/newsfirstlive-kannada/media/post_attachments/wp-content/uploads/2025/07/gst.jpg)
ದೇಶದಲ್ಲಿ ಅಗತ್ಯ ದವಸ ಧಾನ್ಯಗಳ ಮೇಲಿನ ಜಿಎಸ್‌ಟಿ ಇಳಿಕೆಗೆ ಕೇಂದ್ರ ಸರ್ಕಾರ ಒಲವು ತೋರಿದೆ. ಕಾಳುಗಳು, ಟೀ, ಮಂಡಕ್ಕಿ, ಕಡಲೆ ಹಿಟ್ಟು ಸೇರಿದಂತೆ ಅಗತ್ಯ ಸಾಮಗ್ರಿಗಳ ಜಿಎಸ್‌ಟಿ ಇಳಿಕೆಗೆ ಒಲವು ವ್ಯಕ್ತವಾಗುತ್ತಿದೆ. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಮಧ್ಯಮ ವರ್ಗ, ಕೆಳ ವರ್ಗದ ಆಕ್ರೋಶ ತಣಿಸಲು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಜೊತೆಗೆ ದೇಶದಲ್ಲಿ ದಾಖಲೆಯ ಪ್ರಮಾಣದಲ್ಲಿ ಜಿಎಸ್‌ಟಿ ಸಂಗ್ರಹವಾಗುತ್ತಿದೆ.
ಹೀಗಾಗಿ ಅಗತ್ಯ ಸಾಮಗ್ರಿಗಳ ಮೇಲಿನ ಜಿಎಸ್‌ಟಿ ಸಂಗ್ರಹ ಕಡಿಮೆಯಾದರೂ, ಕೇಂದ್ರದ ಆದಾಯಕ್ಕೆ ಕೊರತೆ ಇರಲ್ಲ. ಮಧ್ಯಮ ವರ್ಗದ ಪ್ರತಿ ತಿಂಗಳ ಖರ್ಚುವೆಚ್ಚ ಕಡಿಮೆ ಮಾಡಲು ಕೇಂದ್ರದಿಂದ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ದೇಶದ ಜನ ಸಾಮಾನ್ಯರಿಗೆ ರಿಲೀಫ್ ನೀಡಲು ಅವಕಾಶ ಇದೆ ಎಂದು ಕೇಂದ್ರ ಸರ್ಕಾರಕ್ಕೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಹೀಗಾಗಿ ಇದೇ ಜುಲೈ ತಿಂಗಳಲ್ಲಿ ನಡೆಯುವ ಮಂಡಳಿ ಸಭೆಯಲ್ಲಿ ಜಿಎಸ್‌ಟಿ ದರ ಇಳಿಕೆ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: 16 ವರ್ಷದ ಹುಡುಗನ ಮೇಲೆ ಲೇಡಿ ಶಿಕ್ಷಕಿಯಿಂದ ನಿರಂತರ ಲೈಂಗಿಕ ದೌರ್ಜನ್ಯ.. ಈಗ ಏನಾಗಿದೆ..?
ಮೇ, 2025ರಲ್ಲಿ 2.01 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಜೂನ್, 2025 ರಲ್ಲಿ 1.85 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಇದು ದೇಶದಲ್ಲಿ ಜಿಎಸ್‌ಟಿ ಸಂಗ್ರಹ ಹೆಚ್ಚಾಗುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತೆ. ಜೂನ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ ಕಡಿಮೆಯಾಗಿದ್ದರೂ, 2024ರ ಜೂನ್ ತಿಂಗಳಿಗೆ ಹೋಲಿಸಿದರೇ, ಶೇ.6.5 ರಷ್ಟು ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ.
ಕೆಲ ಸರಕು ಸಾಮಗ್ರಿಗಳನ್ನು ಶೇ.18 ರಷ್ಟು ಜಿಎಸ್‌ಟಿ ವ್ಯಾಪ್ತಿಯಿಂದ ಶೇ.5 ಹಾಗೂ ಶೇ.12 ರ ವ್ಯಾಪ್ತಿಗೆ ತಂದು ಜಿಎಸ್‌ಟಿ ದರ ಇಳಿಕೆ ಮಾಡುವ ಪ್ರಸ್ತಾವವೂ ಕೇಂದ್ರ ಸರ್ಕಾರದ ಮುಂದಿದೆ. ಜಿಎಸ್‌ಟಿ ದರ ಇಳಿಕೆಯಿಂದ ಬೇಳೆಕಾಳು, ಅಕ್ಕಿ, ಮಂಡಕ್ಕಿ, ಟೀ, ಕಡಲೆ ಹಿಟ್ಟು ಸೇರಿದಂತೆ ಅಗತ್ಯ ಸಾಮಗ್ರಿಗಳ ಬೆಲೆ ಇಳಿಕೆಯಾಗಲಿದೆ. ಜೊತೆಗೆ ಸದ್ಯ ದೇಶದಲ್ಲಿ ನಾಲ್ಕು ಸ್ಲ್ಯಾಬ್ ಗಳ ಜಿಎಸ್‌ಟಿ ದರ ಜಾರಿಯಲ್ಲಿವೆ. ಶೇ.12 ರ ಜಿಎಸ್‌ಟಿ ಸ್ಲ್ಯಾಬ್ ತೆಗೆದು ಮೂರು ಸ್ಲ್ಯಾಬ್ ಮಾತ್ರ ಉಳಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ. ಶೇ.12 ರ ಜಿಎಸ್‌ಟಿ ಸ್ಲ್ಯಾಬ್ ನಲ್ಲಿರುವ ಉತ್ಪನ್ನ, ಸೇವೆಗಳನ್ನು ಶೇ.5 ಅಥವಾ ಶೇ.18 ಕ್ಕೆ ಸೇರ್ಪಡೆ ಸಾಧ್ಯತೆ ಇದೆ. ಶೇ.12 ರ ಜಿಎಸ್‌ಟಿ ಸ್ಲ್ಯಾಬ್ ಈಗ ಪ್ರಸ್ತುತವಲ್ಲ ಎಂದು ಗ್ರೂಪ್ ಆಫ್ ಮಿನಿಸ್ಟರ್ಗೆ ಅಧಿಕಾರಿಗಳು, ತಜ್ಞರ ಸಲಹೆ ನೀಡಿದ್ದಾರೆ. ರಾಜ್ಯ ಸರ್ಕಾರಗಳ ಹಣಕಾಸು ಸಚಿವರು ಕೂಡ ಶೇ.12 ರ ಜಿಎಸ್‌ಟಿ ಸ್ಲ್ಯಾಬ್ ತೆಗೆಯಲು ಸಲಹೆ, ಒಪ್ಪಿಗೆ ನೀಡಿದ್ದಾರೆ.
ಸದ್ಯ ದೇಶದಲ್ಲಿ ಶೇ.5, ಶೇ. 12, ಶೇ.18, ಶೇ. 28ರ ನಾಲ್ಕು ಜಿಎಸ್‌ಟಿ ಸ್ಲ್ಯಾಬ್ ಗಳಿವೆ. ಜನ ಸಾಮಾನ್ಯರು ಬಳಸುವ ಉತ್ಪನ್ನಗಳೇ ಶೇ.12ರ ಸ್ಲ್ಯಾಬ್ ನಲ್ಲಿವೆ. ಅವುಗಳನ್ನು ಶೇ.5 ರ ಜಿಎಸ್‌ಟಿ ಸ್ಲ್ಯಾಬ್ ವ್ಯಾಪ್ತಿಗೆ ತಂದರೇ, ಜನ ಸಾಮಾನ್ಯರಿಗೆ ತೆರಿಗೆ ಹೊರೆ ಕಡಿಮೆಯಾಗುತ್ತೆ. ಶೇ.12 ರ ಜಿಎಸ್‌ಟಿ ಸ್ಲ್ಯಾಬ್ ನಲ್ಲಿ ಟೂತ್ ಪೇಸ್ಟ್, ಟೂತ್ ಪೌಡರ್, ಛತ್ರಿ, ಬಟ್ಟೆ ಹೊಲಿಯು ಮೆಷಿನ್, ಪ್ರೆಷರ್ ಕುಕ್ಕರ್, ಅಡುಗೆ ಮನೆ ಸಾಮಗ್ರಿಗಳು, ಎಲೆಕ್ಟ್ರಿಕ್ ಐರನ್, ವಾಷಿಂಗ್ ಮೆಷಿನ್, ಬೈಸಿಕಲ್, ಸಾವಿರ ರೂಪಾಯಿವರೆಗಿನ ಗಾರ್ಮೆಂಟ್ಸ್ ಬಟ್ಟೆಗಳು, 500 ರೂಪಾಯಿಯಿಂದ 1 ಸಾವಿರ ರೂಪಾಯಿ ಒಳಗಿನ ಫುಟ್ ವೇರ್, ವ್ಯಾಕ್ಸಿನ್, ಸೆರಾಮಿಕ್ ಟೈಲ್ಸ್, ಕೃಷಿ ಟೂಲ್ಸ್ ಗಳಿವೆ. ವಾಟರ್ ಫಿಲ್ಟರ್, ಸೋಪ್, ವಾಟರ್ ಹೀಟರ್, ವಾಕ್ಯೂಮ್ ಕ್ಲೀನರ್, ಡಯೋಗ್ನೋಸ್ಟಿಕ್ ಕಿಟ್, ಸೋಲಾರ್ ವಾಟರ್ ಹೀಟರ್ ಜಾಮಿಟ್ರಿ ಬಾಕ್ಸ್, ಎಕ್ಸೈಸ್ ಬುಕ್, ರೆಡಿ ಮಿಕ್ಸ್ ಕಾಂಕ್ರೀಟ್, ಡ್ರಾಯಿಂಗ್ ಕಲರ್ ಬುಕ್ಸ್ ಗಳೆಲ್ಲಾ ಶೇ.12 ರ ಜಿಎಸ್‌ಟಿ ಸ್ಲ್ಯಾಬ್ ನಲ್ಲಿವೆ.
ಇವುಗಳನ್ನು ಶೇ. 12 ರ ಜಿಎಸ್‌ಟಿ ಸ್ಲ್ಯಾಬ್ ನಿಂದ ತೆಗೆದು ಶೇ.5 ರ ಜಿಎಸ್‌ಟಿ ಸ್ಲ್ಯಾಬ್ ಗೆ ಸೇರ್ಪಡೆ ಮಾಡಿದ್ರೆ, ಕೇಂದ್ರ ಸರ್ಕಾರಕ್ಕೆ ವಾರ್ಷಿಕ 40 ಸಾವಿರ ಕೋಟಿ ರೂಪಾಯಿಯಿಂದ 50 ಸಾವಿರ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹ ನಷ್ಟವಾಗಲಿದೆ. ಆದರೆ, ಈ ನಷ್ಟವನ್ನು ಬೇರೆಡೆಯಿಂದ ತುಂಬಿಕೊಳ್ಳುವ, ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ, ಸಾಮರ್ಥ್ಯ ಕೇಂದ್ರ ಸರ್ಕಾರಕ್ಕೆ ಇದೆ. ಜೊತೆಗೆ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾದಷ್ಟು ಆ ಉತ್ಪನ್ನಗಳು ಹೆಚ್ಚಾಗಿ ಮಾರಾಟವಾಗುತ್ತಾವೆ. ಇದರಿಂದ ಉತ್ಪಾದನೆಯೂ ಜಾಸ್ತಿಯಾಗಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತೆ ಎಂಬ ಲೆಕ್ಕಾಚಾರ ಕೇಂದ್ರ ಸರ್ಕಾರದ್ದಾಗಿದೆ. ಆದರೆ, ಶೇ.12ರ ಜಿಎಸ್‌ಟಿ ಸ್ಲ್ಯಾಬ್ ತೆಗೆಯುವುದಕ್ಕೆ ಪಂಜಾಬ್, ಕೇರಳ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳು ಮಾತ್ರ ವಿರೋಧಿಸುತ್ತಿವೆ. ಆದರೆ, ವೋಟಿಂಗ್ ನಡೆದ್ದಲ್ಲಿ ಕೇಂದ್ರ ಸರ್ಕಾರದ ಸ್ಲ್ಯಾಬ್ ಬದಲಾವಣೆಗೆ ಬಹುಮತ ಸಿಗಲಿದೆ. ಜಿಎಸ್‌ಟಿ ಮಂಡಳಿಯಲ್ಲಿ ಎಲ್ಲ ರಾಜ್ಯಗಳ ಹಣಕಾಸು ಸಚಿವರು ಇಲ್ಲವೇ ಅವರ ಪ್ರತಿನಿಧಿಗಳು ಭಾಗಿಯಾಗ್ತಾರೆ. ಇದುವರೆಗೂ ಒಮ್ಮೆ ಮಾತ್ರ ಜಿಎಸ್‌ಟಿ ಮಂಡಳಿಯಲ್ಲಿ ವೋಟಿಂಗ್ ನಡೆದಿದ್ದು, ಉಳಿದೆಲ್ಲಾ ತೀರ್ಮಾನಗಳನ್ನು ಸಹಮತದ ಆಧಾರದ ಮೇಲೆಯೇ ತೆಗೆದುಕೊಳ್ಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ