/newsfirstlive-kannada/media/post_attachments/wp-content/uploads/2025/07/Honey-Trap.jpg)
ಮಹಾರಾಷ್ಟ್ರದಲ್ಲಿ ಮಹಿಳೆಯೊಬ್ಬಳು ತನ್ನ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಪೊಲೀಸ್ ಅಧಿಕಾರಿಗಳನ್ನೇ ಹನಿಟ್ರ್ಯಾಪ್ ಬಲೆಗೆ ಕೆಡವಿದ್ದಾಳೆ. ಐಪಿಎಸ್ ಅಧಿಕಾರಿಗಳು, ಅಬಕಾರಿ ಇಲಾಖೆಯ ಅಧಿಕಾರಿಗಳು, ಜಿಎಸ್‌ಟಿ ಅಧಿಕಾರಿಗಳು, ಕಾರ್ಪೋರೇಷನ್ ಉನ್ನತ ಅಧಿಕಾರಿಗಳು, ಸ್ಕೂಲ್ ಪ್ರಿನ್ಸಿಪಾಲ್ ಸೇರಿದಂತೆ ಅನೇಕ ಗಣ್ಯರನ್ನ ತನ್ನ ಬಲೆಗೆ ಕೆಡವಿದ್ದಾಳೆ. ಹನಿಟ್ರ್ಯಾಪ್ ಬಲೆಗೆ ಬಿದ್ದವರ ಮಾನ ತೆಗೆಯುವ ಬೆದರಿಕೆ ಹಾಕಿ, ಭಾರಿ ಮೊತ್ತದ ಹಣ ಪೀಕಿದ್ದಾಳೆ. ಮಹಾರಾಷ್ಟ್ರದ ಪೊಲೀಸ್ ಇಲಾಖೆ, ಅಧಿಕಾರಿಗಳ ವಲಯದಲ್ಲಿ ಈಗ ಈ ಮಹಿಳೆಯದ್ದೇ ಭಯ. ಈ ಮಹಿಳೆಯ ಬಳಿ ಇರುವ ತಮ್ಮ ಹನಿಟ್ರ್ಯಾಪ್ ವಿಡಿಯೋಗಳು ಯಾವಾಗ ಬಹಿರಂಗವಾಗುತ್ತಾವೆ ಎಂಬ ಭಯದಲ್ಲಿ ಮಹಾರಾಷ್ಟ್ರದಲ್ಲಿ ಪೊಲೀಸ್ ಅಧಿಕಾರಿಗಳು, ಅಧಿಕಾರಿಗಳು ಇದ್ದಾರೆ. ಉನ್ನತ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಿ ಹೆಚ್ಚಿನ ಹಣ ವಸೂಲಿ ಮಾಡಿದ್ದಾಳೆ.
ಇದನ್ನೂ ಓದಿ: ಹೈಕೋರ್ಟ್ ಸೂಕ್ತ ವಿವೇಚನೆ ಬಳಸಿ ದರ್ಶನ್ಗೆ ಜಾಮೀನು ನೀಡಿಲ್ಲ -ಸುಪ್ರೀಂ ಕೋರ್ಟ್ ಅತೃಪ್ತಿ
ಮಹಾರಾಷ್ಟ್ರದ ಥಾಣೆಯ ಇಬ್ಬರು ಎಸಿಪಿಗಳು ಈ ಮಹಿಳೆಯಿಂದ ಬ್ಲಾಕ್ ಮೇಲ್ ಮತ್ತು ಹಣ ವಸೂಲಿ ಆಗಿದೆ ಎಂದು ತಮ್ಮದೇ ಇಲಾಖೆಗೆ ದೂರು ನೀಡಿದ್ದಾರೆ. ಇಬ್ಬರು ಎಸಿಪಿಗಳಿಂದ ತಲಾ 40 ಲಕ್ಷ ರೂಪಾಯಿ ಹಣ ವಸೂಲಿಗೆ ಬೇಡಿಕೆ ಇಟ್ಟಿದ್ದಳು ಎಂದು ಇಬ್ಬರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ತಮ್ಮ ವಿರುದ್ಧ ರೇಪ್ ಕೇಸ್ ದಾಖಲಿಸದೇ ಇರಲು 40 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಳು ಎಂದು ದೂರು ನೀಡಿದ್ದಾರೆ. ಈ ಕೇಸ್ ತನಿಖೆಯನ್ನು ಮಹಾರಾಷ್ಟ್ರ ಗೃಹ ಇಲಾಖೆಯ ಮಹಿಳಾ ಎಸಿಪಿ ಒಬ್ಬರಿಗೆ ವಹಿಸಿದೆ. ತನಿಖೆ ವೇಳೆಯಲ್ಲಿ ಆತಂಕಕಾರಿ ವಿಷಯಗಳು ಬೆಳಕಿಗೆ ಬಂದಿವೆ. ತಾನೊಬ್ಬ ನೊಂದ ಮಹಿಳಾ ಕಾನ್ಸ್ ಟೇಬಲ್, ಹೋಮ್ ಗಾರ್ಡ್ ಎಂದು ಹೇಳಿಕೊಂಡು ಪೊಲೀಸ್ ಅಧಿಕಾರಿಗಳನ್ನು ಈ ಮಹಿಳೆ ಭೇಟಿಯಾಗುತ್ತಿದ್ದಳು. ಐಪಿಎಸ್ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದಳು. ಲೈಂಗಿಕವಾಗಿ ತೊಡಗಿಸಿಕೊಂಡಂತೆ ಪೋಟೋ, ವಿಡಿಯೋಗಳನ್ನು ರಹಸ್ಯವಾಗಿ ಚಿತ್ರೀಕರಿಸಿಕೊಳ್ಳುತ್ತಿದ್ದಳು. ಬಳಿಕ ಆ ಪೋಟೋ, ವಿಡಿಯೋ ಬಳಸಿಕೊಂಡು ದೊಡ್ಡ ಮೊತ್ತದ ಹಣ ನೀಡುವಂತೆ ಅಧಿಕಾರಿಗಳಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಳು.
ಈ ಹಿಂದೆಯೂ ಈ ಮಹಿಳೆಯೇ ಬೇರೆ ಬೇರೆಯವರ ವಿರುದ್ಧ ಸುಳ್ಳು ರೇಪ್ ಕೇಸ್ ದಾಖಲಿಸಿದ್ದಾಳೆ. ಬಳಿಕ ಕೇಸ್ ವಾಪಸ್ ಪಡೆಯಲು ದೊಡ್ಡ ಮೊತ್ತದ ಹಣವನ್ನು ಬ್ಲಾಕ್ ಮೇಲ್ ಮಾಡಿ ಪಡೆದಿದ್ದಾಳೆ. ಬಹಳಷ್ಟು ಸಂದರ್ಭಗಳಲ್ಲಿ ಸಂತ್ರಸ್ತ ಅಧಿಕಾರಿಗಳು, ಸಾಮಾಜಿಕ ಮುಜುಗರ, ತಮ್ಮ ಕೇರಿಯರ್ಗೆ ತೊಂದರೆಯಾಗುತ್ತೆ, ತಮ್ಮ ಇಮೇಜ್ ಡ್ಯಾಮೇಜ್ ಆಗುತ್ತೆ ಎಂಬ ಕಾರಣದಿಂದ ಹಣ ಕೊಟ್ಟು ಮೌನಕ್ಕೆ ಶರಣಾಗಿದ್ದಾರೆ. ಪೊಲೀಸರಿಗೆ ದೂರು ನೀಡುವ ಗೋಜಿಗೆ ಹೋಗಿಲ್ಲ.
ತಾನು ಬೇರೆ ಬೇರೆ ಕಾರಣದಿಂದ ನೊಂದಿದ್ದ, ಸಹಾಯ ಬೇಕೆಂದು ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗುತ್ತಿದ್ದಳು. ಭಾವನಾತ್ಮಕವಾಗಿ ಮಾತನಾಡಿ, ಅಧಿಕಾರಿಗಳ ಕರುಣೆಯನ್ನು ಗಿಟ್ಟಿಸಿಕೊಂಡು, ಬಳಿಕ ವಾಟ್ಸಾಫ್ ಚಾಟ್ , ವಿಡಿಯೋ ಚಾಟ್ ಶುರು ಮಾಡುತ್ತಿದ್ದಳು. ಅಧಿಕಾರಿಗಳಿಗೆ ತನ್ನ ಬಗ್ಗೆ ನಂಬಿಕೆ ಬರಬೇಕೆಂಬ ಕಾರಣದಿಂದ ಖುದ್ದಾಗಿಯೂ ಹೋಟೇಲ್ ಗಳಲ್ಲಿ ಭೇಟಿಯಾಗುತ್ತಿದ್ದಳು. ಹೋಟೇಲ್ನಲ್ಲಿ ಭೇಟಿಯಾದಾಗ ತಾನು ಮತ್ತು ಅಧಿಕಾರಿ ಆಪ್ತವಾಗಿರುವ ಪೋಟೋ, ವಿಡಿಯೋಗಳನ್ನು ರಹಸ್ಯವಾಗಿ ತೆಗೆದುಕೊಳ್ಳುತ್ತಿದ್ದಳು. ಹಿಡನ್ ಕ್ಯಾಮರಾ, ಮೊಬೈಲ್ ಸ್ಕ್ರೀನ್ ರೆಕಾರ್ಡರ್, ಮೊಬೈಲ್ ಬಳಸಿ ಪೋಟೋ, ವಿಡಿಯೋ ತೆಗೆದುಕೊಳ್ಳುತ್ತಿದ್ದಳು. ಬಳಿಕ ಸಾರ್ವಜನಿಕ ಅವಮಾನ, ಮುಜುಗರ, ವೃತ್ತಿಗೆ ತೊಂದರೆ, ರೇಪ್ ಕೇಸ್ ಹಾಕಿದರೇ, ಎದುರಾಗುವ ಕಾನೂನಿನ ಸಂಕಷ್ಟದಿಂದ ಬಚಾವ್ ಆಗಲು ಅಧಿಕಾರಿಗಳು ಮಹಿಳೆಯು ಕೇಳಿದ್ದಷ್ಟು ಹಣ ಕೊಟ್ಟು ಸುಮ್ಮನಾಗುತ್ತಿದ್ದರು.
ಒಮ್ಮೆ ಓರ್ವ ಐಪಿಎಸ್ ಅಧಿಕಾರಿಯನ್ನು ಹೋಟೇಲ್ಗೆ ಆಹ್ವಾನಿಸಿದ್ದಾಳೆ. ಬಳಿಕ ತನ್ನ ಬಟ್ಟೆಯನ್ನು ತಾನೇ ಬಿಚ್ಚಿಕೊಂಡು, ಸೀಕ್ರೆಟ್ ಆಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಬಳಿಕ ಈ ವಿಡಿಯೋವನ್ನು ಬ್ಲಾಕ್ ಮೇಲ್ ಮಾಡಿ, ಹಣ ವಸೂಲಿಗೆ ಬಳಸಿಕೊಂಡಿದ್ದಾಳೆ.
ಮತ್ತೊಂದು ಕೇಸ್ನಲ್ಲಿ ಹಿರಿಯ ಅಧಿಕಾರಿಯ ಪತ್ನಿಯೇ ಈ ಮಹಿಳೆಗೆ ಹಣ ನೀಡಿ, ಪತಿಯ ವಿರುದ್ಧ ರೇಪ್ ಕೇಸ್ ದಾಖಲಿಸದಂತೆ ತಡೆದಿದ್ದಾರೆ. ಈ ಮಹಿಳೆಯು ಮುಂಬೈ, ಥಾಣೆ, ಪುಣೆ, ನಾಸಿಕ್ ನಲ್ಲಿ ಇದೇ ರೀತಿ ಅನೇಕರಿಗೆ ಬ್ಲಾಕ್ ಮೇಲ್, ಹಣ ವಸೂಲಿ ಮಾಡಿದ್ದಾಳೆ. ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಮೂವರು ಡಿಸಿಪಿಗಳು, ಅಬಕಾರಿ ಅಧಿಕಾರಿಗಳು, ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ಗಳು, ಎಸಿಗಳು ಕೂಡ ಈಕೆಯ ಬಲೆಗೆ ಬಿದ್ದು ಇಂಗು ತಿಂದ ಮಂಗನಂತಾಗಿದ್ದಾರೆ.
2016ರಲ್ಲಿ ತಾನೊಬ್ಬ ಕ್ರೈಮ್ ಬ್ರಾಂಚ್ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಥಾಣೆಯಲ್ಲಿ ಹಣ ವಸೂಲಿಗೆ ಯತ್ನಿಸಿದ್ದಳು. ಹಿಂದೊಮ್ಮೆ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದಳು. ಆದರೂ, ಹೊಸ ಹೆಸರು, ಹೊಸ ವೇಷದಲ್ಲಿ ಹನಿಟ್ರ್ಯಾಪ್ ಮಾಡುವುದನ್ನು ಮುಂದುವರಿಸಿದ್ದಾಳೆ. ಪೊಲೀಸ್ ಅಧಿಕಾರಿಗಳು ಗೊತ್ತಿದ್ದೋ, ಗೊತ್ತಿಲ್ಲದೆಯೋ ಈಕೆಯ ಬಲೆಗೆ ಬಿದ್ದು, ಈಗ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಇಬ್ಬರು ಎಸಿಪಿಗಳು ದಾಖಲಿಸಿರುವ ಕೇಸ್ ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಹಿಳೆ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಳು. ಬಳಿಕ ಬಾಂಬೆ ಹೈಕೋರ್ಟ್ ನಿಂದ ಮಧ್ಯಂತರ ರಕ್ಷಣೆಯನ್ನು ಪಡೆದಿದ್ದಾಳೆ. ಈಕೆಯ ವಿರುದ್ಧದ ಬೇರೇ ಬೇರೆ ಕೇಸ್ಗಳ ಬಗ್ಗೆ ತನಿಖೆ ನಡೆಯುತ್ತಿದೆ. ಈಕೆಯಿಂದ ತೊಂದರೆ ಅನುಭವಿಸಿದವರು, ಮುಂದೆ ಬಂದು ಪೊಲೀಸರಿಗೆ ದೂರು ನೀಡುವುದು ಬಾಕಿ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ