/newsfirstlive-kannada/media/post_attachments/wp-content/uploads/2025/06/kamal-hasan5.jpg)
ಬೆಂಗಳೂರು: ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಭದ್ರತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜೂನ್ 10ಕ್ಕೆ ಮುಂದೂಡಿದೆ. ಹೈಕೋರ್ಟ್ ಈ ಆದೇಶದಿಂದ ಜೂನ್ 5ಕ್ಕೆ ವಿಶ್ವದಾದ್ಯಂತ ಥಗ್ ಲೈಫ್ ಸಿನಿಮಾ ರಿಲೀಸ್ ಆದ್ರೂ ಕರ್ನಾಟಕದಲ್ಲಿ ಮಾತ್ರ ಬಿಡುಗಡೆ ಆಗುತ್ತಿಲ್ಲ.
ಕಮಲ್ ಹಾಸನ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರ ಪೀಠದಲ್ಲಿ ನಡೀತು. ಈ ವೇಳೆ ಕಮಲ್ ಹಾಸನ್ ಪರ ವಕೀಲ ಧ್ಯಾನ್ ಚಿನ್ನಪ್ಪ ಅವರು ಹೈಕೋರ್ಟ್ ಅಭಿಪ್ರಾಯ, ಮಾಹಿತಿಯನ್ನು ಕಮಲ್ ಹಾಸನ್‌ಗೆ ತಿಳಿಸಿದ್ದೇವೆ. ಆದರೆ ಆ ಕಡೆಯಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದರು.
ಕನ್ನಡ ಫಿಲ್ಮ್ ಚೇಂಬರ್‌ಗೆ ಕಮಲ್ ಹಾಸನ್ ಬರೆದಿರೋ ಪತ್ರವನ್ನು ವಕೀಲ ಧ್ಯಾನ್ ಚಿನ್ನಪ್ಪ ಓದಿ ಹೈಕೋರ್ಟ್‌ಗೆ ತಿಳಿಸಿದರು. ಕಮಲ್ ಹಾಸನ್‌ಗೆ ದುರುದ್ದೇಶ ಇರಲಿಲ್ಲ. ಕನ್ನಡದ ಬಗ್ಗೆ ತಮಗಿರುವ ಅಭಿಪ್ರಾಯ ಹೇಳುತ್ತಿದ್ದಾರೆ. ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ ಇದೆ ಎಂದು ತಿಳಿಸಿದರು.
ಅರ್ಜಿದಾರರ ಪರ ವಕೀಲರ ಮಾತು ಕೇಳಿದ ನ್ಯಾ. ನಾಗಪ್ರಸನ್ನ ಅವರು ಎಲ್ಲವೂ ಓಕೆ. ಆದರೆ ಇದಕ್ಕೆ ನಿಮ್ಮ ಕಮಲ್ ಹಾಸನ್ ಒಂದು ವಾಕ್ಯ ಸೇರಿಸಬೇಕಿತ್ತು. ಈ ಪತ್ರದಲ್ಲಿ ಕ್ಷಮೆ ಕೇಳಿದಿದ್ರೆ ಮುಗಿಯುತ್ತಿತ್ತು. ಕ್ಷಮೆ ಕೇಳದೆ ಬೇರೆಲ್ಲಾ ಹೇಳುತ್ತಿದ್ದೀರಾ. ಮತ್ತೆ ಮತ್ತೆ ನಿಮ್ಮ ಕಕ್ಷಿದಾರರ ಅಹಂ ಎಷ್ಟಿದೆ ಅನ್ನೋದು ಕಾಣುತ್ತಿದೆ.
ಥಗ್ ಲೈಫ್ ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಕನ್ನಡ, ತಮಿಳು ಭಾಷೆಯಿಂದ ಹುಟ್ಟಿದ್ದು ಎಂದು ಹೇಳಿದ್ದಾರೆ. ಆ ವಿಚಾರ ಜನರ ಭಾವನೆಗೆ ಧಕ್ಕೆ ಆಗಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಕಮಲ್ ಬರೆದಿರುವ ಪತ್ರದಲ್ಲಿ ಕ್ಷಮೆ ಕೇಳಿಲ್ಲ. ಒಂದೇ ಒಂದು ವಾಕ್ಯ ನನ್ನಿಂದ ತಪ್ಪಿದ್ರೆ ಕ್ಷಮಿಸಿ ಎಂದರೆ ಮುಗಿದು ಹೋಗುತ್ತೆ. ಕಮಲ್ ಬರೆದ ಪತ್ರದಲ್ಲಿ ಕ್ಷಮೆ ಬಗ್ಗೆ ಉಲ್ಲೇಖಿಸಿಲ್ಲ. ಆದರೂ ಪೊಲೀಸ್ ಭದ್ರತೆ ಕೇಳುತ್ತಿರುವುದು ಸರಿಯಲ್ಲ.
ಇದನ್ನೂ ಓದಿ: BREAKING: ಕಮಲ್ ಹಾಸನ್‌ಗೆ ಹೈಕೋರ್ಟ್ ಬಿಗ್ ಶಾಕ್; ಕರ್ನಾಟಕದಲ್ಲಿ ಥಗ್ ಲೈಫ್ ಬಿಡುಗಡೆ ಇಲ್ಲ!
ಫಿಲ್ಮ್ ಚೇಂಬರ್ ಜೊತೆ ಮಾತುಕತೆ ನಡೆಸಲು ಅರ್ಜಿದಾರರ ಪರ ವಕೀಲರು 1 ವಾರಗಳ ಸಮಯ ಕೋರಿದ್ದಾರೆ. ಈ ಸಮಸ್ಯೆ ಬಗೆಹರಿಯುವವರೆಗೂ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಪ್ರದರ್ಶನ ಇಲ್ಲ ಎಂದಿರುವ ಹೈಕೋರ್ಟ್ ವಿಚಾರಣೆಯನ್ನು ಜೂನ್10ಕ್ಕೆ ಮುಂದೂಡಿ ಮಹತ್ವದ ಆದೇಶ ನೀಡಿದೆ.
ಥಗ್ ಲೈಫ್ ಸಿನಿಮಾ ಭವಿಷ್ಯ ಏನು?
ಕರ್ನಾಟಕ ಹೈಕೋರ್ಟ್ ಆದೇಶದ ಬಳಿಕ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗುವ ಭವಿಷ್ಯ ಫಿಲಂ ಚೇಂಬರ್ ಅಂಗಳಕ್ಕೆ ಹೋಗಿದೆ. ವಕೀಲರ ಜೊತೆ ಚರ್ಚಿಸಿ ನಂತರ ಕಮಲ್ ಹಾಸನ್ ಅವರು ತಮ್ಮ ನಿರ್ಧಾರ ತಿಳಿಸುವ ಸಾಧ್ಯತೆ ಇದೆ. ಆ ಬಳಿಕ ಕಮಲ್ ಹಾಸನ್ ನಿರ್ಮಾಣ ಸಂಸ್ಥೆ, ಕನ್ನಡ ಫಿಲಂ ಚೇಂಬರ್ ಜೊತೆ ಮಾತುಕತೆ ನಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ