Hardik Pandya – ವಿವಾದಗಳ ಬೆನ್ನಿಗೆ ಕಟ್ಟಿಕೊಂಡು ಓಡುವ ಏಕೈಕ ಪ್ರತಿಭೆ.. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹಾರ್ದಿಕ್ ಪಾಂಡ್ಯ ಸೂಪರ್ ಸ್ಟಾರ್!
Hardik Pandya – ವೆಸ್ಟ್ ಇಂಡೀಸ್ ಆಟಗಾರರ ಅಬ್ಬರದ ಆಟ, ಮಸ್ತುಕಟ್ಟಾದ ದೇಹ, ಗಟ್ಟಿಯಾದ ಧ್ವನಿಗೆ ಫಿದಾ ಆಗದೋರಿಲ್ಲ. ಇಂತಹ ವಿಂಡೀಸ್ ಪ್ರಭಾವಕ್ಕೆ ಒಳಗಾದ ಆಟಗಾರನೊಬ್ಬ ಟೀಮ್ ಇಂಡಿಯಾದಲ್ಲಿದ್ದಾನೆ. ಈತ ಹುಟ್ಟಿದ್ದು, ಬೆಳೆದಿದ್ದು ಇಲ್ಲೇನೆ ಆದ್ರೂ ಲೈಫ್ ಸ್ಟೈಲ್ ಮಾತ್ರ ದ್ವೀಪರಾಷ್ಟ್ರದ ಕೆರಿಬಿಯನ್ನರನ್ನ ನೆನಪಿಸುತ್ತೆ. ಆ ವಿಂಡೀಸ್ಮ್ಯಾನ್ ಬೇರಾರೂ ಅಲ್ಲ. ಒನ್ ಅಂಡ್ ಒನ್ಲಿ ಹಾರ್ದಿಕ್ ಪಾಂಡ್ಯ.
ಅಂದ ಹಾಗೆ ಟೀಂ ಇಂಡಿಯಾದ ಸ್ಟೈಲಿಸ್ ಐಕಾನಿಕ್ ಹಾರ್ದಿಕ್ ಪಾಂಡ್ಯ ವಿಶ್ವಕ್ರಿಕೆಟ್ ಕಂಡ ಶ್ರೇಷ್ಠ ಆಲ್ರೌಂಡರ್. ಆಧುನಿಕ ಮತ್ತು ಸ್ಪರ್ಧಾತ್ಮಕ ಕ್ರಿಕೆಟ್ ಜಗತ್ತಿನಲ್ಲಿ ಸೈ ಎನಿಸಿಕೊಂಡಿರುವ ಪಾಂಡ್ಯ ವೇಗದ ಬೌಲಿಂಗ್, ಅದ್ಭುತ ಬ್ಯಾಟಿಂಗ್ ಜೊತೆಗೆ ಅಷ್ಟೇ ಅದ್ಭುತವಾದ ಫೀಲ್ಡಿಂಗ್ ಹಾಗೂ ಚುರುಕು ಕ್ಯಾಪ್ಟನ್ಸಿಗೆ ಹೆಸರಾದವರು. ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವ ಮತ್ತು ಕೊನೆಯ ಓವರ್‌ಗಳಲ್ಲಿ ಅಂದರೆ ಕಡಿಮೆ ಎಸೆತಗಳಲ್ಲಿ ದೊಡ್ಡ, ದೊಡ್ಡ ಸಿಕ್ಸರ್‌ಗಳನ್ನು ಹೊಡೆದು ಗೇಮ್ ಚೇಂಜರ್ ಎನಿಸಿಕೊಂಡವರು. ಕುಂಗ್ ಫೂ ಪಾಂಡಾ ಎಂದೇ ಪ್ರಸಿದ್ಧಿ ಪಡೆದಿರುವ ಪಾಂಡ್ಯ ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಭಾರತ ತಂಡದ ಬಲಿಷ್ಠ ಆಲ್ ರೌಂಡರ್ ಬರೋಡಾದ ಈ ಕ್ರಿಕೆಟಿಗ.
ಬರೋಡಾ ಪರ ದೇಶಿಯ ಕ್ರಿಕೆಟ್ ಆಡುತ್ತಿದ್ದ ಹಾರ್ದಿಕ್ , 2015ರ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಪರ 31 ಎಸೆತಗಳಲ್ಲಿ ಅಜೇಯ 61 ರನ್ ಗಳಿಸಿ ರಾತ್ರೋರಾತ್ರಿ ಸ್ಟಾರ್ ಆದರು. ನಂತರ ಮುಂಬೈನೊಂದಿಗಿನ ಅವರ ಸುದೀರ್ಘ ಒಡನಾಟವು ಇಂದಿಗೂ ಬೆಸೆದುಕೊಂಡಿದೆ. ಪಾಂಡ್ಯ ಮುಂಬೈ ಇಂಡಿಯನ್ಸ್ ಸೇರಿದ ಬಳಿಕ ಫ್ರಾಂಚೈಸಿ ನಾಲ್ಕು ಐಪಿಎಲ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಗ್ರೇಟ್ ಫಿನಿಶರ್.
ಟೀಂ ಇಂಡಿಯಾ ಯುವರಾಜ್ ಸಿಂಗ್ರಂತಹ ಆಲ್ರೌಂಡರ್ ಹುಡುಕುತ್ತಿದ್ದ ವೇಳೆಗೆ ಸಿಕ್ಕಿದ್ದೇ ಪಾಂಡ್ಯ. ಹಾರ್ದಿಕ್ ಟೀಂ ಇಂಡಿಯಾದಲ್ಲಿ 2016ರಿಂದ ಜರ್ನಿ ಆರಂಭಿಸಿದರು. ಜನವರಿ 26, 2016 ರಂದು ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಂತಾರಾಷ್ಟ್ರೀಯ ಚೊಚ್ಚಲ ಟಿ-20 ಪಂದ್ಯವನ್ನು ಮಾಡಿದರು. ಅದೇ ವರ್ಷ ಅಕ್ಟೋಬರ್ 16 ರಂದು ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ODI ಆಡಿದರು. ವೈಟ್ ಬಾಲ್ ಕ್ರಿಕೆಟ್ನಲ್ಲಿ ಜನಪ್ರಿಯರಾಗುತ್ತಿದ್ದಂತೆಯೇ, ಟೆಸ್ಟ್ಗೂ 2016ರಲ್ಲಿಯೇ ಪದಾರ್ಪಣೆ ಮಾಡಿದರು.
ಬಲಗೈ ಬ್ಯಾಟ್ಸ್ಮನ್ ಆಗಿರುವ ಹಾರ್ದಿಕ್ ಇಲ್ಲಿಯವರಗೆ ಭಾರತದ ಪರ ಒಟ್ಟು 11 ಟೆಸ್ಟ್ ಪಂದ್ಯಗಳನ್ನು ಆಡಿ, 18 ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 532 ರನ್ಗಳಿಸಿರುವ ಪಾಂಡ್ಯ, ಒಂದು ಶತಕ ಕೂಡ ಚಚ್ಚಿದ್ದಾರೆ. 108 ರನ್ ಟೆಸ್ಟ್ ಕ್ರಿಕೆಟ್ನಲ್ಲಿ ಗಳಿಸಿದ ಅತ್ಯಧಿಕ ರನ್ ಆಗಿದೆ. ಇನ್ನು 17 ವಿಕೆಟ್ ಕೂಡ ಕಬಳಿಸಿದ್ದಾರೆ. ಒಮ್ಮೆ ಐದು ವಿಕೆಟ್ಗಳನ್ನು ಕಿತ್ತಿರೋದು ಕೂಡ ವಿಶೇಷವಾಗಿದೆ.
ಏಕದಿನ ಪಂದ್ಯಗಳಲ್ಲಿ ಇಲ್ಲಿಯವರೆಗೆ 86 ಮ್ಯಾಚ್ ಆಡಿದ್ದು, 1769 ರನ್ಗಳಿಸಿದ್ದಾರೆ. 92 ಅತ್ಯಧಿಕ ರನ್ ಆಗಿದೆ. 11 ಅರ್ಧಶತಕ ಬಾರಿಸಿರುವ ಅವರು, 84 ವಿಕೆಟ್ ಪಡೆದುಕೊಂಡಿದ್ದಾರೆ. ಟಿ20 ಯಲ್ಲಿ ಹಾರ್ದಿಕ್ ಇಲ್ಲಿಯವರೆಗೆ ಒಟ್ಟು ಭಾರತದ ಪರ 137 ಪಂದ್ಯಗಳನ್ನು ಆಡಿದ್ದು, 2523 ರನ್ಗಳಿಸಿದ್ದಾರೆ. 141.28 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿರುವ ಪಾಂಡ್ಯರದ್ದು 91 ಅತ್ಯಧಿಕ ಸ್ಕೋರ್ ಆಗಿದೆ. ಒಟ್ಟು 4 ಅರ್ಧಶತಕ ಬಾರಿಸಿರುವ ಹಾರ್ದಿಕ್ ಟಿ-20ಯಲ್ಲಿ 86 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಐಪಿಎಲ್ನಲ್ಲಿ ಹಾರ್ದಿಕ್ ಸಾಧನೆ ನೋಡೋದಾದ್ರೆ.. ಒಟ್ಟು 137 ಪಂದ್ಯಗಳನ್ನು ಆಡಿರುವ ಹಾರ್ದಿಕ್ 2525 ರನ್ಗಳಿಸಿದ್ದು, 10 ಅರ್ಧಶತಕ ಬಾರಿಸಿದ್ದಾರೆ. ಇನ್ನು ಬೌಲಿಂಗ್ನಲ್ಲಿ 64 ವಿಕೆಟ್ ಕಿತ್ತಿದ್ದಾರೆ.
ನಾಯಕರಾಗಿ ಹಾರ್ದಿಕ್ ಪಾಂಡ್ಯ..!
ಹಾರ್ದಿಕ್ ಪಾಂಡ್ಯಗೆ ನಾಯಕರಾಗಿಯೂ ಟೀಂ ಇಂಡಿಯಾವನ್ನು ಮುನ್ನಡೆಸಿದ ಅನುಭವ ಇದೆ. 2024 ಜನವರಿಯಲ್ಲಿ ವೆಸ್ಟ್ ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಭಾರತ ತಂಡ ಎರಡು ಪಂದ್ಯಗಳನ್ನು ಗೆದ್ದು ಸರಣಿಯನ್ನು ತನ್ನದಾಗಿಸಿಕೊಂಡಿತು. ಅದರ ಕೀರ್ತಿ ಪಾಂಡ್ಯಗೆ ಸಲ್ಲಬೇಕಾಗುತ್ತದೆ. ಟಿ-20ಯಲ್ಲಿ ಒಟ್ಟು 16 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿರುವ ಪಾಂಡ್ಯ, 10 ರಲ್ಲಿ ಗೆಲುವು ಸಾಧಿಸಿದ್ದಾರೆ. ಐದು ಪಂದ್ಯಗಳಲ್ಲಿ ಸೋತಿದ್ದು, ಒಂದು ಪಂದ್ಯದ ಫಲಿತಾಂಶ ಪ್ರಕಟಗೊಂಡಿಲ್ಲ. 2022ರಲ್ಲಿ ಟಿ-20 ಕ್ರಿಕೆಟ್ಗೆ ನಾಯಕರಾಗಿ ತಂಡವನ್ನು ಮನ್ನಡೆಸಿದ್ದಾರೆ.
ಐಪಿಎಲ್ನಲ್ಲಿ ಅಪಾರ ಅನುಭವ ಹೊಂದಿರುವ ಹಾರ್ದಿಕ್ ಪಾಂಡ್ಯ, ಒಟ್ಟು 45 ಪಂದ್ಯಗಳನ್ನು ಮುನ್ನಡೆಸಿದ್ದಾರೆ. ಅದರಲ್ಲಿ 25 ಪಂದ್ಯಗಳಲ್ಲಿ ಗೆದ್ದು, 19ರಲ್ಲಿ ಸೋತಿದ್ದಾರೆ. ಗೆಲುವಿನ ಲೆಕ್ಕಾಚಾರ ಶೇಕಡಾ 57.72ರಷ್ಟಿದೆ. 2022ರಲ್ಲಿ ಮುಂಬೈ ತೊರೆದು ಗುಜರಾತ್ ತಂಡವನ್ನು ಸೇರಿಕೊಂಡು ನಾಯಕರಾಗಿ ಮುನ್ನಡೆಸಿದರು. ಈ ವೇಳೆ ಗುಜರಾತ್ ಟೈಟನ್ಸ್ಗೆ ಚೊಚ್ಚಲ ಪ್ರಶಸ್ತಿಯನ್ನ ತಂದುಕೊಡುವಲ್ಲಿ ಯಶಸ್ವಿಯಾದರು. 2023ರ ಐಪಿಎಲ್ನಲ್ಲೂ ಅದ್ಭುತ ಪ್ರದರ್ಶನ ನೀಡಿದ ಪಾಂಡ್ಯ ತಂದ, ರನ್ನರ್ ಅಪ್ ಆಯಿತು. 2024ರ ಐಪಿಎಲ್ನಲ್ಲಿ ಮುಂಬೈ ತಂಡಕ್ಕೆ ನಾಯಕರಾಗಿ ಬಂದರು. ಆದರೆ ಮುಂಬೈ ತಂಡದಲ್ಲಿ ಉಂಟಾದ ಕೆಲವು ಅಸಮಾಧಾನಗಳಿಂದ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಪ್ರದರ್ಶನ ತೋರಿಸಲಿಲ್ಲ.
ಟಿ-20 ವಿಶ್ವಕಪ್ನ ಹೀರೋ..!
2024ರ ಟಿ-20 ವಿಶ್ವಕಪ್ ಭಾರತಕ್ಕೆ ಬರುವಲ್ಲಿ ಪಾಂಡ್ಯ ಕೊಡುಗೆ ಅಪಾರ. ಫೈನಲ್ ಪ್ರವೇಶಿಸಿದ್ದ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ಎದುರಾಗಿತ್ತು. ಫೈನಲ್ ಪಂದ್ಯದ ಅಂತಿಮ ಘಟ್ಟದ ಕೊನೆಯ ಓವರ್ ಮಾಡುವ ಜವಾಬ್ದಾರಿ ಹಾರ್ದಿಕ್ ಪಾಂಡ್ಯ ಹೆಗಲಿಗೆ ಬಂದಿತ್ತು. ಈ ವೇಳೆ ದಕ್ಷಿಣ ಆಫ್ರಿಕಾಗೆ ಗೆಲ್ಲಲು 6 ಬಾಲ್ನಲ್ಲಿ 16 ರನ್ಗಳ ಅಗತ್ಯ ಇತ್ತು. ಬೆಂಕಿಯ ಚೆಂಡಿನಂತೆ ಬೌಲಿಂಗ್ ಮಾಡಿರುವ ಹಾರ್ದಿಕ್ ಪಾಂಡ್ಯ, ಎರಡು ವಿಕೆಟ್ ಪಡೆಯುವುದರೊಂದಿಗೆ 16 ರನ್ಗಳನ್ನು ಡಿಪೆಂಡ್ ಮಾಡಿಕೊಂಡು ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮೂಲಕ ಭಾರತ ತಂಡವು 7 ರನ್ಗಳಿಂದ ವಿಶ್ವಕಪ್ಗೆ ಮುತ್ತಿಟ್ಟಿತು. ವಿಶ್ವಕಪ್ ಗೆಲುವಿನ ಹಿಂದಿನ ಕ್ರೆಡಿಟ್ ಪಾಂಡ್ಯಗೆ ಸೇರುತ್ತದೆ. ಫೈನಲ್ ಪಂದ್ಯದಲ್ಲಿ ಪಾಂಡ್ಯ ಕೇವಲ 20 ರನ್ ನೀಡಿ 3 ವಿಕೆಟ್ ಪಡೆದು ಎದುರಾಳಿ ತಂಡದ ಮಗ್ಗಲು ಮುರಿದಿದ್ದರು.
2022ರಲ್ಲಿ ಪಾಕ್ ವಿರುದ್ಧದ ಗೆಲುವಿನ ಹೀರೋ..
2022ರಲ್ಲಿ ಭಾರತವು ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಹ್ಯಾರಿಸ್ ರೌಫ್ ಅವರ ಬಾಲ್ನಲ್ಲಿ ಎರಡು ಅತ್ಯುತ್ತಮ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 37 ಎಸೆತಗಳಲ್ಲಿ 40 ರನ್ ನೀಡಿ 3 ವಿಕೆಟ್ ಕಬಳಿಸಿದರು.
ಹಾರ್ದಿಕ್ ವಿವಾದಗಳು..!
2018ರಲ್ಲಿ ಗಂಭೀರವಾಗಿ ಗಾಯಗೊಂಡ ಪಾಂಡ್ಯ, ದೀರ್ಘ ಕಾಲದವರೆಗೆ ವಿಶ್ರಾಂತಿಯಲ್ಲಿದ್ದರು. 2019ರ ಆರಂಭದಲ್ಲಿ ಕಾಫಿ ವಿಥ್ ಕರಣ್ ಎಂಬ ಟಾಕ್ ಶೋನಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದದಲ್ಲಿ ಸಿಲುಕಿದ್ದರು. ಪರಿಣಾಮ ಬಿಸಿಸಿಐನಿಂದ ಶಿಕ್ಷೆಗೂ ಒಳಗಾದರು.
2023ರ ಐಪಿಎಲ್ ಫೈನಲ್ನಲ್ಲಿ ಪ್ರತಿಸ್ಪರ್ಧಿ ಧೋನಿಯನ್ನು ಹೊಗಳಿ ಸಂಕಷ್ಟಕ್ಕೆ ಸಿಲುಕಿಕೊಂಡರು. ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಗೆದ್ದುಕೊಂಡಿತು. ಈ ಎರಡೂ ಸಂದರ್ಭಗಳಲ್ಲಿ ಅವರ ಹೇಳಿಕೆಗೆ ಟೀಕೆ ವ್ಯಕ್ತವಾಗಿತ್ತು.
2022ರಲ್ಲಿ ಗುಜರಾತ್ ತಂಡ ಸೇರಿದ್ದ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ 2024ರ ಐಪಿಎಲ್ಗೆ ಮತ್ತೆ ತನ್ನ ತಂಡಕ್ಕೆ ಕರೆದುಕೊಂಡು ಬಂದಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ರೋಹಿತ್ ಶರ್ಮಾ ಅವರಿಗೆ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ಹಾರ್ದಿಕ್ಗೆ ನಾಯಕತ್ವದ ಜವಾಬ್ದಾರಿ ನೀಡಿರೋದು ಭಾರೀ ಟೀಕೆಗೆ ಗುರಿಯಾಯಿತು. ಪರಿಣಾಮ ಮುಂಬೈ ಇಂಡಿಯನ್ಸ್ ಪ್ಲೆ-ಆಫ್ ಪ್ರವೇಶ ಮಾಡದೇ ಐಪಿಎಲ್ ಟೂರ್ನಿಯಿಂದ ನಿರ್ಗಮಿಸಿತು.
ಪಾಂಡ್ಯ ವೈಯಕ್ತಿಕ ಜೀವನ
ಗುಜರಾತ್‌ನ ಸೂರತ್ನ ಚೋರಿಯಾಸಿಯಲ್ಲಿ ಜನವರಿ 11, 1993 ರಂದು ಜನಿಸಿದರು. ಅವರ ವೈಯಕ್ತಿಕ ಜೀವನವು ಕೂಡ ಸಾಕಷ್ಟು ಹವ್ಯಾಸಮಯವಾಗಿದೆ. ಅವರ ನಿಜವಾದ ಹೆಸರು ಹಾರ್ದಿಕ್ ಹಿಮಾಂಶು ಪಾಂಡ್ಯ. ತಂದೆ ಹೆಸರು ಹಿಮಾಂಶು ಪಾಂಡ್ಯ, ತಾಯಿ ಹೆಸರು ನಳಿನಿ ಪಾಂಡ್ಯ. ಹಾರ್ದಿಕ್ ಐದು ವರ್ಷ ಇದ್ದಾಗಲೇ ಅವರ ತಂದೆಯವರು ಮಕ್ಕಳ ಉತ್ತಮ ಕ್ರಿಕೆಟ್ ತರಬೇತಿಗಾಗಿ ವಡೋದರಾಗೆ ವಲಸೆ ಬಂದರು. 2013ರಿಂದ ಬರೋಡಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದುಕೊಂಡು ಮುನ್ನುಗ್ಗಿದರು.
ಇನ್ನು ಸಹೋದರ ಕೃನಾಲ್ ಪಂಡ್ಯ. ಇವರು ಕೂಡ ಟೀಂ ಇಂಡಿಯಾದ ಕ್ರಿಕೆಟಿಗ. 1 ಜನವರಿ 2020 ರಂದು ನರ್ತಕಿ ಮತ್ತು ನಟಿ ನಟಾಸಾ ಸ್ಟಾಂಕೋವಿಕ್ ಅವರೊಂದಿಗೆ ಪಾಂಡ್ಯ ನಿಶ್ಚಿತಾರ್ಥ ಮಾಡಿಕೊಂಡರು. 30 ಜುಲೈ 2020 ರಂದು ಅವರ ಮೊದಲ ಮಗು, ಗಂಡು ಅಗಸ್ತ್ಯ ಪಾಂಡ್ಯ ಜನಿಸಿದರು. 14 ಫೆಬ್ರವರಿ 2023 ರಂದು ರಾಜಸ್ಥಾನದ ಉದಯಪುರದಲ್ಲಿ ನಡೆದ ಸಮಾರಂಭದಲ್ಲಿ ದಂಪತಿಗಳು ವಿವಾಹವಾದರು. 2024ರಲ್ಲಿ ಪತ್ನಿ ನಟಾಶಾಗೆ ಡಿವೋರ್ಸ್ ನೀಡಿದ್ದಾರೆ. ಸದ್ಯ ಹಾರ್ದಿಕ್ ಸಿಂಗಲ್ ಆಗಿದ್ದು, ಈಗಾಗಲೇ ಹಲವು ಮಾಡೆಲ್ಗಳ ಜೊತೆ ಪಾಂಡ್ಯ ಹೆಸರು ತಳುಕು ಹಾಕಿಕೊಂಡಿದೆ.