/newsfirstlive-kannada/media/post_attachments/wp-content/uploads/2024/11/KL-Rahul_Mayank.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ಮೆಗಾ ಹರಾಜಿಗೆ ಮುನ್ನವೇ ಎಲ್ಲಾ ಐಪಿಎಲ್ ತಂಡಗಳು ತಮ್ಮ ರೀಟೈನ್ ಲಿಸ್ಟ್ ಅನ್ನು ಬಿಸಿಸಿಐಗೆ ಸಲ್ಲಿಸಿವೆ. ಆದರೆ, ಹಲವು ವರ್ಷಗಳಿಂದ ಐಪಿಎಲ್ನಲ್ಲಿ ಅಮೋಘ ಪ್ರದರ್ಶನ ನೀಡಿರೋ ಸ್ಟಾರ್ ಕನ್ನಡಿಗರೇ ಯಾವುದೇ ತಂಡದ ರೀಟೈನ್ ಲಿಸ್ಟ್ನಲ್ಲಿ ಇಲ್ಲದಿರುವುದು ಅಚ್ಚರಿ ಮೂಡಿಸಿದೆ.
ಲಕ್ನೋ ತಂಡವು ಕ್ಯಾಪ್ಟನ್ ಕೆ.ಎಲ್ ರಾಹುಲ್ ಅವರನ್ನೇ ಕೈ ಬಿಟ್ಟಿದ್ದು, ಇವರು ಮೆಗಾ ಹರಾಜಿಗೆ ಬರೋದು ಪಕ್ಕಾ ಆಗಿದೆ. ಆರ್‌ಸಿಬಿ ತಂಡದ ಪರ ಅದ್ಭುತ ಪ್ರದರ್ಶನ ನೀಡಿ ಸೈ ಎನಿಸಿಕೊಂಡ ವಿಜಯ್ ಕುಮಾರ್ ವೈಶಾಖ್, ಮನೋಜ್ ಭಂಡಾರೆ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈ ಬಿಟ್ಟಿದೆ. ಇಷ್ಟೇ ಅಲ್ಲ ಹಲವು ತಂಡಗಳು ಕನ್ನಡಿಗರಿಗೆ ಕೊಕ್ ನೀಡಲಾಗಿದೆ.
ಲಕ್ನೋ ತಂಡದಿಂದ ರಾಹುಲ್ ಕೈ ಬಿಡಲು ಕಾರಣವೇನು?
ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದವರು ಕೆಎಲ್ ರಾಹುಲ್ ಅವರು. ತಂಡದ ನಾಯಕನನ್ನೇ ಕೈ ಬಿಟ್ಟು ಲಕ್ನೋ ಟೀಮ್ ಭಾರೀ ಅಚ್ಚರಿ ಮೂಡಿಸಿದೆ. ಕಳೆದ ಸೀಸನ್ನಲ್ಲಿ ಕೆ.ಎಲ್ ರಾಹುಲ್ ಅವರು ತಾನು ಆಡಿದ 14 ಪಂದ್ಯಗಳಲ್ಲಿ 37.14ರ ಆವರೇಜ್ನಲ್ಲಿ ಬರೋಬ್ಬರಿ 520 ರನ್ ಚಚ್ಚಿದ್ರು. ಈ ಪೈಕಿ 4 ಅರ್ಧಶತಕಗಳು ಸೇರಿವೆ. ರಾಹುಲ್ ವಿಕೆಟ್ ಕೀಪಿಂಗ್ ಹಾಗೂ ಟಾಪ್ ಆರ್ಡರ್ ಬ್ಯಾಟರ್ ಆಗಿದ್ರು.
ರಾಜಸ್ಥಾನ್ ರಾಯಲ್ಸ್ ತಂಡದಿಂದ ಪಡಿಕ್ಕಲ್ಗೆ ಕೊಕ್
ಕನ್ನಡಿಗ ದೇವದತ್ ಪಡಿಕ್ಕಲ್ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದರು. ಇವರು ಕಳೆದ ಸೀಸನ್ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಹಾಗಾಗಿ ದೇವದತ್ ಪಡಿಕ್ಕಲ್ ಅವರನ್ನು ಕೈ ಬಿಟ್ಟಿದೆ.
ವೈಶಾಖ್‌ಗೆ ಆರ್‌ಸಿಬಿಯಲ್ಲಿ ಇಲ್ಲ ಸ್ಥಾನ
ಕಳೆದ ಸೀಸನ್ನಲ್ಲಿ ಆರ್‌ಸಿಬಿ ತಂಡದಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡವರು ವಿಜಯ್ಕುಮಾರ್ ವೈಶಾಖ್. ಇವರು ಆಡಿದ 4 ಪಂದ್ಯಗಳಲ್ಲಿ 4 ವಿಕೆಟ್ ಕಬಳಿಸಿದ್ದರು. ಆರ್‌ಸಿಬಿ ತಂಡದಿಂದ ವಿಜಯ್ಕುಮಾರ್ ಅವರನ್ನು ಕೈ ಬಿಡಲಾಗಿದೆ.
ಮಯಾಂಕ್‌ಗೆ ಗೇಟ್ ಪಾಸ್
ಸನ್ರೈಸರ್ಸ್ ಹೈದರಾಬಾದ್ ತಂಡವು ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಕೈ ಬಿಡಲಾಗಿದೆ. ಇವರು ಕಳೆದ ಸೀಸನ್ನಲ್ಲಿ ಆಡಿದ 4 ಪಂದ್ಯದಲ್ಲಿ 37 ರನ್ ಕಲೆ ಹಾಕಿದ್ರು. ಇನ್ನು ಪಂಜಾಬ್ ಪರ ಒಂದೇ ಒಂದು ಪಂದ್ಯ ಆಡಿದ್ದ ವಿದ್ವತ್ ಕಾವೇರಪ್ಪ ಸಹ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮುಂಬೈನಿಂದ ಶ್ರೇಯಸ್ಗೆ ಕೊಕ್
ಮುಂಬೈ ಇಂಡಿಯನ್ಸ್ ತಂಡದ ಪರ ಶ್ರೇಯಸ್ ಗೋಪಾಲ್ ಅವರು ಅಮೋಘ ಪ್ರದರ್ಶನ ನೀಡಿದ್ರು. ತಾನು ಆಡಿದ 3 ಪಂದ್ಯದಲ್ಲಿ 3 ವಿಕೆಟ್ ಪಡೆದಿದ್ರು. ಇವರನ್ನು ಮುಂಬೈ ಇಂಡಿಯನ್ಸ್ ಕೈ ಬಿಟ್ಟಿದ್ದು, ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಚಾಂಪಿಯನ್ ಕೆಕೆಆರ್ ತಂಡದ ಸದಸ್ಯರಾಗಿದ್ದ ಮನೀಷ್ ಪಾಂಡೆ ಅವರನ್ನು ಕೈ ಬಿಡಲಾಗಿದೆ. ಗುಜರಾತ್ ಟೈಟನ್ಸ್ ತಂಡದ ಪರ ಭರವಸೆಯ ಅಭಿನವ್ ಮನೋಹರ್ ಅವರನ್ನು ತಂಡ ಕೈ ಬಿಟ್ಟಿದೆ. ಇವರು ಎಲ್ಲರೂ ಮೆಗಾ ಹರಾಜಿನಲ್ಲಿ ಭಾಗಿಯಾಗಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ