/newsfirstlive-kannada/media/post_attachments/wp-content/uploads/2025/07/MIG_21.jpg)
ಭಾರತದ ಮಿಲಿಟರಿಗೆ ಇಂದು ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಗಳು ಸೇರ್ಪಡೆ ಆಗಿವೆ. ಮತ್ತೊಂದೆಡೆ ಭಾರತದ ಮಿಲಿಟರಿ, ವಾಯುಪಡೆಯ ಬಳಿ ಇದ್ದ ಮಿಗ್-21 ಯುದ್ಧ ವಿಮಾನಗಳು ಇದೇ ಸೆಪ್ಟೆಂಬರ್ನಲ್ಲಿ ಸಂಪೂರ್ಣ ನಿವೃತ್ತಿ ಪಡೆಯುವ ಸುದ್ದಿ ಬಂದಿದೆ.
2023ರ ಆಕ್ಟೋಬರ್ನಲ್ಲೇ ಭಾರತೀಯ ವಾಯುಪಡೆಯು ಮಿಗ್-21 ಯುದ್ಧ ವಿಮಾನಗಳು ಕೊನೆಯ ಹಾರಾಟ ನಡೆಸಿವೆ. ಈಗ ಹಂತ ಹಂತವಾಗಿ ಎಲ್ಲ ಮಿಗ್-21 ಯುದ್ಧ ವಿಮಾನಗಳಿಗೆ ನಿವೃತ್ತಿ ನೀಡಲು ವಾಯುಪಡೆಯು ನಿರ್ಧರಿಸಿದೆ. ಮಿಗ್-21 ಸ್ಥಾನ ತೇಜಸ್ ಎಂಕೆ1ಎ ಫೈಟರ್ ಜೆಟ್ಗಳು ತುಂಬಲಿವೆ.
ಈಗ ಭಾರತೀಯ ವಾಯುಪಡೆಯ ಬತ್ತಳಿಕೆಯಲ್ಲಿ 36 ಮಿಗ್-21 ಯುದ್ಧ ವಿಮಾನಗಳಿವೆ. ಒಂದು ಕಾಲದಲ್ಲಿ 900 ಮಿಗ್-21 ಯುದ್ಧ ವಿಮಾನಗಳಿದ್ದವು. ಇವುಗಳ ಪೈಕಿ 600 ಅನ್ನು ಭಾರತದಲ್ಲೇ ನಿರ್ಮಾಣ ಮಾಡಲಾಗಿತ್ತು. ಇದೇ ಮಿಗ್-21 ಯುದ್ಧ ವಿಮಾನಗಳು ಭಾರತದ ವಾಯುಪ್ರದೇಶವನ್ನು ಯಶಸ್ವಿಯಾಗಿ ರಕ್ಷಣೆ ಮಾಡಿದ್ದವು. ವೈರಿ ರಾಷ್ಟ್ರಗಳ ದಾಳಿಯಿಂದ ಭಾರತಕ್ಕೆ ರಕ್ಷಣೆ ನೀಡಿದ್ದವು.
ಸುಖೋಯ್ 30ಎಂಕೆಐ ಯುದ್ಧ ವಿಮಾನಗಳು
ಮಿಗ್- 21 ಯುದ್ಧ ವಿಮಾನಗಳು ಭಾರತದ ಮಿಲಿಟರಿ, ವಾಯುಪಡೆಗೆ ಸೇರಿದ್ದು 1963ರಲ್ಲಿ . ರಷ್ಯಾ ನಿರ್ಮಿತ ಮಿಗ್-21 ಯುದ್ಧ ವಿಮಾನಗಳೇ ಮುಂದೆ ಭಾರತದ ರಕ್ಷಣೆಯ ಬೆನ್ನೆಲುಬು ಆಗಿದ್ದು ಈಗ ಇತಿಹಾಸ. ಬಳಿಕ ಸುಖೋಯ್ 30ಎಂಕೆಐ ಯುದ್ಧ ವಿಮಾನಗಳು ಮಿಗ್-21 ಯುದ್ಧ ವಿಮಾನದ ಸ್ಥಾನ ತುಂಬಲು ಆರಂಭಿಸಿದ್ದವು. ಈಗ ಕೊನೆಯದಾಗಿ ಬೈಸನ್ ಯುದ್ಧ ವಿಮಾನಗಳ ಸೇವೆಯನ್ನು ಭಾರತೀಯ ವಾಯುಪಡೆ ಸ್ಥಗಿತಗೊಳಿಸುತ್ತಿದೆ. ಬೈಸನ್ ಯುದ್ಧ ವಿಮಾನಗಳು ಅಪ್ ಗ್ರೇಡ್ ಎಲೆಕ್ಟ್ರಾನಿಕ್ಸ್ ಮತ್ತು ಉತ್ತಮ ನಾವಿಗೇಷನ್ ಮತ್ತು ಕಮ್ಯೂನಿಕೇಷನ್ಸ್ ಸಿಸ್ಟಮ್ ಹೊಂದಿದ್ದವು.
2025 ರೊಳಗೆ ನಾವು ಮಿಗ್-21 ಫೈಟರ್ ಜೆಟ್ಗಳ ಹಾರಾಟವನ್ನು ನಿಲ್ಲಿಸುತ್ತೇವೆ. ಮಿಗ್-21 ಸ್ಥಾನವನ್ನು ಲಘು ಯುದ್ಧ ವಿಮಾನ ಮಾರ್ಕ್-1ಎ ತುಂಬಲಿವೆ ಎಂದು ಏರ್ ಪೋರ್ಸ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಈ ಹಿಂದೆಯೇ ಹೇಳಿದ್ದರು. 2022ರ ಜುಲೈನಲ್ಲಿ ಭಾರತೀಯ ವಾಯುಪಡೆ ಮುಂದಿನ 3 ವರ್ಷಗಳಲ್ಲಿ ಬಾಕಿ ಆಸ್ತಿತ್ವದಲ್ಲಿರುವ ನಾಲ್ಕು ಮಿಗ್-21 ಸ್ಕ್ವಾಡ್ರನ್ಗಳಿಗೆ ನಿವೃತ್ತಿ ನೀಡುವುದಾಗಿ ಹೇಳಿತ್ತು. ಇನ್ನೂ 2027ರೊಳಗೆ ಮಿಗ್-29 ಯುದ್ಧ ವಿಮಾನಗಳಿಗೂ ನಿವೃತ್ತಿ ನೀಡುವ ಪ್ಲ್ಯಾನ್ ಕೂಡ ಇದೆ.
ಹಾರುವ ಶವಪೆಟ್ಟಿಗೆಗಳು ಎಂದರೆ..?
ಮಿಗ್-21 ಯುದ್ಧ ವಿಮಾನಗಳನ್ನು ಭಾರತದಲ್ಲಿ ಹಾರುವ ಶವಪೆಟ್ಟಿಗೆಗಳು ಎಂದೇ ಕರೆಯಲಾಗುತ್ತಿತ್ತು. ಏಕೆಂದರೇ, ಅಷ್ಟೊಂದು ಅಪಘಾತಗಳಿಗೆ ಈ ಮಿಗ್-21 ಯುದ್ಧ ವಿಮಾನಗಳು ಒಳಗಾಗಿವೆ. ಇದರಿಂದಾಗಿ ಪೈಲಟ್ಗಳ ಪಾಲಿಗೆ ಮಿಗ್-21 ಹಾರುವ ಶವಪೆಟ್ಟಿಗೆಗಳಾಗಿದ್ದವು. 20223ರ ಮೇ ತಿಂಗಳಿನಲ್ಲಿ ರಾಜಸ್ಥಾನದಲ್ಲಿ ಮಿಗ್-21 ಯುದ್ಧ ವಿಮಾನ ಅಪಘಾತಕ್ಕೀಡಾಗಿ ಮೂವರು ಗ್ರಾಮಸ್ಥರು ಸಾವನ್ನಪ್ಪಿದ್ದರು. ಈ ಅಪಘಾತ ನಡೆದ ಬಳಿಕ ಏರ್ ಪೋರ್ಸ್, ಮಿಗ್-21 ಹಾರಾಟ ಸ್ಥಗಿತಗೊಳಿಸಿತ್ತು.
ಇದನ್ನೂ ಓದಿ:ಇಂಡಿಯನ್ ಆರ್ಮಿಗೆ ಬಂತು ಆನೆಬಲ.. ಭಾರತದ ಬತ್ತಳಿಕೆಯಲ್ಲಿ ಅಮೆರಿಕಾದ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಗಳು
[caption id="attachment_132052" align="alignnone" width="800"] ತೇಜಸ್ ಯುದ್ಧ ವಿಮಾನ[/caption]
ಹೀಗಾಗಿ ಹಳೆಯದಾದ ಈ ಯುದ್ಧ ವಿಮಾನಗಳಿಗೆ ನಿವೃತ್ತಿ ನೀಡಿ, ಇವುಗಳ ಸ್ಥಾನದಲ್ಲಿ ಅತ್ಯಾಧುನಿಕ ಫೈಟರ್ ಜೆಟ್ಗಳನ್ನು ಸೇರ್ಪಡೆ ಮಾಡಿಕೊಳ್ಳಲು ಲಘು ಯುದ್ಧ ವಿಮಾನಗಳನ್ನು ಪೂರೈಸಲು ಎಚ್‌ಎಎಲ್‌ಗೆ ಆರ್ಡರ್ ನೀಡಲಾಗಿತ್ತು.
ಪಾಕ್ ಅನ್ನು ಹಿಮ್ಮೆಟ್ಟಿಸಿದ್ದ ಸ್ಕ್ವಾಡ್ರನ್
ಈ ಮೊದಲು ಶ್ರೀನಗರದಲ್ಲಿದ್ದ ಸ್ಕ್ವಾಡ್ರನ್ ನಂಬರ್ 51ನ ಮಿಗ್-21 ಯುದ್ಧ ವಿಮಾನಗಳಿಗೆ ನಿವೃತ್ತಿ ನೀಡಲಾಗಿತ್ತು. ಈ ಸ್ಕ್ವಾಡ್ರನ್ ಕಾರ್ಗಿಲ್ ಯುದ್ಧದ ವೇಳೆ, ಅಪರೇಷನ್ ಸಫೇದ್ ಸಾಗರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಬಳಿಕ 2019ರಲ್ಲಿ ಬಾಲಕೋಟ್ ಏರ್ ಸ್ಟ್ರೈಕ್ ಬಳಿಕ ನಡೆದ ಪಾಕ್ ಪ್ರತಿದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಇದೇ ಸ್ಕ್ವಾಡ್ರನ್ ಭಾಗಿಯಾಗಿತ್ತು. ಅಭಿನಂದನ್ ವರ್ಧಮಾನ್ ಕೂಡ ಇದೇ ಸ್ಕ್ವಾಡ್ರನ್ಗೆ ಸೇರಿದವರು. ಈಗ ಅಭಿನಂದನ್ ವರ್ಧಮಾನ್ ಗ್ರೂಪ್ ಕ್ಯಾಪ್ಟನ್ ಆಗಿದ್ದಾರೆ.
ಈಗ ಭಾರತವು 5ನೇ ಜನರೇಷನ್ ಫೈಟರ್ ಜೆಟ್ಗಳನ್ನು ಉತ್ಪಾದಿಸಲು ಹೆಜ್ಜೆ ಇಟ್ಟಿದೆ. ಐದನೇ ಜನರೇಷನ್ ಫೈಟರ್ ಜೆಟ್ಗಳ ಪ್ರೋಟೋಟೈಪ್ ಅನ್ನು ರೂಪಿಸಿ ಸಲ್ಲಿಸಲು ಟೆಂಡರ್ ಕರೆದಿದೆ. ಟೆಂಡರ್ನಲ್ಲಿ ಆಯ್ಕೆಯಾದ ಕಂಪನಿಗೆ ಐದನೇ ತಲೆಮಾರಿನ ಫೈಟರ್ ಜೆಟ್ ಅನ್ನು ಉತ್ಪಾದಿಸುವ ಆರ್ಡರ್ ಸಿಗಲಿದೆ.
ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ