/newsfirstlive-kannada/media/post_attachments/wp-content/uploads/2025/06/KARNATAKA-RAIN-23.jpg)
ಮಳೆ.. ಮಳೆ.. ಮಳೆ.. ಆರಿದ್ರಾ ಮಳೆ ಸಂಭ್ರಮ ತಂದಿದೆ. ಪ್ರಕೃತಿಗೆ ನವಚೈತನ್ಯ ತುಂಬುತ್ತಿದೆ. ಇಳೆ ತೊಯ್ದು ತೊಪ್ಪೆಯಾಗ್ತಿದೆ. ಮಾನ್ಸೂನ್ ಮಳೆಯ ರಾಗ ರೈತರ ಮೊಗದಲ್ಲಿ ಖುಷಿ ತಂದಿದ್ರೆ ಅವಾಂತರಗಳು ಹಿಡುಗಂಟಾಗಿವೆ. ಮಳೆ ರಗಳೆ ಕಣ್ಣಿಗೆ ರಾಚುತ್ತಿವೆ.
ದೇವಸ್ಥಾನಕ್ಕೆ ಜಲದಿಗ್ಬಂಧನ.. ಮುಳುಗಿದ ಸೇತುವೆಗಳು
ಮೋಡಗಳು ಕರಗಿ ಹನಿಹನಿಯಾಗಿ ಧೋ ಅಂತ ಸುರಿಯುತ್ತಿರುವ ಮುಂಗಾರು ಮಳೆ ಅನಾಹುತಗಳನ್ನು ಸೃಷ್ಟಿಸ್ತಿದೆ. ಮಹಾರಾಷ್ಟ್ರದ ಪಶ್ಚಿಮಘಟ್ಟಕ್ಕೆ ಎಂಟ್ರಿ ಕೊಟ್ಟಿರೋ ಮಾರುತರಾಜ ವಿರಾಮ ಇಲ್ಲದೇ ಕಾಯಕ ಮಾಡ್ತಿದ್ದಾನೆ. ಬೆಳಗಾವಿಯ ಚಿಕ್ಕೋಡಿ ಜಲಂಧರನಾಗಿದೆ. ಮಹಾ ಗಡಿಯಲ್ಲಿರೋ ಪ್ರಸಿದ್ಧ ನರಸಿಂಹವಾಡಿ ದತ್ತಾತ್ರೇಯನಿಗೂ ವರುಣ ದಿಗ್ಬಂಧನ ವಿಧಿಸಿದ್ದಾನೆ. ಪಂಚಗಂಗಾ-ಕೃಷ್ಣೆಯ ಪವಿತ್ರ ಸಂಗಮ ಕ್ಷೇತ್ರಕ್ಕೆ ಭಕ್ತರು ಹರಿಯುವ ನದಿಯಲ್ಲೇ ಬಂದು ದರ್ಶನ ಮಾಡ್ತಿದ್ದಾರೆ. ಭೋರ್ಗರೆಯುತ್ತಿರುವ ನದಿಯಲ್ಲೇ ಪುಣ್ಯಸ್ನಾನಗೈಯುತ್ತಿದ್ದಾರೆ. ನೀರ ಮಧ್ಯೆಯೇ ಪೂಜಾಕೈಂಕರ್ಯಗಳು ಸಾಗಿವೆ..
ನಿರಂತರ ಮಳೆಯಿಂದ ಕೃಷ್ಣಾ ನದಿ ಐರಾವತನಂತಾಗಿದೆ. ಕೃಷ್ಣೆಯ ಉಪನದಿಗಳಾದ ದೂಧ್ಗಂಗಾ, ವೇದಗಂಗಾ, ಪಂಚಗಂಗಾ, ಹಿರಣ್ಯಕೇಶಿಗೂ ನವೋಲ್ಲಾಸ ತುಂಬಿದೆ. ಜೀವಗಂಗೆ ಅಪಾಯದ ಮಟ್ಟ ಮೀರಿವೆ.. ದೂದ್ಗಂಗೆಯ ಬಾಯಿಗೆ ಸಿಕ್ಕಿದ ನಿಪ್ಪಾಣಿಯ ಕಾರಗಾ ಗ್ರಾಮ ಜಲಮಯ ಆಗಿದೆ. ಬಂಗಾಲಿ ಬಾಬಾ ಮಂದಿರಕ್ಕೂ ಜಲದಿಗ್ಬಂಧನ ವಿಧಿಸಿದ್ದು ಪೂಜೆ-ಪುನಸ್ಕಾರಗಳಿಗೆ ವಿರಾಮ ಹೇಳಿದೆ. ಜಲಾವೃತವಾಗಿರೋ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಜನ ಬಟ್ಟೆ ತೊಳೆಯುವುದು, ವಾಹನ ತೊಳೆಯುವುದು ಅಪಾಯಕ್ಕೆ ಆಹ್ವಾನ ನೀಡಿದೆ. ಜನ ತೆರಳದಂತೆ ಬ್ಯಾರಿಕೇಡ್ ಹಾಕಲು ಅಧಿಕಾರಿಗಳಿಗೂ ನಿದ್ದೆ ಕವಿದಿದೆ.
ಇತ್ತ ಗುಮ್ಮಟನಗರಿ ವಿಜಯಪುರ ಜಿಲ್ಲೆಗೂ ಮಹಾ ಮಳೆ ಎಫೆಕ್ಟ್ ತಟ್ಟಿದೆ. ಪಂಚನದಿಗಳ ಬೀಡು ವಿಜಯಪುರದಲ್ಲಿ ನದಿಗಳು ರಾಕ್ಷಸರೂಪ ತಾಳಿವೆ. ಪ್ರವಾಹ ಪರಿಸ್ಥಿತಿ ತಲೆದೋರಿದ್ದು ನದಿ ಬಳಿ ಮಕ್ಕಳು, ಮಹಿಳೆಯರು, ರೈತರು ಹೋಗದಂತೆ ಜಿಲ್ಲಾಡಳಿತ ಸೈರನ್ ಮೊಳಗಿಸಿ ಸಹಾಯವಾಣಿ ತೆರೆದಿದೆ.
ಕೃಷ್ಣರಾಜಸಾಗರದಲ್ಲಿ ಜಲರಾಶಿ.. ಹೊಸ ಸೊಬಗು!
ಮಂಜಿನನಗರಿ ಈಗ ಮಳೆನಗರಿ ಆಗಿದೆ. ಒಲವಿನ ಸುರಿಮಳೆ ಭುವಿ-ಬಾನು ಒಂದಾಗುವಂತೆ ಮಾಡಿದೆ. ಕಾವೇರಿ ಜಲಾನಯನದ ಒಡಲು ತುಂಬಿ ಹೊರಬರ್ತಿದೆ.. ಮಂಡ್ಯದ ಕೆಆರ್ಎಸ್ಗೆ ಕ್ಷಣಕ್ಷಣಕ್ಕೂ ಒಳಹರಿವು ಹೆಚ್ಚುತ್ತಿದೆ. ಜಲಾಶಯದಿಂದ ಹಾಲ್ನೊರೆಯಂತೆ ಉಕ್ಕುತ್ತಿರುವ ದೃಶ್ಯ ರುದ್ರರಮಣೀಯ, ರೋಮಾಂಚನ.. ಆದ್ರೆ, ನದಿ ತೀರಗಳಲ್ಲಿ ಪ್ರವಾಹದ ಆತಂಕ ಮುಂದುವರಿಸಿದೆ. ಪ್ರವಾಸಿಗರ ಎಂಟ್ರಿಗೂ ಬ್ರೇಕ್ ಹಾಕಲಾಗಿದೆ.
ಕೊಡಗಿನಲ್ಲಿ ಶವಸಂಸ್ಕಾರಕ್ಕೂ ವರುಣ ಅಡ್ಡಿ ಮಾಡಿದ್ದಾನೆ. ಬಲಮುರಿಯಲ್ಲಿ ಕುಮಾರ್ ಎಂಬುವರ ಅಂತ್ಯಕ್ರಿಯೆಗೆ ಕುಟುಂಬಸ್ಥರು ಪರದಾಡಿದ್ದಾರೆ.. ಅಂತ್ಯಕ್ರಿಯೆಗೆ ಗುಂಡಿ ತೆಗೆದೆಷ್ಟೂ ನೀರು ಬಂದಿದ್ದು ಬಕೆಟ್ ಮೂಲಕ ನೀರು ಖಾಲಿ ಸಂಸ್ಕಾರ ನಡೆಸಲಾಗಿದೆ.
ನವ ವಧು-ವರನಿಗೆ ತಟ್ಟಿದ ಪ್ರವಾಹ ಭೀತಿ
ಕೊಡಗಿನ ನಾಪೋಕ್ಲು ಚೆರಿಯಪರಂಬು ರಸ್ತೆ ಮೇಲೆ ಕಾವೇರಿ ನದಿ ಉಕ್ಕುತ್ತಿದ್ದು ನವಜೋಡಿಗೂ ಎಫೆಕ್ಟ್ ತಟ್ಟಿದೆ. ಫಿರೋಜ್-ರಂಸೀನಾ ಜೋಡಿ 2 ದಿನದ ಹಿಂದಷ್ಟೇ ಮದುವೆಯಾಗಿದ್ದು, ಮದುಮಗಳನ್ನು ಬಸ್ನಲ್ಲಿ ತವರುಮನೆಗೆ ಕರೆದೊಯ್ಯಲು ಸಾಧ್ಯವಾಗದೇ ತೆಪ್ಪದ ಮೇಲೆ ತೆವಳುತ್ತಾ ಕರೆದೊಯ್ಯಲಾಗಿದೆ.
ಒಟ್ಟಾರೆ, ಮಾನ್ಸೂನ್ ಮಳೆ ನಿರೀಕ್ಷೆಗೂ ಮೀರಿ ಚೆಲ್ಲಾಟವಾಡ್ತಿದೆ. ಮಳೆಬಿಲ್ಲ ಸೊಬಗು ಸವಿಯಲ್ಲಷ್ಟೇ ಚೆನ್ನ.. ಅನುಭವಿಸುವವರಿಗಷ್ಟೇ ಗೊತ್ತು ಅದರ ಕಷ್ಟ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ