/newsfirstlive-kannada/media/post_attachments/wp-content/uploads/2024/10/hanuman-Idol-2.jpg)
ನದಿಗಳಲ್ಲಿ, ಹೊಳೆಗಳಲ್ಲಿ ಪ್ರವಾಹ ಉಕ್ಕಿ ಬಂದಾಗ ಅತ್ಯಮೂಲ್ಯ ವಸ್ತುಗಳು ತೇಲಿ ಬರುವ ಅಥವಾ ಕೊಚ್ಚಿಕೊಂಡು ಬರುವುದು ಸಾಮಾನ್ಯ ವಿಚಾರ. ಆದರೆ ಇಲ್ಲೊಂದು ಗ್ರಾಮದಲ್ಲಿ ಬಂಗಾರದ ಬಣ್ಣದ ಆಂಜನೇಯನ ಮೂರ್ತಿಯೊಂದು ತೇಲಿ ಬಂದು ಮರಳಿನಲ್ಲಿ ಸಿಕ್ಕಿಕೊಂಡಿದೆ. ಹಾಗಾಗಿಯೇ ಈ ಊರಿನ ಗ್ರಾಮಸ್ಥರು ನಮ್ಮೂರಿಗೆ ಸಾಕ್ಷಾತ್ ಭಜರಂಗಿಯೇ ಬಂದಿದ್ದಾನೆ ಅಂತ ಭಕ್ತಿ ಭಾವದಿಂದ ಪೂಜಿಸುತ್ತಿದ್ದಾರೆ.
ಮಾರುತಿ ಮಹಿಮೆ ನಡೆದಿದ್ದು ಎಲ್ಲಿ?
ವಿಗ್ರಹ ಮೊದಲು ಕಂಡಿದ್ದು ಯಾರು?
ಆಂಧ್ರ ಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ರಾಜವೊಮ್ಮಂಗಿ ತಾಲೂಕಿನ ಜಡ್ಡಂಗಿ ಗ್ರಾಮದಲ್ಲಿ ಇಂಥದ್ದೊಂದು ಪವಾಡ ನಡೆದಿದೆ. ಈ ಗ್ರಾಮ ಮದೇರು ಅನ್ನೋ ನದಿ ತಟದಲ್ಲಿದೆ. ಇದೇ ದಂಡೆಯಲ್ಲೇ ಇದೀಗ ಸ್ವರ್ಣ ಬಣ್ಣದ ಆಂಜನೇಯನ ವಿಗ್ರಹ ಕಾಣಿಸಿಕೊಂಡಿರುವುದು. ಅಜಯ್ ಅನ್ನೋ ಜಡ್ಡಂಗಿ ಗ್ರಾಮದ ಯುವಕ ಮುಂಜಾನೆ ಎದ್ದು ಮದೇರು ನದಿಯತ್ತ ನಡೆದು ಹೋದಾಗ ಬೆಚ್ಚಿ ಬಿದ್ದಿದ್ದ. ಪಳಪಳನೆ ಹೊಳೆಯುತ್ತಾ ನಿಂತಿದ್ದ 3-4 ಅಡಿ ಎತ್ತರದ ಮೂರ್ತಿಯನ್ನು ಕಂಡು ಅಕ್ಷರಃ ಹೆದರಿದ್ದ. ಸ್ವಲ್ಪ ಧೈರ್ಯ ತಂದುಕೊಂಡು ಸನಿಹಕ್ಕೆ ಹೋದಾಗಲೇ ಅದು ಮಾರುತಿ ವಿಗ್ರಹ ಅನ್ನೋದು ಗೊತ್ತಾಗಿದ್ದು.
ಊರಿನವರಿಗೆ ಮಾಹಿತಿ ನೀಡಿದ್ದ ಅಜಯ್!
ಅಜಯ್ ನದಿಯ ಪ್ರವಾಹದಲ್ಲಿ ಕೊಚ್ಚಿ ಕೊಂಡು ಬಂದು ತಮ್ಮೂರಿನ ದಂಡೆ ಮೇಲೆ ನಿಂತಿದ್ದ ಹನುಮನ ಮೂರ್ತಿಗೆ ಕೈ ಮುಗಿದು ವಿಡಿಯೋ ಮಾಡಿಕೊಂಡಿದ್ದ. ಅಷ್ಟೇ ಅಲ್ಲ, ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ಆ ವಿಚಾರವನ್ನು ಹಾಕಿಕೊಂಡಿದ್ದ. ಮಾಹಿತಿ ತಿಳಿದ ಜಡ್ಡಂಗಿ ಗ್ರಾಮಸ್ಥರು ಹೂವು, ತೆಂಗಿನಕಾಯಿ ಪೂಜಾ ಸಾಮಗ್ರಿಗಳೊಂದಿಗೆ ಬಂದು ಹನುಮನ ಮೂರ್ತಿಗೆ ಪೂಜೆ ಮಾಡಲಾರಂಭಿಸಿದರು. ತಮ್ಮೂರಿನಲ್ಲಿ ಆಂಜನೇಯನ ಮಂದಿರ ಇರಲಿಲ್ಲ. ತಾನಾಗಿಯೇ ಹನುಮನೇ ಬಂದಿದ್ದಾನೆ. ಇನ್ನು, ಕೆಲವೇ ದಿನಗಳಲ್ಲಿ ಮಾರುತಿ ಮಂದಿರ ನಿರ್ಮಿಸುತ್ತೇವೆ ಅಂತ ಜನ ಮಾತಾಡುತ್ತಿದ್ದಾರೆ.
ಇದನ್ನೂ ಓದಿ: ಅಮ್ಮನ ಹಾಲಿಗೆ ಅಳುತ್ತಿದ್ದ ನವಜಾತ ಶಿಶುವಿಗೆ ಹಸುವನ್ನೇ ಕೊಡಿಸಿದ ಜಡ್ಜ್; ತಪ್ಪದೇ ಈ ಸ್ಟೋರಿ ಓದಿ!
ಮಾರುತಿ ಕಾಣಿಸಿಕೊಂಡಾಗಿನಿಂದ ಊರಿಗೆ ಶುಭ!
ಆಂಜನೇಯನ ವಿಗ್ರಹ ಮರಳಿನಲ್ಲಿ ಕಾಣಿಸಿಕೊಂಡಾಗಿನಿಂದ ಇಡೀ ಊರು ಖುಷಿಯಲ್ಲಿದೆ. ಜಡ್ಡಂಗಿ ಸುತ್ತಮುತ್ತಲಿನ ಹಲವು ಗ್ರಾಮದ ಜನ ಇದೀಗ ಹನುಮ ಸಿಕ್ಕ ಸ್ಥಳಕ್ಕೆ ಓಡೋಡಿ ಬರುತ್ತಿದ್ದಾರೆ. ಸದ್ಯ, ಜಡ್ಡಂಗಿಯ ಮದೇರು ನದಿ ದಂಡ ಪುಣ್ಯಕ್ಷೇತ್ರವಾಗಿ ಬದಲಾಗುತ್ತಿದೆ. ವಿಶೇಷ ಎಂದರೆ ಹನುಮನ ಕಾಣಿಸಿಕೊಂಡಾಗಿನಿಂದ ಊರಿನಲ್ಲಿ ಪಾಸಿಟಿವ್ ಪವರ್ ಹೆಚ್ಚಾದಂತೆ ಕಾಣುತ್ತಿದೆ. ತುಂಬಾ ಒಳ್ಳೆಯದೇ ನಡೀತಿದೆ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ. ಮಾರುತಿ ವಿಗ್ರಹ ಬಂಗಾರದ ಬಣ್ಣದಲ್ಲಿದ್ದು ಯಾವ ಲೋಹದ್ದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ನಿಗೂಢವಾಗಿ ಊರಿನ ದಂಡೆಯಲ್ಲಿ ಕಾಣಿಸಿಕೊಂಡ ಮಾರುತಿ ಮೂರ್ತಿಯ ಮಹಿಮೆ ಬಗ್ಗೆ ಜನ ಮಾತಾಡುತ್ತಲೇ ಇದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ