/newsfirstlive-kannada/media/post_attachments/wp-content/uploads/2025/03/Bidadi-Hdk-Farmhouse-1.jpg)
ರಾಮನಗರ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಒಡೆತನದ ಬಿಡದಿ ಬಳಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಇಂದು ಜೆಸಿಬಿ ಸದ್ದು ಕೇಳಿ ಬಂದಿದೆ. ಭೂ ಒತ್ತುವರಿ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಕುಮಾರಸ್ವಾಮಿ ಭೂ ಒತ್ತುವರಿ ತೆರವು ಹಿನ್ನೆಲೆಯಲ್ಲಿ ಕೇತಗಾನಹಳ್ಳಿ ತೋಟದ ಮನೆಗೆ ಡಿಸಿ ಯಶವಂತ್ ವಿ ಗುರುಕರ್ ಭೇಟಿ ನೀಡಿದ್ದಾರೆ. ತೋಟದ ಓಳಗೆ ರೋವರ್ ಯಂತ್ರದ ಮೂಲಕ ಸರ್ವೇ ಮಾಡಲಾಗುತ್ತಿದ್ದು, ಕಂದಾಯ ಇಲಾಖೆ ಅಧಿಕಾರಿಗಳು, ಸರ್ವೇ ಅಧಿಕಾರಿಗಳು ಹಾಗೂ ಎಎಸ್‌ಪಿ ಸುರೇಶ್, ಎಎಸ್‌ಪಿ ರಾಮಚಂದ್ರಯ್ಯ ಕೂಡ ಆಗಮಿಸಿದ್ದಾರೆ.
ರಾಮನಗರ ಡಿಸಿ ಏನಂದ್ರು?
ಕುಮಾರಸ್ವಾಮಿ ತೋಟದ ಮನೆ ಸರ್ವೇ ಕಾರ್ಯಕ್ಕೂ ಡಿಸಿ ಯಶವಂತ ವಿ. ಗುರುಕರ್ ಅವರು ಪ್ರತಿಕ್ರಿಯಿಸಿದರು. ಕೋರ್ಟ್ ಆದೇಶದಂತೆ ನಾವು ತೆರವು ಕಾರ್ಯಾಚರಣೆ ಮಾಡ್ತಿದ್ದೇವೆ. ಇಲ್ಲಿ 14 ಎಕರೆಗೂ ಹೆಚ್ಚು ಜಾಗ ಕುಮಾರಸ್ವಾಮಿ ಸೇರಿ ಇತರರಿಂದ ಒತ್ತುವರಿ ಆಗಿದೆ. 10ಕ್ಕೂ ಹೆಚ್ಚು ಸರ್ವೇ ನಂಬರ್‌ಗಳನ್ನ ಪರಿಶೀಲನೆ ಮಾಡಿದ್ದೇವೆ. ಒತ್ತುವರಿ ತೆರವು ಮಾಡಿ ಕೋರ್ಟ್‌ಗೆ ವರದಿ ಕೊಡುತ್ತೇವೆ ಎಂದರು.
ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳಿಗೆ ಒತ್ತುವರಿ ತೆರವು ಮಾಡಿ ಕಲ್ಲು ನೀಡುವಂತೆ ಸೂಚನೆ ನೀಡಿದರು. ತಹಶೀಲ್ದಾರ್‌ಗೆ ವರದಿ ನೀಡುವಂತೆ ಸೂಚನೆಯನ್ನು ನೀಡಲಾಗಿದೆ. ಕುಮಾರಸ್ವಾಮಿ ತೋಟದ ಮನೆ ಒಳಗೆ ಎಂಟ್ರಿ ಆಗಿರುವ ಜೆಸಿಬಿಗಳು, ಅಧಿಕಾರಿಗಳು ಅಳತೆ ಕಲ್ಲುಗಳನ್ನು ನೆಟ್ಟಿದ್ದಾರೆ.
ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಭೂ ಒತ್ತುವರಿ ಆರೋಪ.. ಹೈಕೋರ್ಟ್ ಆದೇಶದ ಪ್ರಕಾರ ತೆರವು ಕಾರ್ಯಾಚರಣೆ ಆರಂಭ
ಒತ್ತುವರಿ ತೆರವು ಹೇಗೆ?
ಕೇತಗಾನಹಳ್ಳಿಯ ಹೆಚ್‌ಡಿಕೆ ತೋಟದೊಳಗೆ ಇಂದು ಒಟ್ಟು 4 ಜೆಸಿಬಿಗಳು ಎಂಟ್ರಿ ಆಗಿವೆ. ದಾಖಲೆಗಳು ಮತ್ತು ಸರ್ವೆ ವರದಿಯೊಂದಿಗೆ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಎಂಟ್ರಿ ಆಗಿದ್ದಾರೆ. ಎಲ್ಲಿ ಒತ್ತುವರಿ ಆಗಿದೆ ಆ ಪ್ರದೇಶ ತೆರವು ಮಾಡೋಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಒತ್ತುವರಿ ಜಾಗದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರು ತೆಂಗು, ಅಡಿಕೆ ಬೆಳೆದಿದ್ದಾರೆ. ಒತ್ತುವರಿ ಜಾಗದಲ್ಲಿ ಅಧಿಕಾರಿಗಳು ಕಲ್ಲಿನ ಕಂಬಗಳನ್ನು ಹಾಕಲು ಕಾರ್ಮಿಕರಿಗೆ ಹೇಳಿದ್ದಾರೆ. ಹೈಕೋರ್ಟ್ ಆದೇಶದಂತೆ ನಾವು ಒತ್ತುವರಿ ತೆರವು ಮಾಡ್ತಾ ಇದ್ದೀವಿ. ಈಲ್ಲಿ 14 ಎಕರೆಗಿಂತ ಹೆಚ್ಚು ಒತ್ತುವರಿ ಆಗಿದೆ. ನಾವು ಒತ್ತುವರಿ ತೆರವು ಮಾಡಿ ಕಾಂಪೌಂಡ್ ಹಾಕುತ್ತೇನೆ. ಆನಂತರ ಇದು ಸರ್ಕಾರಿ ಜಮೀನು ಅಂತ ಬೋರ್ಡ್ ಹಾಕಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ