/newsfirstlive-kannada/media/post_attachments/wp-content/uploads/2025/01/KUMBHAMELA.jpg)
ಲಕ್ನೋ: 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳ ಉತ್ತರ ಪ್ರದೇಶದ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಭರ್ಜರಿಯಾಗಿ ನಡೆಯಲಿದೆ. ಜನವರಿ 13 ರಿಂದ ಆರಂಭವಾಗುವ ಕುಂಭಮೇಳ ಫೆಬ್ರವರಿ 26 ರವರೆಗೆ ನಡೆಯಲಿದ್ದು ಇದರಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಲಿದ್ದಾರೆ. ಆದರೆ ಈ ಮಹಾನ್ ಸಂಭ್ರಮದ ಮೇಲೆ ದುಷ್ಟರ ಕಣ್ಣು ಬಿದ್ದಿದ್ದು ಭಯೋತ್ಪಾದಕ ಸಂಘಟನೆಯಿಂದ ಬೆದರಿಕೆ ಕೇಳಿಬಂದಿದೆ.
ಪ್ರಯಾಗರಾಜ್ನಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೆ ಸಿಖ್ ಫಾರ್ ಜಸ್ಟಿಸ್ ಮುಖ್ಯಸ್ಥ ಹಾಗೂ ಖಲಿಸ್ತಾನ್ ಚಳವಳಿಯ ಪ್ರಮುಖ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಬೆದರಿಕೆ ಹಾಕಿದ್ದಾನೆ. ಜನವರಿ 13 ರಿಂದ ಸತತ 44 ದಿನಗಳು ಕಾಲ ನಡೆಯುವ ಕುಂಭಮೇಳದಲ್ಲಿ ಖಲಿಸ್ತಾನಿಗಳ ಬೆಂಬಲಿಗರು ಖಲಿಸ್ತಾನ್ ಧ್ವಜ ಹಾರಿಸಬೇಕು ಎಂದು ಕರೆ ನೀಡಿದ್ದಾನೆ.
ಇಷ್ಟೇ ಅಲ್ಲದೇ ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಹಾಗೂ ಕುಂಭಮೇಳ ನಡೆಯುವ ಜಿಲ್ಲೆ ಪ್ರಯಾಗ್ರಾಜ್ ವಿಮಾನ ನಿಲ್ದಾಣಗಳಲ್ಲಿ ಖಲಿಸ್ತಾನಿಗಳ ಬೆಂಬಲಿಗರು ಗುಂಪು ಸೇರಬೇಕು ಎಂದು ಕರೆ ನೀಡಿದ್ದಾನೆ. ಈ ರೀತಿ ಕರೆ ನೀಡಿರುವುದನ್ನು ವಿಡಿಯೋ ಮಾಡಿ ಅದನ್ನು ಹಲವರ ಇ-ಮೇಲ್ಗಳಿಗೆ ಕಳುಹಿಸಿ ಬೆಂಬಲ ಕೇಳಿದ್ದಾನೆ.
ಇದನ್ನೂ ಓದಿ:ಗಾನ ಗಂಧರ್ವ ಆಡಿ ಬೆಳೆದ ಮನೆ ಈಗ ಅನಾಥ.. SPB ಕನಸಿನ ‘ಸಂಗೀತ ದೇಗುಲ’ದಲ್ಲೀಗ ಸ್ವರವಿಲ್ಲ
ಮಹಾ ಕುಂಭ ಮೇಳದ ಮೇಲೆ ದಾಳಿ ನಡೆಸಿ, 1,000 ಭಕ್ತರನ್ನು ಮುಗಿಸುವುದಾಗಿ ಹೇಳಿರುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ನಾಸಿರ್ ಪಠಾಣ್ ಎಂಬ ನಕಲಿ ವ್ಯಕ್ತಿಯ ಹೆಸರಿನಲ್ಲಿ ಇನ್ಸ್ಟಾದದಲ್ಲಿ ಪೋಸ್ಟ್ ಶೇರ್ ಮಾಡಿದ್ದರು. ಈ ಬಂಧನ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಶಂಕಿತನ ಹೆಸರು ಆಯುಷ್ ಕುಮಾರ್ ಜೈಸ್ವಾಲ್ ಎಂದು ತಿಳಿದು ಬಂದಿದೆ.
ಈ ಆಯುಷ್ ಕುಮಾರ್ ಜೈಸ್ವಾಲ್ ಪೊಲೀಸರು ಹಿಂದೆ ಬಿದ್ದಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ನೇಪಾಳಕ್ಕೆ ಹೋಗಲು ಯೋಜನೆ ರೂಪಿಸಿದ್ದನು. ಬಿಹಾರದಿಂದ ಹೋಗುವಾಗ ಸ್ಥಳೀಯ ಪೊಲೀಸರ ಸಹಾಯದಿಂದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯ ಮೂಲ ಸ್ಥಳ ಬಿಹಾರದ ಪೂರ್ನಿಯ ಜಿಲ್ಲೆಯ ಭವಾನಿಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾದಿಗಂಜ್ ಪ್ರದೇಶದ ನಿವಾಸಿ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ