/newsfirstlive-kannada/media/post_attachments/wp-content/uploads/2025/02/BJP-WINNING-FACTORS.jpg)
27 ವರ್ಷ, ಬರೋಬ್ಬರಿ 27 ವರ್ಷ ಬೇಕಾಯ್ತು ಬಿಜೆಪಿಗೆ ದೆಹಲಯಲ್ಲಿ ಮತ್ತೆ ಅಧಿಕಾರ ಗಳಿಸಲು. 1993ರಲ್ಲಿ ದೆಹಲಿಯಲ್ಲಿ ಗೆದ್ದ ಬಿಜೆಪಿ 1998ರಷ್ಟರಲ್ಲಿ ಒಟ್ಟು ಮೂರು ಜನ ಮುಖ್ಯಮಂತ್ರಿಗಳನ್ನು ಬದಲಾಯಿಸುವ ಮೂಲಕ ಯಡವಟ್ಟು ಮಾಡಿಕೊಂಡು ಅಧಿಕಾರ ಕಳೆದುಕೊಂಡಿತ್ತು. ಅದಾದ ಮೇಲೆ ದೆಹಲಿಯಲ್ಲಿ ದರ್ಬಾರ್ ನಡೆಸಲು ಬಿಜೆಪಿಗೆ ಆಗಿರಲೇ ಇಲ್ಲ. ಮಾಜಿ ವಿದೇಶಾಂಗ ಸಚಿವೆ ದಿವಂಗತ ಸುಸ್ಮಾ ಸ್ವರಾಜ್ ಕೇವಲ 52 ದಿನಗಳ ಕಾಲ ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ರಾಜೀನಾಮೆ ನೀಡ ಆಚೆ ಬಂದಿದ್ದರು. ಅದಾದ ಬಳಿಕ 1998ರಿಂದ 2003ರವರೆಗೂ ಕಾಂಗ್ರೆಸ್ನ ಶೀಲಾ ದೀಕ್ಷಿತ್ ದರ್ಬಾರ್. ಅದಾದ ಬಳಿಕ ಆಮ್ ಆದ್ಮಿ ಪಕ್ಷದ ದರ್ಬಾರ್. ಇವೆಲ್ಲಾ ಕಾಲಖಂಡವನ್ನು ದಾಟಿ ಕೊನೆಗೂ ದೆಹಲಿಯ ಜನರ ಹೃದಯದಲ್ಲಿ 27 ವರ್ಷಗಳ ಬಳಿಕ ಕಮಲ ಅರಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಸದ್ಯ ದೆಹಲಿಯಲ್ಲಿ ಗೆಲುವಿನ ಪತಾಕೆ ಹಾರಿಸಿರುವ ಬಿಜೆಪಿ ಗೆಲುವನ್ನು ಪ್ರಧಾನಿ ಮೋದಿ ಅಭಿವೃದ್ಧಿಯ ಗೆಲುವಿಗೆ ಹೋಲಿಸಿದ್ದಾರೆ. ದೆಹಲಿಯ ಚುನಾವಣಾ ಫಲಿತಾಂಶಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿಯವರು. ಜನಶಕ್ತಿಯೇ ಅತಿಮುಖ್ಯ, ಶ್ರೇಷ್ಠ ಎಂದಿದ್ದಾರೆ. ಅಭಿವೃದ್ಧಿ ಗೆದ್ದಿದೆ, ಉತ್ತಮ ಆಡಳಿತಕ್ಕೆ ಜಯ ಸಿಕ್ಕಿದೆ. ಈ ಐತಿಹಾಸಿಕ ದೆಹಲಿ ಅಸೆಂಬ್ಲಿ ಗೆಲುವನ್ನು ನೀಡಿದ ನನ್ನ ದೆಹಲಿ ಸಹೋದರ, ಸಹೋದರಿಯರಿಗೆ ಶಿರಬಾಗಿ ನಮಿಸುತ್ತೇನೆ. ಈ ಆಶೀರ್ವಾದ ಪಡೆದು ನಾವು ವಿನೀತರಾಗಿದ್ದೇವೆ. ದೆಹಲಿಯನ್ನು ಅಭಿವೃದ್ಧಿ ಮಾಡುವಲ್ಲಿ ಯಾವುದೇ ಅವಕಾಶ ಕೈಬಿಡಲ್ಲ, ಜನರ ಜೀವನದ ಗುಣಮಟ್ಟದ ವೃದ್ಧಿಗೆ ಶ್ರಮಿಸುತ್ತೇವೆ. ವಿಕಸಿತ ಭಾರತದ ನಿರ್ಮಾಣದಲ್ಲಿ ದೆಹಲಿ ಪ್ರಮುಖ ಪಾತ್ರವಹಿಸುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ರ ಬಗ್ಗೆಯೂ ಹೆಮ್ಮೆ ಇದೆ. ಇನ್ನೂ ಮುಂದೆಯೂ ಇನ್ನೂ ಹೆಚ್ಚು ಕೆಲಸ ಮಾಡಿ, ದೆಹಲಿ ಜನರ ಸೇವೆ ಮಾಡ್ತೇವೆ ಎಂದು ಮೋದಿ ಟ್ವಿಟರ್ನಲ್ಲಿ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಕೇಜ್ರಿವಾಲ್ಗೆ ಮಣ್ಣು ಮುಕ್ಕಿಸಿದ ‘ದೈತ್ಯ ವಿಜಯಿ’.. ದೆಹಲಿ ಸಿಎಂ ಆಗುವ ಬಗ್ಗೆ ಪರ್ವೇಶ್ ವರ್ಮಾ ದೊಡ್ಡ ಸುಳಿವು!
ಇನ್ನು ದೆಹಲಿಯಲ್ಲಿ ಬಿಜೆಪಿ 27 ವರ್ಷಗಳ ಬಳಿಕ ಈ ಐತಿಹಾಸಿಕ ವಿಜಯ ದಾಖಲಿಸಲು ಪ್ರಮುಖ 7 ಕಾರಣಗಳು ಇವೆ. ಆ ಕಾರಣಗಳನ್ನು ಒಂದೊಂದಾಗಿ ವಿವರವನ್ನು ನೀಡುತ್ತೇವೆ
1- ಬ್ರ್ಯಾಂಡ್ ಮೋದಿ: ದೆಹಲಿಯಲ್ಲಿ ಈ ಬಾರಿಯೂ ವರ್ಕೌಟ್ ಆಗಿದ್ದು ಮೋದಿ. ಬ್ರ್ಯಾಂಡ್ ಮೋದಿ ಎಂಬ ಹೆಸರು. ಆಮ್ ಆದ್ಮಿ ಪಕ್ಷದ ಒಂದೊಂದು ಪ್ರಮಾದವನ್ನು ಅತ್ಯಂತ ಕಠಿಣವಾಗಿ, ಲೇವಡಿಯಾಗಿ ಜನರ ಮುಂದೆ ಇಡುವಲ್ಲಿ ಮೋದಿ ಯಶಸ್ವಿಯಾದರು. ಅದರ ಜೊತೆಗೆ ಅವರ ವರ್ಚಸ್ಸು ಹಾಗೂ ಈ ಬಾರಿ ಬಜೆಟ್ ಮಂಡನೆಯಿಂದ ಉಂಟಾದ ಧನಾತ್ಮಕ ಪರಿಣಾಮ ಜನರ ಮನಸಲ್ಲಿ ಬಿಜೆಪಿಗೆ ಕಡೆಗೆ ಒಲವು ಮೂಡುವಂತೆ ಮಾಡಿದೆ
2- ಆಪ್ ಭ್ರಷ್ಟಾಚಾರ: ಆಮ್ ಆದ್ಮಿ ಪಕ್ಷ ಅಸ್ತಿತ್ವಕ್ಕೆ ಬಂದಿದ್ದೇ ಕಾಂಗ್ರೆಸ್ ಕಾಲದಘಟ್ಟದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ವಿರೋಧಿಸಿ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಬಹುದೊಡ್ಡ ಭರವಸೆಯನ್ನು ಆಪ್ ಜನರಿಗೆ ನೀಡಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳ ಆಡಳಿತ ನೋಡಿದ್ದ ದೆಹಲಿ ಜನರಿಗೆ ಪರ್ಯಾಯ ಪಕ್ಷವೊಂದರ ಅಗತ್ಯವಿದ್ದಾಗಲೇ ಸ್ವಚ್ಛ ಆಡಳಿತ ನೀಡುವ ಪಕ್ಷವೊಂದು ನಮಗೆ ಸಿಕ್ಕಿದೆ ಎಂದು ದೆಹಲಿ ಜನರು ಎರಡು ಬಾರಿ ಆಮ್ ಆದ್ಮಿ ಪಕ್ಷಕ್ಕೆ ಬಹುಮತ ನೀಡಿ ಗೆಲ್ಲಿಸಿದರು. ಆದ್ರೆ ಆಪ್ ಕೂಡ ಉಳಿದ ಪಕ್ಷಗಳಂತೆಯೇ ಸಾಂಪ್ರದಾಯಿಕ ಪಕ್ಷವಾಗಿ ಬೆಳೆದು ಹೋಯಿತು. ಒಂದೊಂದೇ ಭ್ರಷ್ಟಾಚಾರದಲ್ಲಿ ಸಿಲುಕಿತು. ಸಿಎಂ, ಡಿಸಿಎಂರಿಂದ ಹಿಡಿದು ಅನೇಕ ನಾಯಕರು ಭ್ರಷ್ಟಾಚಾರದ ಆರೋಪದ ಮೇಲೆಯೇ ಜೈಲಿಗೆ ಹೋಗಿ ಬಂದರು. ಲಿಕ್ಕರ್ ಹಗರಣದಿಂದ ಹಿಡಿದು ಹಲವು ಹಗರಣಗಳು ಕೇಜ್ರಿವಾಲ್ ಸರ್ಕಾರದ ಸುತ್ತ ಸುತ್ತಿಕೊಂಡವು. ಇದು ಅದರ ಸೋಲಿಗೆ ಬಿಜೆಪಿ ಗೆಲುವಿಗೆ ಪ್ರಮುಖ ಕಾರಣವಾಯ್ತು.
ಇದನ್ನೂ ಓದಿ: ದಿಲ್ಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಸೋಲಿಸಿದ್ದು ಬಿಜೆಪಿನಾ? ಕಾಂಗ್ರೆಸಾ? 10 ಕಾರಣಗಳು ಇಲ್ಲಿದೆ!
3- ಶೀಶ್ ಮಹಲ್ ನಿಂದ ಆಪ್ ಗೆ ಹಿನ್ನಡೆ: ಆಮ್ ಆದ್ಮಿ ಪಕ್ಷದಿಂದ ಜನರಿಗೆ ದೊರಕಿದ ಮೊದಲ ಭರವಸೆ ಎಂದರೆ ಸಾಮಾನ್ಯ ಜನರ ಸರ್ಕಾರವೆಂದು. ನಾನು ಸರ್ಕಾರಿ ಬಂಗಲೆ, ಸರ್ಕಾರಿ ಕಾರು, ಸರ್ಕಾರದ ಯಾವ ಸೌಲಭ್ಯವನ್ನು ಅನುಭವಿಸುವುದಿಲ್ಲ ಎಂದು ಇದೇ ಅರವಿಂದ್ ಕೇಜ್ರಿವಾಲ್ ಜನರಿಗೆ ಭರವಸೆ ನೀಡಿದ್ದರು. ಆದರೆ ದಿನ ಕಳೆದಂತೆ ಕೇಜ್ರಿವಾಲ್ ಬದುಕು ಬದಲಾಯಿತು. ಐಷಾರಾಮಿ ಕಾರು, ಐಷಾರಾಮಿ ಬಂಗಲೆಗಳು ಅವರ ಬದುಕಿನಲ್ಲಿ ಬಂದವು. ಈ ವ್ಯಕ್ತಿ ಆಡುವುದಕ್ಕೂ ನಡೆಯುವುದಕ್ಕೂ ತುಂಬಾ ವ್ಯತ್ಯಾಸವಿದೆ ಎಂದು ಕೇಜ್ರಿವಾಲ್ನಲ್ಲಿರುವ ಎರಡನೇ ಮುಖವನ್ನು ದೆಹಲಿ ಜನರು ಕಂಡರು. ಇದನ್ನು ಬಿಜೆಪಿ ಕೂಡ ತುಂಬಾ ಎನ್ಕ್ಯಾಶ್ ಮಾಡಿಕೊಂಡಿತು. ಅದೇ ವಿಚಾರವನ್ನ ಪದೇ ಪದೇ ಮುನ್ನೆಲೆಗೆ ತಂದು ಕೇಜ್ರಿವಾಲ್ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿತು.
4- ಡಬಲ್ ಇಂಜಿನ್ ಸರ್ಕಾರದ ಭರವಸೆ: ಇನ್ನು ಡಬಲ್ ಇಂಜಿನ್ ಸರ್ಕಾರದ ಭರವಸೆ ಜನರಲ್ಲಿ ಹೊಸ ಆಶಾ ಕಿರಣ ಮೂಡಿಸಿತು, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ನಡೆಸಿರುವ ಅಭಿವೃದ್ಧಿ ಕಾರ್ಯ ಹಾಗೂ ಅದರ ವೇಗವನ್ನು ಗುರುತಿಸಿದ ಜನರು ಬಿಜೆಪಿಗೆ ಮಣೆ ಹಾಕಿದರು
5- ಬಿಜೆಪಿಯ ರಾಷ್ಟ್ರ ನಾಯಕರ ತಂತ್ರಗಾರಿಕೆ, ಪ್ರಚಾರ: ಪ್ರತಿ ರಾಜ್ಯದಲ್ಲಿ, ಪ್ರತಿ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದೇ ತನ್ನ ತಂತ್ರಗಾರಿಕೆಯ ಮೇಲೆ ಮತ್ತು ಪ್ರಚಾರದ ರೀತಿಯ ಮೇಲೆ. ದೆಹಲಿ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಅತ್ಯಂತ ಪಕ್ಕಾ ತಂತ್ರಗಾರಿಕೆ ಹೂಡಿ ಅಬ್ಬರದ ಪ್ರಚಾರದಲ್ಲಿ ಕೇಜ್ರಿ ಸರ್ಕಾರದ ಪ್ರಮಾದಗಳನ್ನು ಸ್ಪಷ್ಟ ರೂಪದಲ್ಲಿ ಜನರ ಮುಂದಿಟ್ಟು, ತಾವು ಅಧಿಕಾರಕ್ಕೆ ಬಂದರೆ ಏನೆಲ್ಲಾ ಯೋಜನೆಗಳನ್ನು ಕೈಗೊಳ್ಳಲಿದ್ದೇವೆ ಎಂಬುದನ್ನು ತಿಳಿಸಿ ಜನರ ವಿಶ್ವಾಸವನ್ನು ಗೆದ್ದಿತು.
6- ಫಲ ಕೊಟ್ಟ ಅಮಿತ್ ಶಾ ತಂತ್ರಗಾರಿಕೆ : ಇನ್ನು ದೆಹಲಿಯ ಗೆಲುವಿಗೆ ಪ್ರಮುಖ ಕಾರಣಗಳಲ್ಲಿ ಅಮಿತ್ ಶಾ ಹೂಡಿದ ತಂತ್ರಗಾರಿಕೆಯೂ ಕೂಡ ಒಂದು. ಈ ಹಿಂದೆ ಮಾಡಿದ ತಪ್ಪುಗಳನ್ನು ಗಮನಿಸಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಷಯದಿಂದ ಹಿಡಿದು. ಪ್ರಚಾರದ ಉಸ್ತುವಾರಿಯನ್ನು ಕೂಡ ಸರಿಯಾಗ ನಿರ್ವಹಿಸಿ ಗೆಲುವಿನ ರೂವಾರಿಯಾಗುವುದರಲ್ಲಿ ಯಶಸ್ವಿಯಾದರು
7 - ಮಾಜಿ ಸಂಸದರನ್ನು ಕಣಕ್ಕಿಳಿಸಿ ಅಪ್ ಗೆ ಟಫ್ ಫೈಟ್: ಇನ್ನು ದೆಹಲಿಯಲ್ಲಿ ಜನರ ಮನ್ನಣೆ ಗಳಿಸಿದ್ದ ಈ ಹಿಂದಿನ ಸಂಸದರನ್ನು ಕಣಕ್ಕೆ ಇಳಿಸಿದ್ದು ಬಿಜೆಪಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಯ್ತು. ಸದ್ಯ ಬಿಜೆಪಿಯ ಸಿಎಂ ಅಭ್ಯರ್ಥಿ ಎನ್ನಲಾಗುತ್ತಿರುವ ಪರ್ವೇಶ್ ವರ್ಮಾ ಕೂಡ ಈ ಹಿಂದೆ ಲೋಕಸಭೆಯಲ್ಲಿ ಸಂಸದರಾಗಿದ್ದವರು. ಇಂತಹ ಅನೇಕ ಸಂಸದರನ್ನು ಕಣಕ್ಕೆ ಇಳಿಸಿ ಅವರ ಮೇಲೆ ಹಿಂದೆ ಇದ್ದ ಜನರ ಪಾಸಿಟಿವ್ ನಂಬಿಕೆಯನ್ನು ಯಶಸ್ವಿಯಾಗಿ ಬಳಸಿಕೊಂಡಿತು ಬಿಜೆಪಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ