/newsfirstlive-kannada/media/post_attachments/wp-content/uploads/2025/07/MALLIKARJUN_KHARGE_DKS.jpg)
ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಹಗ್ಗಜಗ್ಗಾಟ ಜೋರಾಗಿಯೇ ನಡೀತಿದೆ. ಸಿಎಂ ಸಿದ್ದರಾಮಯ್ಯ ಅವರು ನಾನೇ 5 ವರ್ಷ ಮುಖ್ಯಮಂತ್ರಿ ಅಂತಾ ಘಟಾಘೋಷಣೆ ಹಾಕಿದ್ರೂ? ಡಿ.ಕೆ ಶಿವಕುಮಾರ್ ತಮ್ಮ ದಾಳ ಉರುಳಿಸ್ತಾನೇ ಇದ್ದಾರೆ. ಪರಿಣಾಮ ಹೈಕಮಾಂಡ್‌ಗೆ ಅಕ್ಷರಶಃ ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿದೆ. ಇಂತಾ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷರಾಗಿರೋ ಮಲ್ಲಿಕಾರ್ಜುನ ಖರ್ಗೆ ಹಿಂದೊಮ್ಮೆ ಸಿಎಂ ಕುರ್ಚಿ ಮಿಸ್ಸಾಗಿದ್ದನ್ನ ನೆನಪಿಸೋ ಮೂಲಕ ದೊಡ್ಡ ಸಿಗ್ನಲ್ ನೀಡಿದ್ದಾರೆ. ಹಾಗಾದ್ರೆ, ಖರ್ಗೆ ಏನಾದ್ರೂ ಸಿಎಂ ಆಗೋ ಸಾಧ್ಯತೆ ಇದೆಯಾ? ಅವರ ಗೂಢಾರ್ಥದ ಮಾತು ಚಕ್ರವ್ಯೂಹ ಭೇದಿಸೋ ಸೂಚನೆಯಾ?.
ರಾಜಕೀಯ ಅನ್ನೋದ್ ಹರಿಯೋ ನೀರು, ಇಲ್ಲಿ ನಮ್ಮ ನಿಮ್ಮ ಊಹೆ ಅಷ್ಟೆ ಅಲ್ಲ, ರಾಜಕೀಯ ಅರೆದು ಕುಡಿದಿರೋ ಪಂಡಿತರ ಊಹೆಯೂ ಮೀರಿದ ಬೆಳವಣಿಗೆಳು ಆಗ್ತಾವೆ, ಘಟನೆಗಳು ನಡೀತಾವೆ. ಕಾರಣ, ಒಂದೆರಡು ವರ್ಷದ ಹಿಂದೆ ಅಷ್ಟೇ ರಾಜಕೀಯಕ್ಕೆ ಎಂಟ್ರಿಯಾದವ್ರು ಸಿಎಂ ಗದ್ದುಗೆ ಏರಿದವ್ರು ಇದ್ದಾರೆ. ಹಾಗೇ 50 ರಿಂದ 60 ವರ್ಷ ರಾಜಕೀಯದಲ್ಲಿದ್ದು ಸಿಎಂ ಸ್ಥಾನ ಸಿಗದೇ ನಿರಾಶರಾದವ್ರು ಇದ್ದಾರೆ. ಅದೆಷ್ಟೋ ಕ್ಷಿಪ್ರಕ್ರಾಂತಿಯಿಂದ ಆ್ಯಕ್ಷಿಡೆಂಡ್ ಆಗಿ ಸಿಂಹಾಸನ ಏರಿದವ್ರ ಲಿಸ್ಟ್ ದೊಡ್ಡದಿದೆ. ಹೀಗಾಗಿ ರಾಜಕೀಯದಲ್ಲಿ ಯಾವಾಗ ಏನಾಗುತ್ತೆ ಅಂತಾ ನಿರೀಕ್ಷೆ ಮಾಡೋದಕ್ಕೆ ಸಾಧ್ಯವೇ ಇಲ್ಲ. ಅಷ್ಟಕ್ಕೂ ನಾವ್ ಈ ಮಾತು ಕೇಳೋದಕ್ಕೆ ಕಾರಣವಾಗಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೂಢಾರ್ಥದಲ್ಲಿ ಸಿಎಂ ಕುರ್ಚಿಗೆ ಬಿಟ್ಟಿರೋ ಬಾಣ.
1999ರಲ್ಲಿ ಸಿಎಂ ಕುರ್ಚಿ ಮಿಸ್, ಈಗೇಕೆ ಖರ್ಗೆ ನೆನಪಿಸಿಕೊಂಡ್ರು?
ಎಐಸಿಸಿ ಅಧ್ಯಕ್ಷರಾಗಿರೋ ಮಲ್ಲಿಕಾರ್ಜುನ ಖರ್ಗೆ ಅವ್ರು ಸುಖಾಸುಮ್ಮನೇ ಮಾತಾಡೋರು ಅಲ್ಲ. ಅವ್ರ ಮಾತಿಗೆ ತೂಕವಿದೆ. ನಡೆ ನುಡಿಯಲ್ಲಿ ಜಾಣ್ಮೆ ಇದೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರಾಗಿ ಎಂಟ್ರಿಯಾದವ್ರು ಇದೀಗ ಆ ಪಕ್ಷದ ಅತ್ಯುನ್ನತ ಹುದ್ದೆಯಾಗಿರೋ ಎಐಸಿಸಿ ಗದ್ದುಗೆ ಏರಿದ್ದಾರೆ. ಆ ಸ್ಥಾನಕ್ಕೆ ಏರಿದ್ದ ಕೆಲವು ಕನ್ನಡಿಗರಲ್ಲಿ ಮಲ್ಲಿಕಾರ್ಜುನ ಖರ್ಗೆ ಕೂಡ ಒಬ್ಬರು. ಆ ಸ್ಥಾನವನ್ನ ಖರ್ಗೆ ಸಮರ್ಥವಾಗಿಯೇ ನಿಭಾಯಿಸ್ತಿದ್ದಾರೆ. ಆದ್ರೆ, ಇತ್ತೀಚಿಗೆ ಅವ್ರು ಗೂಢಾರ್ಥದಲ್ಲಿ ಬಿಟ್ಟಿರೋ ಬಾಣ ರಾಜ ರಾಜಕೀಯದಲ್ಲಿ ತಲ್ಲಣ ಮೂಡಿಸಿ ಬಿಟ್ಟಿದೆ. ಅಷ್ಟಕ್ಕೂ ಆ ಬಾಣ ಏನು ಅನ್ನೋದ್ ಇಲ್ಲಿದೆ ನೋಡಿ.
ಇದು 1999ರಲ್ಲಿ ಆಗಿದ್ದು.. ಅಂದು ವಿಧಾನಸಭೆ ಚುನಾವಣೆಗೂ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಪಕ್ಷದ ನಾಯಕರಾಗಿ ಕೆಲ್ಸ ಮಾಡ್ತಾ ಇರ್ತಾರೆ. ಎಸ್.ಎಂ ಕೃಷ್ಣ ರಾಜ್ಯಸಭೆಯಲ್ಲಿರ್ತಾರೆ. ಬಟ್, ಇನ್ನೇನ್ ನಾಲ್ಕೈದು ತಿಂಗಳು ಚುನಾವಣೆ ಇದೆ ಅನ್ನೋ ಟೈಮ್‌ಗೆ ಒಂದ್ ಬದಲಾವಣೆ ನಡೆಯುತ್ತೆ. ಅದೇನ್ ಅಂದ್ರೆ, ರಾಜ್ಯಸಭೆ ಮೆಂಬರ್ ಆಗಿದ್ದ ಎಸ್.ಎಂ ಕೃಷ್ಣ ಅವ್ರನ್ನ ರಾಜ್ಯದ ಕೆಪಿಸಿಸಿ ಅಧ್ಯಕ್ಷರಾಗಿ ಮಾಡಲಾಗುತ್ತೆ. ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸ್ತಿದ್ದಂತೆ ಎಸ್.ಎಂ ಕೃಷ್ಣ ಸಿಎಂ ಸಿಂಹಾಸನ ಏರುತ್ತಾರೆ. ಹಾಗೊಂದ್ ವೇಳೆ ಎಸ್‌ಎಂ ಕೃಷ್ಣ ರಾಜ್ಯಕ್ಕೆ ಬರದೇ ದೆಹಲಿ ರಾಜಕೀಯದಲ್ಲಿಯೇ ಇದ್ರೆ ಅಂದು ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗೋದು ಪಕ್ಕಾ ಆಗಿತ್ತು. ಅಂದು ಸಿಎಂ ಸ್ಥಾನ ಮಿಸ್ ಆಗಿದ್ದನ್ನ ಇಂದು ಮಲ್ಲಿಕಾರ್ಜುನ ಖರ್ಗೆ ನೆನೆಪು ಮಾಡ್ಕೊಂಡಿದ್ದಾರೆ. ಆದ್ರೆ, ಇಷ್ಟು ದಿನ ಇಲ್ಲದನ್ನ ಈಗ ಏಕೆ ನೆನೆಪು ಮಾಡ್ಕೊಂಡ್ರು ಅಂತಾ ನೋಡ್ತಾ ಹೋದ್ರೆ ಕಾಣಿಸೋದು ಸಿಎಂ ಬಾಣ.
ಖರ್ಗೆಗೆ ಮುಂದಿನ ಸಿಎಂ ಆಗೋ ಸುಳಿವು ಸಿಕ್ತಾ?
1999 ರಲ್ಲಿ ಸಿಎಂ ರೇಸ್‌ನಲ್ಲಿದ್ದ ಮಲ್ಲಿಕಾರ್ಜುನ ಖರ್ಗೆಗೆ ನಿರಾಸೆ ಎದುರಾಗುತ್ತೆ. ಹಾಗೇ 2004 ರಲ್ಲಿ ಚುನಾವಣೆಗೂ ಮುನ್ನ ಖರ್ಗೆ ಬಾರೀ ಆ್ಯಕ್ಟಿವ್ ಆಗಿ ಕೆಲ್ಸ ಮಾಡಿದ್ರು. ಆದ್ರೆ, ಕಾಂಗ್ರೆಸ್‌ಗೆ ಬಹುಮತ ಸಿಕ್ಕಿಲ್ಲ. ಅಂತಾ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡ್ತಾವೆ. ಆವಾಗ ಸಿಎಂ ಯಾರು ಆಗ್ಬೇಕು ಅಂತಾ? ಪ್ರಶ್ನೆ ಬಂದಾಗ ಮುಂಚೂಣಿಯಲ್ಲಿದ್ದ ಹೆಸ್ರು ಮಲ್ಲಿಕಾರ್ಜುನ ಖರ್ಗೆ ಅವರದ್ದೇ ಆಗಿತ್ತು. ಬಟ್, ಜೆಡಿಎಸ್ ನಾಯಕರು ಧರ್ಮ್‌ಸಿಂಗ್ ಸಿಎಂ ಆಗೋದಕ್ಕೆ ಒಪ್ಪಿಗೆ ಸೂಚಿಸಿರೋ ಪರಿಣಾಮ ಆವಾಗ್ಲೂ ಮಲ್ಲಿಕಾರ್ಜುನ್ ಖರ್ಗೆ ಸಿಎಂ ಸ್ಥಾನ ಅನ್ನೋದ್ ತಪ್ಪಿ ಹೋಯ್ತು.
ಆಮೇಲೆ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಸೇರ್ಪಡೆಯಾಗ್ತಾ ಇದ್ದಂತೆ ಮಲ್ಲಿಕಾರ್ಜುನ ಖರ್ಗೆಯನ್ನ ಕಾಂಗ್ರೆಸ್ ನಾಯಕರು ದೆಹಲಿ ರಾಜಕೀಯಕ್ಕೆ ಕರೆಯಿಸ್ಕೊಂಡ್ರು. ಪರಿಣಾಮ 2013ರಲ್ಲಿ ಕಾಂಗ್ರೆಸ್ ಪೂರ್ಣಪ್ರಮಾಣದಲ್ಲಿ ಬಹುಮತಕ್ಕೆ ಬಂದ್ರು ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಗೋ ಯೋಗ ಕೂಡಿಬರಲೇ ಇಲ್ಲ. ಇದನ್ನೇ ಮಲ್ಲಿಕಾರ್ಜುನ್ ಖರ್ಗೆ ಅವ್ರು ಅನೇಕ ಕಥೆಗಳಿವೆ ಈಗ ಬೇಡ ಬಿಡಿ ಅಂತಾ ಹೇಳಿದ್ದು.
ಈಗ ಇರೋ ಪ್ರಶ್ನೆ ಅಂದ್ರೆ ಮಲ್ಲಿಕಾರ್ಜುನ ಖರ್ಗೆ ಅದೆಲ್ಲವನ್ನು ಈಗ ಏಕೆ ನೆನಪಿಸಿಕೊಂಡ್ರು ಅನ್ನೋದು? ಸಾಮಾನ್ಯವಾಗಿ ಅವ್ರು ರಾಜಕೀಯದ ಹಳೇ ಕಥೆಗಳನ್ನ ಹೇಳುವರೇ ಅಲ್ಲ. ತಮ್ಗೆ ಬಂದಿರೋ ಅವಕಾಶ ಕೈತಪ್ಪಿ ಹೋಗಿದ್ದನ್ನ ಯಾವತ್ತೂ ಪರಿಣಾಮಕಾರಿಯಾಗಿ ಹೇಳಿದನ್ನ ರಾಜಕೀಯ ಪಂಡಿತರು ನೋಡಿಲ್ಲ. ಆದ್ರೆ, ಈಗ ಹೇಳಿದ್ದಾರೆ. ಹಾಗಾದ್ರೆ, ಖರ್ಗೆ ಅವ್ರಿಗೆ ಸಿಎಂ ಆಗೋ ಸೂಚನೆ ಸಿಕ್ಕಿದೆಯಾ? ಖಂಡಿತ ಏನೋ ಒಂದ್ ಸೂಚನೆ ಇದೆ.
ಸಿದ್ದರಾಮಯ್ಯ, ಡಿಕೆಶಿ ನಡುವಿನ ಫೈಟ್ ಖರ್ಗೆಗೆ ವರವಾಗುತ್ತಾ?
ಮಲ್ಲಿಕಾರ್ಜುನ ಖರ್ಗೆಗೆ ತಾವು ಸಿಎಂ ಆಗ್ಬೇಕು ಅನ್ನೋ ಆಸೆ ಖಂಡಿತವಾಗಿಯೂ ಇತ್ತು. ಹೀಗಾಗಿ ಅವ್ರು ರಾಜ್ಯದ ಉದ್ದಗಲಕ್ಕೂ ಹೋರಾಡಿದ್ದಾರೆ, ಪಕ್ಷ ಸಂಘಟನೆ ಮಾಡಿದ್ದಾರೆ. ಆದ್ರೆ, ದೆಹಲಿ ರಾಜಕೀಯದತ್ತ ಮುಖ ಮಾಡಿದ್ಮೇಲೆ ಬಹುಶಃ ಸಿಎಂ ಆಗೋ ಆಸೆ ಬಿಟ್ಟು ಬಿಟ್ಟಿದ್ರು ಅನಿಸುತ್ತೆ. ಅದ್ರಲ್ಲಿಯೂ ಎಐಸಿಸಿ ಅಧ್ಯಕ್ಷರಾದ್ಮೇಲೆ ಸಿಎಂ ಆಗೋ ಆಸೆ ಖಂಡಿತವಾಗಿಯೂ ಅವ್ರಲ್ಲಿ ಕಾಣಿಸ್ತಾ ಇರ್ಲಿಲ್ಲ. ಆದ್ರೆ, ಈಗ ರಾಜ್ಯ ರಾಜಕೀಯದಲ್ಲಿ ಎದುರಾಗ್ತಿರೋ ಸನ್ನಿವೇಶ ಮಲ್ಲಿಕಾರ್ಜುನ ಖರ್ಗೆ ಅವರನ್ನ ಸಿಎಂ ಸ್ಥಾನದಲ್ಲಿ ತಂದು ಕೂರಿಸುತ್ತಾ ಅನ್ನೋದನ್ನ ನೋಡ್ಬೇಕು. ಹಾಗಾದ್ರೆ, ಸಿಎಂ ಗಾದಿಯ ಚಕ್ರವ್ಯೂಹವನ್ನ ಮಲ್ಲಿಕಾರ್ಜುನ ಭೇದಿಸ್ತಾರಾ? ಸಿದ್ದು, ಡಿಕೆ ನಡುವಿನ ಫೈಟ್‌ಗೆ ಖರ್ಗೆಗೆ ಭಾಗ್ಯದ ಬಾಗಿಲು ತೆರೆಸುತ್ತಾ? ಅಂತಾ ನೋಡ್ತಾ ಹೋದಾಗ ಕೆಲವು ರಾಜಕೀಯ ಲೆಕ್ಕಾಚಾರಗಳು ಕಣ್ಮುಂದೆ ಬರೋದು ಪಕ್ಕಾ.
ಇದನ್ನೂ ಓದಿ: ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ನೋವು ತೋಡಿಕೊಂಡ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.. ಏನಂದ್ರು?
ಸಿದ್ದು-ಡಿಕೆ ಫೈಟ್.. ಹೈಕಮಾಂಡ್‌ಗೆ ಇಕ್ಕಟ್ಟು!
ಸಿದ್ದರಾಮಯ್ಯ ಅವ್ರು ನಾನೇ 5 ವರ್ಷ ಮುಖ್ಯಮಂತ್ರಿ ಅಂತಾ ಘಂಟಾ ಘೋಷವಾಗಿ ಘೋಷಣೆ ಮಾಡಿದ್ದಾರೆ. ಅದ್ರಲ್ಲಿಯೂ ದೆಹಲಿಯಲ್ಲಿಯೇ ಇದ್ಕೊಂಡ್ ಹೈಕಮಾಂಡ್ ನಾಯಕರ ಭೇಟಿಗೂ ಮುನ್ನ ಬಾಣ ಬಿಟ್ಟು ಬಂದಿದ್ದಾರೆ. ಅದ್ಕೆ ಡಿಕೆ ಶಿವಕುಮಾರ್ ತನ್ಗೆ ಸಿದ್ದರಾಮಯ್ಯ ಅವರನ್ನ ಬೆಂಬಲಿಸದೇ ಬೇರೆ ಆಯ್ಕೆ ಇಲ್ಲ ಅಂತಾ ಹತಾಸೆಯಲ್ಲಿ ಹೇಳಿಕೆ ಕೊಟ್ಟೋ ಆಗಿದೆ. ಆದ್ರೆ, ಡಿಕೆ ಶಿವಕುಮಾರ್ ತಾವು ಸಿಎಂ ಆಗ್ಲೇ ಬೇಕು ಅಂತಾ ಬಿಗುಪಟ್ಟನ್ನ ಹೈಕಮಾಂಡ್ ಮಟ್ಟದಲ್ಲಿ ಮುಂದುವರಿಸಿದ್ದಾರೆ ಅನ್ನೋದ್ ಕನ್ಫರ್ಮ್ ಆಗಿದೆ. ತಾನು ಚುನಾವಣೆಯಲ್ಲಿ ಗೆಲುವಿಗೆ ತನಮನ ದನ ನೆರವು ನೀಡಿದ್ದೇನೆ. ಹೀಗಾಗಿ ತನ್ಗೆ ಸಿಎಂ ಕುರ್ಚಿಯನ್ನ ಇದೇ ಅವಧಿಯಲ್ಲಿ ಕೊಡ್ಲೇಬೇಕು ಅಂತಾ ಪಟ್ಟು ಹಾಕಿದ್ದಾರೆ. ಇದು ಹೈಕಮಾಂಡ್ ನಾಯಕರಿಗೆ ಇಕ್ಕಟ್ಟು ಶುರು ಮಾಡಿದೆ. ಅತ್ತ ಸಿದ್ದರಾಮಯ್ಯ ಅವ್ರನ್ನ ಕೆಳಕ್ಕಿಳಿಸುವಂತೆಯೂ ಇಲ್ಲ, ಇತ್ತ ಡಿಕೆಶಿಯನ್ನ ಕೈ ಬಿಡುವಂತೆಯೂ ಇಲ್ಲ ಅನ್ನೋ ಸ್ಥಿತಿ ನಿರ್ಮಾಣವಾಗಿದೆ.
ಹೈಕಮಾಂಡ್ ನಾಯಕರಿಗೆ ಕರ್ನಾಟಕ ಅನಿವಾರ್ಯ. ಅವರ ಕೈಯಲ್ಲಿರೋ ಕೆಲವೇ ಕೆಲವು ರಾಜ್ಯದಲ್ಲಿ ಕರ್ನಾಟಕವೇ ಅತೀ ದೊಡ್ಡ ರಾಜ್ಯ. ಹೀಗಾಗಿ ಹೇಗಾದ್ರೂ ಮಾಡಿ ಇನ್ನೂ ಎರಡೂವರೆ ವರ್ಷ ಕಾಂಗ್ರೆಸ್ ಗದ್ದುಗೆಯಲ್ಲಿ ಇರುವಂತೆ ನೋಡ್ಕೋಳ್ಳಬೇಕಾಗಿದೆ. ಆದ್ರೆ, ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಬಣಗಳನ್ನ ನಡುವಿನ ಹಗ್ಗಜಗ್ಗಾಟ ಅಕ್ಷರಶಃ ಹೈಕಮಾಂಡ್ ಸುಸ್ತಾಗಿದೆ. ಈಗ ಅವ್ರು ದಾರಿ ಕಾಣದ ಸ್ಥಿತಿಯಲ್ಲಿದ್ದು ಮಲ್ಲಿಕಾರ್ಜುನ ಖರ್ಗೆ ಅತ್ತ ಮುಖ ಮಾಡಿದಂತೆ ಕಾಣಿಸ್ತಿದೆ. ಆ ಸುಳಿವು ಸಿಕ್ಕಿರೋ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವ್ರು ಸಿಎಂ ಕುರ್ಚಿಗೆ ಬಾಣ ಬಿಟ್ಟಿದ್ದಾರೆ ಅನ್ನೋದ್ ಕಾಣಿಸ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ