/newsfirstlive-kannada/media/post_attachments/wp-content/uploads/2024/03/k-shivaram.jpg)
ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಬಾನಲ್ಲೆ ಮಧುಚಂದ್ರಕೆ ಖ್ಯಾತಿಯ ನಟ ಕೆ.ಶಿವರಾಮ್ ಅಂತ್ಯಕ್ರಿಯೆ ಅವರ ತೋಟದ ಮನೆಯಲ್ಲಿ ನೆರವೇರಿದೆ. ಛಲವಾದಿ ಮಹಾಸಭಾದಲ್ಲಿ ಅಂತ್ಯಕ್ರಿಯೆ ಆಗ್ಬೇಕು ಅಂತ ಶಿವರಾಮ್ ಕುಟುಂಬ ಹಾಗೂ ಅಭಿಮಾನಿಗಳು ಆಗ್ರಹಿಸಿದ್ರು. ಆದ್ರೆ ಸರ್ಕಾರದಿಂದ ಅವಕಾಶ ಸಿಗದ ಹಿನ್ನೆಲೆಯಲ್ಲಿ ಆಕ್ರೋಶವೂ ವ್ಯಕ್ತವಾಗಿದೆ. ಕಡೆಗೆ ಬಿಡದಿಯ ತೋಟದಲ್ಲೇ ಶಿವರಾಂ ಅಂತ್ಯಕ್ರಿಯೆ ನಡೆದಿದೆ.
ಕೆ.ಶಿವರಾಮ್ ನಟ, ಮಾಜಿ ಐಎಎಸ್ ಅಧಿಕಾರಿ, ರಾಜಕಾರಣಿ. ಕನ್ನಡದಲ್ಲೂ ಐಎಎಸ್ ಪಾಸ್ ಮಾಡಬಹುದು ಅನ್ನೋದನ್ನು ಮೊದಲಿಗೆ ತೋರಿಸಿಕೊಟ್ಟಿದ್ದ ದಕ್ಷ ಅಧಿಕಾರಿ. ಚಂದನವನದಲ್ಲಿ ಮಿಂಚು ಹರಿಸಿದ್ದ ನಟ. ಛಲವಾದಿ ಸಮುದಾಯದ ಅಭಿವೃದ್ಧಿಗಾಗಿ ಹೋರಾಟ ನಡೆಸಿದ್ದ ಶಿವರಾಮ್ ಇನ್ನು ನೆನಪು ಮಾತ್ರ. ಆದ್ರೆ ಶಿವರಾಮ್ ಅಂತ್ಯಕ್ರಿಯೆ ವಿಚಾರ ಭಾರಿ ಹೈಡ್ರಾಮಾವನ್ನೇ ಸೃಷ್ಟಿಸಿದೆ.
ಛಲವಾದಿ ಮಹಸಭಾದಲ್ಲಿ ಅಂತ್ಯಕ್ರಿಯೆಗೆ ಪಟ್ಟು
90ರ ದಶಕದ ಎವರ್ಗ್ರೀನ್ ಸಿನಿಮಾ ಬಾನಲ್ಲೆ ಮಧುಚಂದ್ರಕೆ ಖ್ಯಾತಿಯ ನಟ ಶಿವರಾಮ್ ವಿಧಿವಶರಾಗಿದ್ದು ಇಂದು ಬೆಳಗ್ಗೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಅಭಿಮಾನಿಗಳು, ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದ್ರು. ಆದ್ರೆ ಅಂತ್ಯಕ್ರಿಯೆ ಎಲ್ಲಿ ಮಾಡಬೇಕು ಅನ್ನೋದು ಬೆಳಗ್ಗೆಯಿಂದ ಸಂಜೆವರೆಗೆ ಭಾರಿ ಗೊಂದಲಕ್ಕೆ ಎಡೆ ಮಾಡಿಕೊಟ್ಟಿತು. ಮೊದಲಿಗೆ ಬಿಡದಿಯ ತೋಟದಲ್ಲೇ ಅಂತ್ಯಕ್ರಿಯೆ ಮಾಡಬೇಕು ಅಂತ ಕುಟುಂಬಸ್ಥರು ನಿರ್ಧರಿಸಿದ್ದರು. ಆದ್ರೆ ಅಭಿಮಾನಿಗಳು ಕೆಂಗೇರಿಯ ಬಳಿಯ ವಿಶ್ವೇಶ್ವರ ಲೇಔಟ್ನಲ್ಲಿರುವ ಛಲವಾದಿ ಮಹಾಸಭಾದ ಅವರಣದಲ್ಲೇ ಆಗಬೇಕು ಪಟ್ಟು ಹಿಡಿದಿದ್ದರು. ಈ ಕುರಿತು ಸರ್ಕಾರಕ್ಕೂ ಮನವಿ ಪತ್ರ ಕಳುಹಿಸಿದ್ದರು.
ಅಂತಿಮದರ್ಶನಕ್ಕೆ ಬಂದ ಅಧಿಕಾರಿಗಳ ವಿರುದ್ಧ ಆಕ್ರೋಶ
ಮಧ್ಯಾಹ್ನ ಆದ್ರೂ ಅಂತ್ಯಕ್ರಿಯೆ ಎಲ್ಲಿ ಮಾಡಬೇಕು ಅನ್ನೋ ಗೊಂದಲ ಬಗೆಹರಿಯಲೇ ಇಲ್ಲ. ಸರ್ಕಾರದ ಆದೇಶ ಪತ್ರಕ್ಕಾಗಿ ಕುಟುಂಬಸ್ಥರು ಕಾದು ಕಾದು ಬೇಸರಗೊಂಡ್ರು. ಇದೇ ವೇಳೆ ಅಂತಿಮ ದರ್ಶನಕ್ಕೆ ಬಂದಿದ್ದ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಅಭಿಮಾನಿಗಳು ಘೇರಾವ್ ಹಾಕಿದ್ರು. ಛಲವಾದಿ ಮಹಾಸಭಾದಲ್ಲೇ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಡಬೇಕು, ಇಲ್ಲದಿದ್ರೆ ಉಗ್ರ ಹೋರಾಟ ಮಾಡ್ತೀವಿ ಅಂತ ಎಚ್ಚರಿಕೆ ಕೊಟ್ರು. ಈ ನಡುವೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಮಧ್ಯಸ್ಥಿಕೆ ವಹಿಸಿಕೊಂಡಿದ್ದು, ಜಾಗದ ಸಮಸ್ಯೆ ಬಗೆಹರಿಸಲು ಯತ್ನಿಸಿದ್ರು. ಇದೇ ವೇಳೆ ಮಾತನಾಡಿದ ಕೆ.ಶಿವರಾಮ್ ಅಳಿಯ ಪ್ರದೀಪ್, ನಾವು ನಮ್ಮ ತೋಟದಲ್ಲೇ ಅಂತ್ಯಕ್ರಿಯೆ ಮಾಡ್ತೀವಿ ಅಂದ್ವಿ, ಆದ್ರೆ ಅಭಿಮಾನಿಗಳು ಛಲವಾದಿ ಮಹಾಸಭಾದಲ್ಲೇ ಮಾಡಬೇಕು ಅಂತ ಮನವಿ ಮಾಡಿದ್ದಾರೆ.. ಸರ್ಕಾರ ಅಂತ್ಯಕ್ರಿಯೆಗೆ ಅವಕಾಶ ಕೊಡಬೇಕು ಅಂತ ಮನವಿ ಮಾಡಿದ್ದರು.
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಶಿವರಾಮ್ ಪತ್ನಿ ಗರಂ!
ಇದೇ ವೇಳೆ ಅಂತಿಮ ದರ್ಶನಕ್ಕೆ ಬಂದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ಕೆ.ಶಿವರಾಮ್ ಪತ್ನಿ ಗರಂ ಆದ್ರು. ಇಲ್ಲಿಗೆ ಬಂದು ನೋಡಲು ಅವರಿಗೆ ಯಾವ ಅಧಿಕಾರವೂ ಇಲ್ಲ ಅಂತ ಕಿಡಿಕಾರಿದ ಪ್ರಸಂಗವೂ ನಡೀತು. ಬೆಳಗ್ಗೆಯಿಂದ ಸಂಜೆವರೆಗೂ ಅಂತ್ಯಕ್ರಿಯೆಗೆ ಜಾಗಕ್ಕೆ ಅವಕಾಶ ಕೊಡುವ ಬಗ್ಗೆ ಸರ್ಕಾರದಿಂದ ಯಾವುದೇ ನಿರ್ಧಾರ ಬರಲೇ ಇಲ್ಲ. ಸರ್ಕಾರದ ಈ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಕೆ.ಶಿವರಾಮ್ ಪತ್ನಿ ವಾಣಿ ನಮ್ಮ ತೋಟದಲ್ಲೇ ಅಂತ್ಯಕ್ರಿಯೆ ಮಾಡ್ತೀವಿ ಅಂತ ಅಭಿಮಾನಿಗಳನ್ನು ಒಪ್ಪಿಸಿದ್ರು. ರಾತ್ರಿ ವೇಳೆಗೆ ಬಿಡದಿಯ ತೋಟದಲ್ಲಿ ಶಿವರಾಮ್ ಅಂತ್ಯಕ್ರಿಯೆ ನಡೀತು. ಈ ಮೂಲಕ ಕನ್ನಡ ಚಿತ್ರರಂಗ ಹಾಗೂ ಸರ್ಕಾರಿ ಅಧಿಕಾರಿಯಾಗಿಯೂ ಕನ್ನಡಿಗರ ಮನಗೆದ್ದಿದ ನಟನ ಸಾರ್ಥಕ ಬದುಕು ಅಂತ್ಯವಾದಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ