/newsfirstlive-kannada/media/post_attachments/wp-content/uploads/2024/12/swamy-ayyappa-1.jpg)
ಹುಬ್ಬಳ್ಳಿ: ಅಯ್ಯಪ್ಪ ಸ್ವಾಮಿಯ ನಾಮ ಸ್ಮರಣೆ ಮಾಡಿ ನಿದ್ರೆಗೆ ಜಾರಿದ ಭಕ್ತರ ಪಾಲಿಗೆ ಅವರು ಹಚ್ಚಿಟ್ಟಿದ್ದ ದೀಪವೇ ಕೊಳ್ಳಿಯಾಗಿ ಕಾಡಿದೆ. ದೇವರ ಮುಂದೆ ಹಚ್ಚಿಟ್ಟಿದ್ದ ದೀಪದಿಂದ ಸಿಲಿಂಡರ್ ಸ್ಫೋಟಗೊಂಡು ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದಾರೆ. ಕೆಲ ಭಕ್ತರ ಸ್ಥಿತಿ ಚಿಂತಾಜನಕವಾಗಿದೆ.
ದೇವರ ಮುಂದೆ ಹಚ್ಚಿಟ್ಟಿದ್ದ ದೀಪದಿಂದ ಸಿಲಿಂಡರ್ ಸ್ಫೋಟ
ವ್ರತಾಚರಣೆಯಲ್ಲಿದ್ದ 9 ಅಯ್ಯಪ್ಪ ಮಾಲಾಧಾರಿಗಳಿಗೆ ಗಾಯ
ದೇವರ ಮುಂದೆ ಹಚ್ಚಿಟ್ಟಿದ್ದ ದೀಪವೇ ಅಯ್ಯಪ್ಪ ಮಾಲಾಧಾರಿಗಳ ಪಾಲಿಗೆ ಕೊಳ್ಳಿಯಾದ ದುರಂತ ಸಂಭವಿಸಿದೆ. ದೇವರ ಮುಂದೆ ಹಚ್ಚಿಟ್ಟಿದ್ದ ದೀಪದಿಂದ ಸಿಲಿಂಡರ್ ಬ್ಲಾಸ್ಟ್ ಆಗಿ ವ್ರತಾಚರಣೆಯಲ್ಲಿದ್ದ ಅಯ್ಯಪ್ಪ ಮಾಲಾಧಾರಿಗಳಿಗೆ ಗಾಯವಾಗಿದೆ. ಹುಬ್ಬಳ್ಳಿಯ ಉಣಕಲ್ನ ಈಶ್ವರ ದೇಗುಲ ಬಳಿ ಘಟನೆ ಸಂಭವಿಸಿದ್ದು 14 ಮಾಲಾಧಾರಿಗಳ ಪೈಕಿ 9 ಮಾಲಾಧಾರಿಗಳಿಗೆ ಗಾಯವಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಗೊಂಡ ಅಯ್ಯಪ್ಪ ಮಾಲಾಧಾರಿಗಳು
ತೇಜಸ್ವರ ಸಾತರೆ (26 ವರ್ಷ) ಗಾಯಗೊಂಡ ಪ್ರಮಾಣ 74%.
ಶಂಕರ ಚವ್ಹಾಣ ( 29 ವರ್ಷ) ಗಾಯಗೊಂಡ ಪ್ರಮಾಣ 99%.
ಪ್ರವೀಣ ಬೀರನೂರ (24 ವರ್ಷ) ಗಾಯಗೊಂಡ ಪ್ರಮಾಣ 86%
ಮಂಜುನಾಥ ವಾಗ್ಮೋಡೆ (22 ವರ್ಷ) ಗಾಯಗೊಂಡ ಪ್ರಮಾಣ 70%
ನಿಜಲಿಂಗಪ್ಪ ಬೇಪುರಿ ( 58 ವರ್ಷ) ಗಾಯಗೊಂಡ ಪ್ರಮಾಣ 86%
ರಾಜು ಮೂಗೇರಿ (21 ವರ್ಷ) ಗಾಯಗೊಂಡ ಪ್ರಮಾಣ 74%
ಸಂಜಯ ಸವದತ್ತಿ ( 20 ವರ್ಷ) ಗಾಯಗೊಂಡ ಪ್ರಮಾಣ 80%
ವಿನಾಯಕ ಭಾರಕೇರ (12 ವರ್ಷ) ಗಾಯಗೊಂಡ ಪ್ರಮಾಣ 25%
ಪ್ರಕಾಶ ಬಾರಕೇರ ( 42 ವರ್ಷ) ಗಾಯಗೊಂಡ ಪ್ರಮಾಣ 91%
3 ದಿನದ ಹಿಂದೆ ಮಾಲೆ ಹಾಕಿದ್ದ ತಂದೆ ಮಗನಿಗೆ ಗಾಯ
ದುರಂತ ಏನಪ್ಪಾ ಅಂದ್ರೆ 3 ದಿನಗಳ ಹಿಂದಷ್ಟೇ ಅಯ್ಯಪ್ಪ ಮಾಲೆ ಹಾಕಿದ್ದ ತಂದೆ ಮಗನಿಗೆ ಈ ಸ್ಫೋಟದಿಂದ ಗಾಯಗಳಾಗಿದೆ. ಉಕಣಲ್ನ ಅಚ್ಚವ್ವನ ಕಾಲೋನಿ ನಿವಾಸಿಗಳಾದ ತಂದೆ ಪ್ರಕಾಶ್ ಬಾರಕೇರ್ ಹಾಗೂ ಮಗ ವಿನಾಯಕ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆ ಸ್ಥಿತಿ ಚಿಂತಾಜನಕವಾಗಿದೆ. 9 ಮಂದಿ ಪೈಕಿ ಕೆಲವರಿಗೆ 70 ರಿಂದ 90 ಶೇಕಡಾದಷ್ಟು ಗಾಯಗಳಾಗಿವೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಅಂತ ವೈದ್ಯರು ಹೇಳಿದ್ದಾರೆ.
ಕಿಮ್ಸ್ ಆಸ್ಪತ್ರೆ ಮುಂಭಾಗ ಸೇರಿದ್ದ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಸ್ಥರು, ಆಸ್ಪತ್ರೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ನಾವೇ ಕೀ ಒಡೆದು ಸಲಾಯಿನ್ ತಂದಿದ್ದೇವೆ ಅಂತ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಶಬರಿಮಲೆಯಲ್ಲಿ ಅನಾಹುತ.. ಪ್ರಾಣ ಬಿಟ್ಟ ಕನಕಪುರ ಮೂಲದ ಅಯ್ಯಪ್ಪ ಭಕ್ತ; ಅಸಲಿಗೆ ಆಗಿದ್ದೇನು?
ಕಿಮ್ಸ್ ಆಸ್ಪತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಶಾಸಕ ಮಹೇಶ ಟೆಂಗಿನಕಾಯಿ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ವೈದ್ಯರ ಬಳಿಯೂ ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ದೇವರ ಮುಂದೆ ಹಚ್ಚಿದ್ದ ದೀಪದಿಂದಲೇ ಈ ಅವಘಡ ಸಂಭವಿಸಿದೆ. ಸದ್ಯ 9 ಅಯ್ಯಪ್ಪ ಮಾಲಾಧಾರಿಗಳ ಪೈಕಿ 8 ಸ್ವಾಮಿಗಳ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಆ ಅಯ್ಯಪ್ಪ ಸ್ವಾಮಿಯೇ ಕಾಪಾಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ