/newsfirstlive-kannada/media/post_attachments/wp-content/uploads/2025/04/Kalburgi-Road-Accident-2.jpg)
ಕಲಬುರಗಿ: ಅವರೆಲ್ಲರೂ ಒಂದೇ ಕುಟುಂಬದವರು. ನಿನ್ನೆ ರಾತ್ರಿ ಮಿನಿ ಬಸ್‌ನಲ್ಲಿ ದರ್ಗಾ ದರ್ಶನ ಪಡೆಯಲು ಹೊರಟಿದ್ದರು. ಆದ್ರೆ ಮಾರ್ಗ ಮಧ್ಯೆ ಜವರಾಯ ಕಾದು ಕುಳಿತ್ತಿದ್ದನೆಂಬ ಸಣ್ಣ ಸುಳಿವು ಸಿಗದೆ ನಿದ್ರೆಗೆ ಜಾರಿದ್ದಾರೆ. ನಸುಕಿನ ಜಾವ ಯಮಸ್ವರೂಪಿಯಾಗಿ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, 11 ಜನ ಗಂಭೀರ ಗಾಯಗೊಂಡಿದ್ದಾರೆ.
ನುಜ್ಜು ಗುಜ್ಜಾಗಿರೋ ಮಿನಿ ಬಸ್. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಸಮೀಪ ಈ ಭೀಕರ ಅಪಘಾತ ನಡೆದಿದೆ. ಒಂದೇ ಕುಟುಂಬದವರು ಪ್ರತಿ ವರ್ಷದಂತೆ ಈ ವರ್ಷವೂ ರಂಜಾನ್ ಹಬ್ಬ ಮುಗಿದ ಬಳಿಕ ಕಲಬುರಗಿಯ ಐತಿಹಾಸಿಕ ಖಾಜಾ ಬಂದೇ ನವಾಜ್ ದರ್ಗಾ ದರ್ಶನ ಪಡೆಯಲು ಹೋಗಿದ್ದರು.
ನಿನ್ನೆ ರಾತ್ರಿ 11 ಗಂಟೆಗೆ ಇಡೀ ಕುಟುಂಬ ಸೇರಿ 31 ಜನ ಮಿನಿ ಬಸ್‌ನಲ್ಲಿ ಬಾಗಲಕೋಟೆಯಿಂದ ಕಲಬುರಗಿ ಕಡೆ ಹೊರಟಿದ್ದಾರೆ. ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಸಮೀಪದ ಮೋರಾರ್ಜಿ ದೇಸಾಯಿ ವಸತಿ ಶಾಲೆ ಬಳಿ ರಸ್ತೆ ಬದಿ ಲಾರಿಯೊಂದು ಪಂಕ್ಚರ್ ಆಗಿ ನಿಂತಿತ್ತು. ನಸುಕಿನ ಜಾವ 3:45- 4 ಗಂಟೆ ಸುಮಾರಿಗೆ ರಸ್ತೆ ಬದಿ ನಿಂತಿದ್ದ ಲಾರಿಗೆ ಮಿನಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಿನಿ ಬಸ್‌ನಲ್ಲಿದ್ದ 52 ವರ್ಷದ ಮೈಬೂಬ್ ಗದ್ದಕೇರಿ, 2 ವರ್ಷದ ಬಾಲಕ ವಾಜೀದ್, 53 ವರ್ಷದ ಮೈಬೂಬ್ ಬಿ, 13 ವರ್ಷದ ಪ್ರಿಯಾಂಕಾ ಸೇರಿದಂತೆ 5 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನಿದ್ರೆ ಮಂಪರಿನಲ್ಲಿದ್ದ ಮಿನಿ ಬಸ್ ಚಾಲಕ ರಸ್ತೆ ತಿರುವಿನಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಮಿನಿಬಸ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಹಾಗೂ ಅದೇ ಬಡಾವಣೆಯ ಪ್ರಿಯಾಂಕಾ ಎಂಬ ಬಾಲಕಿ ಸೇರಿದಂತೆ 5 ಜನ ಮೃತಪಟ್ಟಿದ್ದಾರೆ. ಗಾಯಗೊಂಡಿರುವ 11 ಜನರನ್ನ ಕಲಬುರಗಿಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತದೇಹಗಳನ್ನ ಜೇವರ್ಗಿ ತಾಲ್ಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. ಐವರು ಭಕ್ತರು ನಿಧನ
ಪವಿತ್ರ ರಂಜಾಜ್ ಹಬ್ಬದ ಬಳಿಕ ಐತಿಹಾಸಿಕ ಖಾಜಾ ಬಂದೇ ನವಾಜ್ ದರ್ಗಾದ ದೇವರ ದರ್ಶನಕ್ಕೆ ಹೊರಟವರು ಮಸಣಕ್ಕೆ ಸೇರಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಅಡ್ಡೂರು ಶ್ರೀನಿವಾಸುಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೇಲೋಗಿ ಮತ್ತು ಸೊನ್ನ ಕ್ರಾಸ್ ಬಳಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರ್ವಿಸ್ ರಸ್ತೆ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ