/newsfirstlive-kannada/media/post_attachments/wp-content/uploads/2024/10/MODI-RAHUL-GANDHI.jpg)
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಂಗಾಲಾಗಿದ್ರೆ ಬಿಜೆಪಿ ಅಕ್ಷರಶಃ ಕಮಾಲ್ ಮಾಡಿದೆ. ಸತತ 3ನೇ ಬಾರಿ ಅಧಿಕಾರಕ್ಕೆ ಬರುವುದರ ಜೊತೆಗೆ ಬಿಜೆಪಿ ನಾಯಕರು ಹರಿಯಾಣದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: VineshPhogat: ಅಗ್ನಿ ಪರೀಕ್ಷೆಯಲ್ಲಿ ವಿಜಯ ಪತಾಕೆ.. ಗೆದ್ದು ಬೀಗಿದ ವಿನೇಶ್ ಫೋಗಟ್!
ಹರಿಯಾಣ ರಾಜ್ಯ ರಚನೆಯಾದ ಬಳಿಕ 1966ರಿಂದ ಯಾವುದೇ ಪಕ್ಷವೂ ಹ್ಯಾಟ್ರಿಕ್ ಗೆಲುವು ಸಾಧಿಸಿಲ್ಲ. ಇದೀಗ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಂತ ಕೇಸರಿ ಬ್ರಿಗೇಡ್ ವಿಜಯಪತಾಕೆ ಹಾರಿಸಿದೆ. ಕಾಂಗ್ರೆಸ್ ಗೆಲುವಿನ ವಿಶ್ವಾಸಕ್ಕೆ ಪೆಟ್ಟು ಕೊಟ್ಟ ಬಿಜೆಪಿ ಪಕ್ಷದ ಗೆಲುವಿನ ವಿಜಯ ಸೂತ್ರ ರಣ ರೋಚಕವಾಗಿದೆ.
ಬಿಜೆಪಿ ಗೆಲುವಿಗೆ 7 ಕಾರಣಗಳು!
1. ಹರಿಯಾಣದಲ್ಲಿ ಜಾಟ್ ಸಮುದಾಯದ ಮತಗಳು ಯಾವುದೇ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುತ್ತವೆ. ಆದರೆ ಈ ಬಾರಿ ಜಾಟ್ ಹೊರತುಪಡಿಸಿ ಉಳಿದ ಸಮುದಾಯಗಳೆಲ್ಲಾ ಒಗ್ಗೂಡಿ ಬಿಜೆಪಿ ಪರ ಮತ ಚಲಾವಣೆ ಮಾಡಿದೆ. ಇದು ಬಿಜೆಪಿ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಜಾಟ್ ಸಮುದಾಯದ ನಾಯಕ ಭೂಪಿಂದರ್ ಹೂಡಾ ವಿರುದ್ಧ ಜಾಟ್‌ಯೇತರ ಸಮುದಾಯದ ಮತಗಳು ಒಗ್ಗೂಡಿದ್ದು ಬಿಜೆಪಿಗೆ ಬಲ ತಂದಿದೆ.
2. ಕಾಂಗ್ರೆಸ್‌ಗೆ ಕೈ ಕೊಟ್ಟ ಜಾಟ್ ಸಮುದಾಯ. ಈ ಬಾರಿ ಚುನಾವಣೆಯಲ್ಲಿ ಜಾಟ್ ಪ್ರಾಬಲ್ಯದ 36 ಕ್ಷೇತ್ರಗಳ ಪೈಕಿ 27ರಲ್ಲಿ ಕಾಂಗ್ರೆಸ್ ಗೆದ್ದಿದೆ. ಆದರೆ ಜಾಟ್ ಸಮುದಾಯದ ಮತಗಳು ಸಂಪೂರ್ಣವಾಗಿ ಕಾಂಗ್ರೆಸ್ ಪರ ಬಂದಿಲ್ಲ. ಇದು ಬಿಜೆಪಿಗೆ ಲಾಭವಾಗಿದೆ.
3. ದಕ್ಷಿಣ ಹರಿಯಾಣದ ಅಹಿರವಾಲ್ ಪ್ರಾಂತ್ಯದ 11 ಕ್ಷೇತ್ರಗಳ ಪೈಕಿ 10 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿರೋದು ಚುನಾವಣೆಯ ಚಿತ್ರಣವನ್ನೇ ಬದಲಾಯಿಸಿದೆ.
4. ನಗರ ಪ್ರದೇಶದ ಮತದಾರರು ಮತ್ತೆ ಬಿಜೆಪಿ ಪರವೇ ಮತ ಚಲಾಯಿಸಿದ್ದಾರೆ. ಸೈಬರ್ ಹಬ್ ಗುರುಗ್ರಾಮ ಜಿಲ್ಲೆ ಸಂಪೂರ್ಣ ಬಿಜೆಪಿಯ ವಶವಾಗಿದೆ.
5. ಬಿಜೆಪಿ ಪಕ್ಷದ ನಾಯಕರು ಸಿಎಂ ನಾಯಬ್ ಸಿಂಗ್ ಸೈನಿ ನೇತೃತ್ವದಲ್ಲಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಹೂಡಾ ಬಣ, ಕುಮಾರಿ ಸೆಲ್ಜಾ, ರಣದೀಪ್ ಸುರ್ಜೇವಾಲಾ ನಡುವೆ ಆಂತರಿಕ ಜಗಳ ಇದ್ದಿದ್ದು ಬಿಜೆಪಿಗೆ ವರವಾಗಿದೆ.
6. ಜಾಟ್ ಸಮುದಾಯದ ಮತಗಳು ಶೇ.100 ರಷ್ಟು ಕಾಂಗ್ರೆಸ್‌ಗೆ ಬರುತ್ತವೆ ಎಂಬ ಅತಿಯಾದ ಆತ್ಮವಿಶ್ವಾಸ ಕಾಂಗ್ರೆಸ್‌ಗೆ ಮುಳುವಾಗಿದೆ. ಇದಕ್ಕೆ ಕೌಂಟರ್ ಮಾಡಿದ ಬಿಜೆಪಿ ಉಳಿದ ಸಮುದಾಯದ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
7. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ಸಾಮರ್ಥ್ಯಕ್ಕಿಂತ ನಾಯಕರಿಗೆ ನಿಷ್ಠೆಯಾಗಿ ಇರುವವರಿಗೆ ಟಿಕೆಟ್ ನೀಡಿತ್ತು. 90 ಕ್ಷೇತ್ರಗಳ ಪೈಕಿ 72 ಕ್ಷೇತ್ರಗಳಲ್ಲಿ ಭೂಪಿಂದರ್ ಹೂಡಾ ಬೆಂಬಲಿಗರಿಗೆ ಟಿಕೆಟ್ ನೀಡಿದ್ದು ಸೋಲಿಗೆ ಪ್ರಮುಖ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ