/newsfirstlive-kannada/media/post_attachments/wp-content/uploads/2024/12/swamy-ayyappa-1.jpg)
ಶಬರಿಮಲೆ ಅಯ್ಯಪ್ಪ ಸ್ವಾಮಿಯನ್ನ ನೋಡಬೇಕು. ಮಕರ ಜ್ಯೋತಿಯನ್ನ ಕಣ್ತುಂಬಿಕೊಳ್ಳಬೇಕು ಅನ್ನೋದು ಆ ಭಕ್ತರ ಆಶಯವಾಗಿತ್ತು. ದುರಂತ ಆದ್ರೆ, ವ್ರತಾಚರಣೆ ವೇಳೆ ಗಾಢನಿದ್ರೆಯಲ್ಲಿದ್ದಾಗಲೇ ಸಿಲಿಂಡರ್ ಸೋರಿಕೆಯಿಂದ ಮಹಾದುರಂತವೇ ಆಗಿ ಹೋಗಿದೆ. 9 ಮಾಲಾಧಾರಿಗಳಲ್ಲಿ 6 ಮಂದಿ ಈಗ ಬದುಕಿಲ್ಲ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಕರುಣಾಜನಕ ಕಥೆ, ಕರುಳು ಹಿಂಡೋ ಸ್ಟೋರಿ.
ಡಿಸೆಂಬರ್ 22 ರಂದು ಹುಬ್ಬಳ್ಳಿ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ರಾತ್ರಿ ಗಾಢ ನಿದ್ರೆಯಲ್ಲಿದ್ದಾಗ ನಡೆದಂತಹ ಈ ದುರಂತದಲ್ಲಿ ಒಟ್ಟು 9 ಮಂದಿ ತೀವ್ರ ಗಾಯಗೊಂಡಿದ್ರು. ಅವ್ರೆಲ್ಲರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ 6 ಮಂದಿ ಸಾವನ್ನಪ್ಪಿದ್ದಾರೆ.
58 ವರ್ಷದ ನಿಜಲಿಂಗಪ್ಪ ಬೇಪುರಿ, 18 ವರ್ಷದ ಸಂಜಯ ಸವದತ್ತಿ, 19 ವರ್ಷದ ಲಿಂಗರಾಜ ಬೀರನೂರ, 16 ವರ್ಷದ ರಾಜು ಮೂಗೇರಿ, 22 ವರ್ಷದ ಮಂಜುನಾಥ ವಾಗ್ಮೋಡೆ ಮತ್ತು 19 ವರ್ಶದ ಶಂಕರ್ ಮೃತಪಟ್ಟವರು. ಇದ್ರಲ್ಲಿ ಸಂಜಯ್ ಸವದತ್ತಿ, ರಾಜು ಮೂಗೇರಿ, ಲಿಂಗರಾಜ ಬೀರನೂರ ಮನೆಗೆ ಒಬ್ಬರೇ ಗಂಡು ಮಕ್ಕಳಾಗಿದ್ದರು. ಇವರಿಂದಲೇ ಕುಟುಂಬ ನಡೆಯಬೇಕಾಗಿತ್ತು. ಇದೀಗ ಕುಟುಂಬಕ್ಕೆ ಆಧಾರವಾಗಿದ್ದವರನ್ನೇ ಕಳೆದುಕೊಂಡ ಕುಟುಂಬಕ್ಕೆ ದಿಕ್ಕೆ ತೋಚದ ಸ್ಥಿತಿ ನಿರ್ಮಾಣವಾಗಿದೆ.
ಗಾಯಗೊಂಡ ಅಯ್ಯಪ್ಪ ಮಾಲಾಧಾರಿಗಳು
ತೇಜಸ್ವರ ಸಾತರೆ (26 ವರ್ಷ) ಗಾಯಗೊಂಡ ಪ್ರಮಾಣ 74%.
ಶಂಕರ ಚವ್ಹಾಣ ( 29 ವರ್ಷ) ಗಾಯಗೊಂಡ ಪ್ರಮಾಣ 99%.
ಪ್ರವೀಣ ಬೀರನೂರ (24 ವರ್ಷ) ಗಾಯಗೊಂಡ ಪ್ರಮಾಣ 86%
ಮಂಜುನಾಥ ವಾಗ್ಮೋಡೆ (22 ವರ್ಷ) ಗಾಯಗೊಂಡ ಪ್ರಮಾಣ 70%
ನಿಜಲಿಂಗಪ್ಪ ಬೇಪುರಿ ( 58 ವರ್ಷ) ಗಾಯಗೊಂಡ ಪ್ರಮಾಣ 86%
ರಾಜು ಮೂಗೇರಿ (21 ವರ್ಷ) ಗಾಯಗೊಂಡ ಪ್ರಮಾಣ 74%
ಸಂಜಯ ಸವದತ್ತಿ ( 20 ವರ್ಷ) ಗಾಯಗೊಂಡ ಪ್ರಮಾಣ 80%
ವಿನಾಯಕ ಭಾರಕೇರ (12 ವರ್ಷ) ಗಾಯಗೊಂಡ ಪ್ರಮಾಣ 25%
ಪ್ರಕಾಶ ಬಾರಕೇರ ( 42 ವರ್ಷ) ಗಾಯಗೊಂಡ ಪ್ರಮಾಣ 91%
ತಾಯಿಗೆ ಆಸರೆಯಾಗಲು ಓದು ಬಿಟ್ಟಿದ್ದ ಲಿಂಗರಾಜ
ಸಿಲಿಂಡರ್ ಸೋರಿಕೆಯಿಂದ ಸಾವನ್ನಪ್ಪಿದ್ರವರಲ್ಲಿ ಲಿಂಗರಾಜ ಬೆರನೂರ ಅನ್ನೋರು ಒಬ್ಬರಾಗಿದ್ದಾರೆ. ಕೇವಲ 19 ವರ್ಷದವರಾಗಿದ್ದ ಲಿಂಗರಾಜ ಅವ್ರು ಓದನ್ನು ಅರ್ಧಕ್ಕೆ ನಿಲ್ಸಿಸಿದ್ದರು. ಕಾರಣ ಬಡತನ, ತಾಯಿಗೆ ಆಸರೆಯಾಗ್ಬೇಕು ಅನ್ನೋ ಉದ್ದೇಶಕ್ಕೆ. ತಾಯಿ ದುಡಿಮೆ ಮಾಡಿ ಮನೆ ನಡೆಸ್ತಾ ಇದ್ರು. ಹೀಗಾಗಿ ಐಟಿಐ ಕಾಲೇಜಿನಲ್ಲಿ ಸೀಟು ಸಿಕ್ಕಿದ್ರೂ ಲಿಂಗರಾಜ ಅರ್ಧಕ್ಕೆ ನಿಲ್ಲಿಸಿದ್ರು. ದಿನಕೂಲಿ ಕೆಲ್ಸ ಮಾಡ್ತಾ ಇದ್ರು. ಅದ್ರಿಂದ ಬಂದ ಆದಾಯದಲ್ಲಿ ಮನೆಯನ್ನು ನಡೆಸ್ತಾ ಇದ್ರು. ದುರಾದೃಷ್ಟವಶಾತ್ ಬದುಕಿ ಬಾಳಬೇಕಿದ್ದ ಲಿಂಗರಾಜು ಜೀವ ಕಳೆದ್ಕೊಂಡಿದ್ದಾರೆ.
ಇದನ್ನೂ ಓದಿ: ಅಯ್ಯಪ್ಪನೂ ಕಾಪಾಡಲಿಲ್ಲ.. ಹುಬ್ಬಳ್ಳಿಯಲ್ಲಿ ಒಬ್ಬನೇ ಮಗನನ್ನು ಕಳೆದುಕೊಂಡ ಮಲ್ಲವ್ವ ಕಣ್ಣೀರು
ಲಿಂಗರಾಜುಗೆ ಇದ್ದಂತೆ ಕನಸು ಅಂದ್ರೆ ತಾನು ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋದಾಗಿತ್ತು. ಈ ನಡುವೆ ತಾನು ಮಾಲೆ ಧರಿಸುತ್ತೇನೆ, ಶಬರಿಮಲೆಗೆ ಹೋಗಿ ಬರ್ತೀನಿ ಅಂತಾ ತಾಯಿಗೆ ಹೇಳಿದ್ದನಂತೆ. ಮಗನ ಕೋರಿಕೆಗೆ ತಾಯಿ ಒಪ್ಪಿಗೆಯನ್ನು ನೀಡಿದ್ದಳು. ಮಗ ಅಯ್ಯಪ್ಪನ ದರ್ಶನ ಮಾಡಿ ಬರ್ಲಿ ಅಂತಾ ಆಶಿಸಿದ್ದಳು. ಆದ್ರೆ, ದುರಂತವೊಂದು ನಡೆದು ಹೋಗಿದೆ.
ಇದ್ದ ಒಬ್ಬೊಬ್ಬರನ್ನೇ ಕಳೆದುಕೊಂಡ 4 ಕುಟುಂಬಗಳು
ಒಂದೊಂದು ಕುಟುಂಬದ ಕಥೆಯೂ ಕರುಣಾಜನಕ
ಸಿಲಿಂಡರ್ ದುರಂತದಲ್ಲಿ ಒಟ್ಟು 9 ಮಂದಿ ತೀವ್ರ ಗಾಯಗೊಂಡಿದ್ರು. ಇದ್ರಲ್ಲಿ ಸಂಜಯ್ ಸವದತ್ತಿ, ರಾಜು ಮೂಗೇರಿ, ಲಿಂಗರಾಜ ಬೀರನೂರ ಮನೆಗೆ ಒಬ್ಬರೇ ಗಂಡು ಮಕ್ಕಳಾಗಿದ್ರು. ಇವರಿಂದಲೇ ಕುಟುಂಬ ನಡೆಯಬೇಕಾಗಿತ್ತು. ಇದೀಗ ಕುಟುಂಬಕ್ಕೆ ಆಧಾರವಾಗಿದ್ದವರನ್ನೇ ಕಳೆದ್ಕೊಂಡ್ ಕುಟುಂಬಕ್ಕೆ ದಿಕ್ಕೆ ತೋಚದ ಸ್ಥಿತಿ ನಿರ್ಮಾಣವಾಗಿದೆ.
ಅಪ್ಪನ ಸ್ಥಿತಿ ಚಿಂತಾಜನಕ, ಮಗನ ಸ್ಥಿತಿಯೂ ಗಂಭೀರ
ಡಿಸೆಂಬರ್ 22 ರಂದು ರಾತ್ರಿ ಹುಬ್ಬಳ್ಳಿಯ ಉಣಕಲ್ ಸಮೀಪ ಇರೋ ಅಚ್ಚವ್ವನ ಕಾಲೋನಿಯಲ್ಲಿ ನಡೆದಿರೋ ಘಟನೆಯಲ್ಲಿ ತಂದೆ ಮಗ ಕೂಡ ಗಂಭೀರ ಗಾಯಗೊಂಡಿದ್ದಾರೆ. ಹುಬ್ಬಳ್ಳಿಯವರೇ ಆಗಿರೋ ತಂದೆ ಪ್ರಕಾಶ್ ಬಾರಕೇರ್ ಮತ್ತು ಮಗ ವಿನಾಯಕ್ ಬಾರಕೇರ್ ಮಾಲಾಧಾರಣೆ ಮಾಡಿರುತ್ತಾರೆ. 12 ವರ್ಷದ ಮಗನಿಗೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿಸ್ಬೇಕು ಅನ್ನೋದು ತಂದೆಯ ಕನಸಾಗಿತ್ತು. ಹೀಗಾಗಿಯೇ ತಂದೆ ಮಗ ಇಬ್ಬರು ಮಾಲೆಯನ್ನು ಧರಿಸಿದ್ದರು. ದುರಂತದಲ್ಲಿ ಇಬ್ಬರಿಗೂ ತೀವ್ರಗಾಯವಾಗಿತ್ತು. ಕಳೆದ ಒಂದು ವಾರದಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನಡೆಯುತ್ತಿದೆ. ಇದ್ರಲ್ಲಿ ಮಗ ವಿನಾಯಕ್ ಸ್ವತ್ಪ ಚೇತರಿಸಿಕೊಳ್ಳುತ್ತಿದ್ದಾರೆ. ಆದ್ರೆ, ತಂದೆ ಪ್ರಕಾಶ್‌ಗೆ ಭಾರೀ ಪ್ರಮಾಣದಲ್ಲಿ ಸುಟ್ಟಿರೋದ್ರಿಂದ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಆಸ್ಪತ್ರೆಯ ಮುಂದೆ ಕುಟುಂಬದವ್ರ ಆಕ್ರಂದನ ಕರುಳು ಹಿಂಡುವಂತಿದೆ.
ದುರಂತವಾಗಿದ್ದು ಹೇಗೆ? ಕಾರಣವಾಗಿದ್ದು ಏನು?
ದುರಂತವಾಗಿದ್ದು ಹೇಗೆ ಅಂದ್ರೆ, 22 ರಂದು ರಾತ್ರಿ ಅಯ್ಯಪ್ಪ ಮಾಲಾಧಾರಿಗಳು ಪೂಜೆ ಮುಗಿಸ್ಕೊಂಡ್ ಗಾಢನಿದ್ರೆಗೆ ಜಾರಿದ್ರು. ಬೆಳಗ್ಗೆ ಎದ್ದು ತಣ್ಣೀರು ಸ್ನಾನ ಮಾಡಿ ಮತ್ತೆ ವ್ರತ ಮಾಡಬೇಕಾಗಿತ್ತು. ಆದ್ರೆ, ಮಧ್ಯರಾತ್ರಿ 1.30ರ ವೇಳೆಗೆ ಅಡುಗೆ ಮಾಡಿಕೊಳ್ಳಲು ಇಟ್ಟುಕೊಂಡಿರೋ ಸಿಲಿಂಡರ್‌ಗೆ ಮಾಲಾಧಾರಿಗಳು ಯಾರೋ ನಿದ್ರೆ ಗಣ್ಣಲ್ಲಿ ಒದ್ದಿರೋ ಸಾಧ್ಯತೆ ಇದೆ. ಇದ್ರಿಂದ ಕೆಳಗ್ಗೆ ಬಿದ್ದ ಸಿಲಿಂಡರ್ ಸೋರಿಕೆಯಾಗಿದೆ. ಇನ್ನು ದೇವರ ಫೋಟೋ ಮುಂದೆ ಜ್ಯೋತಿಯನ್ನು ಹಚ್ಚಿಡಲಾಗಿತ್ತು. ಆ ಜ್ಯೋತಿಯ ಯಾತ್ರೆಗೆ ಹೋಗಿ ಬರುವವರೆಗೂ ಹಾಗೇ ಇರುತ್ತೆ. ಅದನ್ನು ಇರುಮುಡಿಯನ್ನು ದೇವಸ್ಥಾನದಲ್ಲಿ ಇಳಿಸಿ ಬರೋವರೆಗೂ ಹೊತ್ತಿ ಉರಿಯುತ್ತಲೇ ಇರಬೇಕಾಗುತ್ತೆ. ಅದೇ ದೀಪದಿಂದ ಬೆಂಕಿ ತಗುಲಿದೆ. ಹೀಗಾಗಿ ಮಲ್ಕೊಂಡಲೇ 9 ಜನ ಬೆಂದು ಹೋಗಿದ್ದಾರೆ.
ನೊಂದ ಕುಟುಂಬಕ್ಕೆ ದಿಕ್ಕು ಯಾರು? 5 ಲಕ್ಷ ಪರಿಹಾರ ಘೋಷಣೆ
ಕುಟುಂಬಕ್ಕೆ ಆಧಾರವಾಗಿದ್ದವರೇ ದಾರುಣ ಅಂತ್ಯ ಕಂಡ್ರೆ ಸಹಿಸಿಕೊಳ್ಳೋದು ಕಷ್ಟ. ಯಾವುದೇ ಕುಟುಂಬವಾಗಿದ್ರೂ ಅವ್ರಿಗೆ ಸಹಿಸಿಕೊಳ್ಳಲು ಆಗೋದಿಲ್ಲ. ಹುಬ್ಬಳ್ಳಿ ದುರಂತದಲ್ಲಿ ಆಗಿದ್ದು ಅದೇ ನೋಡಿ. ಈಗಾಗಲೇ ಸಾವನ್ನಪ್ಪಿರೋ 6 ಮಂದಿಯಲ್ಲಿ, 4 ಕುಟುಂಬಕ್ಕೆ ಒಬ್ಬರೇ ಗಂಡು ಮಕ್ಕಳಾಗಿದ್ರು. ಅವರಿಂದಲೇ ಕುಟುಂಬ ಸಾಗಬೇಕಾಗಿತ್ತು. ಆದ್ರೆ, ದುರಂತ ನಡೆದಿರೋದ್ರಿಂದ ಅವ್ರಿಗೆ ಖಂಡಿತವಾಗಿಯೂ ದಿಕ್ಕೆ ತೋಚದ ಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದನೆ ಮಾಡ್ತಿಲ್ಲ ಅನ್ನೋ ಆರೋಪವನ್ನು ಕುಟುಂಬದವ್ರು ಮಾಡಿದ್ರು. ಅದು ಗೊತ್ತಾಗ್ತಾ ಇದಂತೆ ಸಚಿವ ಸಂತೋಷ್ ಲಾಡ್ ಭೇಟಿ ನೀಡಿ ಚಿಕಿತ್ಸೆ ವ್ಯವಸ್ಥೆ ಮಾಡಿದ್ದಾರೆ. ಹಾಗೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ ಅನೇಕ ರಾಜಕೀಯ ನಾಯಕರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳೋ ಕೆಲ್ಸ ಮಾಡಿದ್ದಾರೆ. ಹಾಗೇ ಸರ್ಕಾರದಿಂದ ಪ್ರತಿ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಸರ್ಕಾರ ಏನೇ ಘೋಷಣೆ ಮಾಡಿದ್ರೂ ಇರೋ ಒಬ್ಬೊಬ್ಬ ಮಕ್ಕಳನ್ನು ಕಳೆದ್ಕೊಂಡಿರೋ ದುಃಖ ನೋಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ