/newsfirstlive-kannada/media/post_attachments/wp-content/uploads/2024/12/KOHLI_BAT.jpg)
ಬಾರ್ಡರ್-ಗವಸ್ಕಾರ್ ಟ್ರೋಫಿ ಟೆಸ್ಟ್ ಪಂದ್ಯಾವಳಿಯಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ವಿರಾಟ್ ಕೊಹ್ಲಿ ಬಗ್ಗೆ ಅನೇಕ ಟೀಕೆಗಳು ಕೇಳಿ ಬರುತ್ತಿವೆ. ಕೊಹ್ಲಿ ಕಾಲ ಮುಗಿಯಿತು, ಕೊಹ್ಲಿ ಫಾರ್ಮ್ನಲ್ಲಿ ಇಲ್ಲ, ಕೊಹ್ಲಿ ಮೊದಲಿನಂತೆ ಆಡುತ್ತಿಲ್ಲ, ಹೀಗೆ ಹತ್ತು ಹಲವು ಮಾತುಗಳು ಕೇಳಿ ಬರುತ್ತಿವೆ. ಈ ವಿಚಾರವಾಗಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚ್ ಹಾಗೂ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಕೊಹ್ಲಿ ಪರವಾಗಿ ಬ್ಯಾಟ್ ಬೀಸಿದ್ದಾರೆ. ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ ಎಂಬುದನ್ನು ನಾನು ನಂಬುವುದಿಲ್ಲ ಎಂದು ಹೇಳಿದ್ದಾರೆ.
ಜೋ ರೂಟ್ ಹಾಗೂ ಕೇನ್ ವಿಲಿಯಮ್ಸ್ ಈ ವರ್ಷದ ಅದ್ಭುತವಾಗಿ ಪ್ರದರ್ಶನ ಮಾಡಿದ್ದಾರೆ. ಅದೇ ರೀತಿಯಲ್ಲಿ ಕೊಹ್ಲಿ ಹಾಗೂ ಸ್ಟಿವ್ ಸ್ಮಿತ್ ಕೂಡ ಪುಟಿದೇಳಲಿದ್ದಾರೆ. ಅವರು ನಿಜಕ್ಕೂ ಅಪಾಯಕಾರಿ ಆಟಗಾರರಾಗಿ ಮುಂದೆ ಎದುರಾಳಿಗಳನ್ನು ಕಾಡಲಿದ್ದಾರೆ. ಯಾಕಂದ್ರೆ ಅವರಿಗೆ ಆಡುವ ಹಸಿವು ಇದೆ. ವಿಶ್ವ ಕ್ರಿಕೆಟಿಗರ ಱಂಕ್ ಪಟ್ಟಿಯಲ್ಲಿ ಕೊಹ್ಲಿ ಹಾಗೂ ಸ್ಟೀವ್ ಸ್ಮಿತ್ ಸದ್ಯ ಕುಸಿದಿರಬಹುದು. ಆದರೆ ಫಿನಿಕ್ಸ್ನಂತೆ ಎದ್ದು ಬರುವ ಛಾತಿ ಇಬ್ಬರಲ್ಲಿಯೂ ಇದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಇದನ್ನೂ ಓದಿ: ಕ್ಯಾಪ್ಟನ್ ರೋಹಿತ್ ಕ್ರಿಕೆಟ್ ಯುಗಾಂತ್ಯಕ್ಕೆ ಮತ್ತೊಂದು ಸೂಚನೆ..
ಇಂಗ್ಲೆಂಡ್ನ ಜಾನ್ ರೂಟ್ 2024ರಲ್ಲಿ ಅದ್ಭುತ ಪ್ರದರ್ಶನ ತೋರಿಸಿದ್ದಾರೆ.ಈ ವರ್ಷದಲ್ಲಿ 17 ಪಂದ್ಯಗಳನ್ನು ಆಡಿರುವ ರೂಟ್, 1556 ರನ್ಗಳನ್ನ 55.77 ಎವರೆಜ್ನಲ್ಲಿ ಸಂಪಾದಿಸಿದ್ದಾರೆ. ಇದರಲ್ಲಿ ಒಟ್ಟು 6 ಶತಕಗಳು ಕೂಡ ಇವೆ. ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಕೂಡ ಈ ವರ್ಷ 1013ರನ್ ಗಳಿಸಿದ್ದಾರೆ. 59.58 ಎವರೇಜ್ನಲ್ಲಿ ನಾಲ್ಕು ಶತಕ ಗಳಿಸುವ ಮೂಲಕ ಇಷ್ಟು ರನ್ ಸಂಪಾದಿಸಿದ್ದಾರೆ.
ಇಂತಹ ಸನ್ನಿವೇಶದಲ್ಲಿ ವಿರಾಟ್ ಮತ್ತು ಸ್ಮಿತ್ ಕೂಡ ಎದುರಾಳಿಗಳಿಗೆ ಅಪಾಯ ತಂದೊಡ್ಡಬಲ್ಲ ರೀತಿ ಮುಂದಿನ ದಿನಗಳಲ್ಲಿ ಮಿಂಚಲಿದ್ದಾರೆ ಎಂದು ಶಾಸ್ತ್ರಿ ಹೇಳಿದ್ದಾರೆ.
ಕೊಹ್ಲಿ ಈ ವರ್ಷ ಒಟ್ಟು 9 ಮ್ಯಾಚ್ಗಳಲ್ಲಿ 25.06 ಎವರೇಜ್ನೊಂದಿಗೆ ಕೇವಲ 376 ರನ್ ಗಳಿಸಿದ್ರೆ, ಸ್ಮಿತ್ 28.08 ಎವರೇಜ್ನಲ್ಲಿ 8 ಪಂದ್ಯಗಳಲ್ಲಿ 337 ರನ್ ಗಳಿಸಿದ್ದಾರೆ. ಸದ್ಯ ಈ ಇಬ್ಬರು ಆಟಗಾರರು ಮತ್ತೆ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಆದ್ರೆ ಕೊಹ್ಲಿ ಸಂಪೂರ್ಣವಾಗಿ ಫಾರ್ಮ್ ಕಳೆದುಕೊಂಡಿದ್ದಾರೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದು ರವಿಶಾಸ್ತ್ರಿ ಹೇಳಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ