/newsfirstlive-kannada/media/post_attachments/wp-content/uploads/2025/01/NAGA-2.jpg)
ಕುಂಭಮೇಳ ಬಂದಾಗ ಹೆಜ್ಜೇನಿನಂತೆ ನುಗ್ಗಿ ಬರೋ ನಾಗಾ ಸಾಧುಗಳು, ಆ ಬಳಿಕ ನೇರವಾಗಿ ಹಿಮಾಲಯದ ರಹಸ್ಯ ಗುಹೆಗಳಲ್ಲಿ ಕಠಿಣ ತಪಸ್ಸಿಗೆ ಕೂತು ಬಿಡ್ತಾರೆ. ಮತ್ತೆ ಕುಂಭಮೇಳಕ್ಕೆ ತಮ್ಮ ಎಲ್ಲಾ ಶಸ್ತ್ರಗಳೊಂದಿಗೆ ಪ್ರಯಾಗ್ ರಾಜ್ಗೆ ಬಂದಿಳಿಯುತ್ತಾರೆ. ನಾಗಾ ಸಾಧುಗಳ ಬದುಕು ಅದೆಷ್ಟು ನಿಗೂಢ ಅನಿಸುತ್ತದೆಯೋ? ಇವರಿಗೆ ನೀಡುವ ದೀಕ್ಷೆ ಕೂಡ ಅಷ್ಟೇ ರಹಸ್ಯವಾಗಿದೆ.
ಭಯಾನಕ ಸಂಗತಿ ಏನಂದ್ರೆ ನಾಗಾ ಸಾಧುಗಳಾಗಿ ದೀಕ್ಷೆ ಪಡೆಯೋ ವೇಳೆ ಜೀವ ಕಳೆದುಕೊಳ್ಳುವ ಸನ್ನಿವೇಶವೂ ನಿರ್ಮಾಣವಾಗಿರುತ್ತದೆ. ಪ್ರಾಣ ಬಿಡ್ತೀವೋ? ನಾಗಾ ಸಾಧು ಆಗ್ತೀನೋ? ಅನ್ನೋ ಧೈರ್ಯ ಇರೋರು ಮಾತ್ರವೇ ನಾಗಾ ಸಾಧು ದೀಕ್ಷೆ ಪಡೆಯೋದಕ್ಕೆ ಮುಂದೆ ಬರ್ತಾರೆ.
ಜುನಾ ಅಖಾಡಕ್ಕೆ 7000 ನಾಗಾ ಸಾಧುಗಳು..
ನಾಗಾ ಸಾಧುಗಳು.. ಸಂಸ್ಕೃತದಲ್ಲಿ ನಾಗಾ ಅಂದ್ರೆ ಬೆಟ್ಟ ಅಂತ ಅರ್ಥ.. ಬೆಟ್ಟದಂಥಾ ತಾಕತ್ತಿನ, ಬೆಟ್ಟದಂಥಾ ದೃಢ ಮನಸ್ಸಿನ, ಬೆಟ್ಟದಂಥಾ ಏಕಾಗ್ರತೆಯ ರಣಕಲಿಗಳನ್ನು ನಾಗಾ ಸಾಧುಗಳು ಅಂತಾರೆ. ನಾಗಾ ಸಾಧು ಆಗೋದು ಕಾಷಾಯ ತೊಟ್ಟು ವೇದ ವೇದಾಂತಗಳನ್ನು ಹೇಳಿದಷ್ಟು ಸರಳವೂ ಅಲ್ಲ.. ಸುಲಭವೂ ಅಲ್ಲ.. ವೇದಾಧ್ಯಯನದ ಜೊತೆ ಜೊತೆಗೆ ಸಕಲ ಶಸ್ತ್ರ ವಿದ್ಯೆಗಳನ್ನು ಕಲಿಯೋ ಕಲಿಗಳ ಕಠಿಣ ತರಬೇತಿ. ಇದೇ ಮಹಾಕುಂಭಮೇಳದಲ್ಲಿ ಬಹುದೊಡ್ಡ ಅಖಾಡ ಅನಿಸಿಕೊಂಡಿರೋ ಜುನಾ ಅಖಾಡ ಸುಮಾರು 7000 ಮಂದಿಗೆ ನಾಗಾ ಸಾಧು ದೀಕ್ಷೆ ನೀಡಿದೆ. ತ್ರಿವೇಣಿ ಸಂಗಮದ ತಟದಲ್ಲಿ ನೂತನ ನಾಗಾ ಸಾಧುಗಳಿಗೆ ದೀಕ್ಷೆ ನೀಡುವ ವೇಳೆ ಎಲ್ಲರಿಗೂ ಅವಕಾಶ ಇರೋದಿಲ್ಲ.
ದೀಕ್ಷೆಗೂ ಮೊದಲು..
ನಾಗಾ ಸಾಧು ಆಗ್ತೀನಿ ಅಂತ ಬಂದವರಿಗೆ ಮೊದಲು 10 ವರ್ಷಗಳ ಕಾಲ ಕಠಿಣ ಪರೀಕ್ಷೆಯನ್ನು ವಿಧಿಸಲಾಗುತ್ತದೆ. ಆ ಬಳಿಕವೇ ಅವರಿಗೆ ದೀಕ್ಷೆ ಕೊಡಬೇಕೋ? ಬೇಡವೋ? ಅನ್ನೋದು ನಿರ್ಧಾರವಾಗುತ್ತದೆ. ಹತ್ತು ವರ್ಷಗಳ ಬಳಿಕ ಆಯ್ಕೆ ಆಗುವ ಮಂದಿಗೆ ಪ್ರತೀ ಕುಂಭಮೇಳದಲ್ಲಿ ಬಹುದೊಡ್ಡ ಅಖಾಡ ಅನಿಸಿಕೊಂಡಿರೋ ಜುನಾ ಅಖಾಡದ ನೇತೃತ್ವದಲ್ಲಿ ನಾಗಾ ಸಾಧು ದೀಕ್ಷೆ ನೀಡಲಾಗುತ್ತದೆ. ಪಂಚಮುಂಡನದೊಂದಿಗೆ ನಾಗಾ ದೀಕ್ಷೆಯ ಪ್ರಕ್ರಿಯೆ ಆರಂಭವಾಗುತ್ತದೆ. ಅಡಿಯಿಂದ ಮುಡಿವರೆಗೆ ದೇಹದ 5 ಭಾಗಗಳಲ್ಲಿ ಬೆಳೆಯುವ ಎಲ್ಲಾ ಕೂದಲು ತೆಗೆಯಲಾಗುತ್ತದೆ. ಆ ಬಳಿಕ ಭಸ್ಮ ಬಳಿಯಲಾಗುತ್ತದೆ.. ಶಾಸ್ತ್ರೋಕ್ತವಾಗಿ ವಿಧಿಬದ್ಧವಾಗಿ ನಾಗಾ ಸಾಧು ದೀಕ್ಷೆಯ ಪ್ರಕ್ರಿಯೆ ನಡೆಯುತ್ತದೆ..
ಇದನ್ನೂ ಓದಿ: ಕುಂಭ ಮೇಳಕ್ಕೆ ಹೋದ ರಾಯಚೂರು ಸ್ವಾಮೀಜಿ.. ಅಧಿಕಾರಿಗಳಿಂದ ಮಠಕ್ಕೆ JCB ನುಗ್ಗಿಸಿ ನೆಲಸಮ..!
ಮೊದಲಿಗೆ ತಮ್ಮ ಹಿಂದಿನ 7 ಜನ್ಮ ಹಾಗೂ ಮುಂದಿನ 7 ಜನ್ಮ ಸೇರಿ ತಂದೆ ತಾಯಿಗೆ ಪಿಂಡ ಪ್ರಧಾನ ಮಾಡಬೇಕು. ತಂದೆ ತಾಯಿ ಬದುಕಿದ್ದರೂ ಸಹ ಪಿಂಡ ಪ್ರಧಾನ ಮಾಡಬೇಕು. ಇದಕ್ಕಿಂತ್ಲೂ ಘೋರ ಅನಿಸೋದು, ತಮ್ಮ ಪ್ರಾಣಕ್ಕೂ ತಾವೇ ಪಿಂಡ ಪ್ರಧಾನ ಮಾಡಬೇಕು. ಈ ಮೂಲಕ ತಮ್ಮ ದೇಹಕ್ಕೂ ತಮಗೂ ಅಧಿಕಾರವಿಲ್ಲ ಅನ್ನೋದನ್ನ ಶಾಸ್ತ್ರೋಕ್ತವಾಗಿ ಒಪ್ಪಿಕೊಳ್ಳಬೇಕು. ಆ ಬಳಿಕ ನಾಗಾ ಸಾಧು ಆಗೋ ವ್ಯಕ್ತಿಯ ಆತ್ಮವಷ್ಟೇ ಅವರಿಗೆ ಸೇರಿದ್ದು. ಉಳಿದಂತೆ ದೇಹವೂ ಸಹ ಅವರ ಸುಪರ್ದಿಗೆ ಸೇರಿದ್ದಲ್ಲ.. ದೇಹ ಅವರು ಸೇರುವ ಅಖಾಡದ ಸುಪರ್ದಿಗೆ ಬರುತ್ತದೆ. ಇದೇ ಕಾರಣಕ್ಕೇ ನೋಡಿ, ಜೀವ ಬಿಟ್ಟು ಹೊಸ ಹುಟ್ಟು ಪಡೆಯೋ ಸಾಹಸದ ಪ್ರಕ್ರಿಯೆಯಲ್ಲಿ ನಾಗಾ ಸಾಧುಗಳು ಗೆದ್ದು ಬರಬೇಕಾಗುತ್ತದೆ.
ವಿಜಯ ಹವನದಿಂದ ಕಠಿಣ ದೀಕ್ಷೆ!
10 ವರ್ಷಗಳ ಕಠಿಣ ಪರೀಕ್ಷೆ ಬಳಿಕವೇ ಕುಂಭಮೇಳದಲ್ಲಿ ವಿಜಯ ಹವನ ಸಂಸ್ಕಾರದಿಂದ ದೀಕ್ಷೆಯ ಪ್ರಕ್ರಿಯೆ ಆರಂಭಿಸುತ್ತಾರೆ. ವಿಜಯ ಹವನ ಸಂಸ್ಕಾರ ದೀಕ್ಷೆ ಅಂದರೆ ಸತತ 24 ಗಂಟೆಗಳ ಕಾಲ ಉಪವಾಸವಿದ್ದು, ಹನಿ ನೀರನ್ನೂ ಮುಟ್ಟದೇ ನಾಗಾ ಸಾಧು ಆಗೋದಕ್ಕೆ ದೇಹ ಮನಸ್ಸುಗಳನ್ನು ಸಜ್ಜುಗೊಳಿಸೋ ಪ್ರಕ್ರಿಯೆಯ ಮೊದಲ ಅಧ್ಯಾಯ. ಕರ್ನಾಟಕ ಮೂಲದ ಸಾಧು ಎಂಟೆಕ್ ಬಾಬಾ ಎಂದೇ ಖ್ಯಾತಿ ಗಳಿಸಿರೋ ದಿಗಂಬರ್ ಕೃಷ್ಣಗಿರಿ ಮಹಾರಾಜ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ದಿಗಂಬರ್ ಕೃಷ್ಣಗಿರಿ ಮಹಾರಾಜ್ ನೀಡಿದ ಮಾಹಿತಿ ಏನು..
ನಾಗಾ ಸಾಧು ಅನ್ನೋ ಹುದ್ದೆಯೇ ಸನಾತನ ಧರ್ಮದಲ್ಲಿ ಅತ್ಯುನ್ನತವಾದದ್ದು. ಅಂಥಾ ಹುದ್ದೆ ಪಡೆಯೋದು ಸುಲಭವೂ ಅಲ್ಲ.. ತಮ್ಮದೇ ಪ್ರಾಣಕ್ಕೂ ಪಿಂಡ ಪ್ರಧಾನ ಮಾಡಿ ತಾನಿನ್ನು ಬದುಕಿಲ್ಲ ಅನ್ನೋದನ್ನ ಧಾರ್ಮಿಕವಾಗಿ ಹೇಳಿಕೊಂಡು ಗುರುವಿನ ಪಾದಕ್ಕೆರಗಿ ಗಟ್ಟಿಗನಾಗೋ ಕೆಲಸವೇ ಕಡುಕಷ್ಟಕರವಾದದ್ದು.ಅಸಲಿಗೆ ಕಷ್ಟಕರ ದೀಕ್ಷೆ ಇದಲ್ಲವೇ ಅಲ್ಲ.. ಇದಕ್ಕಿಂತ್ಲೂ ಭೀಕರ ಅನಿಸೋದು. ರಾತ್ರಿಯ ರಹಸ್ಯ ದೀಕ್ಷೆಯ ಪ್ರಕ್ರಿಯೆ. ಈ ಪ್ರಕ್ರಿಯೆಯ ವೇಳೆ ಪ್ರಾಣ ಹೋದ್ರೂ ಕೇಳಂಗಿಲ್ಲ.. ಪ್ರಾಣ ಹೋಗೋ ಸಾಧ್ಯತೆಯೇ ಹೆಚ್ಚಿರುತ್ತದೆ.
ಇದನ್ನೂ ಓದಿ: ಮಹಾಕುಂಭಮೇಳದ ಮೊನಾಲಿಸಾಗೆ ಬಾಲಿವುಡ್ ಆಫರ್.. ನೀಲಿ ಕಣ್ಗಳ ಚೆಲುವೆಗೆ ಒಲಿದ ಅದೃಷ್ಟ!
ಜುನಾ ಅಖಾಡ ದಿನೇಶ್ ಗಿರಿ ಮಹಾರಾಜ್ ಮಾತನಾಡಿ.. ಇವತ್ತು ನಾಗಾ ಸಾಧುಗಳಿಗೆ ವಿಜಯ ಹವನ ಸಂಸ್ಕಾರ ನಡೆಯುತ್ತದೆ. ಬಳಿಕ ಇತರೆ ಸಂಸ್ಕಾರಗಳು ನಡೆಯಲಿವೆ. ಅಖಾಡಕ್ಕೆ ಕರೆದೊಯ್ದು ಭಗವಾಧ್ವಜದ ಅಡಿಯಲ್ಲಿ ಹಿರಿಯ ಸಾಧುಗಳ ಸಮಕ್ಷಮದಲ್ಲಿ ಕಠಿಣ ಸಂಸ್ಕಾರ ನಡೆಯುತ್ತದೆ. ಈ ಕಠಿಣ ಪ್ರಕ್ರಿಯೆಯಲ್ಲಿ ಪ್ರಾಣ ಕೂಡ ಹೋಗಬಹುದು. ಶರೀರದಿಂದ ಜೀವ ಕೂಡ ಹೋಗಬಹುದು. ಅದು ತುಂಬಾ ಕಠಿಣವಾದದ್ದು. ಇತರೆ ಸಂಸ್ಕಾರಗಳೂ ನಡೆಯುತ್ತವೆ. ಆ ಕಠಿಣ ಸಂಸ್ಕಾರಗಳನ್ನು ಬಹಿರಂಗವಾಗಿ ಹೇಳುವಂತಿಲ್ಲ. ನಾಗಾ ಸಾಧು ಆದ್ಮೇಲೆ ಯಾವ ಸಂಸ್ಕಾರ ನಡೆಯುತ್ತೆ ಅನ್ನುವಂಥದ್ದು ರಹಸ್ಯಮಯ ಸಂಸ್ಕಾರ. ಅದನ್ನ ನಾವು ಹೇಳುವಂತೆಯೂ ಇಲ್ಲ. ಅದು ಪ್ರಾಣದೊಂದಿಗೆ ಆಡುವ ಆಟವೇ ಆಗಿದೆ. ಸನಾತನ ಸೇನೆಗೆ ಸೇನಾನಿ ಮಾಡೋದಕ್ಕೆ ಇದೆಲ್ಲಾ ನಡೆಯುತ್ತೆ. ಆ ಸಂದರ್ಭ ಏನು ಬೇಕಾದ್ರೂ ಆಗಬಹುದು ಎನ್ನುತ್ತಾರೆ.
ವಿಜಯ ಹವನ ಸಂಸ್ಕಾರದ ಬಳಿಕ ಅಖಾಡಕ್ಕೆ ನೂತನ ನಾಗಾ ಸಾಧುಗಳನ್ನು ಕರೆದೊಯ್ಯಲಾಗುತ್ತದೆ. ಅಲ್ಲಿ ಧರ್ಮಧ್ವಜದ ಕೆಳಗೆ ಕೂರಿಸಿ ಹಿರಿಯ ನಾಗಾ ಸಾಧುಗಳು ಬಂದು ಅಸಲಿ ಪ್ರಕ್ರಿಯೆ ಆರಂಭಿಸ್ತಾರೆ. ಆ ಸಂದರ್ಭ ಪ್ರಾಣವೂ ಹೋಗಬಹುದು. ಆ ನಡುರಾತ್ರಿಯ ಕಠಿಣ ಪ್ರಕ್ರಿಯೆ ಬಗ್ಗೆ ಯಾರಂದ್ರೆ ಯಾರೂ ಹೇಳೋದಿಲ್ಲ. ಅಲ್ಲಿ ಯಾವ ಪೂಜೆ, ಯಾವ ಮಂತ್ರ ಹೇಳ್ತಾರೆ ಅನ್ನೋದು ಗುರುವಿಗೆ ಮಾಡೋ ಮೋಸ ಎಂದೇ ನಂಬಲಾಗುತ್ತದೆ. ಹಾಗಾಗಿಯೇ ಯಾವ ನಾಗಾ ಸಾಧು ಕೂಡ ಆ ಬಗ್ಗೆ ಹೇಳೋದಿಲ್ಲ. ಆ ರಹಸ್ಯ ಹಾಗೂ ಕಠಿಣ ದೀಕ್ಷೆಯ ಪ್ರಕ್ರಿಯೆ ಜೀವದೊಂದಿಗೆ ಆಡೋ ಆಟವೇ ಆಗಿರುತ್ತದೆ.
ಇದನ್ನೂ ಓದಿ: ಆಸ್ಪತ್ರೆಯಿಂದ VIDEO: ಮಹಾ ಕುಂಭಮೇಳದಲ್ಲೂ ಕನ್ನಡದ ಕಲರವ; ನ್ಯೂಸ್ಫಸ್ಟ್ಗೆ ಕನ್ನಡಿಗರು ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ