/newsfirstlive-kannada/media/post_attachments/wp-content/uploads/2025/01/China-Health-Emergency.jpg)
ಕೊರೊನಾ ಮಹಾಮಾರಿ 5 ವರ್ಷಗಳ ಹಿಂದೆ ಇಡೀ ಪ್ರಪಂಚವನ್ನೇ ಸ್ತಬ್ಧಗೊಳಿಸಿತ್ತು. ಬಲಿ ಪಡೆದ ಜೀವಗಳಿಗೆ ಲೆಕ್ಕವೇ ಇಲ್ಲ. ಒಂದು ವಾರದಿಂದ ಚೀನಾದಲ್ಲಿ ಮತ್ತೆ ವೈರಸ್ ಆರ್ಭಟ ಶುರುವಾಗಿದೆ. ಈಗಾಗಲೇ ಇಡೀ ಜಗತ್ತಿಗೆ ಆತಂಕ ಶುರುವಾಗಿದ್ದು ಮತ್ತೆ ಲಾಕ್ಡೌನ್ ಕಣ್ಮುಂದೆ ಬರುತ್ತಿದೆ. ಈ ನಡುವೆ ಊರಿಗೆ ಬಂದವಳು ನೀರಿಗೆ ಬಾರದೇ ಇರುತ್ತಾಳಾ ಎನ್ನುವಂತೆ ಹೆಚ್‌ಎಂಪಿವಿ ಮಾರಿ ಭಾರತಕ್ಕೂ ಲಗ್ಗೆ ಇಟ್ಟಿದೆ.
ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಅಂದರೆ ಹೆಚ್‌ಎಂಪಿವಿ ಒಂದು ವಾರದಿಂದ ಚರ್ಚೆ ಆಗುತ್ತಿದೆ. ದೂರದ ಚೀನಾದಲ್ಲಿ ಪತ್ತೆಯಾಗಿ ಹಾವಳಿ ಎಬ್ಬಿಸಿ ಮಹಾಮಾರಿ ಈಗ ಭಾರತದಲ್ಲೂ ಪತ್ತೆಯಾಗಿದೆ. ಕೊರೊನಾ ರಕ್ಕಸನ ಮರಿಯಾಗಿ HMP ವೈರಸ್ ಲಗ್ಗೆ ಇಟ್ಟಿದೆ. ಈ ಮೊದಲೇ ಲಾಕ್ಡೌನ್ ಹಾಗೂ ಆಗಿನ ದಾರುಣ ಪರಿಸ್ಥಿತಿ ಕಂಡ ಜನರಿಗೆ ಇದರಿಂದ ಆತಂಕವಾಗಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ಕಟಕಟೆಯಲ್ಲಿ ದರ್ಶನ್ ಸೇರಿ 7 ಆರೋಪಿಗಳ ಜಾಮೀನು ಭವಿಷ್ಯ.. ಏನಾಗುತ್ತೆ?
ಬೆಂಗಳೂರಿನ 2 ಹಸುಗೂಸುಗಳಲ್ಲಿ ಪತ್ತೆಯಾದ ಸೋಂಕು
ಹೆಚ್‌ಎಂಪಿ ವೈರಸ್ ರಾಜಧಾನಿ ಬೆಂಗಳೂರಿನ ಹಸುಗೂಸುಗಳಿಗೆ ವಕ್ಕರಿಸಿದೆ. ಬೆಂಗಳೂರಿನ ಮೂರು ತಿಂಗಳ ಹೆಣ್ಣು ಮಗು ಹಾಗೂ 8 ತಿಂಗಳ ಗಂಡು ಮಗುವಿಗೆ HMP ವೈರಸ್ ಸೋಂಕು ತಗುಲಿರೋದು ಧೃಢಪಟ್ಟಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಚಿಕಿತ್ಸೆ ಮುಂದುವರಿದಿದ್ರೆ ಹೆಣ್ಣು ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಇನ್ನು ರಾಜ್ಯದಲ್ಲಿ 2 ಕೇಸ್ ಪತ್ತೆಯಾದ ನಂತರ ಗುಜರಾತ್ನಲ್ಲಿ 2 ವರ್ಷದ ಮಗುವಿಗೆ ಎಚ್ಎಂಪಿವಿ ತಗುಲಿದೆ. ಇತ್ತ ಪಕ್ಕದ ತಮಿಳುನಾಡಿನಲ್ಲೂ ಎರಡು ಕೇಸ್ಗಳು ದಾಖಲಾಗಿವೆ. ಇದರ ಜೊತೆಗೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲೂ ಒಂದು ಪ್ರಕರಣ ದಾಖಲಾಗಿದೆ. ಈ ಮೂಲಕ ಭಾರತದಲ್ಲಿ ಸೋಂಕಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಆತಂಕಕಾರಿ ಸಂಗತಿ ಏನಂದ್ರೆ ಈ ಮಾರಿ ಮಕ್ಕಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದೆ. ದೇಶದಲ್ಲಿ HMPV ಪತ್ತೆ ಹಿನ್ನೆಲೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಎಚ್ಚರಿಕೆ ನೀಡಿದೆ. ಭಾರತ ಸೇರಿದಂತೆ ವಿಶ್ವದ ಹಲವೆಡೆ ಹೆಚ್ಎಂಪಿ ವೈರಸ್ ಹರಡುತ್ತಿದೆ. ಉಸಿರಾಟದ ಸಂಬಂಧ ರೋಗ ನಿಭಾಯಿಸಲು ಭಾರತ ಸಿದ್ಧವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಆತಂಕದ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವರ ಅಭಯ
ಇನ್ನು ಚೀನಾದಲ್ಲಿ ಹೆಚ್ಚುತ್ತಿರುವ ಪ್ರಕರಣಗಳು ಮತ್ತು ಭಾರತದಲ್ಲಿ 6 ಪ್ರಕರಣಗಳ ವರದಿಗಳ ಬೆನ್ನಲ್ಲೇ ಆತಂಕ ಹೆಚ್ಚಾಗಿದೆ. ಆದ್ರೆ ಈ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಹೊಸದೇನಲ್ಲ. ಹಲವು ವರ್ಷಗಳಿಂದ ಜಾಗತಿಕವಾಗಿ ಹರಡುತ್ತಿದೆ. ಹೀಗಾಗಿ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅಭಯ ನೀಡಿದ್ದಾರೆ.
ಹೊಸ ವೈರಸ್ ಏನಲ್ಲ. 2001ರಲ್ಲಿ ಮೊದಲ ಬಾರಿಗೆ ಗುರುತಿಸಲ್ಪಟ್ಟ ಉಸಿರಾಟದ ವೈರಸ್ ಹಲವು ವರ್ಷಗಳಿಂದ ಜಾಗತಿಕವಾಗಿ ಹರಡುತ್ತಿದೆ. ಇದು ಗಾಳಿ, ಉಸಿರಾಟದ ಮೂಲಕ ಹರಡುತ್ತದೆ. ಇದು ಎಲ್ಲಾ ವಯಸ್ಸಿನ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಚಳಿಗಾಲದ ಆರಂಭದಲ್ಲಿ ವೈರಸ್ ಹೆಚ್ಚು ಹರಡುತ್ತದೆ. ಆರೋಗ್ಯ ಸಚಿವಾಲಯ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ, ಚೀನಾ ಹಾಗೂ ನೆರೆಯ ದೇಶಗಳ ಪರಿಸ್ಥಿತಿ ಸೂಕ್ಷ್ಮವಾಗಿ ಗಮನಿಸುತ್ತಿವೆ.
ಜೆ.ಪಿ ನಡ್ಡಾ, ಕೇಂದ್ರ ಆರೋಗ್ಯ ಸಚಿವ
ಕುಂಭಮೇಳಕ್ಕೂ ವೈರಸ್ ಆತಂಕ.. ಬೆಡ್‌ಗಳ ವ್ಯವಸ್ಥೆ
ಇನ್ನು ಭಾರತದಲ್ಲಿ ಹೆಚ್‌ಎಂಪಿವಿ ಪ್ರಕರಣಗಳು ಪತ್ತೆಯಾಗಿರುವುದು ಉತ್ತರಪ್ರದೇಶ ಸರ್ಕಾರಕ್ಕೆ ತುಸು ಹೆಚ್ಚೇ ಆತಂಕಕ್ಕೆ ಕಾರಣವಾಗಿದೆ. ಜನವರಿ 13ರಿಂದ ಪ್ರಯಾಗ್‌ರಾಜ್‌ನಲ್ಲಿ ಪೂರ್ಣ ಕುಂಭಮೇಳ ಆರಂಭವಾಗ್ತಿರುವ ಹೊತ್ತಲ್ಲೇ ಸೋಂಕು ಬೆಳಕಿಗೆ ಬಂದಿದ್ದು ಭೀತಿ ಮೂಡಿಸಿದೆ. ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಕುಂಭಮೇಳದಲ್ಲಿ ಸೋಂಕು ಹರಡಬಹುದು ಎಂಬ ಆತಂಕ ಇದೆ. ಚೀನಾದಿಂದ ಬರುವ ವಿಮಾನಗಳನ್ನ ತಕ್ಷಣದಿಂದಲೇ ನಿಷೇಧಿಸಿ ಎಂದು ಹೇಳಲಾಗ್ತಿದೆ. ಈಗಾಗಲೇ 100 ಬೆಡ್‌ಗಳ ಆಸ್ಪತ್ರೆಯನ್ನು ಸಿದ್ಧತೆ ಮಾಡಲಾಗಿದೆ.
ಹೆಚ್‌ಎಂಪಿವಿ ವೈರಸ್ ದೇಶದ ಜೊತೆಗೆ ರಾಜ್ಯದಲ್ಲೂ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಆದ್ರೆ ಈ ಬಗ್ಗೆ ಭಯ ಬೇಡ. ನಾವು ಇದನ್ನು ಎದುರಿಸಲು ಸಿದ್ಧರಾಗಿದ್ದೇವೆ ಅಂತ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಸರ್ಕಾರದ ಜೊತೆಗೆ ಜನರು ಕೂಡ ಸದ್ಯ ಅಲರ್ಟ್ ಆಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ