/newsfirstlive-kannada/media/post_attachments/wp-content/uploads/2024/12/Mandya-Malavalli-Road-Accident.jpg)
ಮಂಡ್ಯ: ಇವತ್ತು ಇಡೀ ರಾಜ್ಯಕ್ಕೆ ಕರಾಳ ಶನಿವಾರವೇ ಆಗಿದೆ. ನೆಲಮಂಗಲದಲ್ಲಿ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ್ದಾರೆ. ಈ ಕರಾಳ ಘಟನೆಯ ಜೊತೆಗೆ ಮಳವಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಮೂವರು ಸ್ನೇಹಿತರು ದುರಂತ ಅಂತ್ಯ ಕಂಡಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬೋಸೇಗೌಡನದೊಡ್ಡಿಯ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರು-ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊರ್ವನ ಸ್ಥಿತಿ ಗಂಭೀರವಾಗಿದೆ.
ಬೆಂಗಳೂರು ಐಐಟಿ ಕಾಲೇಜಿನ ವಿದ್ಯಾರ್ಥಿಗಳು ವೀಕೆಂಡ್ ಹಿನ್ನೆಲೆಯಲ್ಲಿ ತಲಕಾಡು ಪ್ರವಾಸಕ್ಕೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 209ರಲ್ಲಿ KSRTC ಬಸ್ ಹಿಂದಿಕ್ಕುವ ಭರದಲ್ಲಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ.
ಇದನ್ನೂ ಓದಿ: ನೆಲಮಂಗಲದಲ್ಲಿ ಒಂದೇ ಕುಟುಂಬದ 6 ಮಂದಿ ದುರಂತ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ಕಾರು-ಲಾರಿ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಟೈರ್‌ಗಳು ಬಿಡಿ ಬಿಡಿಯಾಗಿ ಬೇರೆಯಾಗಿವೆ. ಸ್ಥಳದಲ್ಲೇ ಮೂವರು ಪ್ರಾಣ ಬಿಟ್ಟಿದ್ದಾರೆ. ಪ್ರಣವ್, ಆಕಾಶ್, ಆದರ್ಶ್ ಮೃತ ದುರ್ದೈವಿಗಳು. ಪೃಥ್ವಿ ಸ್ಥಿತಿ ಗಂಭೀರವಾಗಿದೆ. ಮಳವಳ್ಳಿ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಮೃತರ ಶವಗಳನ್ನು ಶಿಫ್ಟ್ ಮಾಡಲಾಗಿದೆ. ಗಾಯಾಳು ಪೃಥ್ವಿಗೆ ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೃದಯ ವಿದ್ರಾವಕ ದೃಶ್ಯ!
ಕಾರು-ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕರುಣಾಜನಕ ದೃಶ್ಯ ಕಂಡು ಬಂದಿದೆ. ಅಪಘಾತದ ಸ್ಥಳದಲ್ಲಿ ಗಾಯಗೊಂಡಿದ್ದ ಪೃಥ್ವಿ, ಮೃತ ಸ್ನೇಹಿತನ ಕೈ ಹಿಡಿದು ಕಣ್ಣೀರು ಹಾಕುತ್ತಿದ್ದ. ರಕ್ತದ ಮಡುವಿನಲ್ಲೂ ಮೃತ ಸ್ನೇಹಿತನ ನೆನೆದು ಗೋಳಾಡುತ್ತಿದ್ದ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ