ಅಂದು ಇಮ್ಮಡಿ ಪುಲಿಕೇಶಿ.. ಇಂದು ಸಿದ್ದರಾಮಯ್ಯ ಸರ್ಕಾರ; ಏನಿದು 1410 ವರ್ಷಗಳ ಆನೆಗಳ ಭ್ರಾತೃತ್ವದ ಚರಿತ್ರೆ?

author-image
admin
Updated On
ಅಂದು ಇಮ್ಮಡಿ ಪುಲಿಕೇಶಿ.. ಇಂದು ಸಿದ್ದರಾಮಯ್ಯ ಸರ್ಕಾರ; ಏನಿದು 1410 ವರ್ಷಗಳ ಆನೆಗಳ ಭ್ರಾತೃತ್ವದ ಚರಿತ್ರೆ?
Advertisment
  • ಆಂಧ್ರ ಕರ್ನಾಟಕದ ಆನೆಗಳ ಉಡುಗೊರೆಗೆ ಸಾವಿರ ವರ್ಷಗಳ ಇತಿಹಾಸ
  • ಅಣ್ಣನ ಸ್ಥಾನದಲ್ಲಿ ಕರ್ನಾಟಕ 1410 ವರ್ಷಗಳ ಹಿಂದೆಯೇ ಆನೆ ನೀಡಿತ್ತು
  • ಅವತ್ತು ಬಾದಾಮಿ ಚಾಲುಕ್ಯರ ಸೈನ್ಯದಲ್ಲಿ 60,000 ಆನೆಗಳು ಇದ್ದವು

ಆಂಧ್ರಪ್ರದೇಶಕ್ಕೆ ಕರ್ನಾಟಕ ಸರ್ಕಾರ 4 ಕುಮ್ಕಿ ಆನೆಗಳನ್ನು ನೀಡಿದೆ. ಅಷ್ಟೇ ಅಲ್ಲ, ಆಂಧ್ರ ಮಾವುತರಿಗೆ ತರಬೇತಿ ಕೂಡ ನೀಡಲಾಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಆನೆಗಳು ಬೇಕು ಅಂತ ಮನವಿ ಮಾಡಿದ್ರು. ಇದೀಗ ರಾಜ್ಯ ಸರ್ಕಾರ ಆನೆಗಳನ್ನ ನೀಡಿದೆ. ಆದರೆ, ಆಂಧ್ರ ಕರ್ನಾಟಕದ ಆನೆಗಳ ಉಡುಗೊರೆಗೆ ಸರಿ ಸುಮಾರು ಒಂದೂವರೆ ಸಾವಿರ ವರ್ಷಗಳ ಚರಿತ್ರೆಯೇ ಇದೆ.

publive-image

1410 ವರ್ಷಗಳ ಹಿಂದೆ.. ಏನಿದು ಆನೆ ಗಿಫ್ಟ್?
1410 ವರ್ಷಗಳ ಹಿಂದೆ.. ಚಾಲುಕ್ಯರ ಶ್ರೇಷ್ಠ ದೊರೆ ಇಮ್ಮಡಿ ಪುಲಿಕೇಶಿ ತನ್ನ ಸೋದರ ಕುಬ್ಜ ವಿಷ್ಣುವರ್ಧನನಿಗೆ ಆಂಧ್ರ ಪ್ರದೇಶದ ವೆಂಗಿ ಪ್ರಾಂತ್ಯವನ್ನ ನೀಡಿ ಸ್ವತಂತ್ರ ದೊರೆಯಾಗಿ ಘೋಷಿಸಿ, ಪಟ್ಟಾಭಿಷೇಕ ಮಾಡಿದ್ರು. ಅವತ್ತಿನಿಂದ ಕುಬ್ಜ ವಿಷ್ಣು ವರ್ಧನ ವೆಂಗಿ ಚಾಲುಕ್ಯ ದೊರೆಯಾಗಿ ಅಖಂಡ ಆಂಧ್ರ ಪ್ರದೇಶವನ್ನಾಳಿದ್ರು. ಇದೇ ಚಾಲುಕ್ಯರ ಅವಧಿಯಲ್ಲಿ ರೂಪುಗೊಂಡ ಚಾಲುಕ್ಯ ಲಿಪಿಯೇ ಬಾದಾಮಿ ಚಾಲುಕ್ಯರಿಗೂ, ವೆಂಗಿ ಚಾಲುಕ್ಯರಿಗೂ ತಾಯಿ ಲಿಪಿ ಆಗಿತ್ತು. ಆ ಲಿಪಿಯ ರೂಪಾಂತರದ ಲಿಪಿಗಳೇ ಇವತ್ತಿನ ಕನ್ನಡ ಹಾಗೂ ತೆಲುಗು ಎಂಬುದು ಭಾಷಾಂತರ ತಜ್ಞರ ಅಭಿಪ್ರಾಯ. ಇವತ್ತು ಇದೆಲ್ಲವನ್ನೂ ಹೇಳೋದಕ್ಕೆ ಸಾಕ್ಷಿ ಆಗಿದ್ದು ಆನೆಗಳು.

publive-image

ಇಂದು ಪವನ್ ಕೇಳಿದ್ರು.. ಅಂದು ವಿಷ್ಣುವರ್ಧನ
ಆಂಧ್ರಪ್ರದೇಶದಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಕರ್ನಾಟಕದಿಂದ ತರಬೇತಿ ಪಡೆದಿರುವ ಕುಮ್ಕಿ ಆನೆಗಳನ್ನು ನೀಡುವಂತೆ ಆಂಧ್ರದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮನವಿ ಮಾಡಿದ್ದರು. ಹಾಗಾಗಿಯೇ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಅರಣ್ಯ ಇಲಾಖೆಯೂ 4 ಕುಮ್ಮಿ ಆನೆಗಳನ್ನು ಆಂಧ್ರಪ್ರದೇಶಕ್ಕೆ ಹಸ್ತಾಂತರ ಮಾಡಿದೆ. ಇವತ್ತು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಆಂಧ್ರಪ್ರದೇಶಕ್ಕೆ ಹೇಗೆ ಆನೆಗಳನ್ನು ನೀಡಿದೆಯೋ? ಇಂಥದ್ದೊಂದು ಉಡುಗೊರೆಯನ್ನ ಕರ್ನಾಟಕ ಅಣ್ಣನ ಸ್ಥಾನದಲ್ಲಿ ನಿಂತು 1410 ವರ್ಷಗಳ ಹಿಂದೆಯೇ ನೀಡಿತ್ತು ಅನ್ನೋದು ಸುವರ್ಣಾಕ್ಷರಗಳಲ್ಲಿ ದಾಖಲಾಗಿರೋ ಚರಿತ್ರೆ ಎಂಬುದು ಬಹುಪಾಲು ಮಂದಿಗೆ ಗೊತ್ತಿಲ್ಲ.

ಇದನ್ನೂ ಓದಿ: ಆಂಧ್ರಕ್ಕೆ 4 ಕುಮ್ಕಿ ಆನೆ ಕಳುಹಿಸಿದ ಕರ್ನಾಟಕ; ಕಾರಣವೇನು? ಪವನ್ ಕಲ್ಯಾಣ್ ಏನಂದ್ರು? 

publive-image

ಸಾವಿರಾರು ಆನೆಗಳನ್ನ ನೀಡಿದ್ರು ಇಮ್ಮಡಿ ಪುಲಿಕೇಶಿ
ಚಿಕ್ಕಪ್ಪ ಮಂಗಳೇಶನ ಮಾತುಗಳನ್ನು ಕೇಳಿ ಇಮ್ಮಡಿ ಪುಲಿಕೇಶಿ ತಮ್ಮ ಕುಬ್ಜ ವಿಷ್ಣುವರ್ಧನ ಅಣ್ಣನ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದ. ತನ್ನನ್ನ ಎಂದಿಗೂ ರಾಜನನ್ನಾಗಿ ಮಾಡೋದಿಲ್ಲ ಅಂತಲೇ ನಂಬಿದ್ದ. ಆದರೇ, ಇಮ್ಮಡಿ ಪುಲಿಕೇಶಿ ವೆಂಗಿ ಭಾಗವನ್ನ ಎಂದರೇ ಇವತ್ತಿನ ಬಹುಪಾಲು ಆಂಧ್ರ ಪ್ರದೇಶವನ್ನು ತಮ್ಮ ಕುಬ್ಜ ವಿಷ್ಣುವರ್ಧನನಿಗೆ ನೀಡಿ, ಸ್ವತಂತ್ರ ದೊರೆ ಆಗಿ ಪಟ್ಟಾಭಿಷೇಕ ಮಾಡಿದ್ರು.. ಈ ವಿಚಾರವನ್ನ ನೀವು ಅಣ್ಣಾವ್ರು ಅಭಿನಯದ ಇಮ್ಮಡಿ ಪುಲಿಕೇಶಿ ಸಿನಿಮಾದಲ್ಲೂ ನೋಡಬಹುದು. ಅಸಲಿಗೆ ಪುಲಿಕೇಶಿ ಬರೀ ಸಾಮ್ರಾಜ್ಯವನ್ನ ನೀಡಲಿಲ್ಲ. ಅಂದೇ ಸಾಮರ್ಥ್ಯ ಹಾಗೂ ಭ್ರಾತೃತ್ವದ ಸಂಕೇತ ಆಗಿರೋ ಆನೆಗಳನ್ನೂ ವೆಂಗಿಗೆ ಉಡುಗೊರೆ ಆಗಿ ನೀಡಿದ್ರು.

publive-image

ಅಂದು 60 ಸಾವಿರ ಆನೆಗಳಿದ್ವು.. ಇಂದು ಬರೀ 6 ಸಾವಿರ
ಚಾಲುಕ್ಯರ ಕರ್ಣಾಟ ಬಲದ ಅಸಲಿ ಶಕ್ತಿ ಇದೇ ಆನೆಯ ಬಲ ಆಗಿತ್ತು. ಚಾಲುಕ್ಯರ ಕರಿ ತುರಗ ಸೈನ್ಯಕ್ಕೆ ಭಾರತದ ಇನ್ನಿತರ ಸಾಮ್ರಾಜ್ಯಗಳು ನಡುಗಿ ಹೋಗ್ತಿದ್ರು. ಚೀನಾದ ಯಾತ್ರಿಕ ಹ್ಯೂಯೆನ್ ತ್ಸಾಂಗ್ ತನ್ನ ಬರಹಗಳಲ್ಲಿ ಉಲ್ಲೇಖಿಸಿರೋ ಪ್ರಕಾರ ಅವತ್ತು ಬಾದಾಮಿ ಚಾಲುಕ್ಯರ ಸೈನ್ಯದಲ್ಲಿ 60,000 ಆನೆಗಳು ಇದ್ದವು. ಇಂಥಾ ಆನೆಗಳ ಬಲ ಇದ್ದಿದ್ದರಿಂದಾಗಿಯೇ ಇಮ್ಮಡಿ ಪುಲಿಕೇಶಿ ನಮರ್ದಾ ನದಿ ದಂಡೆಯಲ್ಲಿ ಹರ್ಷವರ್ಧನನ್ನ ಸೋಲಿಸೋದಕ್ಕೆ ಸಾಧ್ಯವಾಯ್ತು.. ಅದೇ ಹರ್ಷವರ್ಧನನಿಂದ ದಕ್ಷಿಣ ಪಥೇಶ್ವರ ಅನ್ನೋ ಮಹಾ ಬಿರುದು ಪಡೆಯೋದಕ್ಕೆ ವರವಾಯ್ತು. ಹೀಗೆ ಕುಮ್ಕಿ ಆನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಸೋದರತ್ವದ ಮಾತುಗಳನ್ನೇ ಸಿಎಂ ಸಿದ್ದರಾಮಯ್ಯ ಆಡಿದ್ದಾರೆ.

ವಿಶೇಷ ವರದಿ: ಬಸವರಾಜು ಸಿ. ಕ್ಯಾಶವಾರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment