/newsfirstlive-kannada/media/media_files/2025/07/31/dinesh-gundurao-2025-07-31-21-40-03.jpg)
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು ವಾಜಪೇಯಿ ಆರೋಗ್ಯಶ್ರೀ ಸ್ಕೀಮ್. ಈ ಸ್ಕೀಮ್ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಂದ್ರೆ ಬಿಪಿಎಲ್ ಕುಟುಂಬಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಲಾಗುವುದು. 2009-10ರಲ್ಲಿ ಶುರುವಾದ ಈ ಸ್ಕೀಮ್ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಜನ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾದಾಗ ಉಚಿತ ಚಿಕಿತ್ಸೆ ನೀಡುವ ಗುರಿ ಹೊಂದಿದೆ.
ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುತ್ತಿರೋ ದುರ್ಬಲ ವರ್ಗದವ್ರು ಯಾವುದಾದ್ರೂ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾಗ ಕ್ಯಾಶ್ಲೆಸ್ ಮೆಡಿಕಲ್ ಟ್ರೀಟ್ಮೆಂಟ್ ನೀಡುವುದು ಇದರ ಗುರಿ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ಈ ಸ್ಕೀಮ್ ಶುರು ಮಾಡಲಾಗಿದೆ. ಇಡೀ ರಾಜ್ಯಾದ್ಯಂತ ಸುಮಾರು 2 ಕೋಟಿ ಜನ ಈ ಯೋಜನೆಯ ಫಲಾನುಭವಿಗಳು ಆಗಿದ್ದಾರೆ.
ಆರೋಗ್ಯಶ್ರೀ ಯೋಜನೆಗೆ ಅರ್ಹತಾ ಮಾನದಂಡಗಳು ಏನು ಅಂತಾ ನೋಡೋದಾದ್ರೆ..!
ಬಡವರು ವಾಜಪೇಯಿ ಆರೋಗ್ಯಶ್ರೀ ಯೋಜನೆ ಪಡೆಯಲು ಅರ್ಹರು. ಅರ್ಹತೆ ಪಡೆಯಲು ಕುಟುಂಬಗಳು ಕರ್ನಾಟಕ ಸರ್ಕಾರ ನೀಡಿದ ಬಿಪಿಎಲ್ ಕಾರ್ಡ್ ಹೊಂದಿರಬೇಕು. ಕರ್ನಾಟಕದ ನಿವಾಸಿಯಾಗಿರಬೇಕು.
ನೊಂದಣಿ ಪ್ರಕ್ರಿಯೆ ಹೇಗೆ? ಅಂತಾ ನೋಡೋದಾದ್ರೆ..!
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆರೋಗ್ಯ ಶಿಬಿರಗಳು ಸೇರಿದಂತೆ ಹಲವು ಸಂಪರ್ಕ ಕಾರ್ಯಕ್ರಮಗಳ ಮೂಲಕ ನೋಂದಣಿ ಮಾಡಲಾಗುತ್ತದೆ. ಈ ಶಿಬಿರಗಳು ಅರ್ಹ ಕುಟುಂಬಗಳನ್ನು ಗುರುತಿಸುವಲ್ಲಿ ಸಹಾಯ ಮಾಡುತ್ತವೆ. ಅಷ್ಟೇ ಅಲ್ಲ ದಾಖಲಾತಿ ಪ್ರಕ್ರಿಯೆಯಲ್ಲಿ ಅವರಿಗೆ ಸಹಾಯ ಮಾಡುತ್ತವೆ. ಅರ್ಹರು ಯಾರು ಬೇಕಾದ್ರೂ ನೋಂದಣಿ ಮಾಡಿಸಬಹುದು. ಅದಕ್ಕಾಗಿ ಹೆಚ್ಚುವರಿಯಾಗಿ ಆರೋಗ್ಯಮಿತ್ರ ಸಿಬ್ಬಂದಿಯನ್ನು ಫಲಾನುಭವಿಗಳಿಗೆ ಮಾರ್ಗದರ್ಶನ ನೀಡಲು ನೋಂದಣಿ ಮಾಡಲಾದ ಆಸ್ಪತ್ರೆಗಳಲ್ಲಿ ನಿಯೋಜಿಸಲಾಗಿದೆ.
ಯೋಜನೆಯ ಪ್ರಯೋಜನಗಳು ಏನು ಅಂತಾ ನೋಡೋದಾದ್ರೆ..!
ನೋಂದಣಿ ಮಾಡಲಾದ ಆಸ್ಪತ್ರೆಗಳಲ್ಲಿ 1.5 ಲಕ್ಷ ರೂ. ವರೆಗೆ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುರು. ಆಸ್ಪತ್ರೆ ಮತ್ತು ಶಸ್ತ್ರಚಿಕಿತ್ಸೆಗಳ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಈ ಯೋಜನೆ ಕೌನ್ಸಿಲಿಂಗ್ ಸೇರಿದಂತೆ ರೋಗನಿರ್ಣಯ ಪರೀಕ್ಷೆಗಳಂತಹ ವೆಚ್ಚಗಳನ್ನು ಒಳಗೊಂಡಿದೆ. ರೋಗಿಯ ವಾಸ್ತವ್ಯದ ಸಮಯದಲ್ಲಿ ಅಗತ್ಯವಿರೋ ಶಸ್ತ್ರಚಿಕಿತ್ಸೆಗಳು, ಔಷಧಿಗಳು ಮತ್ತು ಇತರ ಆಸ್ಪತ್ರೆ ಸೇವೆಗಳ ವೆಚ್ಚವನ್ನು ಇದು ಒಳಗೊಂಡಿದೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ಸಂಪೂರ್ಣ ಚೇತರಿಕೆ ಖಚಿತಪಡಿಸಿಕೊಳ್ಳಲು ಈ ಯೋಜನೆಯು ಅನುಸರಣಾ ಸಮಾಲೋಚನೆಗಳು ಮತ್ತು ಚಿಕಿತ್ಸೆಗಳನ್ನು ಒಳಗೊಂಡಿದೆ. ಜತೆಗೆ ಆಸ್ಪತ್ರೆಗೆ ದಾಖಲಾಗಲು ಸಾರಿಗೆ ವೆಚ್ಚಗಳನ್ನು ಸಹ ಒಳಗೊಂಡಿದೆ.
ಯೋಜನೆಯಡಿ ಇರುವ ಸೌಲಭ್ಯಗಳು ಏನೇನು ಅಂತಾ ನೋಡೋದಾದ್ರೆ..!
ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ತೊಂದರೆ, ಸುಟ್ಟಗಾಯ, ಅಪಘಾತ ಹಾಗೂ ನವಜಾತ ಶಿಶುಗಳಿಗೆ ಸಂಬಂಧಿಸಿದ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು. ಖಾಯಿಲೆಗಳಿಗೆ ಅಗತ್ಯವಾಗಿ ಬೇಕಾದ 402 ಬಗೆಯ ಶಸ್ತ್ರ ಚಿಕಿತ್ಸೆಗಳನ್ನು ಗುರುತಿಸಲಾಗಿದ್ದು, ಈ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯದಲ್ಲಿ 130 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಒಳಗೊಂಡ ಆಸ್ಪತ್ರೆ ಜಾಲ ನಿರ್ಮಿಸಲಾಗಿದೆ. ಚಿಕಿತ್ಸೆ ಮತ್ತು ಆರೈಕೆಗೆ ತಗಲುವ 1.5 ಲಕ್ಷ ರೂ.ವರೆಗಿನ ವೆಚ್ಚವನ್ನು ಸರಕಾರವೇ ಭರಿಸುತ್ತದೆ. ಕುಟುಂಬದ ಐದು ಮಂದಿ ಈ ಯೋಜನೆಗೆ ನೋಂದಣಿ ಮಾಡಿಸಬಹುದು. ಆದರೆ, ಚಿಕಿತ್ಸೆಯ ಗರಿಷ್ಠ ಮಿತಿ. 1.5 ಲಕ್ಷ ರೂ. ಆಗಿದೆ. ರೋಗ ಪತ್ತೆಯಿಂದ ಖಾಯಿಲೆ ಗುಣವಾಗುವವರೆಗೆ ಎಲ್ಲಾ ಪರೀಕ್ಷೆ, ಚಿಕಿತ್ಸೆ,ಔಷಧಿ, ಊಟೋಪಚಾರ ಹಾಗೂ ಪ್ರಯಾಣ ಉಚಿತವಾಗಿರುತ್ತದೆ.
ಹೆಚ್ಚಿನ ಮೊತ್ತದ ಅಗತ್ಯವಿರುವ ಪ್ರಕರಣಗಳಲ್ಲಿ ಪರಿಶೀಲನೆಯ ನಂತರ ಹೆಚ್ಚುವರಿಯಾಗಿ ರೂ.50,000/-ವರೆಗೆ ನೀಡಲಾಗುತ್ತದೆ. ಈ ಯೋಜನೆಗೆ ಸಂಪೂರ್ಣವಾಗಿ ರಾಜ್ಯ ಸರ್ಕಾರ ಧನಸಹಾಯ ಮಾಡುತ್ತದೆ. ವಾರ್ಷಿಕ ಬಜೆಟ್ ಹಂಚಿಕೆಯು ನೂರಾರು ಕೋಟಿಗಳಷ್ಟಿದೆ. ಕರ್ನಾಟಕವು ಇದನ್ನು ಮತ್ತು ಇತರ ಆರೋಗ್ಯ ಕಾರ್ಯಕ್ರಮಗಳನ್ನು ಸ್ಥಿರವಾಗಿ ನಡೆಸಲು 800 ಕೋಟಿಗಿಂತ ಹೆಚ್ಚು ಹಣ ಮೀಸಲಿಟ್ಟಿದೆ.
ವಿಕ್ಟೋರಿಯಾ ಆಸ್ಪತ್ರೆ, ಬೆಂಗಳೂರು. ನಾರಾಯಣ ಹೆಲ್ತ್, ಬೆಂಗಳೂರು. ವೆನ್‌ಲಾಕ್ ಆಸ್ಪತ್ರೆ, ಮಂಗಳೂರು. ಎ.ಜೆ. ಆಸ್ಪತ್ರೆ, ಮಂಗಳೂರು. ಯೇನೆಪೋಯ ಆಸ್ಪತ್ರೆ, ಮಂಗಳೂರು. ಫಾದರ್ ಮುಲ್ಲರ್ಸ್ ಆಸ್ಪತ್ರೆ, ಮಂಗಳೂರು. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI) ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಫ್ರೀ ಟ್ರೀಟ್ಮೆಂಟ್ ಸಿಗಲಿದೆ.