/newsfirstlive-kannada/media/post_attachments/wp-content/uploads/2025/06/MNG-RAIN-1.jpg)
ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದೆ. ನದಿಗಳು ಉಕ್ಕಿ ಹರಿದಿದ್ದು ಜನಸಂಚಾರಕ್ಕೆ ತೊಂದರೆಯಾಗಿದೆ. ನದಿ ಪಾತ್ರಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಲೆನಾಡಲ್ಲಿ ಭೂಕುಸಿತ ಸಂಭವಿಸುತ್ತಿದೆ. ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಮುಂದುವರಿಸಲಾಗಿದೆ.
ಚಿಕ್ಕೋಡಿ, ಬೆಳಗಾವಿ
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗ್ತಿದ್ದು ಚಿಕ್ಕೋಡಿಯಲ್ಲಿ ಕೃಷ್ಣಾ, ವೇದಗಂಗಾ, ದೂಧ್ಗಂಗಾ ನದಿಗಳು ಅಬ್ಬರಿಸ್ತಿವೆ.. ಸೇತುವೆ ಮೇಲೆ 5 ಅಡಿ ನೀರು ಹರಿಯುತ್ತಿದೆ. ಮತ್ತೊಂದೆಡೆ ರಾಜಾಪುರ ಮಾರ್ಗವಾಗಿ ಕೃಷ್ಣೆಗೆ 92 ಸಾವಿರ ಕ್ಯೂಸೆಕ್ ನೀರು ಬಿಡಲಾಗ್ತಿದ್ದು ಜತ್ರಾಟ-ಬಿವಶಿ ಸಿದ್ನಾಳ-ಅಕ್ಕೋಳ, ಯಡೂರ-ಕಲ್ಲೋಳ ಸೇರಿ 8 ಸೇತುವೆಗಳು ಮುಳುಗಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ಇದನ್ನೂ ಓದಿ: ಬ್ರಹ್ಮಾನಂದಗೆ ವಿಲನ್ ಆದ ಮಾವ.. ತನ್ನ ಹೆಂಡತಿನ ತಾನು ಕರೆದೊಯ್ಯಲು ಕಠಿಣ 36 ಷರತ್ತುಗಳು!
ಹುಕ್ಕೇರಿ, ಬೆಳಗಾವಿ
ಇತ್ತ ಹುಕ್ಕೇರಿಯ ಯರನಾಳ-ಮದಮಕ್ಕನಾಳ ಸೇತುವೆ ಮುಳುಗಿದೆ. ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಇದಾಗಿದ್ದು ಉಕ್ಕಿ ಹರಿಯುತ್ತಿರುವ ಸೇತುವೆ ಮೇಲೆ ಜನ ಜೀವ ಲೆಕ್ಕಿಸದೇ ಸಂಚಾರ ಮಾಡುವಂತಾಗಿದೆ. ಪ್ರವಾಹ ಭೀತಿ ಇದ್ದರೂ ಕನಿಷ್ಠ ಬ್ಯಾರಿಕೇಡ್ ಹಾಕದೇ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ..
ಮುಂಗಾರಿನ ಆರ್ಭಟಕ್ಕೆ ಕುಂದಾನಗರಿ ಬೆಳಗಾವಿ ತತ್ತರಿಸಿದೆ. ಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಬೆಳಗಾವಿಯ ವಿಶ್ವೇಶ್ವರ ನಗರದಲ್ಲಿ ರಸ್ತೆ ಕಾಣದೇ ಗೂಡ್ಸ್ ವಾಹನ ಚಾಲಕ ಚರಂಡಿಗೆ ಇಳಿಸಿದ್ದಾನೆ. ಸದ್ಯ ಕ್ರೇನ್ ಸಹಾಯದಿಂದ ವಾಹನವನ್ನ ಮೇಲಕ್ಕೆತ್ತಲಾಗಿದೆ.
ಕಳಸ, ಚಿಕ್ಕಮಗಳೂರು
ಇತ್ತ ಕಾಫಿನಾಡು ಚಿಕ್ಕಮಗಳೂರು ಮಳೆನಾಡಾಗಿದೆ, ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಕಳಸ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ರಾಜಕಾಲುವೆ ಪಕ್ಕದಲ್ಲಿ ಕಟ್ಟಿರುವ ಕಲ್ಲುಗಳು ಕುಸಿದು ಬೀಳ್ತಿದ್ದು ಪಕ್ಕದಲ್ಲೇ ಇರುವ ಮನೆಗಳು ಕುಸಿಯುವ ಭೀತಿ ಎದುರಾಗಿದೆ. ರಾಜಕಾಲುವೆಗೆ ಕಟ್ಟಿರುವ ಸೇತುವೆಯೂ ಕುಸಿದು ಬೀಳುವ ಸಂಭವ ಇದೆ. ಬೇರೆ ದಾರಿ ಇಲ್ಲದೇ ಟಾರ್ಪಲ್ ಹಾಗೂ ಪ್ಲಾಸ್ಟಿಕ್ ಚೀಲಗಳಲ್ಲಿ ಮಣ್ಣು ತುಂಬಿ ಅಡ್ಡ ಇಡಲಾಗಿದೆ. ಇಷ್ಟೆಲ್ಲಾ ಆದ್ರೂ ಅಧಿಕಾರಿಗಳು ತಲೆನೇ ಕೆಡಿಸಿಕೊಳ್ತಿಲ್ವಂತೆ.
ಇದನ್ನೂ ಓದಿ: UPSC ಅಭ್ಯರ್ಥಿಗಳಿಗೆ ಗುಡ್ನ್ಯೂಸ್.. ಇಂಟರ್ವ್ಯೂವ್ ಫೇಲ್ ಆದರೂ ಸಿಗುತ್ತೆ ಸರ್ಕಾರಿ ಹುದ್ದೆ!
ಶೃಂಗೇರಿ, ಚಿಕ್ಕಮಗಳೂರು
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 36 ಗಂಟೆಗಳಿಂದ ಧಾರಾಕಾರ ಮಳೆಯಾಗ್ತಿದೆ. ವರುಣಾರ್ಭಟಕ್ಕೆ ತುಂಗೆ ಉಕ್ಕಿ ಹರಿಯುತ್ತಿದ್ದಾಳೆ. ಶ್ರೀ ಶಾರದೆಯ ಸನ್ನಿಧಿಯ ಸ್ನಾನಘಟ್ಟ ಮುಳುಗುವ ಭೀತಿ ಎದುರಾಗಿದೆ. ಅತ್ತ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಕಪಿಲಾ ನದಿ ಅಬ್ಬರಕ್ಕೆ ಶಿಶಿಲದ ಶಿಶಿಲೇಶ್ವರ ದೇವಸ್ಥಾನ ಜಲಾವೃತವಾಗಿದೆ. ಮತ್ಸ್ಯಕ್ಷೇತ್ರ ಎಂದೇ ಹೆಸರಾಗಿರುವ ಶಿಶಿಲೇಶ್ವರ ದೇಗುಲ ಕಪಿಲಾ ನದಿ ತೀರದಲ್ಲಿದೆ. ಬೆಳ್ತಂಗಡಿ, ಸುಳ್ಯ, ಕಡಬ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಭಾರಿ ಮಳೆಯಾಗ್ತಿದ್ದು ನದಿಯ ನೀರಿನೊಂದಿಗೆ ಮರದ ದಿಮ್ಮಿಗಳೂ ಹರಿದು ಬರ್ತಿವೆ.
ಕಬಿನಿ, ಮೈಸೂರು
ಕೊಡಗು ಭಾಗದಲ್ಲಿ ಭಾರಿ ವರ್ಷಧಾರೆಯಾಗ್ತಿದ್ದು ಮೈಸೂರಿನ ಕಬಿನಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರ್ತಿದೆ. ಕಬಿನಿ ಜಲಾಶಯ ಭರ್ತಿಗೆ ಮೂರು ಅಡಿ ಬಾಕಿ ಇದ್ದು ಜಲಾಶಯದಿಂದ ಸದ್ಯ 20ರಿಂದ 30 ಸಾವಿರ ಕ್ಯೂಸೆಕ್ ನೀರು ಹರಿ ಬಿಡಲಾಗ್ತಿದೆ.. ಯಾವುದೇ ಕ್ಷಣದಲ್ಲೂ ಡ್ಯಾಂನಿಂದ ಹೆಚ್ಚು ನೀರು ಬಿಡುವ ಸಂಭವ ಇದ್ದು ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಇದನ್ನೂ ಓದಿ: ಪ್ರಿಯಕರ ಕಾನ್ಸ್ಟೆಬಲ್ ಜೊತೆ ಸೇರಿಕೊಂಡು ಪತಿಗೆ ಕೊಡಬಾರದ ಕಷ್ಟ ಕೊಟ್ಟಳು.. ವಿಡಿಯೋ ಮಾಡಿ ಜೀವ ಬಿಟ್ಟ ಗಂಡ
ಜೋಯ್ಡಾ, ಉತ್ತರ ಕನ್ನಡ
ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿ ಮಳೆ ಅಬ್ಬರಕ್ಕೆ ಜೋಯಿಡಾದ ಕರಂಬಳ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಕಟ್ಟಡಕ್ಕೆ ಅಳವಡಿಸಿದ್ದ ಶೀಟ್ ಕಳಚಿ ಬಿದ್ದಿದೆ. ಶಾಲೆಗೆ ರಜೆ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಜೋಯಿಡಾ, ಹಳಿಯಾಳ, ದಾಂಡೇಲಿ, ಯಲ್ಲಾಪುರ ಭಾಗದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿ ಕರಾವಳಿಯಲ್ಲಿ ನಾಡದೋಣಿ ಮೀನುಗಾರಿಕೆ ಶುರುವಾಗಿದೆ.. ನಿರಂತರ ಮಳೆ ಬಂದ ಕಾರಣ ಮೀನುಗಾರಿಕೆ ಶುರುವಾಗಿದ್ದು ಮೀನುಗಳು ಸುಲಭವಾಗಿ ಸಿಗಲಿ ಅಂತ ಮೀನುಗಾರರು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಚಿಕ್ಕಮಗಳೂರು ಜಿಲ್ಲೆಯ 5 ತಾಲೂಕುಗಳು, ಕೊಡಗು, ಹಾಸನ ಜಿಲ್ಲೆಯ 5 ತಾಲೂಕುಗಳು ಹಾಗೂ, ಬೆಳಗಾವಿಯ ಖಾನಾಪುರ, ಕಿತ್ತೂರು ತಾಲೂಕುಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿದೆ.
ಇದನ್ನೂ ಓದಿ: ಜೈಲಿಗೆ ಕಳಿಸ್ತೀನಿ ಅಂತ ಪತ್ನಿ ಬೆದರಿಸ್ತಿದ್ದಾಳಾ? ಭಯ ಬೇಡ, ಸುಪ್ರೀಂ ಕೋರ್ಟ್ನ ಈ ಮಹತ್ವದ ನಿರ್ದೇಶನ ಬಗ್ಗೆ ತಿಳಿಯಿರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ