಚ್ ಕೊಟ್ಟರು. ಉಳಿದ ಬ್ಯಾಟರ್ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ಗೆ ಹೆಜ್ಜೆ ಹಾಕಿದರು. ಹೀಗಾಗಿ ರಾಜಸ್ಥಾನ್ ರಾಯಲ್ಸ್ 19.2 ಓವರ್ಗಳಲ್ಲಿ 159 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲೋಪ್ಪಿಕೊಡಿತು. ಸದ್ಯ ಗುಜರಾತ್ ಟೈಟನ್ಸ್ 5 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿ ತನ್ನ ವಿಜಯ ಪತಾಕೆ ಮುಂದುವರೆಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ