/newsfirstlive-kannada/media/post_attachments/wp-content/uploads/2025/06/Ahamadabad-Plane-Crash.jpg)
ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿ ಇಂದಿಗೆ ಒಂದು ವಾರ ಪೂರ್ತಿಯಾಗಿದೆ. ವಿಮಾನ ದುರಂತದಲ್ಲಿ 241 ಮಂದಿ ಪ್ರಯಾಣಿಕರು ಸೇರಿದಂತೆ 270 ಮಂದಿ ಜೀವ ಕಳೆದುಕೊಂಡಿದ್ದಾರೆ.
ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಅಪ್ಪಳಿಸಿದ ಬಳಿಕ ಸ್ಫೋಟ ಸಂಭವಿಸಿದೆ. ಇದರಿಂದ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ವಿಮಾನದಲ್ಲಿದ್ದ 1.25 ಲಕ್ಷ ಲೀಟರ್ ಇಂಧನ ಸಂಪೂರ್ಣ ಹೊತ್ತಿ ಉರಿದಿದೆ. ಇದರಿಂದಾಗಿ ವಿಮಾನದಲ್ಲಿದ್ದ 241 ಪ್ರಯಾಣಿಕರು ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ. ವಿಶ್ವಾಸ್ ರಮೇಶ್ ಕುಮಾರ್ಗೆ ಇದ್ದ ಜೀವ ಉಳಿಸಿಕೊಳ್ಳುವ ಅದೃಷ್ಟ ಎಲ್ಲರಿಗೂ ಇರಲಿಲ್ಲ. ಹೀಗಾಗಿ 241 ಮಂದಿಯೂ ವಿಮಾನದಲ್ಲೇ ತಮ್ಮ ಪ್ರಾಣ ಕಳೆದುಕೊಂಡರು.
ಇದನ್ನೂ ಓದಿ: ಫ್ರಿಡ್ಜ್ನಲ್ಲಿಟ್ಟ ಕೇಕ್ ತಿಂದು 5 ವರ್ಷದ ಮಗು ಬಲಿ ಕೇಸ್ಗೆ ಟ್ವಿಸ್ಟ್.. ತನಿಖೆಯಲ್ಲಿ ಬೆಚ್ಚಿ ಬೀಳಿಸುವ ಅಂಶ ರಿವೀಲ್
ಈಗ ಮೃತರ ಪಾರ್ಥೀವ ಶರೀರಗಳ ಗುರುತು ಪತ್ತೆ ಹಚ್ಚುವ ಕೆಲಸವನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆ, ಬಿ.ಜೆ. ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು ನಡೆಸುತ್ತಿದ್ದಾರೆ. ಡಿಎನ್ಎ ಸ್ಯಾಂಪಲ್ಗಳ ಮ್ಯಾಚಿಂಗ್ ಮೂಲಕ ಪಾರ್ಥೀವ ಶರೀರಗಳ ಗುರುತು ಪತ್ತೆ ಹಚ್ಚಲಾಗುತ್ತಿದೆ. ಇದುವರೆಗೂ (ಜೂನ್ 19 ರ ಗುರುವಾರ ಬೆಳಗ್ಗೆವರೆಗೆ) 210 ಪಾರ್ಥೀವ ಶರೀರಗಳ ಗುರುತು ಪತ್ತೆ ಹಚ್ಚಲಾಗಿದೆ. ಈ ಪೈಕಿ 187 ಪಾರ್ಥೀವ ಶರೀರಗಳನ್ನು ಮೃತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. 60 ಪಾರ್ಥೀವ ಶರೀರಗಳ ಗುರುತು ಪತ್ತೆ ಹಚ್ಚುವ ಕಾರ್ಯ ಭರದಿಂದ ಸಾಗಿದೆ.
ಪಾರ್ಥೀವ ಶರೀರಗಳ ಗುರುತು ಪತ್ತೆ ಹಚ್ಚಿದ ಬಳಿಕ ಮೃತರ ಡೆತ್ ಸರ್ಟಿಫಿಕೇಟ್ ಅನ್ನು ಸ್ಥಳದಲ್ಲೇ ಸಂಬಂಧಿಕರಿಗೆ ನೀಡಲಾಗುತ್ತಿದೆ. ಇದರಿಂದ ಮುಂದೆ ವಿಮಾನ ದುರಂತದ ಪರಿಹಾರ, ಇನ್ಶುರೆನ್ಸ್ ಹಣವನ್ನ ಪಡೆಯಲು ಸಂಬಂಧಿಕರಿಗೆ ಸಾಧ್ಯವಾಗುತ್ತೆ. ಮೃತರ ಸಂಬಂಧಿಕರು, ಮೃತರ ಹಾಗೂ ತಮ್ಮ ಆಧಾರ್ ಕಾರ್ಡ್, ಫೋಟೋ ಐಡೆಂಟಿಟಿ ಕಾರ್ಡ್ ತೆಗೆದುಕೊಂಡು ಬಂದರೆ ಪಾರ್ಥೀವ ಶರೀರವನ್ನು ಶವಾಗಾರದಿಂದ ನೀಡಲಾಗುತ್ತಿದೆ.
ಇದನ್ನೂ ಓದಿ: ದೇಶದಲ್ಲಿ AC ಬಳಕೆಗೆ ಹೊಸ ರೂಲ್ಸ್ ಜಾರಿ; ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ!
ಡೆಂಟಲ್ ಫೋರೆನ್ಸಿಕ್ನಿಂದ ಗುರುತು ಪತ್ತೆ
ಅಹಮದಾಬಾದ್ ವಿಮಾನ ದುರಂತದ ಮೃತರ ಗುರುತು ಪತ್ತೆಗೆ ವೈದ್ಯರು ಡೆಂಟಲ್ ಫೋರೆನ್ಸಿಕ್ ವಿಧಾನದ ಮೊರೆ ಹೋಗಿದ್ದಾರೆ. ಅಹಮದಾಬಾದ್ ವಿಮಾನ ದುರಂತದಲ್ಲಿ ಪ್ರಯಾಣಿಕರು ಒಂದು ಸಾವಿರ ಡಿಗ್ರಿ ಉಷ್ಣಾಂಶದಲ್ಲಿ ಸುಟ್ಟು ಹೋಗಿದ್ದಾರೆ. ಯಾವ ಪಾರ್ಥೀವ ಶರೀರಗಳ ಗುರುತು ಪತ್ತೆ ಹಚ್ಚುವುದು ಸಾಧ್ಯವಿಲ್ಲದ ಸ್ಥಿತಿಯೂ ಇದೆ. ಮನುಷ್ಯ ದೇಹದ ಹಲ್ಲುಗಳು 800- 1000 ಡಿಗ್ರಿ ಉಷ್ಣಾಂಶದವರೆಗೂ ಶಾಖವನ್ನು ತಡೆದುಕೊಳ್ಳುವ ಶಕ್ತಿ ಹೊಂದಿವೆ. ಹೀಗಾಗಿ ಡೆಂಟಲ್ ಫೋರೆನ್ಸಿಕ್ ಪರೀಕ್ಷೆಯ ಮೂಲಕ ಶವಗಳ ಗುರುತು ಪತ್ತೆ ಹಚ್ಚುವ ಕೆಲಸ ಕೂಡ ನಡೆದಿದೆ ಎಂದು ಬಿ.ಜೆ. ಮೆಡಿಕಲ್ ಕಾಲೇಜಿನ ಡೆಂಟಲ್ ವಿಭಾಗದ ಪ್ರೊಫೆಸರ್ ಡಾ.ಪಿಳ್ಳೈ ಹೇಳಿದ್ದಾರೆ.
ಡೆಂಟಲ್ ಫೋರೆನ್ಸಿಕ್ನಲ್ಲಿ ದವಡೆ, ಕಿರುದವಡೆಯ ಹಲ್ಲುಗಳಿಗೆ ಆದ್ಯತೆ ನೀಡಲಾಗುತ್ತದೆ. ಇವುಗಳಲ್ಲಿ ಹೆಚ್ಚಿನ ಪಲ್ಪ್ ಇರುತ್ತದೆ. ಇದು ಡಿಎನ್‌ಎ ಸಂಗ್ರಹಕ್ಕೆ ಸೂಕ್ತ. ವಿಶೇಷ ಸಾಧನ ಬಳಸಿ ಪಲ್ಪ್ ಅಥವಾ ತಿರುಳು ಅನ್ನು ಹಲ್ಲಿನ ಒಳಭಾಗದಿಂದ ಎಚ್ಚರಿಕೆಯಿಂದ ಹೊರತೆಗೆಯಲಾಗುತ್ತೆ. ಇದರಿಂದಾಗಿ ಶವಗಳ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿದೆ. ವಿಮಾನ ದುರಂತದಲ್ಲಿ ಸಾವನ್ನಪ್ಪಿದವರ ಅಸಂಖ್ಯಾ ಸೆಲ್ಫಿ ಫೋಟೋಗಳು, ಗ್ರೂಪ್ ಫೋಟೋಗಳು ಕೂಡ ಲಭ್ಯ ಇವೆ. ಇವುಗಳು ಮೃತರ ದಂತದ ರಚನೆಯ ಗುರುತಿಸುವಿಕೆಗೆ ಸಹಕಾರಿಯಾಗಿವೆ. ಆಗ್ರದಂಥ ನಡುವಿನ ಸಣ್ಣ ಅಂತರವೂ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲು ಸಾಕಷ್ಟು ಸಾಕ್ಷ್ಯವಾಗಿದೆ.
ಇದನ್ನೂ ಓದಿ: 55 ಕೆ.ಜಿ ದೇಹದ ತೂಕ ಇಳಿಸಿದ ಬ್ಯೂಟಿ.. ಖಾಲಿ ಹೊಟ್ಟೆಯಲ್ಲಿ ಅರಿಶಿಣ ನೀರು ಕುಡಿದ್ರೆ ತೆಳ್ಳಗೆ ಆಗ್ತಾರಾ?
ಘಟಾನುಘಟಿಗಳ ಶವದ ಗುರುತು ಪತ್ತೆ..
ಈ ಹಿಂದೆ ಘಟಾನುಘಟಿಗಳ ಹತ್ಯೆಯಾದಾಗಲೂ ಡೆಂಟಲ್ ಫೋರೆನ್ಸಿಕ್ ಮೂಲಕವೇ ಪಾರ್ಥೀವ ಶರೀರಗಳ ಗುರುತು ಪತ್ತೆ ಹಚ್ಚಲಾಗಿತ್ತು ಅನ್ನೋದು ಇತಿಹಾಸ. ಅಮೆರಿಕಾದ ಅಧ್ಯಕ್ಷರಾಗಿದ್ದ ಜಾನ್ ಎಫ್. ಕೆನಡಿ 1963 ರಲ್ಲಿ ಹತ್ಯೆಯಾದಾಗ ದಂತ ಎಕ್ಸ್ ರೇಗಳನ್ನು ಮರಣಪೂರ್ವ ದಾಖಲೆಗಳೊಂದಿಗೆ ಹೋಲಿಸಿ ಅವರ ಶವ ಗುರುತಿಸುವಿಕೆಯನ್ನು ಮಾಡಲಾಯಿತು. 1988 ರಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಜಿಯಾ ಉಲ್ ಹಕ್ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾಗ ಡೆಂಟಲ್ ಫೋರೆನ್ಸಿಕ್ ಮೂಲಕವೇ ಅವರ ಪಾರ್ಥೀವ ಶರೀರವನ್ನು ಗುರುತಿಸಲಾಯಿತು. ಭಾರತದಲ್ಲಿ 1991 ರ ಮೇ ತಿಂಗಳಿನಲ್ಲಿ ತಮಿಳುನಾಡಿನ ಶ್ರೀಪೆರಂಬೂರಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾಯಿತು.
ಆತ್ಮಾಹುತಿ ದಾಳಿಯಲ್ಲಿ ರಾಜೀವ್ ಗಾಂಧಿ ಹತ್ಯೆಯಾಗಿದ್ದರು. ರಾಜೀವ್ ಗಾಂಧಿ ಶವ ಛಿದ್ರ ಛಿದ್ರವಾಗಿತ್ತು. ಆಗ 18 ದೇಹಗಳ ಪೈಕಿ ದಾಳಿಕೋರರು ಸೇರಿದಂತೆ ರಾಜೀವ್ ಗಾಂಧಿ ಪಾರ್ಥೀವ ಶರೀರವನ್ನು ಡೆಂಟಲ್ ಫೋರೆನ್ಸಿಕ್ ಪರೀಕ್ಷೆಯ ವಿಧಾನದ ಮೂಲಕವೇ ಪತ್ತೆ ಹಚ್ಚಲಾಗಿತ್ತು. 2001 ರಲ್ಲಿ ಅಮೆರಿಕಾದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಉಗ್ರರ ದಾಳಿಯಾದಾಗ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಆಗಲೂ ಡೆಂಟಲ್ ಫೋರೆನ್ಸಿಕ್ ಮೂಲಕವೇ ಶವದ ಗುರುತು ಪತ್ತೆ ಹಚ್ಚಲಾಗಿತ್ತು.
ಇದನ್ನೂ ಓದಿ: ಇದ್ದಕ್ಕಿದ್ದಂತೆ ಕುಸಿದು ಬಿದ್ದ ವ್ಯಕ್ತಿ; ಬೆಂಗಳೂರಲ್ಲಿ ವೈದ್ಯರ ಸಮಯ ಪ್ರಜ್ಞೆಯಿಂದ ಉಳಿಯಿತು ಒಂದು ಜೀವ
ಭಾರತದಲ್ಲಿ 2004 ರಲ್ಲಿ ತಮಿಳುನಾಡಿನಲ್ಲಿ ಸುನಾಮಿ ಅಲೆ ಸಮುದ್ರ ತೀರವನ್ನು ಅಪ್ಪಳಿಸಿತ್ತು. ಆಗ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಆ ವೇಳೆಯೂ ಸಾವನ್ನಪ್ಪಿದವರ ಶವಗಳನ್ನು ದಂತ ಫೋರೆನ್ಸಿಕ್ ವಿಧಾನದ ಮೂಲಕವೇ ಪತ್ತೆ ಹಚ್ಚಿದ್ದು ವಿಶೇಷ.
ಸಾಮೂಹಿಕ ವಿಪತ್ತುಗಳು ಸಂಭವಿಸಿದಾಗ ಡೆಂಟಲ್ ಫೋರೆನ್ಸಿಕ್ ಮೂಲಕವೇ ಶವಗಳ ಗುರುತು ಪತ್ತೆ ಹಚ್ಚಲಾಗಿದೆ. ವಿಮಾನ ಅಪಘಾತ, ಭೂಕಂಪ, ಸುನಾಮಿ, ಭಯೋತ್ಪಾದನಾ ದಾಳಿಗಳು ನಡೆದಾಗ ಶವಗಳ ಗುರುತು ಪತ್ತೆ ಹಚ್ಚುವುದು ಸವಾಲಿನ ಕೆಲಸ. ಹೀಗಾಗಿ ಇಂಥ ವೇಳೆಯಲ್ಲಿ ಡಿಎನ್ಎ ಪರೀಕ್ಷೆ, ಡೆಂಟಲ್ ಫೋರೆನ್ಸಿಕ್ ಮೂಲಕವೇ ಶವದ ಗುರುತು ಪತ್ತೆ ಹಚ್ಚಲಾಗುತ್ತಿದೆ.
ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ