/newsfirstlive-kannada/media/post_attachments/wp-content/uploads/2025/06/father_in_law.jpg)
ಮನೆಯ ಭಾಗ್ಯದ ಬೆಳಕಾಗಿದ್ದ ಸೊಸೆಯನ್ನು ಮಾವನೇ ಜೀವ ತೆಗೆದು, ಮನೆ ಮುಂದೆ 10 ಅಡಿ ಅಳದ ಗುಂಡಿ ತೋಡಿ ಹೂತು ಹಾಕಿರುವ ಅಘಾತಕಾರಿ ಘಟನೆ ಹರಿಯಾಣ ರಾಜ್ಯದ ಫರಿದಾಬಾದ್ ಜಿಲ್ಲೆಯ ರೋಶನ್ ನಗರದಲ್ಲಿ ನಡೆದಿದೆ.
ತನು ಸಿಂಗ್ (24) ಜೀವ ಕಳೆದುಕೊಂಡ ಮಹಿಳೆ. ಮಾವನೇ ಏಪ್ರಿಲ್ ತಿಂಗಳಲ್ಲಿ ತನು ಸಿಂಗ್ಳ ಪ್ರಾಣ ತೆಗೆದಿದ್ದನು. ಬಳಿಕ ಮನೆಯ ಮುಂದೆ ಚರಂಡಿಗಾಗಿ ಎಂದು 10 ಅಡಿ ಅಳದ ಗುಂಡಿ ತೆಗೆದು ಅದರೊಳಗೆ ಸೊಸೆಯ ದೇಹ ಹಾಕಿ ರಾತ್ರೋರಾತ್ರಿ ಮುಚ್ಚಿ ಹಾಕಿದ್ದ. 2 ತಿಂಗಳ ಬಳಿಕ ಫರಿದಾಬಾದ್ ಪೊಲೀಸರು ಈ ನಿಗೂಢ ಕೊಲೆ ಕೇಸ್ ಅನ್ನು ಭೇದಿಸಿದ್ದಾರೆ.
2 ವರ್ಷದ ಹಿಂದೆ ತನುಸಿಂಗ್ ಎಂಬ ಯುವತಿಯನ್ನು ರೋಶನ್ ನಗರದ ಅರುಣ್ ಸಿಂಗ್‌ಗೆ ನೀಡಿ ಮದುವೆ ಮಾಡಲಾಗಿತ್ತು. ಆದರೇ, ತನು ಸಿಂಗ್‌ಗೆ ಅರುಣ್ ಸಿಂಗ್, ತಂದೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆ ತರಲಾಗದೇ, ತನುಸಿಂಗ್ ತವರು ಮನೆ ಸೇರಿದ್ದಳು. ಬಳಿಕ ಮತ್ತೆ ಗಂಡನ ಮನೆಗೆ ಬಂದಿದ್ದಳು. ಈ ವೇಳೆ ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡಿದ್ದ ಪತಿ ಅರುಣ್ ಸಿಂಗ್ ಕುಟುಂಬ, ಸೊಸೆಯ ಉಸಿರು ನಿಲ್ಲಿಸಿತ್ತು ಎಂದು ಹೇಳಲಾಗಿದೆ.
ಏಪ್ರಿಲ್ 23 ರಂದು ಮನೆ ಮುಂದೆ ತನು ಸಿಂಗ್ ಮಾವ ಭೂಪಸಿಂಗ್ 10 ಅಡಿ ಅಳದ ಗುಂಡಿ ತೆಗೆದಿದ್ದ. ಒಳಚರಂಡಿ ಕೆಲಸಕ್ಕಾಗಿ ಗುಂಡಿ ತೆಗೆದಿರುವುದಾಗಿ ಅಕ್ಕಪಕ್ಕದವರಿಗೆ ಹೇಳಿದ್ದ. ಆದರೇ, ಅದರಲ್ಲೇ ತನ್ನ ಮನೆಯ ಸೊಸೆ ತನು ಸಿಂಗ್ ಶವವನ್ನು ಹಾಕಿ ರಾತ್ರೋರಾತ್ರಿ ಮುಚ್ಚಿ ಹಾಕಿದ್ದ. ದೃಶ್ಯ ಸಿನಿಮಾದ ಮಾದರಿಯಲ್ಲೇ ಶವವನ್ನು ಮನೆ ಮುಂದಿನ ಗುಂಡಿಯಲ್ಲಿ ಹಾಕಿ ಮುಚ್ಚಿದ್ದ. ಏಪ್ರಿಲ್ 25 ರಂದು ತನ್ನ ಮನೆಯ ಸೊಸೆ ತನು ಸಿಂಗ್ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ಭೂಪಸಿಂಗ್ ದೂರು ನೀಡಿದ್ದ. ಜೊತೆಗೆ ತನ್ನ ಸೊಸೆಗೆ ಮಾನಸಿಕ ಸ್ಥಿಮಿತ ಸರಿ ಇಲ್ಲ. ಹೀಗಾಗಿ ಮನೆ ಬಿಟ್ಟು ಹೋಗಿ ನಾಪತ್ತೆ ಆಗಿದ್ದಾಳೆ. ಮಾರ್ಕೆಟ್ಗೆ ಹೋದವಳು ವಾಪಸ್ ಬಂದಿಲ್ಲ ಎಂದು ಕಥೆ ಕಟ್ಟಿದ್ದ.
ಆದರೇ, ಪೊಲೀಸರಿಗೆ ಭೂಪಸಿಂಗ್ ಹಾಗೂ ಮಗ ಅರುಣ್ ಸಿಂಗ್ ಮೇಲೆಯೇ ಅನುಮಾನ ಇತ್ತು. ಹೀಗಾಗಿ ತನು ಸಿಂಗ್ ಪತಿ ಅರುಣ್ ಸಿಂಗ್, ಮಾವ ಭೂಪಸಿಂಗ್ರನ್ನೇ ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಒಂದೊಂದು ರೀತಿಯ ವಿಭಿನ್ನ ಹೇಳಿಕೆ ನೀಡಿದ್ದರು. ಕೊನೆಗೆ ಏಪ್ರಿಲ್ 21ರ ರಾತ್ರಿಯೇ ತನ್ನ ಸೊಸೆಯನ್ನು ತಾನೇ ಹತ್ಯೆ ಮಾಡಿದ್ದಾಗಿ ಭೂಪಸಿಂಗ್ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಶವವನ್ನು ಮನೆಯ ಮುಂದೆಯೇ ಗುಂಡಿ ತೋಡಿ ಹೂತು ಹಾಕಿದ್ದಾಗಿ ಹೇಳಿದ್ದಾನೆ.
ಇದನ್ನೂ ಓದಿ:Video; ಸಿಕ್ಸರ್ ಸಿಡಿಸಿ ಸೆಂಚುರಿ ಬಾರಿಸಿದ ರಿಷಭ್ ಪಂತ್, ಫ್ರಂಟ್ಫ್ಲಿಪ್ ಮಾಡಿ ಸೆಲೆಬ್ರೆಷನ್.. ಕನ್ನಡಿಗ ಡಕೌಟ್!
ಮಾವ ಭೂಪಸಿಂಗ್, ಅತ್ತೆ ಸೋನಿಯಾ, ಪತಿ ಅರುಣ್, ನಾದಿನಿ ಕಾಜಲ್ ವಿರುದ್ಧ ಹತ್ಯೆ, ವರದಕ್ಷಿಣೆ ತಡೆ ಕಾಯಿದೆಯಡಿ ಕೇಸ್ ದಾಖಲಾಗಿದೆ. ಭೂಪಸಿಂಗ್, ಅರುಣ್ ಸಿಂಗ್ ಸದ್ಯ ಪೊಲೀಸರ ವಶದಲ್ಲಿದ್ದಾರೆ. ಸೋನಿಯಾ, ಕಾಜಲ್ ನಾಪತ್ತೆಯಾಗಿದ್ದಾರೆ. ತನುಸಿಂಗ್ಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ನಮ್ಮ ಜೊತೆ ಮಾತನಾಡಲು ಕೂಡ ಅವಕಾಶ ಕೊಡುತ್ತಿರಲಿಲ್ಲ. ಪೋನ್ನಲ್ಲೂ ಮಾತನಾಡಲು ಬಿಡುತ್ತಿರಲಿಲ್ಲ ಎಂದು ತನುಸಿಂಗ್ ಸೋದರಿ ಪ್ರೀತಿ ಹೇಳಿದ್ದಾರೆ.
ಈಗ ಪೊಲೀಸರು ಮೃತದೇಹವನ್ನು ಗುಂಡಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಹತ್ಯೆ ಕೇಸ್ನಲ್ಲಿ ಕುಟುಂಬದ ಇತರೆ ಸದಸ್ಯರ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವರದಕ್ಷಿಣೆ ಕಾರಣಕ್ಕಾಗಿ ಹತ್ಯೆ ಮಾಡಿದ್ದಾರೆ ಎಂದು ಎಸಿಪಿ ರಾಜೇಶ್ ಕುಮಾರ್ ಲೋಚನ್ ಹೇಳಿದ್ದಾರೆ. ಇನ್ನು ಪೊಲೀಸರು ಸೋನಿಯಾ, ಕಾಜಲ್ ಬಂಧನಕ್ಕೆ ಬಲೆ ಬೀಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ