/newsfirstlive-kannada/media/post_attachments/wp-content/uploads/2025/04/RAIN-IN-STATE-1.jpg)
ಬಿಸಿಲೋ ಬಿಸಿಲು, ಅಂತಾ ಸೂರ್ಯ ದೇವನ ಮೇಲೆ ಮುನಿಸಿಕೊಂಡು. ಓಡಾಡ್ತಿದ್ದ ಜನಕ್ಕೆ ವರುಣ ಹಾಯ್ ಹೇಳಿದ್ದಾನೆ.. ಬಿಸಿ ಗಾಳಿಯಲ್ಲಿ ನರಳುತಿದ್ದ ಜನಕ್ಕೆ ತಂಪಾದ ಗಾಳಿ ಖುಷಿ ತಂದಿದೆ. ರಾಜ್ಯದಲ್ಲಿ ಮಳೆರಾಯ ಕೆಲವೆಡೆ ತಂಪೆರದಿದ್ರೆ ಹಲವೆಡೆ ಅಬ್ಬರಿಸಿದ್ದಾನೆ.
ಬಿರುಗಾಳಿ ಸಹಿತ ಭಾರೀ ಮಳೆ.. ಕುಸಿದು ಬಿದ್ದ ಮೇಲ್ಛಾವಣಿ
ಹಾಸನ ಜಿಲ್ಲೆಯ ವಿವಿಧೆಡೆ ಮಳೆರಾಯ ಅಬ್ಬರಿಸಿದ್ದಾನೆ.. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾನುಬಾಳು ಗ್ರಾಮದಲ್ಲಿ ಭಾರೀ ಗಾಳಿ-ಮಳೆಗೆ ವಾಣಿಜ್ಯ ಮಳಿಗೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಪರಿಣಾಮ ಆರಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದೆ. ಕೂದಲೆಳೆ ಅಂತರದಲ್ಲಿ ಮೇಲ್ಛಾವಣಿ ಕೆಳಗೆ ನಿಂತಿದ್ದ ಜನರು ಪಾರಾಗಿದ್ದಾರೆ.
ಗಾಳಿ ಮಳೆಯಿಂದಾಗಿ ಮರ, ವಿದ್ಯುತ್ ಕಂಬಗಳು ಧರಾಶಾಹಿ
ಇನ್ನು ಸಂಜೆಯಾಗುತ್ತಿದ್ದಂತೆ ಕಡಲನಗರಿಯಲ್ಲೂ ಮಳೆರಾಯ ಅಬ್ಬರಿಸಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗ ಕಡಬ, ನೆಲ್ಯಾಡಿ, ಸುಳ್ಯ, ಪಂಜ ಕಡೆಗಳಲ್ಲಿ ಗಾಳಿ-ಸಿಡಿಲು ಸಹಿತ ಮಳೆ ಸುರಿದಿದೆ. ಮರ.. ವಿದ್ಯುತ್ ಕಂಬಗಳು ಧರೆಗುರುಳಿವೆ. ಅಕಾಲಿಕ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.
ಬಿಸಿಲಿನ ತಾಪಕ್ಕೆ ಬೇಸತ್ತ ಜನರ ಮುಖದಲ್ಲಿ ಮಂದಹಾಸ
ಉರಿ ಬಿಸಿಲಿನ ತಾಪಕ್ಕೆ ಬೇಸತ್ತಿದ್ದ ಬಾಗಲಕೋಟೆ ಜನರ ಮುಖದಲ್ಲಿ ಮಳೆರಾಯ ಮಂದಹಾಸ ಮೂಡಿಸಿದ್ದಾನೆ. ಆದ್ರೆ ಮಹಾಲಿಂಗಪುರ ಪಟ್ಟಣದ ತಗ್ಗು ಪ್ರದೇಶವಿರುವ ಬಸವೇಶ್ವರ ಸರ್ಕಲ್ನಲ್ಲಿ ನಿಲ್ಲಿಸಿದ್ದ ಬೈಕ್ ಅರ್ಧ ಮುಳುಗಿದ್ದು, ಜನ ಪರದಾಡಿದ್ದಾರೆ.
ಸಕ್ಕರೆನಾಡಲ್ಲಿ ವರ್ಷಧಾರೆ.. ಉತ್ತಮ ಮಳೆ.. ತಂಪಾದ ಇಳೆ!
ಸಕ್ಕರೆನಾಡು ಮಂಡ್ಯದಲ್ಲಿ ಕಳೆದ ಕೆಲ ದಿನಗಳಿಂದ ಕಣ್ಣಾಮುಚ್ಚಾಲೆ ಆಟವಾಡ್ತಿದ್ದ ಮಳೆ ಗುಡುಗು, ಸಿಡಿಲು ಇಲ್ಲದೇ ಸೈಲೆಂಟಾಗೇ ಎಂಟ್ರಿ ಕೊಟ್ಟಿದೆ. ಮಳೆಯಿಂದ ರೈತರ ಮೊಗದಲ್ಲಿ ಹರ್ಷ ತಂದಿದ್ದು, ಬಿಸಿಲ ಬೇಗೆಯಿಂದ ಬೆಂಡಾಗಿದ್ದ ಭುವಿಗೆ ಹಾಗೂ ಜನರಿಗೆ ವರುಣ ತಂಪೆರಿದ್ದಾನೆ.
ಏಕಾಏಕಿ ಮೋಡ ಮುಸುಕಿದ ವಾತಾವರಣ.. ದಿಢೀರ್ ಮಳೆ
ಕಾರ್ಕಳ ಉಡುಪಿ ಕಾಪು ಕುಂದಾಪುರದಾದ್ಯಂತ ಸುಮಾರು ಅರ್ಧ ಗಂಟೆಗಳ ಕಾಲ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ವಿಪರೀತ ಉಷ್ಣಾಂಶದಿಂದ ಕಂಗೆಟ್ಟು ಹೋಗಿದ್ದ ಉಡುಪಿ ಜನ, ವರ್ಷಧಾರೆಯಿಂದ ತಂಪು ವಾತಾವರಣ ಇದೆ.
ಬೇಸಿಗೆಯಲ್ಲೇ ಮಳೆಗಾಲದಂತೆ ಸುರಿದ ವರುಣ
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್ ಭಾಗದಲ್ಲಿ ಮಳೆ ಅಬ್ಬರ ಜೋರಾಗಿತ್ತು. ಸುರಿದ ಮಳೆಗೆ ಕಾಫಿ ಬೆಳೆಗೆ ನೀರಾಯಿಸಲು ಹೋರಾಡುತ್ತಿದ್ದ ಕಾಫಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಒಟ್ಟಾರೆ ಬೇಸಿಗೆಯಲ್ಲೇ ಮಳೆಗಾಲದಂತೆ ವರುಣ ಸುರಿಯುತ್ತಿರೋದು ಬಿಸಿಯಲ್ಲಿ ಬೆಂದಿದ್ದ ಜನರನ್ನು ಕೂಲ್ ಕೂಲ್ ಆಗಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ