/newsfirstlive-kannada/media/post_attachments/wp-content/uploads/2024/10/Self-Hatred.jpg)
ನಮ್ಮನ್ನು ನಾವು ದ್ವೇಷಿಸಿಕೊಳ್ಳುವುದು ಇಲ್ಲವೇ ಸ್ವಯಂ ದ್ವೇಷ ಅನ್ನೋದು ಜೀವನದ ಪ್ರತಿ ಹಂತದಲ್ಲಿಯೂ ನಮ್ಮನ್ನು ದುರ್ಬಲಗೊಳಿಸುತ್ತಾ ಹೋಗುತ್ತದೆ. ಅದರ ಬೇರುಗಳು ನಮ್ಮ ಗ್ರಹಿಕೆಗಳ ಹಾಗೂ ಭಾವನೆಗಳ ಮೇಲೆ ವಿಪರೀತ ಋಣಾತ್ಮಕ ಪರಿಣಾಮ ಬೀರಲು ಆರಂಭಿಸುತ್ತವೆ. ಇದರಿಂದ ಆಚೆ ಬರುವುದೇ ಸಂತೋಷದ ಹಾಗೂ ನಮ್ಮನ್ನು ನಾವು ಸರಿಯಾದ ದಿಕ್ಕಿನಲ್ಲಿ ನಡೆಸುವ ಒಂದು ದಾರಿ. ಒಂದು ಬಾರಿ ಈ ವಿಷವರ್ತುಲಕ್ಕೆ ಸಿಲುಕಿದಲ್ಲಿ ಮುಗೀತು, ಅದರಿಂದ ಆಚೆ ಬರಲು ಹೆಣಗಾಡಬೇಕಾಗುತ್ತದೆ.
ಇದನ್ನೂ ಓದಿ:ಕಿತ್ತಳೆ ಹಣ್ಣು ತಿಂದಮೇಲೆ ಸಿಪ್ಪೆಯನ್ನು ಎಸೆಯುತ್ತಿದ್ದೀರಾ? ಆ ತಪ್ಪು ಮಾಡಬೇಡಿ, ಅದರಲ್ಲಿವೆ 6 ಪ್ರಯೋಜನಗಳು
ನಿಮ್ಮ ಬಗ್ಗೆ ನೀವೇ ಟೀಕಿಸಿಕೊಳ್ಳುತ್ತಿದ್ದೀರಾ? ನಿಮ್ಮಲ್ಲಿರುವ ನ್ಯೂನತೆಗಳ ಬಗ್ಗೆ ನಿಮಗೆ ಅಸಹ್ಯಕರ ಭಾವನೆಯೊಂದು ಬೆಳೆದುಬಿಟ್ಟಿದೆಯಾ? ನಿಮ್ಮ ಉತ್ತರ ಹೌದು ಎಂದಾದರೇ ನೀವು ಸ್ವಯಂ ದ್ವೇಷದೊಳಗಡೆ ಸಿಲುಕಿದ್ದೀರಿ ಎಂದೇ ಅರ್ಥ. ಇದು ನಿಮ್ಮ ಅಂತರಂಗವೇ ನಿಮ್ಮ ನ್ಯೂನತೆಗಳನ್ನು ಟೀಕಿಸುತ್ತಾ ನಿಮ್ಮನ್ನು ನೀವೇ ಇಷ್ಟಪಡದಂತೆ ಮಾಡಿಬಿಡುವ ಸಾಧ್ಯತೆಗಳು ಇವೆ.
ಸ್ವಯಂ ದ್ವೇಷ ಅನ್ನೋದು ಅನೇಕ ಕಾರಣಗಳಿಂದ ಹುಟ್ಟಿಕೊಳ್ಳುತ್ತದೆ. ಈ ಹಿಂದೆ ಮಾಡಿದಂತಹ ತಪ್ಪುಗಳು. ಅವಾಸ್ತವಿಕ ಕಲ್ಪನೆಗಳು, ಬದುಕಿನಲ್ಲಿ ಕಾಡಿರುವ ವೈಫಲ್ಯಗಳು ಬೇರೆಯವರಿಂದ ಆದ ಕೆಟ್ಟ ಅನುಭವಗಳು ಇವೆಲ್ಲವೂ ನಿಮ್ಮನ್ನು ಸ್ವಯಂ ಟೀಕೆಯ ವರ್ತುಲದಲ್ಲಿ ಬಂಧಿಯನ್ನಾಗಿ ಮಾಡಿಮಾಡಿಬಿಡುತ್ತವೆ. ಇವೆಲ್ಲವೂ ನಿಮ್ಮ ಬಗ್ಗೆ ನಿಮಗೆ ಬೇಸರ ಹುಟ್ಟಿಸುವ, ನಾನು ಸರಿಯಾಗಿಲ್ಲ ಎಂಬ ಭಾವ ಹುಟ್ಟಿಸುವ ಕಾರ್ಯ ಮಾಡುತ್ತವೆ ಎಂಬುದರ ಬಗ್ಗೆ ನಿಮಗೆ ಎಚ್ಚರವಿರಲಿ. ಈ ಒಂದು ಋಣಾತ್ಮಕ ಗ್ರಹಿಕೆಗಳು ನಿಮ್ಮ ಬದುಕಿನ ಎಲ್ಲ ಹಂತಗಳ ಮೇಲೆಯೂ ಪರಿಣಾಮ ಬೀರುತ್ತವೆ. ನಿಮ್ಮ ಕೆಲಸ, ಸಂಬಂಧಗಳು ಹೀಗೆ ಎಲ್ಲವನ್ನೂ ಮುಗಿಸಿಹಾಕಿ ಬಿಡುತ್ತವೆ. ನೀವು ಇದರಿಂದ ಆಚೆ ಬರಬೇಕು ಅಂದ್ರೆ ಮೊದಲು ನಿಮ್ಮ ತರ್ಕಕ್ಕೆ ನಿಲುಕದ ನಿಮ್ಮ ಚಿಂತನೆಯ ವ್ಯವಸ್ಥೆಯನ್ನು ಹೊಡೆದು ಹಾಕಬೇಕು. ಜಗತ್ತಿನಲ್ಲಿ ಯಾರೂ ಕೂಡ ಪರ್ಫಕ್ಟ್ ಅಲ್ಲ ಅನ್ನೋದರ ಅರಿವು ನಿಮಗೆ ಇರಬೇಕು.
ಇದನ್ನೂ ಓದಿ:Drinking Water: ನೀರನ್ನು ಕುಡಿಯಲು ಸರಿಯಾದ ಟೈಮ್ ಯಾವ್ದು? ನಿಮ್ಮ ಆರೋಗ್ಯ ಮತ್ತಷ್ಟು ಸೂಪರ್..!
ಸ್ವಯಂ ದ್ವೇಷ ಅನ್ನೋದು ರಾತ್ರೋರಾತ್ರಿ ಹುಟ್ಟುವಂತಹದ್ದಲ್ಲ. ಅದು ನಮ್ಮಲ್ಲಿ ಹಂತ ಹಂತವಾಗಿ ಬೆಳೆದಿರುತ್ತದೆ. ನಮ್ಮನ್ನು ನಾವು ಋಣಾತ್ಮಕವಾಗಿ ನಮ್ಮೊಳಗೆ ಚಿತ್ರಿಸಿಕೊಳ್ಳುತ್ತಾ ಹೋಗುವುದರೊಂದಿಗೆ ಇದು ಬೃಹತ್ತಾಕಾರವಾಗಿ ಬೆಳೆದು ನಮ್ಮನ್ನೇ ತಿನ್ನಲು ಆರಂಭಿಸಿರುತ್ತದೆ. ಈ ಒಂದು ಸಮಸ್ಯೆ ಹುಟ್ಟಲು ಅನೇಕ ಕಾರಣಗಳಿರುತ್ತವೆ.
ಕೆಲವು ಅಧ್ಯಯನಗಳು ಹೇಳವ ಪ್ರಕಾರ ಬಾಲ್ಯವೇ ನಮ್ಮ ನಡುವಳಿಕೆಯ ಮೆಟ್ಟಿಲುಗಳು. ಬಾಲ್ಯದಲ್ಲಿ ಒಂದು ವೇಳೆ ನಮಗೆ ನಿರ್ಲಕ್ಷ್ಯ ಹಾಗೂ ನಿಂದನೆಯಂತಹ ನಡುವಳಿಕೆಗಳನ್ನು ಎದುರಿಸಿದಲ್ಲಿ ಮುಂದೆ ಅದು ಸ್ವಯಂ ದ್ವೇಷಕ್ಕೆ ಕಾರಣವಾಗುತ್ತದೆ. ಬಾಲ್ಯದಲ್ಲಿ ಪೋಷಕರು ಅಥವಾ ಆರೈಕೆ ಮಾಡಿದವರಿಂದ ಆಗಿರುವ ಆಘಾತದಿಂದಲೂ ಕೂಡ ಈ ಒಂದು ಸಮಸ್ಯೆ ಬೆಳೆದಿರುತ್ತದೆ.
ಇದು ಮಾತ್ರವಲ್ಲ ನಮ್ಮನ್ನು ನಾವು ಇನ್ನೊಬ್ಬರಿಗೆ ಹೋಲಿಕೆ ಮಾಡಿಕೊಂಡು ನೋಡುವುದು ಕೂಡ ಈ ಸಮಸ್ಯೆಗೆ ಮೂಲ ಕಾರಣವಾಗುತ್ತದೆ. ದೇಹದ ಸೌಂದರ್ಯದಿಂದ ಹಿಡಿದು ಪ್ರತಿಯೊಂದನ್ನು ನಾವು ಇನ್ನೊಬ್ಬರೊಂದಿಗೆ ಹೋಲಿಸಿಕೊಂಡು ನೋಡುತ್ತೇವೆ ಅದು ಕೂಡ ಈ ಸಮಸ್ಯೆಗೆ ಕಾರಣವಾಗುತ್ತದೆ. ಇಂತಹ ಹತ್ತು ಹಲವು ಕಾರಣಗಳಿಂದ ಈ ಸಮಸ್ಯೆ ಹೆಮ್ಮರವಾಗಿ ಬೆಳೆದಿರುತ್ತದೆ. ಅದರಿಂದ ಆಚೆ ಬರಲು ಹಲವು ಉಪಾಯಗಳಿವೆ.
1. ನಿಮ್ಮನ್ನು ನೀವು ಗಮನಿಸಿ ನೋಡಿ
ನಮ್ಮ ಚಿಂತನೆಗಳು, ನಮ್ಮ ಯೋಚನೆಗಳು ನಮ್ಮ ವ್ಯಕ್ತಿತ್ವವನ್ನು ಬೆಳೆಸುತ್ತವೆ. ಹೀಗಾಗಿ ನಿಮ್ಮ ಯೋಚನೆಗಳ ಬಗ್ಗೆ ವಿಪರೀತ ಗಮನವನ್ನು ಕೊಡಿ. ಯಾವಾಗ ಮತ್ತು ಏಕೆ ನಿಮ್ಮನ್ನು ನೀವು ಅತಿಯಾಗಿ ಟೀಕಿಸಿಕೊಳ್ಳುತ್ತೀರಿ ಅನ್ನೋದನ್ನ ಗಮನಿಸಿ
2. ನಿಮ್ಮ ಯೋಚನೆಗಳಿಗೆ ನೀವೇ ಸವಾಲು ಹಾಕಿ
ಋಣಾತ್ಮಕ ಯೋಚನೆಗಳು ಹೇಗೆ ಬರುತ್ತವೆಅನ್ನೋದನ್ನ ಗಮನಿಸಿದ ಮೇಲೆ ಅವುಗಳಿಗೆ ನೀವು ಸವಾಲು ಹಾಕಬೇಕು. ಯಾವುದು ಇದಕ್ಕೆ ಬೆಂಬಲವಾಗಿ ನಿಂತಿದೆ ಅನ್ನೋದರ ಸಾಕ್ಷಿಯನ್ನಿಟ್ಟುಕೊಂಡು ಅವುಗಳನ್ನು ಮೆಟ್ಟಿ ನಿಲ್ಲಬೇಕು
3. ನಿಮ್ಮ ನಿಮಗೊಂದು ಸಹಾನುಭೂತಿಇರಲಿ
ನೀವು ಈ ರೀತಿಯ ತಪ್ಪು ಮಾಡಿದಾಗಲೆಲ್ಲಾ ನಿಮ್ಮ ಬಗ್ಗೆ ನಿಮಗೊಂದು ಸಹಾನುಭೂತಿ ಇರಲಿ. ನಿಮ್ಮನ್ನು ನೀವು ಸಂತೈಸಿಕೊಳ್ಳಿ. ನೀವು ಅಂದುಕೊಂಡಿದ್ದೇ, ನೀವು ಯೋಚನೆ ಮಾಡಿದ್ದೇ ಅಂತಿಮ ಸತ್ಯವಲ್ಲ ಎಂಬುದನ್ನು ನಿಮಗೆ ನೀವೆ ಮನವರಿಕೆ ಮಾಡಿಕೊಳ್ಳಿ.
4. ಚಟುವಟಿಕೆಯಿಂದ ಇರಬೇಕು
ಮನುಷ್ಯ ಖಾಲಿ ಇದ್ದಷ್ಟು ಚಿಂತೆಗಳು ಹಾಗೂ ವಿಚಾರಗಳು ಅವನನ್ನು ತಿಂದು ಹಾಕುತ್ತವೆ. ಹೀಗಾಗಿ ಯಾವುದಾದರೂ ಒಂದು ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಓದು, ಮನಸ್ಸನ್ನು ಉಲ್ಲಾಸಗೊಳಿಸುವಂತಹ ಚಟುವಟಿಕೆಗಳು, ಟ್ರೆಕ್ಕಿಂಗ್, ಒಂದು ಲಾಂಗ್ ಡ್ರೈವ್ ಹೀಗೆ ನಿಮ್ಮನ್ನು ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
5. ನೀವು ಮುಟ್ಟಲು ಸಾಧ್ಯವಿರುವ ಗುರಿಯಿಟ್ಟುಕೊಳ್ಳಿ
ಒಂದು ಗೋಲ್ ಫಿಕ್ಸ್ ಮಾಡಿಕೊಳ್ಳಿ, ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಒಂದು ಗುರಿಯಿಟ್ಟುಕೊಂಡು ಅದನ್ನು ತಲುಪುವುದರ ಬಗ್ಗೆ ಯೋಚನೆ ಮಾಡಿ.
6. ನಿಮ್ಮನ್ನು ನೀವೇ ಮೆಚ್ಚಿಕೊಳ್ಳಿ
ಏನಾದರೂ ಒಂದು ಸಾಧನೆ ಮಾಡಿದಾಗ. ಸಣ್ಣದೊಂದು ಸಕ್ಸಸ್ ಸಿಕ್ಕಾಗ ನಿಮ್ಮನ್ನು ನೀವು ಮೆಚ್ಚಿಕೊಳ್ಳಿ, ನಿಮ್ಮ ಬೆನ್ನನ್ನು ನೀವೇ ಒಂದು ಬಾರಿ ಚೆಪ್ಪರಿಸಿಕೊಳ್ಳಿಪರವಾಗಿಲ್ಲ. ಜೀವನದ ಸಣ್ಣ ಸಣ್ಣ ಖುಷಿಗಳನ್ನು ಸಂಭ್ರಮಿಸುವುದರಲ್ಲಿ ದೊಡ್ಡ ದೊಡ್ಡ ಲಾಭಗಳಿವೆ.
7 ನಿಮ್ಮ ಬಲದ ಬಗ್ಗೆ ನಿಮಗೆ ಗೊತ್ತಿರಲಿ
ಬಲಹೀನತೆ ಮಾತ್ರವಲ್ಲ ನಿಮ್ಮ ಬಲದ ಬಗ್ಗೆಯೂ ನಿಮಗೆ ಗೊತ್ತಿರಬೇಕು. ಅದರ ಬಗ್ಗೆ ನಿಮಗೊಂದು ಹೆಮ್ಮೆ ಇರಲಿ. ಅದನ್ನು ಸಂಭ್ರಮಿಸಿ. ಇದು ನಿಮ್ಮಲ್ಲಿ ಬೇರೆಯದ್ದೇ ಆತ್ಮವಿಶ್ವಾಸ ತುಂಬುತ್ತದೆ. ನೀವು ಸರಳವಾಗಿ ಸ್ವಯಂ ದ್ವೇಷದಿಂದ ಆಚೆ ಬರಬಹುದು.
ಆದರೆ ನೆನಪಿರಲಿ, ಸ್ವಯಂ ದ್ವೇಷ ಎಂಬುದು ಹೇಗೆ ರಾತ್ರೋರಾತ್ರಿ ಬೆಳೆಯುವುದಿಲ್ಲವೋ? ಹಾಗೆಯೇ ಅದರಿಂದ ಹೊರ ಬರುವುದು ಕೂಡ ರಾತ್ರೋರಾತ್ರಿಯಲ್ಲಿಯೇ ಆಗುವಂತಹದ್ದಲ್ಲ. ಸ್ವಲ್ಪ ಸಹನೆ ಹಾಗೂ ತಾಳ್ಮೆಯ ಅಗತ್ಯವಿರುತ್ತದೆ. ಈ ಕೆಲವು ಚಟುವಟಿಕೆಗಳನ್ನು ನೀವು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಹಂತ ಹಂತವಾಗಿ ನೀವು ಅದರಿಂದ ಆಚೆ ಬರುತ್ತೀರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ