/newsfirstlive-kannada/media/post_attachments/wp-content/uploads/2025/05/BLY-RAIN.jpg)
ರಾಜ್ಯದಲ್ಲಿ ಮಳೆಯಬ್ಬರ ದಿನೇ ದಿನೇ ಜೋರಾಗ್ತಿದೆ. ಮೊದಲು ರಾಜಧಾನಿಯಲ್ಲಿ ಆರ್ಭಟಿಸಿದ್ದ ಮಳೆರಾಯ ಈಗ ಇತರೆ ಜಿಲ್ಲೆಗಳಿಗೆ ದಾಂಗುಡಿ ಇಟ್ಟಿದ್ದಾನೆ. ಭಾರೀ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು ಹಳ್ಳ ದಾಟುವಾಗ ತಂದೆಯ ಮುಂದೆಯೇ ಕಂದಮ್ಮಗಳು ವಿಲವಿಲ ಒದ್ದಾಡಿ ಜೀವ ಬಿಟ್ಟಿವೆ.
ಇದನ್ನೂ ಓದಿ: ಮಂಗಳೂರಲ್ಲಿ ಮತ್ತೆ ಹರಿದ ನೆತ್ತರು.. ತಲ್ವಾರ್ನಿಂದ ಕೊಚ್ಚಿ ಅಬ್ದುಲ್ ರಹಿಮಾನ್ನ ಭೀಕರ ಹತ್ಯೆ
ತಂದೆಯ ಕಣ್ಮುಂದೆಯೇ ಹಳ್ಳಕ್ಕೆ ಬಿದ್ದು ಇಬ್ಬರು ಮಕ್ಕಳು ಸಾವು
ಬೆಳಗಾವಿ ಜಿಲ್ಲೆಯ ಅಥಣಿಯ ಸಂಬರಗಿ ಗ್ರಾಮದಲ್ಲಿ ಮಳೆರಾಯನ ಅಬ್ಬರಕ್ಕೆ ದಾರುಣ ಘಟನೆ ನಡೆದಿದೆ. ನಿನ್ನೆ ಸಂಜೆ ಸಂಜಯ್ ಕಾಂಬಳೆ ಎಂಬುವವರು ಎತ್ತಿನಬಂಡಿಯಲ್ಲಿ ಮಕ್ಕಳ ಜೊತೆ ಗದ್ದೆ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ರು. ಈ ವೇಳೆ ಮಳೆಗೆ ಅಗ್ರಣಿ ಹಳ್ಳಕ್ಕೆ ಏಕಾಏಕಿ ನೀರಿನ ಹರಿವು ಜಾಸ್ತಿಯಾಗಿದೆ. ಇಂತ ಸಂದರ್ಭದಲ್ಲಿ ಎತ್ತಿನ ಚಕ್ಕಡಿ ಸಮೇತ ಅಗ್ರಣಿ ಹಳ್ಳದ ಮರುಳಿನ ಗುಂಡಿಗೆ ಬಿದ್ದು ಒಂದು ಎತ್ತು ಹಾಗೂ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಸಂಜಯ್ ಮತ್ತೋರ್ವ ಮಗ ವೇದಾಂತನನ್ನು ರಕ್ಷಿಸಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರ ಸಹಾಯದಿಂದ ಮರುಳಿನ ಗುಂಡಿಯಲ್ಲಿ ಸಿಕ್ಕಿಬಿದ್ದಿದ್ದ ಒಂದು ಎತ್ತನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಬಾಲಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಇದನ್ನೂ ಓದಿ: ಅಬ್ದುಲ್ ರಹಿಮಾನ್ನ ಬರ್ಬರ ಹತ್ಯೆ.. ಸದ್ಯ ಹೇಗಿದೆ ಮಂಗಳೂರು ಪರಿಸ್ಥಿತಿ..?
ಪಶ್ಚಿಮ ಘಟ್ಟ ಹಾಗೂ ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ನಿರಂತರವಾಗಿ ವರುಣ ಅಬ್ಬರಿಸುತ್ತಿದ್ದಾನೆ. ನರಸಿಂಹರಾಜಪುರ ತಾಲೂಕಿನಲ್ಲಿ ಭಾರೀ ಮಳೆ ಕಾರಣ ಭದ್ರಾ ನದಿಯ ಉಪ ಹಳ್ಳಗಳಲ್ಲಿ ನೀರಿನ ಹರಿವು ಏರಿಕೆ ಕಂಡಿದೆ. ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಗುಡ್ಡಗಳಿಂದ ಕೆಸರು ಮಿಶ್ರಿತ ನೀರು ಹರಿದು ಬರುತ್ತಿದೆ.
ಮಲೆನಾಡಿನಲ್ಲಿ ಮಳೆಯಿಂದ ಮನೆ ಸಮೀಪದ ಧರೆ ಕುಸಿದಿದೆ. ಭದ್ರಾ ನದಿಯ ರಭಸಕ್ಕೆ ನದಿ ಪಕ್ಕದ ಧರೆ ಕುಸಿದಿದೆ. ಕುದುರೆಮುಖದ ಜಾಂಬಳೆ ಸೈಟ್ನ ವಿಶ್ವನಾಥ್ ಹಾಗೂ ರಾಮಚಂದ್ರ ಮನೆ ಸಮೀಪದ ಧರೆ ಕುಸಿದಿದೆ. ಮತ್ತಷ್ಟು ಕುಸಿದ್ರೆ ಮೇಲ್ಭಾಗದ ಮನೆಗೂ ಹಾನಿಯಾಗೋ ಸಾಧ್ಯತೆ ಇದೆ. ತಕ್ಷಣವೇ ಸೂಕ್ತ ಪರ್ಯಾಯ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ನಿರಂತರ ಮಳೆ ಸುರಿಯುತ್ತಿರುವ ಕಾರಣ ಹಾವುಗಳು ಬೆಚ್ಚನೆಯ ಸ್ಥಳ ಹುಡುಕಿಕೊಂಡು ಬರುತ್ತಿವೆ. ಕಳಸ ಪಟ್ಟಣದ ಮುಖ್ಯ ರಸ್ತೆಯಲ್ಲಿ ನಾಗರಹಾವೊಂದು ಕಾಣಿಸಿಕೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಸ್ನೇಕ್ ರಿಜ್ವಾನ್ ಹಾವನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ಇದನ್ನೂ ಓದಿ: RCB ಕ್ಯಾಪ್ಟನ್ ಜಿತೇಶ್ ಶರ್ಮಾ ಗೆಲುವಿನ ಕ್ರೆಡಿಟ್ ಯಾರಿಗೆ ನೀಡಿದರು..?
ನಿರಂತರ ಮಳೆಗೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಿಂದ ಜಂಗಲಕೇರಿ ರಸ್ತೆ ಹಾಳಾಗಿದ್ದು ರೈತರೇ ರಸ್ತೆ ದುರಸ್ತಿ ಮಾಡಿದ್ದಾರೆ. ಸರ್ಕಾರದಿಂದ ಬಿಡಿಗಾಸು ಅನುದಾನ ಕೂಡ ಬಾರದಿದ್ದರಿಂದ 200 ರೈತರಿಂದ ತಲಾ ಸಾವಿರ ರೂಪಾಯಿಯಂತೆ ಹಣ ಸಂಗ್ರಹಿಸಿ 3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚುವ ಕಾರ್ಯ ಮಾಡಿದ್ದಾರೆ. ರೈತರ ಕಾರ್ಯಕ್ಕೆ ಶಾಸಕ ಚಂದ್ರು ಲಮಾಣಿ ಸಾಥ್ ನೀಡಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಉತ್ತಮ ಮಳೆ ಹಿನ್ನೆಲೆ ರೈತರು ಭಿತ್ತನೆಗೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಹಾವೇರಿ ನಗರದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಭಿತ್ತನೆ ಬೀಜ ಖರೀದಿಗೆ ಮುಗಿಬಿದ್ದ್ದಿದ್ದಾರೆ. ಇನ್ನು ಭೀಮಾ ಕಣಿವೆ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಪರಿಣಾಮ ಮಹಾರಾಷ್ಟ್ರದ ನೀರಾ ಜಲಾಶಯದಿಂದ 26 ಸಾವಿರದ 525 ಕ್ಯೂಸೆಕ್ ನೀರನ್ನು ಭೀಮಾನದಿಗೆ ಬಿಡಲಾಗಿದೆ. ಹೀಗಾಗಿ ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದ ಗ್ರಾಮಸ್ಥರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಒಟ್ಟಾರೆ ವರುಣನ ಅಬ್ಬರಕ್ಕೆ ರಾಜ್ಯದ ವಿವಿಧೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಜನ-ಜಾನುವಾರುಗಳು ಮಳೆಯಿಂದ ಜೀವ ಬಿಡುತ್ತಿದ್ದು ಸರ್ಕಾರ ನೆರವಿಗೆ ಧಾವಿಸಬೇಕಿದೆ.
ಇದನ್ನೂ ಓದಿ: 10,000 ಅಡಿ ಮೇಲಿಂದ ಹಾರಿದ ಸ್ಕೈವ್ ಡ್ರೈವರ್ ಕೇಸ್‌ಗೆ ಟ್ವಿಸ್ಟ್.. ದುರಂತಕ್ಕೆ ಕಾರಣವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ