/newsfirstlive-kannada/media/post_attachments/wp-content/uploads/2024/07/RAIN_EFFECT-2-1.jpg)
ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ವರುಣ ಜಲರಾಶಿಯ ಬಲೆ ಬೀಸಿ ಕರುನಾಡನ್ನ ಕಂಗೊಳಿಸುವಂತೆ ಮಾಡಿದ್ದಾನೆ. ವರುಣಾರ್ಭಟಕ್ಕೆ ತುಂಬಿ ತುಳುಕುತ್ತಿರೋ ಹಳ್ಳ-ಕೊಳ್ಳಗಳು ಅನ್ನದಾತರ ಮೊಗದಲ್ಲಿ ಮಂದಹಾಸ ತುಂಬಿದೆ. ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ. ಇದೆ ವೇಳೆ ಸಂತಸದ ಜೊತೆಗೆ ಸಂಕಟವನ್ನೂ ವರುಣ ತಂದಿಟ್ಟಿದ್ದಾನೆ.
ಮನೆ ಗೋಡೆ ಕುಸಿತ.. ವ್ಯಕ್ತಿಗೆ ಗಂಭೀರ ಗಾಯ
ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿ ನಿರಂತರ ಮಳೆಗೆ ಮನೆಯೊಂದರ ಗೋಡೆ ಕುಸಿತವಾಗಿದೆ. ಈ ವೇಳೆ ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ‘ರೈತನ ಮದ್ವೆ ಆದ್ರೆ ರಾಣಿ ಹಂಗೇ ನೋಡ್ಕೋತೀವಿ’.. ಸಿಲಿಕಾನ್ ಸಿಟಿ ಹೆಣ್ಮಕ್ಕಳಿಗೆ ಹೊಸ ಆಫರ್!
ಅಪಾಯದ ಮಟ್ಟ ಮೀರಿದ ‘ಕೃಷ್ಣೆ’!
ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಏರಿಕೆಯಾಗ್ತಿರೋ ಹಿನ್ನೆಲೆ ರಾಯಚೂರು ಜಿಲ್ಲಾಡಳಿತದಿಂದ ನದಿಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2 ಲಕ್ಷದ 70 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗ್ತಿದೆ. ಈ ಹಿನ್ನೆಲೆ ಕೃಷ್ಣನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ನ್ಯೂಸ್ ಫಸ್ಟ್ ವರದಿಗೆ ಎಚ್ಚೆತ್ತ ವಿಜಯನಗರ ಜಿಲ್ಲಾಡಳಿತ!
ಶಿರಾಡಿ ಗುಡ್ಡ ಕುಸಿತ ಘಟನೆ ಬೆನ್ನಲ್ಲೇ ಹೊಸಪೇಟೆ ಬಳಿಯ ಜೋಳದಡಗಿ ಗುಡ್ಡ ಕುಸಿತದ ಭೀತಿಯ ಬಗ್ಗೆ ನ್ಯೂಸ್ ಫಸ್ಟ್ ವರದಿ ಮಾಡಿತ್ತು. ನ್ಯೂಸ್ ಫಸ್ಟ್ ವರದಿಯಿಂದ ಎಚ್ಚೆತ್ತ ವಿಜಯನಗರ ಜಿಲ್ಲಾಡಳಿತ ಹೊಸಪೇಟೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ 67ರ ಮೇಲೆ ಕುಸಿಯುವ ಭೀತಿಯಲ್ಲಿದ್ದ ಗುಡ್ಡವನ್ನ ತೆರವು ಮಾಡುವ ಕಾರ್ಯಾಚರಣೆ ನಡೆಸಿದೆ. ಈ ಬಗ್ಗೆ ವರದಿ ಮಾಡಿ ಜಿಲ್ಲಾಡಳಿತ ಕಣ್ಣು ತೆರೆಸಿದ ನ್ಯೂಸ್ ಫಸ್ಟ್ ಕಾರ್ಯಕ್ಕೆ ಸ್ಥಳೀಯ ಮುಖಂಡರು, ಸಂಘಟನೆಗಳ ಹಾಗೂ ವಿಜಯನಗರ ಡಿಸಿ ದಿವಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಶಿರೂರು ದುರಂತ.. ಮೂವರಿಗಾಗಿ ಡ್ರೋನ್ ಮೂಲಕ ನೌಕಾಪಡೆ ತೀವ್ರ ಹುಡುಕಾಟ!
ಜಗಮಗ ಅಂತಿದೆ ತುಂಗಭದ್ರಾ ಜಲಾಶಯ!
ಮಳೆನಾಡಿನ ಮಹಾಮಳೆಗೆ ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ಜೀವಕಳೆ ಬಂದಿದೆ. ತುಂಬಿ ತುಳುಕುತ್ತಿರೋ ಜಲಾಶಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಜಲಾಶಯ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ಜಲಾಶಯದ 33 ಗೇಟ್ಗಳಿಗೆ ಬಣ್ಣ ಬಣ್ಣದ ಲೈಟಿಂಗ್ ಅಳವಡಿಸಲಾಗಿದ್ದು, ನೀರಿನ ಹರಿವಿನ ದೃಶ್ಯ ಮನಮೋಹಕವಾಗಿದೆ.
ಘಟಪ್ರಭಾ ತೀರದಲ್ಲಿ ಪ್ರವಾಹ ಪರಿಸ್ಥಿತಿ
ಘಟಪ್ರಭಾ ನದಿಯ ಅಬ್ಬರಕ್ಕೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಿರ್ಜಿ, ಚನ್ನಾಳ, ಒಂಟಗೋಡಿ ಮತ್ತು ರಬಕವಿ-ಬನಹಟ್ಟಿ ತಾಲೂಕಿನ ನಂದಗಾಂವ ಗ್ರಾಮಕ್ಕೆ ಪ್ರವಾಹ ಭೀತಿ ಎದುರಾಗಿದೆ. ಹಿಡಕಲ್ ಜಲಾಶಯದಿಂದ ಭಾರೀ ನೀರು ನದಿಗೆ ಬಿಡುಗಡೆ ಮಾಡ್ತಿರೋ ಹಿನ್ನೆಲೆ ಗ್ರಾಮಗಳು ಜಲಾವೃತವಾಗುವ ಪರಿಸ್ಥಿತಿ ಎದುರಾಗಿದ್ದು, ಡಂಗೂರ ಸಾರಿ ಜನರಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಮುಂದುವರೆದ ಮಳೆ ಅಬ್ಬರ.. ಬಂದ್ ಆಯ್ತು ಶಾಲೆಗಳು
ಮಳೆಗೂ ಶಾಲೆಗೂ ಅವಿನಾಭಾವ ಸಂಬಂಧ ಅನ್ನೋಹಾಗೆ ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ವರುಣ ಇಂದು ಸಹ ಶಾಲೆಗಳಿಗೆ ಬೀಗ ಬೀಳುವಂತೆ ಮಾಡಿದ್ದಾನೆ.
ಎಲ್ಲೆಲ್ಲಿ ಶಾಲೆಗಳಿಗೆ ರಜೆ!
ಉತ್ತರ ಕನ್ನಡ ಜಿಲ್ಲಾದ್ಯಂತ ಮುಂದುವರೆದ ಭಾರೀ ಮಳೆ ಹಿನ್ನೆಲೆ ಇಂದು ಜಿಲ್ಲೆಯ ಕಾರವಾರ, ಅಂಕೋಲಾ, ಹೊನ್ನಾವರ, ಕುಮಟಾ, ಭಟ್ಕಳ, ದಾಂಡೇಲಿ, ಜೋಯಿಡಾ, ಹಳಿಯಾಳ, ಯಲ್ಲಾಪುರ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನ ಅಂಗನವಾಡಿ ಮತ್ತು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳನ್ನ ಹೊರತು ಪಡಿಸಿ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೊಷಣೆಮಾಡಲಾಗಿದೆ.
ಕುರುನಾಡಿನ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ವರುಣ ಜನರನ್ನ ಕಂಗಾಲು ಮಾಡಿದ್ದಾನೆ. ಕಳೆದ ಬಾರಿ ಕೈಕೊಟ್ಟಿದ್ದ ವುರುಣ ಈ ಬಾರಿ ಧೋ ಅಂತ ಸುರಿಯುತ್ತಿರೋದು ಅನ್ನದಾತರ ಮೊಗದಲ್ಲಿ ಮಂದಹಾಸ ತುಂಬಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ