/newsfirstlive-kannada/media/post_attachments/wp-content/uploads/2025/07/A_KHATA.jpg)
ಬೆಂಗಳೂರು ನಗರದಲ್ಲಿ ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಬದಲಾಯಿಸಲು ಅರ್ಜಿ ಸಲ್ಲಿಕೆಗೆ ಅನುಕೂಲವಾಗುವಂತೆ ಮುಂದಿನ 15 ದಿನಗಳೊಳಗೆ ಆನ್ ಲೈನ್ ವ್ಯವಸ್ಥೆ ಆರಂಭಿಸಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.
ರಾಜ್ಯ ಸರ್ಕಾರವು ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡಲು ಈಗಾಗಲೇ ರಾಜ್ಯದ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದೆ. ಈ ಬಗ್ಗೆ ಸರ್ಕಾರವು ಆದೇಶ ಹೊರಡಿಸಿ ಅಧಿಸೂಚನೆ ಹೊರಡಿಸಿದೆ. ಆನ್ ಲೈನ್ ವ್ಯವಸ್ಥೆ ಜಾರಿಯಾದ ಬಳಿಕ ಬಿ ಖಾತಾ ಆಸ್ತಿ ಹೊಂದಿರುವವರು ಎ ಖಾತಾ ನೀಡುವಂತೆ ಆನ್ ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಬಿ ಖಾತಾ ಆಸ್ತಿಗಳನ್ನು ಎ ಖಾತಾ ಆಸ್ತಿಗಳಾಗಿ ಪರಿವರ್ತನೆ ಮಾಡಿಕೊಳ್ಳಲು ಹಾಗೂ ಯಾವುದೇ ಖಾತೆ ಹೊಂದಿಲ್ಲದವರು ಎ ಖಾತಾಗೆ ಅರ್ಜಿ ಸಲ್ಲಿಸಬಹುದು ಎಂದು ಬಿಬಿಎಂಪಿ ಕಮೀಷನರ್ ಮಹೇಶ್ವರ್ ರಾವ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
400 ರಿಂದ 700 ಕೋಟಿ ರೂಪಾಯಿ ಸಂಗ್ರಹ
ಸಾರ್ವಜನಿಕರು ಎ ಖಾತಾಗಾಗಿ ಯಾವುದೇ ಕಚೇರಿಗೆ ಅಲೆದಾಡಬೇಕಾಗಿಲ್ಲ. ತಾವಿರುವ ಜಾಗದಿಂದಲೇ ಆನ್ ಲೈನ್ನಲ್ಲಿ ಅರ್ಜಿ ಸಲ್ಲಿಸಿ, ತಮ್ಮ ಸ್ವತ್ತುಗಳಿಗೆ ಎ ಖಾತೆಯನ್ನು ಪಡೆಯಬಹುದು. ಎ ಖಾತಾಗಾಗಿ ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸಬಾರದು. ಯಾವುದೇ ಅಧಿಕಾರಿಗೆ ಲಂಚ ನೀಡುವ ಅಗತ್ಯವೂ ಇಲ್ಲ. ಶೀಘ್ರದಲ್ಲೇ ಆನ್ ಲೈನ್ ವ್ಯವಸ್ಥೆ ಆರಂಭಿಸಲಾಗುವುದು ಎಂದು ಮಹೇಶ್ವರ್ ರಾವ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಬಿ ಖಾತಾ ಆಸ್ತಿಗಳನ್ನು ಎ ಖಾತಾವನ್ನಾಗಿ ಪರಿವರ್ತಿಸುವುದರಿಂದ 400 ರಿಂದ 700 ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ. ಮುಂದಿನ 2 ವಾರಗಳಲ್ಲಿ ಎ ಖಾತಾ ವಿತರಣೆಗೆ ಸ್ಟಾಂಡರ್ಡ್ ಅಪರೇಟಿಂಗ್ ಪ್ರೊಸಿಜರ್ ಬಿಡುಗಡೆ ಮಾಡಲಾಗುವುದು. ಮನೆ ಮನೆ ಸರ್ವೇಯಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ 32 ಲಕ್ಷ ಆಸ್ತಿಗಳಿರುವುದು ಕಂಡು ಬಂದಿದೆ. ಸುಮಾರು 7 ಲಕ್ಷ ಸ್ವತ್ತುಗಳು ತೆರಿಗೆ ಜಾಲದಿಂದ ಹೊರಗೆ ಉಳಿದಿವೆ. ಈ ಆಸ್ತಿಗಳನ್ನು ತೆರಿಗೆ ಜಾಲದ ವ್ಯಾಪ್ತಿಗೆ ತಂದರೇ, ಅಧಿಕ ತೆರಿಗೆ ವಸೂಲಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಮಹೇಶ್ವರ್ ರಾವ್ ಹೇಳಿದ್ದಾರೆ.
ಹಾಗಾದರೇ, ಎ ಖಾತಾಗೆ ಎಷ್ಟು ಹಣ ಕಟ್ಟಬೇಕು?
ಸಾರ್ವಜನಿಕ ರಸ್ತೆಗಳೆಂದು ಘೋಷಿಸಲ್ಪಟ್ಟ ಬಡಾವಣೆಗಳಲ್ಲಿರುವ ಸ್ವತ್ತುಗಳಿಗೆ ಮಾರ್ಗಸೂಚಿ ದರದ ಶೇ.5 ರಷ್ಟು ಶುಲ್ಕ ಪಾವತಿಸಿ, ಏಕ ನಿವೇಶನಕ್ಕೆ ಎ ಖಾತಾ ಕೋರಿ ಅರ್ಜಿ ಸಲ್ಲಿಸಬೇಕು. ಚದರ ಅಡಿಗೆ 5 ಸಾವಿರ ರೂಪಾಯಿ ಮಾರ್ಗಸೂಚಿ ದರ ಇರುವ ಪ್ರದೇಶಗಳಲ್ಲಿ 1,200 ಚದರ ಅಡಿ ವಿಸ್ತೀರ್ಣದ ಬಿ ಖಾತಾ ನಿವೇಶನಕ್ಕೆ ಎ ಖಾತಾ ಪಡೆಯಲು 3 ಲಕ್ಷ ರೂಪಾಯಿ ಪಾವತಿ ಮಾಡಬೇಕಾಗುತ್ತೆ. ಇದಲ್ಲದೇ, ಭೂ ಪರಿವರ್ತನೆ ಶುಲ್ಕ, ಸುಧಾರಣೆ ಶುಲ್ಕ ಹಾಗೂ ಇನ್ನಿತರೆ ಶುಲ್ಕಗಳನ್ನು ಜನರು ಬಿಬಿಎಂಪಿಗೆ ಕಟ್ಟಬೇಕಾಗಿದೆ ಎಂದು ಬಿಬಿಎಂಪಿ ಮಾಜಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಟೀಕಿಸಿದ್ದಾರೆ.
ಇದನ್ನೂ ಓದಿ:ದರ್ಶನ್ ಫ್ಯಾನ್ಸ್ ವಿರುದ್ಧ ಕೇಸ್; ರಮ್ಯಾ ಕೊಟ್ಟ 43 ಅಕೌಂಟ್ಗಳಲ್ಲಿ A1, A2 ಆರೋಪಿ ಯಾರು, ಪ್ರಥಮ್ ಏನಂದ್ರು?
ಬಿ ಖಾತೆ ಹೊಂದಿರುವ ಬಹುಮಹಡಿ ಪ್ಲ್ಯಾಟ್ ಗಳಿಗೆ ಅಥವಾ ಒಂದೇ ನಿವೇಶನದಲ್ಲಿ ನಿರ್ಮಿಸಿರುವ ಬಹುಮಹಡಿ ಪ್ಲ್ಯಾಟ್ಗಳಿಗೆ ಭೂ ಪರಿವರ್ತನೆ ಶುಲ್ಕ ಪಾವತಿಸಿದ ಬಳಿಕ, ಸ್ವಾಧೀನಾನುಭವ ಪ್ರಮಾಣಪತ್ರ ನೀಡುತ್ತಾರೆ. ಬಳಿಕ ಪ್ಲ್ಯಾಟ್ ಮಾಲೀಕರಿಗೆ ಎ ಖಾತಾ ನೀಡಲಾಗುತ್ತೆ. ಒಂದೊಮ್ಮೆ ಬೈಲಾಗೆ ವಿರುದ್ಧವಾಗಿ ಕಟ್ಟಡ ನಿರ್ಮಿಸಿದ್ದರೇ, ಬಿ ಖಾತಾದಲ್ಲೇ ಮುಂದುವರಿಸಲಾಗುತ್ತೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ತ್ರಿಶಂಕು ಸ್ಥಿತಿಗೆ ಸಿಲುಕುತ್ತಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 25 ಲಕ್ಷ ಕಟ್ಟಡಗಳ ಪೈಕಿ ಬೈಲಾ ಪ್ರಕಾರ, ನಿರ್ಮಿಸಿರುವ ಶೇ.5 ರಷ್ಟು ಕಟ್ಟಡಗಳು ಕೂಡ ಸಿಗಲ್ಲ ಎಂದು ಪದ್ಮನಾಭ ರೆಡ್ಡಿ ಹೇಳಿದ್ದಾರೆ.
ಬಿಡಿಎ ಕಂದಾಯ ಭೂಮಿಯಲ್ಲಿನ ವಸತಿ ಉದ್ದೇಶದ ಏಕ ನಿವೇಶನಗಳ ಮಂಜೂರಾತಿಗೆ ಚದರ ಅಡಿಗೆ 24.60 ರೂಪಾಯಿ ಹಾಗೂ ವಾಣಿಜ್ಯ ನಿವೇಶನಗಳಿಗೆ 27.35 ರೂಪಾಯಿ ನಿಗದಿಪಡಿಸಿದೆ. ಆದರೇ, ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಚದರ ಅಡಿಗೆ 250 ರೂಪಾಯಿಯಿಂದ 500 ರೂಪಾಯಿ ನಿಗದಿಪಡಿಸಿದೆ. ಈ ಮೂಲಕ ಜನರನ್ನು ಶೋಷಿಸಲಾಗುತ್ತಿದೆ ಎಂದು ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕ ಪದ್ಮನಾಭರೆಡ್ಡಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ