/newsfirstlive-kannada/media/post_attachments/wp-content/uploads/2024/12/CT-Ravi-On-Lakshmi-Hebbalkar.jpg)
ಬೆಂಗಳೂರು: ಸಾಕಷ್ಟು ನಾಟಕೀಯ ಬೆಳವಣಿಗೆಗಳ ನಡುವೆ ಬಿಜೆಪಿ ಎಂಎಲ್​ಸಿ ಸಿ.ಟಿ ರವಿಗೆ ತಾತ್ಕಾಲಿಕ ರಿಲೀಫ್​ ಸಿಕ್ಕಿದೆ. ಸಚಿವೆ ವಿರುದ್ಧ ಅಶ್ಲೀಲ ಪದ ಬಳಕೆ ಪ್ರಕರಣದಲ್ಲಿ ಅರೆಸ್ಟ್​ ಆದ ಬಳಿಕ ಭಾರೀ ಹೈಡ್ರಾಮಾ ನಡೆದಿದ್ದವು. ಆದ್ರೀಗ ಸಚಿವೆಗೆ ನಿಂದನೆ ಕೇಸ್​ನಲ್ಲಿ ಹೈಕೋರ್ಟ್​ ಷರತ್ತು ಬದ್ಧ ಜಾಮೀನು ನೀಡಿದ್ದು, ಇದರ ಬೆನ್ನಲ್ಲೇ ಸಿ.ಟಿ ರವಿ ರಿಲೀಸ್​ ಆಗಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ ಸಿ.ಟಿ ರವಿಗೆ ಭಾರೀ ಸಂಕಷ್ಟ ಎದುರಾಗಿತ್ತು. ಮೊನ್ನೆಯಿಂದ ಭಾರೀ ನಾಟಕೀಯ ಬೆಳವಣಿಗೆ ಸಾಕ್ಷಿಯಾಗಿದ್ದ ಕೇಸ್​ನಲ್ಲಿ ಕೊನೆಗೂ ಎಂಎಲ್​ಸಿ ಸಿ.ಟಿ.ರವಿಗೆ ಬಿಗ್​ ರಿಲೀಫ್​ ಸಿಕ್ಕಿದೆ.
/newsfirstlive-kannada/media/post_attachments/wp-content/uploads/2024/12/CT-RAVI-1.jpg)
ಅಶ್ಲೀಲ ಪದ ಬಳಕೆ ಪ್ರಕರಣದಲ್ಲಿ ಷರತ್ತು ಬದ್ಧ ರಿಲೀಸ್​
ಬೆಳಗಾವಿ ಜಿಲ್ಲಾ ನ್ಯಾಯಾಲಯ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಮಧ್ಯಂತರ ಜಾಮೀನು ಸಿಗದ ಕಾರಣ ಸಿ.ಟಿ ರವಿ ಪರ ವಕೀಲರು ಹೈಕೋರ್ಟ್​ ಮೊರೆ ಹೋಗಿದ್ದರು. ಸಿ.ಟಿ ರವಿ ವಿರುದ್ಧ ದಾಖಲಿಸಿರುವ ಎಫ್​ಐಆರ್​ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಉಮಾ ಅವರ ಪೀಠದಲ್ಲಿ ವಿಚಾರಣೆ ನಡೆಸಲಾಗಿತ್ತು. ಸಿ.ಟಿ ರವಿ ಮತ್ತು ಸಚಿವೆ ಹೆಬ್ಬಾಳ್ಕರ್​ ನಡೆಗೆ ಹೈಕೋರ್ಟ್​ ಬೇಸರ ವ್ಯಕ್ತಪಡಿಸಿತು. ಆದ್ರೆ ಸಿ.ಟಿ ರವಿ ಬಂಧನಕ್ಕೆ ಸೂಕ್ತ ದಾಖಲೆ ನೀಡುವಲ್ಲಿ ವಿಫಲವಾದ ಹಿನ್ನೆಲೆ ಹೈಕೋರ್ಟ್​, ಷರತ್ತು ಬದ್ಧ ರಿಲೀಸ್​ ಮಾಡುವಂತೆ ಆದೇಶ ನೀಡಿದೆ. ಆದರೆ ಎಫ್​ಐಆರ್​ ತಡೆ ಬಗೆಗಿನ ವಿಚಾರಣೆ ಮುಂದುವರಿಯಲಿದೆ.
ಇನ್ನು ಇದಕ್ಕೂ ಮೊದಲು ಬೆಳಗಾವಿಯ 5ನೇ ಹೆಚ್ಚುವರಿ ಜೆಎಂಎಫ್ ನ್ಯಾಯಾಲಯದ ಸಿ.ಟಿ. ರವಿ ಅವರನ್ನು ಹಾಜರು ಪಡಿಸಲಾಗಿತ್ತು. ನ್ಯಾಯಾದೀಶೆ ಸ್ಪರ್ಶ ಡಿಸೋಜ ಪೀಠ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದರು. ಸಿ.ಟಿ ರವಿ ಪರ ವಕೀಲ ಎಂ.ಬಿ ಜಿರಲಿ ವಾದ ಮಂಡಿಸಿದರು. ಈ ವೇಳೆ ಸಿ.ಟಿ ರವಿ ಕೋರ್ಟ್​ನಲ್ಲಿ ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದಾರೆ. ಪೊಲೀಸರು ನನ್ನ ತಲೆಗೆ ಹೊಡೆದಿದ್ದಾರೆ, ಯಾರೆಂದು ಗೊತ್ತಿಲ್ಲ, ಪೊಲೀಸರು ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ.
ಕೋರ್ಟ್​ನಲ್ಲಿ ಸಿ.ಟಿ ರವಿ ಹೇಳಿದ್ದೇನು?
ನನ್ನ ವಾಚ್ ಕಿತ್ಕೊಂಡಿದ್ದು, ಭಯ ಹುಟ್ಟಿಸುವಂತೆ ವರ್ತಿಸಿದ್ದಾರೆ. ಪೊಲೀಸರಿಗೆ 10 ನಿಮಿಷಕ್ಕೊಮ್ಮೆ ಕಾಲ್​ನಲ್ಲಿ ಡೈರೆಕ್ಷನ್ ಬರುತ್ತಿತ್ತು. ಕಾಲ್​ನಲ್ಲಿ ಬರ್ತಿದ್ದ ಡೈರೆಕ್ಷನ್ ಕೇಳಿ ಪೊಲೀಸರು ಕಾರ್ಯ ನಿರ್ವಹಣೆ ಮಾಡಿದ್ದಾರೆ. ನಾನು ಕೊಟ್ಟ ದೂರಿನ ಬಗ್ಗೆ ಯಾವುದೇ ಎಫ್​ಐಆರ್ ಮಾಡಿಲ್ಲ. ರಾತ್ರಿ ಇಡೀ ಕ್ರಷರ್, ಕಬ್ಬಿನ ಗದ್ದೆಯಲ್ಲಿ ನನ್ನನ್ನು ಸುತ್ತಾಡಿಸಿದ್ದಾರೆ. ಬೆಳಗಾವಿ, ಧಾರವಾಡ ಅಂತಾ ಬೇರೆ ಬೇರೆ ಜಿಲ್ಲೆಯಲ್ಲಿ ಸುತ್ತಾಡಿಸಿದ್ದಾರೆ. ಬೆಳಗಾವಿ ಬಿಟ್ಟು ಹೇಗೆ ಹೋಗ್ತೀಯಾ ಅಂತಾ ಲಕ್ಷ್ಮೀ ಹೆಬ್ಬಾಳ್ಕರ್, ಡಿ.ಕೆ ಶಿವಕುಮಾರ್ ನನಗೆ ಬೆದರಿಕೆ ಹಾಕಿದ್ದರು ಎಂದು ಸಿ.ಟಿ ರವಿ ಅವರು ಕೋರ್ಟ್​ ಮುಂದೆ ಹೇಳಿದರು.
ಇನ್ನು ಸಿ.ಟಿ ರವಿ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಾಧೀಶೆ ಸ್ಪರ್ಶಾ ಎಂ ಡಿಸೋಜಾ ಅವರು, ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ, ಆದೇಶಿಸಿದರು. ಇನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನ್ಯಾ. ಗಜಾನನ ಭಟ್​ ಪೀಠದಲ್ಲಿ ವಿಚಾರಣೆ ನಡೀತು. ಮ್ಯಾಜಿಸ್ಟ್ರೇಟ್​ ಕೋರ್ಟ್​ ಮುಂದೆ ಜಾಮೀನು ಅರ್ಜಿ ಬಾಕಿ ಇರೋದ್ರಿಂದ ಯಾವುದೇ ತೀರ್ಮಾನ ಮಾಡದಂತೆ ಸಚಿವೆ ಹೆಬ್ಬಾಳ್ಕರ್ ಪರ ವಕೀಲ ಶ್ಯಾಮ್​ ಸುಂದರ್ ​ ಪ್ರತಿವಾದ ಮಂಡಿಸಿದರು. ಇದನ್ನು ಪರಿಗಣಿಸಿದ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
/newsfirstlive-kannada/media/post_attachments/wp-content/uploads/2024/12/HEBBALKAR.jpg)
ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್​ಗೆ ಪ್ರಕರಣ ವರ್ಗಾವಣೆಯಾದ ಕಾರಣ, ಸಿ.ಟಿ ರವಿಯನ್ನು ಪೊಲೀಸರನ್ನು ಬೆಂಗಳೂರಿನತ್ತ ಕರೆದೊಯ್ಯಲು ಮುಂದಾದರು. ಈ ವೇಳೆ ಕೋರ್ಟ್​ ಹಾಲ್​ನಿಂದ ಹೊರ ಬಂದ ಸಿ.ಟಿ.ರವಿ, ಈ ಸರ್ವಾಧಿಕಾರ ಬಹಳ ದಿನ ನಡೆಯಲ್ಲ. ಎಲ್ಲದಕ್ಕೂ ಫುಲ್​ಸ್ಟಾಪ್ ಬೀಳುತ್ತೆ ಎಂದು ಗುಡುಗಿದರು.
ಟೀಕಿಸುವ ಭರದಲ್ಲಿ ಆಡಿದ ಅದೊಂದು ಪದದಿಂದ ಸಂಕಷ್ಟಕ್ಕೆ ಸಿಲುಕಿದ್ದ ಎಂಎಲ್​ಸಿ ಸಿ.ಟಿ ರವಿಗೆ ಹೈಕೋರ್ಟ್​ ಬಿಗ್​ ರಿಲೀಫ್​ ನೀಡಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ. ಇದರ ಬೆನ್ನಲ್ಲೇ ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us