/newsfirstlive-kannada/media/post_attachments/wp-content/uploads/2025/03/Parameshwar-On-Honey-Trap-1.jpg)
ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ವಿಚಾರದ ಬಗ್ಗೆ ಚರ್ಚೆಯಾದ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನವೇ ಸೃಷ್ಟಿಯಾಗಿದೆ. ಸದನದಲ್ಲಿ ಪ್ರಸ್ತಾಪವಾದ ಬಳಿಕ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು, ಯಾವ ರೀತಿಯ ತನಿಖೆಗೆ ಆದೇಶ ನೀಡುತ್ತದೆ ಅನ್ನೋದು ಎಲ್ಲರಿಗೂ ಕುತೂಹಲ ಕೆರಳಿಸಿದೆ.
ಸದನದಲ್ಲಿ ಆಗಿದ್ದೇನು?
ವಿಧಾನಸಭಾ ಅಧಿವೇಶನದಲ್ಲಿ ಇವತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಹನಿಟ್ರ್ಯಾಪ್ ವಿಚಾರವನ್ನು ಪ್ರಸ್ತಾಪ ಮಾಡಿದರು. ನೇರವಾಗಿ ಸಹಕಾರ ಸಚಿವರ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ಹೇಳಿದರು.
ಇದನ್ನೂ ಓದಿ: ಒಬ್ಬರು, ಇಬ್ಬರೂ ಅಲ್ಲ.. 48 ನಾಯಕರ ಹನಿಟ್ರ್ಯಾಪ್; ಸಚಿವ ಕೆ.ಎನ್ ರಾಜಣ್ಣ ಸ್ಫೋಟಕ ಹೇಳಿಕೆ VIDEO
ಸಹಕಾರ ಸಚಿವರ ಹೆಸರು ಪ್ರಸ್ತಾಪ ಆಗುತ್ತಿದ್ದಂತೆ ಸದನಕ್ಕೆ ಖುದ್ದು ಕೆ.ಎನ್ ರಾಜಣ್ಣ ಅವರೇ ಉತ್ತರ ನೀಡಿದರು. ನನ್ನ ಮೇಲೆ ಹನಿಟ್ರ್ಯಾಪ್ ಪ್ರಯತ್ನ ಆಗಿರೋದು ನಿಜ. ಬರೀ ಒಬ್ಬರು, ಇಬ್ಬರೂ ಅಲ್ಲ 48 ಜನರ ಸಿಡಿ, ಪೆನ್ಡ್ರೈವ್ ಇರೋ ಬಗ್ಗೆ ನನಗೆ ಮಾಹಿತಿ ಇದೆ. ನನ್ನ ಮೇಲೆ ಹನಿಟ್ರ್ಯಾಪ್ ಯತ್ನಕ್ಕೆ ಪುರಾವೆ ಇಟ್ಟುಕೊಂಡಿದ್ದೇನೆ. ನಾನು ಗೃಹ ಸಚಿವರಿಗೆ ಲಿಖಿತ ರೂಪದಲ್ಲಿ ದೂರು ನೀಡುತ್ತೇನೆ. ಗೃಹ ಮಂತ್ರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯವನ್ನು ಸಿಡಿಗೆ ಕಾರ್ಖಾನೆ ಅಂತಾ ಹೇಳುತ್ತಾರೆ. ರಾಜ್ಯದ 48 ಜನ ನಾಯಕರದ್ದು ಸಿಡಿ, ಪೆನ್‌ಡ್ರೈವ್‌ಗಳಿವೆ. ಇದರ ಹಿಂದೆ ಇರುವ ನಿರ್ದೇಶಕರು, ನಿರ್ಮಾಪಕರು ಯಾರೆಂದು ಗೊತ್ತಾಗಲಿ. ರಾಷ್ಟ್ರಮಟ್ಟದ ನಾಯಕರದ್ದೂ ಹನಿಟ್ರ್ಯಾಪ್ ಆಗಿದೆ. ಸಾರ್ವಜನಿಕ ಜೀವನದಲ್ಲಿ ಎಂದೂ ಹೀಗಾಗಬಾರದು. ಈ ಪ್ರಕರಣದ ಕುರಿತು ಗಂಭೀರ ತನಿಖೆ ಆಗಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸದನಕ್ಕೆ ಒತ್ತಾಯಿಸಿದ್ದಾರೆ.
ಕೆ.ಎನ್ ರಾಜಣ್ಣ ಅವರ ಈ ಆಗ್ರಹದ ಬಳಿಕ ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಪ್ರತಿಕ್ರಿಯಿಸಿದರು. ಸದನದಲ್ಲಿ ರಾಜಣ್ಣನವರು ಹನಿಟ್ರ್ಯಾಪ್ ಪ್ರಯತ್ನದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದು ಈ ಸದನದ ಪ್ರತಿಯೊಬ್ಬ ಸದಸ್ಯನ ಪ್ರಶ್ನೆ. ಒಬ್ಬರಿಗಾಯ್ತು, ಇಬ್ಬರಿಗಾಯ್ತು ಅನ್ನೋದಲ್ಲ. ಇದಕ್ಕೆ ಒಂದು ಫುಲ್ ಸ್ಟಾಪ್ ಹಾಕಬೇಕು. ಸದಸ್ಯರ ಮರ್ಯಾದೆ ಕಾಪಾಡಲು ಇದಕ್ಕೆ ಇತಿಶ್ರೀ ಹಾಡಬೇಕು. ರಾಜಣ್ಣನವರು ಲಿಖಿತವಾಗಿ ದೂರು ನೀಡುವ ಪ್ರಸ್ತಾಪ ಮಾಡಿದ್ದಾರೆ. ಅವರು ಲಿಖಿತ ದೂರು ನೀಡಲಿ, ನಾನು ಉನ್ನತಮಟ್ಟದ ತನಿಖೆಗೆ ಆದೇಶ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ