/newsfirstlive-kannada/media/post_attachments/wp-content/uploads/2024/12/ilayaraja_NEW.jpg)
ಇದನ್ನು ಸಂಪ್ರದಾಯ ಅನ್ನಬೇಕೋ, ಮೂಢನಂಬಿಕೆ ಅನ್ನಬೇಕೋ ಅಥವಾ 22ನೇ ಶತಮಾನದಲ್ಲೂ ಇದೆಲ್ಲಾ ಇನ್ನೂ ಜೀವಂತ ಇದೆ ಅನ್ನಬೇಕೋ ಗೊತ್ತಾಗುತ್ತಿಲ್ಲ. ಸಂಗೀತ ದಿಗ್ಗಜ ಇಳಯರಾಜಗೆ ತಮಿಳುನಾಡಿನ ದೇವಸ್ಥಾನದಲ್ಲಿ ಅಪಮಾನ ಮಾಡಿರುವ ಮಾತು ಕೇಳಿಬಂದಿದೆ.
ಸಂಗೀತ ಸರಸ್ವತಿಯ ವರಪುತ್ರ, ಯುಗಳ ಗೀತೆಗಳ ಸೃಷ್ಟಿಕರ್ತ. ಮಧುರಗೀತೆಗಳ ಮಾಣಿಕ್ಯ. ಸಂಗೀತ ಸಾರ್ವಭೌಮ. ಪದ್ಮಭೂಷಣ. ಕನ್ನಡ, ತೆಲುಗು, ತಮಿಳು ಚಿತ್ರರಂಗದ ಸಂಗೀತ ಸಾಮ್ರಾಟ ಇಳಯರಾಜ. ಈಗ ಇಳಯರಾಜಗೆ ಅವಮಾನ ಮಾಡಿರುವ ಸುದ್ದಿ ಹೊರ ಬಿದ್ದಿದೆ.
ಇದನ್ನೂ ಓದಿ:ಮಧ್ಯರಾತ್ರಿವರೆಗೆ ವಿಧಾನಸಭೆ ಕಲಾಪ ನಡೆಸಿದ ಸ್ಪೀಕರ್ ಯು.ಟಿ ಖಾದರ್.. ಏನ್ ಚರ್ಚೆ ಆಗಿದೆ?
ಸಂಗೀತ ಮಾಂತ್ರಿಕ ಎಂದೇ ಹೆಸರಾಗಿರುವ ರಾಜ್ಯಸಭಾ ಸಂಸದ ಇಳಯರಾಜಗೆ ದೇಗುಲದಲ್ಲಿ ಅಪಮಾನ ಆಗಿದೆ. ತಮಿಳುನಾಡಿನ ವಿರುಧುನಗರ ಜಿಲ್ಲೆಯ ಶ್ರೀವಿಲ್ಲಿಪುತೂ ಆಂಡಾಳ್ ದೇವಸ್ಥಾನಕ್ಕೆ ಹಿಂದೂ ಧಾರ್ಮಿಕ-ದತ್ತಿ ಇಲಾಖೆ ಅಧಿಕಾರಿಗಳು ಬರಮಾಡಿಕೊಂಡರು. ಈ ವೇಳೆ ಆಂಡಾಳ್ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿರುವ ಅರ್ಧ ಮಂಟಪಕ್ಕೆ ಪ್ರವೇಶಿಸಲು ಯತ್ನಿಸಿದಾಗ ಅಧಿಕಾರಿಗಳು, ಅರ್ಚಕರು, ಭಕ್ತರು ತಡೆದು ಹೊರ ಕರೆತಂದಿದ್ದಾರೆ ಎಂದು ಗೊತ್ತಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.
ಜಾತಿ ಕಾರಣಕ್ಕೆ ದೇವಸ್ಥಾನದ ಗರ್ಭಗುಡಿಗೆ ಬಿಡಲಿಲ್ವಾ?
ಇನ್ನು ಇಳಯರಾಜರ ಜಾತಿ ಕಾರಣಕ್ಕೆ ಅವರನ್ನು ಗರ್ಭಗುಡಿಗೆ ಬಿಡಲಿಲ್ವಾ ಅಂತ ಅಭಿಮಾನಿಗಳು ಆಕ್ರೋಶದ ಬೆಂಕಿ ಸುರಿದಿದ್ದಾರೆ. ಇನ್ನೂ ಕೆಲವರು ಅಲ್ಲಿನ ಸಂಪ್ರದಾಯ ಇರುವುದೇ ಹಾಗೆ, ಅದನ್ನು ಅಲ್ಲಿನ ಪುರೋಹಿತರು ಪಾಲಿಸುತ್ತಿದ್ದಾರೆ. ಯಾರನ್ನೂ ಬಲವಂತಾಗಿ ಆಚೆ ಕಳಿಸಿಲ್ಲ ಮತ್ತು ನಿಂದಿಸಿಲ್ಲ, ಇದನ್ನು ವಿವಾದ ಮಾಡುವ ಅಗತ್ಯವಿಲ್ಲ ಅಂತ ಅಧಿಕಾರಿಗಳು ಸಮರ್ಥನೆ ಮಾಡಿದ್ದಾರೆ.
ತಮ್ಮನ್ನು ಗರ್ಭಗುಡಿಗೆ ಬಿಡದ ಬಗ್ಗೆ ಸಂಗೀತ ನಿರ್ದೇಶಕ ಇಳಯರಾಜ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು ನನ್ನ ಸುತ್ತ ಕೆಲವರು ಸುಳ್ಳು ವದಂತಿಗಳನ್ನ ಹಬ್ಬಿಸುತ್ತಿದ್ದಾರೆ. ನಾನು ಯಾವುದೇ ಸಮಯದಲ್ಲಿ ಅಥವಾ ಸ್ಥಳದಲ್ಲಿ ನನ್ನ ಸ್ವಾಭಿಮಾನವನ್ನ ರಾಜೀ ಮಾಡಿಕೊಳ್ಳುವವನಲ್ಲ. ಆಗದ ಸುದ್ದಿ ನಡೆದಂತೆ ಬಿತ್ತರಿಸುತ್ತಿದ್ದು, ಅಭಿಮಾನಿಗಳು, ಸಾರ್ವಜನಿಕರು ವದಂತಿಗಳನ್ನ ನಂಬಬೇಡಿ.
ಇಳಯರಾಜ, ಸಂಗೀತ ನಿರ್ದೇಶಕ
ಆದ್ರೆ, ಶ್ರೀವಿಲ್ಲಿಪುತ್ತೂರು ದೇವಸ್ಥಾನದ ಆಡಳಿತ ಮಂಡಳಿ ಸಹ ಕೊಟ್ಟ ಸ್ಪಷ್ಟನೆಯೇ ಬೇರೆ. ಗರ್ಭಗುಡಿಯನ್ನ ಪವಿತ್ರವೆಂದು ಪರಿಗಣಿಸಲಾಗಿದೆ. ಯಾವುದೇ ಭಕ್ತರಿಗೂ ಆ ಜಾಗಕ್ಕೆ ಪ್ರವೇಶ ಇರಲ್ಲ. ಇಳಯರಾಜ ನಿರ್ಬಂಧಿತ ಪ್ರದೇಶಕ್ಕೆ ತಪ್ಪಾಗಿ ಪ್ರವೇಶಿಸಿದ್ದಾರೆ. ಈ ಬಗ್ಗೆ ಅವರ ಗಮನಕ್ಕೆ ತಂದಾಗ, ಸ್ವತಃ ಅವರೇ ಅಲ್ಲಿಂದ ಹೊರಟು ಹೋಗಿದ್ದಾರೆ ಎಂದು ಹೇಳಿದೆ.
ಸಂಪ್ರದಾಯ ಏನೇ ಇರಲಿ ಸಂಗೀತ ಲೋಕದ ಮೇರುಪರ್ವತ, ಕೋಟ್ಯಂತರ ಅಭಿಮಾನಿಗಳಿಗೆ ಆರಾಧ್ಯ ಇಳಯರಾಜಗೆ ಹೀಗೆ ಮಾಡಿರೋದು ಅಭಿಮಾನಿಗಳನ್ನು ಕೆರಳಿಸಿದ್ದು ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ