/newsfirstlive-kannada/media/post_attachments/wp-content/uploads/2025/05/Bangalore_Techie_2.jpg)
ಅವರದ್ದು 7 ವರ್ಷಗಳ ಹಿಂದೆ ನಡೆದಿದ್ದ ಮದುವೆ. ಆದ್ರೆ ಸಂಸಾರದ ರಾಗ, ತಾಳ ತಪ್ಪಿದ ಮೇಲೆ ನಾಲ್ಕು ವರ್ಷಗಳಿಂದ ಕೋರ್ಟ್‌ನಲ್ಲಿ ಡಿವೋರ್ಸ್ ಕೇಸ್ ನಡೀತಿತ್ತು. ಹೆಂಡ್ತಿ ಗಂಡನಿಗೆ ಕೋಟಿ ಕೋಟಿ ಜೀವನಾಂಶದ ಬೇಡಿಕೆ ಇಟ್ಟಿದ್ದಳು. ಆದ್ರೆ ಪತ್ನಿ ವಿರುದ್ಧ ತಾನೇ ಡಿಟೆಕ್ಟಿವ್ ಆದ ಗಂಡ, ರೋಚಕವಾಗಿ ಡಿವೋರ್ಸ್ ಕೇಸ್‌ನ ಗೆದ್ದಿದ್ದಾನೆ. ಕಾನೂನು ಹೋರಾಟದ ದುಡ್ಡನ್ನೂ ಆಕೆಯಿಂದಾನೇ ಪಡೆದಿದ್ದಾನೆ.
ಗಂಡನ ಮೇಲೆ ಸುಳ್ಳು ಕೇಸ್ ಹಾಕಿ, ಕೋಟಿ ಕೋಟಿ ಜೀವನಾಂಶಕ್ಕೆ ಬೇಡಿಕೆ ಇಟ್ಟು, ಗಂಡನನ್ನ ಮಾನಸಿಕ ಹಿಂಸೆಗೆ ತಳ್ಳಿದ ಪತ್ನಿಗೆ ಕೋರ್ಟ್ ಪಾಠ ಕಲಿಸಿದ ಕೇಸ್ ಇದು. ಈ ಕೇಸ್‌ನ ಕ್ಲೈಮ್ಯಾಕ್ಸ್‌ನಲ್ಲಿ ಗೆದ್ದಿದ್ದು ಗಂಡ.
ಗಂಡನ ಹೆಸರು ಅಭಯ್ (ಹೆಸರು ಬದಲಾಯಿಸಲಾಗಿದೆ). ಹೆಂಡತಿ ಹೆಸರು ಸುನೀತಾ (ಹೆಸರು ಬದಲಾಯಿಸಲಾಗಿದೆ). ಈ ಕತೆ ಶುರುವಾಗೋದು 2018ರಲ್ಲಿ. ಬೆಂಗಳೂರಲ್ಲಿ ಟೆಕ್ಕಿಯಾಗಿದ್ದ, ತಿಂಗಳಿಗೆ 2 ಲಕ್ಷ ಸಂಬಳ ಪಡೀತಿದ್ದ ಅಭಯ್, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸುನೀತಾಳನ್ನ ಮದುವೆಯಾಗಿದ್ದ. ಆಕೆಯೂ ಟೆಕ್ಕಿನೇ. ಎರಡೂ ಮನೆಯವರು ಖರ್ಚೆಲ್ಲಾ ಹಾಕಿ ಮದುವೆ ಮಾಡಿದರು.
ಆದ್ರೆ ಮದುವೆಯಾದ ಕೆಲವೇ ದಿನದಲ್ಲಿ ಪತ್ನಿಯ ಜೀವನದಲ್ಲಿ ಆಕೆಯ ಹಳೇ ಬಾಯ್‌ಫ್ರೆಂಡ್ ಇನ್ನೂ ಇರೋದು ಅಭಯ್‌ಗೆ ಗೊತ್ತಾಗಿತ್ತು. 6 ತಿಂಗಳ ಹಿಂದೆಯೇ ಬ್ರೇಕಪ್ ಆಗಿದೆ ಅಂತ ಪತ್ನಿ ಹೇಳಿದ್ರೂ ಅವ್ರಿಬ್ಬರ ನಡುವೆ ಹಣದ ಟ್ರಾನ್ಸಾಕ್ಷನ್ ಇದ್ದಿದ್ದು ಬಯಲಾಗಿತ್ತು. ಪದೇ ಪದೇ ತನ್ನನ್ನ ಹಳೇ ಬಾಯ್‌ಫ್ರೆಂಡ್‌ಗೆ ಪತ್ನಿ ಕಂಪೇರ್ ಮಾಡ್ತಿದ್ದಿದ್ದು ಅಭಯ್‌ಗೆ ಜೀರ್ಣಿಸಿಕೊಳ್ಳೋಕೆ ಆಗಿರ್ಲಿಲ್ಲ. ಹೀಗಾಗಿ 2021ರಲ್ಲಿ ಪತ್ನಿ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಿ ಅಭಯ್ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದ.
ಪತ್ನಿ ಕೇಳಿದ್ದು 3 ಕೋಟಿ ಜೀವನಾಂಶ, ತಿಂಗಳಿಗೆ ₹60 ಸಾವಿರ
ಆದ್ರೆ ಪತ್ನಿ ಸುನೀತಾ ಬರೋಬ್ಬರಿ 3 ಕೋಟಿ ಜೀವನಾಂಶ ಕೇಳಿದ್ದಳು. ದಂಪತಿಗೆ ಯಾವುದೇ ಮಕ್ಕಳಿಲ್ಲ. ಆದ್ರೂ ಆಕೆ ಕೇಳಿದ್ದು ಬರೋಬ್ಬರಿ 3 ಕೋಟಿ ಜೀವನಾಂಶ. ತಿಂಗಳ ಖರ್ಚಿಗೆ 60 ಸಾವಿರ ರೂಪಾಯಿ.
ಪತ್ನಿ ಕೋರ್ಟ್‌ನಲ್ಲಿ ತನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡ್ತಿದ್ದ ಹಾಗೆ, ಅಭಯ್ ತಾನೇ ಪತ್ನಿಯ ವಿರುದ್ಧ ಸಾಕ್ಷಿ ಸಂಗ್ರಹಕ್ಕೆ ತನಿಖೆಗೆ ಇಳಿದಿದ್ದ. ತಾನೇ ಜಾಬ್ ಇಂಟರ್‌ವ್ಯೂವರ್ ತರ ಪೋಸ್ ಕೊಟ್ಟು ಪತ್ನಿಯೊಂದಿಗೆ ಗುರುತು ಮರೆ ಮಾಚಿ ಝೂಮ್ ಮೀಟಿಂಗ್ ಮಾಡಿದ್ದ.
ಆಗ ಆಕೆ ಸತ್ಯ ಬಾಯ್ಬಿಟ್ಟಿದ್ದಳು. ನನ್ನ ಮೊದಲ ಮದುವೆ ಮುಗಿದು ಹೋಗಿದೆ. ನಾನೀಗ ಬೇರೊಬ್ಬನನ್ನ ಮದುವೆಯಾಗಿದ್ದೀನಿ ಅಂದಿದ್ದಳು. ಇದನ್ನ ಕೇಳ್ತಿದ್ದಂತೆ ಪತಿ ಅಭಯ್‌ಗೆ ಪತ್ನಿ ವಿರುದ್ಧ ಮಾಹಿತಿಯೇನೋ ಸಿಕ್ಕಿತು. ಆದ್ರೆ ಸಾಕ್ಷಿ ಬೇಕಲ್ಲ. ಹೀಗಾಗಿ ಆರ್‌ಟಿಐಗೆ ಅರ್ಜಿ ಸಲ್ಲಿಸಿದ್ದ. ಇದೇ ಆರ್‌ಟಿಐ ಮೂಲಕ ಮದುವೆ ದಾಖಲೆ, ಪ್ಯಾನ್ ಡಿಟೇಲ್ಸ್, ಟ್ರಾವೆಲ್ ಹಿಸ್ಟರಿ ಎಲ್ಲಾ ಪಡ್ಕೊಂಡಿದ್ದ. ಅವೆಲ್ಲವೂ 2023ರ ಮಾರ್ಚ್‌ನಲ್ಲೇ ಸುನೀತಾ ಬೇರೊಬ್ಬನನ್ನ ಮದುವೆಯಾಗಿರೋ ಸಾಕ್ಷಿ ನೀಡಿದವು. ಅದನ್ನೇ ಅಭಯ್ ಕೋರ್ಟ್‌ಗೂ ಸಲ್ಲಿಕೆ ಮಾಡಿದ್ದ.
ಪತ್ನಿಯ ಪ್ರತ್ಯಾರೋಪ
ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳ, ಗರ್ಭಪಾತಕ್ಕೆ ಬಲವಂತ, ಕೆಲಸ ಬಿಡಲು ಒತ್ತಾಯ, ಕಪಾಳ ಮೋಕ್ಷ ಮಾಡಿದ್ದು, 10 ಲಕ್ಷ ಹಣಕ್ಕೆ ಡಿಮ್ಯಾಂಡ್, 30 ಸಾವರಿನ್ ಚಿನ್ನಕ್ಕೆ ಒತ್ತಾಯ ಮಾಡಿದ್ದ ಅಂತ ಸಾಲು ಸಾಲು ಆರೋಪ ಮಾಡಿದ್ದಳು.
ಇದನ್ನೂ ಓದಿ:IPL ಟೀಮ್ ಓನರ್ ಇಂದ ತಿಮ್ಮಪ್ಪನಿಗೆ ಭಾರೀ ಮೌಲ್ಯದ ಚಿನ್ನ, ವಜ್ರ ಖಚಿತ ಆಭರಣಗಳು ದಾನ
ಆದ್ರೆ ಕೋರ್ಟ್ ಈ ಕೇಸ್‌ನಲ್ಲಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿತು. ಪತ್ನಿ ಏನೇ ಆರೋಪ ಮಾಡಿದ್ರೂ ಪತಿ ಕೊಟ್ಟಿದ್ದ ಸಾಕ್ಷಿಗಳನ್ನ ಪರಿಗಣಿಸಿದ ಕೋರ್ಟ್, ಡಿವೋರ್ಸ್ ಡಿಕ್ರಿಯನ್ನ ಪಾಸ್ ಮಾಡ್ತು. ಪತ್ನಿ ಸುನೀತಾಳಿಂದ ಅಭಯ್‌ಗೆ ಡಿವೋರ್ಸ್ ಕೊಡಿಸಿತು. ಜೊತೆಗೆ ಪತ್ನಿಗೆ ಯಾವುದೇ ಜೀವನಾಂಶ ಕೊಡೋದು ಬೇಡ ಅಂತ ಆದೇಶ ನೀಡಿತು. ಅಲ್ಲದೆ 4 ವರ್ಷಗಳ ಕಾಲ ಕಾನೂನು ಹೋರಾಟಕ್ಕೆ ಪತಿ ಅಭಯ್‌ಗೆ ಖರ್ಚಾಗಿದ್ದ 30 ಸಾವಿರ ರೂಪಾಯಿಯನ್ನ ಪತ್ನಿಯೇ ನೀಡಬೇಕು ಅಂತ ನಿರ್ದೇಶನ ನೀಡಿದೆ.
ಏನೇಹೇಳಿ.. ಇದೊಂದು ಲ್ಯಾಂಡ್ ಮಾರ್ಕ್ ಜಡ್ಜ್‌ಮೆಂಟ್. ಕಾನೂನಿನಲ್ಲಿ ತಮಗೆ ನ್ಯಾಯ ಕೊಡಿಸಲು ಇರೋ ಸೆಕ್ಷನ್‌ಗಳನ್ನೇ ಬಳಸಿಕೊಂಡು ಪತಿ ವಿರುದ್ಧ ದೌರ್ಜನ್ಯ ಮಾಡ್ತಿದ್ದ, ಕಾನೂನನ್ನ ದುರ್ಬಳಕೆ ಮಾಡ್ಕೊಳ್ತಿದ್ದ ಮಹಿಳೆಗೆ ಈ ಕೇಸ್‌ನಲ್ಲಿ ಕೌಟುಂಬಿಕ ನ್ಯಾಯಾಲಯದ ಜಡ್ಜ್ ಸರಿಯಾದ ಪಾಠ ಮಾಡಿದ್ದಾರೆ. ಕಾನೂನು ಇರೋದು ನಿಮ್ಮ ರಕ್ಷಣೆಗೆ, ದುರ್ಬಳಕೆ ಮಾಡಿಕೊಳ್ಳೋದಕ್ಕಲ್ಲ ಅನ್ನೋ ಸಂದೇಶ ನೀಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ