/newsfirstlive-kannada/media/post_attachments/wp-content/uploads/2024/06/Tumkur-Murder-Case.jpg)
ತುಮಕೂರು: ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದ ಪಾಪಿ ಮಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಪಾವಗಡ ತಾಲೂಕಿನ ಮಾಚಮಾರನಹಳ್ಳಿಯಲ್ಲಿ ಇಂತಹದೇ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಚಂದ್ರಕ್ಕ (50) ಕೊಲೆಯಾಗಿದ್ದ ಮಹಿಳೆ.
ಕೊಲೆಯಾದ ಚಂದ್ರಕ್ಕ ಕಳೆದ 5 ದಿನಗಳ ಹಿಂದೆ ಬೇವಿನ ಬೀಜ ಸಂಗ್ರಹಿಸಲು ನೀಲಗಿರಿ ತೋಪಿಗೆ ಹೋಗಿದ್ದರು. ಆಗ ಮಹಿಳೆಯನ್ನು ಕತ್ತು ಕೊಯ್ದು ಹತ್ಯೆ ಮಾಡಲಾಗಿತ್ತು. ತನ್ನ ತಾಯಿಯನ್ನು ಕೊಂದವರನ್ನ ಬಂಧಿಸಿ ನ್ಯಾಯ ಕೊಡಿಸುವಂತೆ ಸ್ವತಃ ಹಂತಕ ಮಗನೇ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದ.
ಇದನ್ನೂ ಓದಿ: ದರ್ಶನ್ ಗ್ಯಾಂಗ್‌ನಿಂದ ಕೊಲೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ಧ್ರುವ ಸರ್ಜಾ ಫ್ಯಾನ್ಸ್ ಬೆಂಬಲ; ಮಾಡಿದ್ದೇನು?
ಆದರೆ ಪೊಲೀಸ್ ತನಿಖೆ ವೇಳೆ ಚಂದ್ರಕ್ಕನ ಮಗ ಆಂಜನೇಯಲು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಯನ್ನು ವಿಚಾರಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ಚಂದ್ರಕ್ಕನ ಹೆಸರಿನಲ್ಲಿದ್ದ 5 ಎಕರೆ ಜಮೀನಿಗಾಗಿ ಮಗನೇ ಹತ್ಯೆ ಮಾಡಿದ್ದಾನೆ. ಸರ್ಕಾರ ಮಂಜೂರು ಮಾಡಿದ 5 ಎಕರೆ ಜಮೀನನ್ನು ಮಗಳ ಹೆಸರಿಗೆ ವರ್ಗಾಯಿಸುವುದಾಗಿ ಚಂದ್ರಕ್ಕ ಹೇಳಿದ್ದರು. ಇದೇ ವಿಷಯವಾಗಿ ತಾಯಿ ಮತ್ತು ಮಗನ ನಡುವೆ ಗಲಾಟೆಯಾಗಿತ್ತು.
ಚಂದ್ರಕ್ಕನನ್ನು ಆಂಜನೇಯುಲು ಹಾಗೂ ಆತನ ಬಾಮೈದ ಪ್ರಭಾಕರ್ ಹಿಂಬಾಲಿಸಿಕೊಂಡು ಹೋಗಿದ್ದರು. ಇಬ್ಬರೂ ಸೇರಿ ಚಂದ್ರಕ್ಕನ ಕುತ್ತಿಗೆ ಕೊಯ್ದು ಪರಾರಿಯಾಗಿದ್ದರು. ಇದನ್ನು ಕಂಡ ಪ್ರತ್ಯಕ್ಷದರ್ಶಿಗೂ ಆರೋಪಿಗಳು ಯಾರಿಗೂ ಈ ವಿಷಯ ಬಾಯ್ಬಿಡದಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಹಂತಕ ಆಂಜನೇಯಲು ಜೊತೆ ಕೊಲೆಗೆ ಸಾಥ್ ನೀಡಿದ್ದ ಪ್ರಭಾಕರ್ ಎಂಬಾತನನ್ನು ಪಾವಗಡ ಪೊಲೀಸರು ಬಂಧಿಸಿದ್ದಾರೆ. ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದ ಹಂತಕರು ಇದೀಗ ಅಂದರ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ