/newsfirstlive-kannada/media/post_attachments/wp-content/uploads/2024/11/WINTER-SEASON.jpg)
ಕಾರ್ತಿಕ ಮಾಸದ ಕಿರುಚಳಿ ಆರಂಭಗೊಂಡಿದೆ. ಚಳಿಗಾಲದ ಹೊಸ್ತಿಲಲ್ಲಿ ಈಗ ನಾವು ಇದ್ದೇವೆ. ಇನ್ನೇನು ಕೆಲವೇ ದಿನಗಳು, ದಿನಗಳು ಚಿಕ್ಕದಾಗಿ ರಾತ್ರಿ ದೊಡ್ಡದಾಗಿ, ಕೊರೆಯುವ ಚಳಿಗೆ ನಾವು ಗಢಗಢ ನಡುಗಲು ಶುರು ಮಾಡುತ್ತೇವೆ. ಆದ್ರೆ ಕಾರ್ತಿಕದ ಈ ಕಿರುಚಳಿ ಆರಂಭದಲ್ಲಿಯೇ ಒಂದು ಎಚ್ಚರಿಕೆಯನ್ನು ಕೊಡುತ್ತದೆ. ನಾನು ಕಾಲಿಟ್ಟಾಯ್ತು. ಬೆಚ್ಚಗೆ ಇರಲು ಬೇಕಾದ ತಯಾರಿಯನ್ನು ಮಾಡಿಕೊಳ್ಳಿ ಎಂದು ಹೇಳುತ್ತದೆ. ಭಾರತ ಅಂದ್ರೆ ಪರಂಪರೆಗಳ, ಪದ್ಧತಿಗಳ, ಸಾವಿರಾರೂ ರೂಢಿಗಳ ತವರು. ನಮ್ಮ ಹಿರಿಯರು ಕಾಲಗಳಿಗೆ ತಕ್ಕಂತೆ, ಋತುಗಳ ತಕ್ಕಂತೆ ಹಬ್ಬ ಹರಿದಿನಗಳನ್ನು ಮಾಡಿ ಹೋಗಿದ್ದಾರೆ. ಅವುಗಳಿಂದ ನಾವು ಕಲಿಯುವುದು ಹಾಗೂ ಕಾಲಗಳನ್ನು ಅವುಗಳ ತಕ್ಕಂತೆ ಕಳೆಯುವುದು ಬಹಳಷ್ಟು ಇದೆ.
ಆಧುನಿಕ ಜಗತ್ತಿನಲ್ಲಿ ಬದುಕುತ್ತಿರುವ ನಾವು ಹೆಚ್ಚು ಹೆಚ್ಚು ಕಾಲಕ್ಕೆ ತಕ್ಕಂತೆ ನಮ್ಮ ಬಟ್ಟೆಗಳನ್ನು ಬದಲಾಯಿಸುವುದಷ್ಟೇ ಕಲಿತಿದ್ದೇವೆ. ಇಷ್ಟಾದರೆ ಸಾಲದು. ಕಾಲಕ್ಕೆ ತಕ್ಕಂತೆ ನಮ್ಮ ಜೀವನ ಶೈಲಿಯಲ್ಲಿಯೂ ಕೂಡ ಬದಲಾಗಬೇಕು. ಚಳಿಗಾಲ ಅಂದ್ರೆ ಕೇವಲ ಮೈಯನ್ನು ಬೆಚ್ಚಗೆ ಇಟ್ಟುಕೊಳ್ಳುವುದು ಮಾತ್ರವಲ್ಲ ಅಂತರಂಗಕ್ಕೂ ಕೂಡ ಒಂದು ಬೆಚ್ಚನೆಯ ಹೊದಿಕೆ ಬೇಕು ಅದಕ್ಕಾಗಿಯೇ ಚಳಿಗಾಲದಲ್ಲಿ ಅನೇಕ ಹಬ್ಬ ಹರಿದಿನಗಳು ಬರುತ್ತವೆ.
ಇದನ್ನೂ ಓದಿ:ಇದು ಜಗತ್ತಿನ ಅತ್ಯಂತ ಶ್ರೀಮಂತ ಶ್ವಾನ; ಇದರ ಬಳಿ ಇರುವ ಆಸ್ತಿ ಎಷ್ಟು ಸಾವಿರ ಕೋಟಿ ಗೊತ್ತಾ?
ಚಳಿಗಾಲದ ಆರಂಭವನ್ನು ನಾವು ದೀಪ ಬೆಳಗುವುದರ ಮೂಲಕ ಅಂದ್ರೆ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುವುದರ ಮೂಲಕ ಶುರು ಮಾಡುತ್ತೇವೆ. ಇಂತಹ ಹಬ್ಬಗಳು ನಮ್ಮ ತನು ಮನಗಳನ್ನು ಬೆಳಗುತ್ತವೆ. ಬೆಚ್ಚಗುಳಿಸುತ್ತವೆ. ದೀಪಗಳನ್ನು ಮನೆ ತುಂಬ ಹಚ್ಚಿ ಇಡುವುದು ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲ ಕಾರ್ತಿಕದ ಕಿರುಚಳಿಯನ್ನು ಸಮರ್ಥವಾಗಿ ಎದುರಿಸಲು ಕೂಡ ಹೌದು.
ಇನ್ನು ಚಳಿಗಾಲದಲ್ಲಿ ನಮ್ಮ ಆಹಾರ ಪದ್ಧತಿಗಳು ಕೂಡ ಬದಲಾಗಬೇಕು. ಅದಕ್ಕೆಂದೆ ಆಯುರ್ವೇದ ಚಳಿಗಾಲದಲ್ಲಿ ನಮ್ಮ ನಿತ್ಯ ಚಟುವಟಿಕೆಗಳು ಹೇಗಿರಬೇಕು ಎಂಬುದರ ಸ್ಪಷ್ಟನೆಯನ್ನು ನೀಡುತ್ತದೆ. ಪ್ರಮುಖವಾಗಿ ಈ ಚಳಿಗಾಲದಲ್ಲಿ ನಮ್ಮ ದೇಹ ಹೆಚ್ಚು ತಾಪಮಾನ ಬೇಡುತ್ತದೆ. ಹೆಚ್ಚು ಬೆಚ್ಚಗೆ ಇರಲು ಬಯಸುತ್ತದೆ. ಹೀಗಾಗಿಯೇ ಚಳಿಗಾಲದ ಸಮಯದಲ್ಲಿ ನಾವು ಸೇವಿಸುವ ಆಹಾರದಲ್ಲಿ ಹೆಚ್ಚು ಹೆಚ್ಚು ದಾಲ್ಚಿನ್ನಿ (ಚಕ್ಕೆ), ಲವಂಗ, ಶುಂಠಿ, ಅರಿಶಿನ ಬಳಸಲು ಹೇಳಲಾಗುತ್ತದೆ. ಇವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಚಳಿಗಾಲದಲ್ಲಿ ಉಂಟಾಗುವ ಇನ್ಫೆಕ್ಷನ್ಗಳಿಂದ ನಮ್ಮನ್ನು ಕಾಪಾಡುತ್ತವೆ.
ಇದನ್ನೂ ಓದಿ:ಲೆಜೆಂಡರಿ ಫ್ಯಾಷನ್ ಡಿಸೈನರ್ ರೋಹಿತ್ ಬಾಲ್ ನಿಧನ.. ಭಾವನಾತ್ಮಕ ಗೌರವ ಸೂಚಿಸಿದ ಸೋನಮ್ ಕಪೂರ್
ಚಳಿಗಾಲದ ಸಮಯ ನಮ್ಮನ್ನು ಶ್ಲೋ ಡೌನ್ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೆಚ್ಚು ಉತ್ಸಾಹ, ಉಲ್ಲಾಸತನ ಈ ಸಮಯದಲ್ಲಿ ಕಂಡು ಬರುವುದು ಕಡಿಮೆ. ಹೀಗಾಗಿಯೇ ಚಳಿಗಾಲದಲ್ಲಿ ಹೆಚ್ಚು ಹೆಚ್ಚು ಉತ್ಸಾಹದಿಂದ ಇರಬೇಕಾದಲ್ಲಿ ಧ್ಯಾನ, ಯೋಗ, ದಿನನಿತ್ಯ ಮಾಡುವಂತಹ ಸರಳ ವ್ಯಾಯಾಮ ಮಾಡುವುದರಿಂದ ದೇಹ ಹಾಗೂ ಮನುಸ್ಸುಗಳು ಸದೃಢಗೊಳ್ಳುತ್ತವೆ. ಆಮೇಲೆ ನಿತ್ಯ ಬೆಳಗ್ಗೆ ಸುರಿಯುತ್ತಿರುವ ಇಬ್ಬನಿಯಲ್ಲಿ ಸಣ್ಣದೊಂದು ವಾಕ್ ಮಾಡಿ. ನಿಸರ್ಗವನ್ನು ಗಮನಿಸಿ. ಸುತ್ತಲೂ ದಟ್ಟವಾಗಿ ಹರಡಿರುವ ಮಂಜು, ಉದುರಿ ಬೀಳುತ್ತಿರುವ ಮರದ ಎಲೆಗಳು, ಸಣ್ಣಗೆ ಸುಳಿದು ಹೋಗುವ ತಂಗಾಳಿ. ಇವೆಲ್ಲವನ್ನೂ ಗಮನಿಸುವುದರಿಂದ ನಮ್ಮನ್ನು ನಾವು ಪ್ರಕೃತಿಯೊಂದಿಗೆ ಸಂಪರ್ಕ ಬೆಳಸಿಕೊಂಡಂತೆ ಆಗುತ್ತದೆ. ಇದು ಮನಸ್ಸನ್ನು ಮತ್ತಷ್ಟು ಉಲ್ಲಾಸಗೊಳಿಸುತ್ತವೆ.
ಇನ್ನು ಚಳಿಗಾಲದಲ್ಲಿ ನಮ್ಮ ಬೆಡ್ರೂಮ್ಗಳನ್ನು ಕೂಡ ಅಷ್ಟೇ ಸುಂದರವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಚಳಿಗಾಲಕ್ಕೆ ಹೊಂದುವ ಬಣ್ಣವನ್ನು ಗೋಡೆಗೆ ಹಚ್ಚಬೇಕು. ನಿಮ್ಮ ರೂಮ್ನಲ್ಲಿ ಸದಾ ಒಂದು ಮೇಣದಬತ್ತಿ ಬೆಳಗುತ್ತಿರಲಿ, ಲೇಯರ್ ಬ್ಲ್ಯಾಂಕೆಟ್ಗಳನ್ನು ಹೆಚ್ಚು ಬಳಸಿ. ಹೀಗೆ ನಮ್ಮ ಜೀವನ ಶೈಲಿಯನ್ನು ಸಾಂಪ್ರದಾಯಿಕ ಹಾಗೂ ಪುರಾತನ ಶೈಲಿಯೊಡನೆ ಬೆರೆಸಿಕೊಂಡಲ್ಲಿ ನಮ್ಮ ಚಳಿಗಾಲ ಅತ್ಯಂತ ರಮ್ಯವಾಗಿ ದಾಟಿಹೋಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ