/newsfirstlive-kannada/media/post_attachments/wp-content/uploads/2025/01/KWR_CASE_1.jpg)
ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರ ಸಂಖ್ಯೆ ಸಾಕಷ್ಟಿದ್ದರೂ ಸರ್ಕಾರದ ಮಟ್ಟದಿಂದ ನಿರೀಕ್ಷಿತ ಸ್ಪಂದನೆಯಾಗಲಿ, ಸೌಲಭ್ಯವಾಗಲಿ ದೊರಕುತ್ತಿಲ್ಲ ಅನ್ನೋ ಆರೋಪವಿದೆ. ಇದರ ನಡುವೆ ಜಿಲ್ಲೆಯಲ್ಲಿ ಹೊಸ ಪ್ರಕರಣ ಪತ್ತೆಯಾಗಿದ್ದು ಆತಂಕ ಮೂಡಿಸಿದೆ.
ಎಂಡೋಸಲ್ಫಾನ್ ಈ ವಿಷಕಾರಿ ಕ್ರಿಮಿನಾಶಕ ಸಿಂಪಡಣೆ ಕರಾವಳಿ ಭಾಗದ ಸಾವಿರಾರು ಜನರ ಜೀವ ಹಾಗೂ ಜೀವನವನ್ನೇ ಕಿತ್ತುಕೊಂಡಿದೆ. ಗೇರು ಗಿಡಗಳ ಉತ್ಪನ್ನ ಹೆಚ್ಚಾಗಲಿ ಎಂದು ಕ್ರಿಮಿನಾಶ ಸಿಂಪಡಣೆಯನ್ನ ಕಳೆದ 40 ವರ್ಷದ ಹಿಂದೆ ಮಾಡಲಾಗಿತ್ತು. ಇದರ ಪರಿಣಾಮ ಅದೆಷ್ಟೋ ಜನರ ಕುಟುಂಬ ಅನಾಥವಾಗಿದೆ. ಯಾವುದೋ ರೂಪದಲ್ಲಿ ಕ್ರಿಮಿನಾಶ ಸಿಂಪಡಣೆಯನ್ನ ಸೇವನೆ ಮಾಡಿದವರ ಸಾವಿರಾರು ಮಕ್ಕಳು ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ.
‘ವಿಷ’ಕಾರಿ ಕ್ರಿಮಿ‘ನಾಶ’
- ಎಂಡೋಸಲ್ಫಾನ್ ಸಿಂಪಡಣೆಯಿಂದ ದಕ್ಷಿಣ ಕನ್ನಡ- 3,607
- ಉಡುಪಿ-1,514, ಉತ್ತರ ಕನ್ನಡ-1,793 ಜನರಿಗೆ ಅಂಗವೈಕಲ್ಯ
- ಸಮೀಕ್ಷೆ ಆಗದ ಕಾರಣ, ಸಾವಿರಾರು ಜನ ಪಟ್ಟಿಯಲ್ಲಿ ಸೇರಿಲ್ಲ
- ಎಂಡೋಸಲ್ಫಾನ್ ಮಾದರಿಯಲ್ಲಿ ಕೆಲ ಪ್ರಕರಣಗಳು ಪತ್ತೆ
- ನರಳಾಟ ಇನ್ನೂ ನಿಂತಿಲ್ಲವೇ, ಆರೋಗ್ಯ ಇಲಾಖೆ ಕ್ರಮವೇನು?
ಸಮೀಕ್ಷೆ ಮಾಡಬೇಕು ಎಂದು ನಾವೆಲ್ಲಾ ನಿರಂತರವಾಗಿ ಒತ್ತಾಯ ಮಾಡುತ್ತಿದ್ದೇವೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿಗಳ ಪ್ರಯತ್ನದ ಫಲವಾಗಿ ಭಟ್ಕಳದಲ್ಲಿ ಮಾತ್ರ ಸಮೀಕ್ಷೆ ಆಗಿದೆ. 5- 6 ತಿಂಗಳು ಹಿಂದೆ ಆಗಿದ್ದ ಈ ಸಮೀಕ್ಷೆಯಲ್ಲಿ ಸುಮಾರು 100ಕ್ಕಿಂತ ಹೆಚ್ಚು ಜನ ಹೊಸದಾಗಿ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಆದರೆ ಬೇರೆ ತಾಲೂಕುಗಳಲ್ಲೂ ಸಮೀಕ್ಷೆ ಮಾಡಬೇಕು. ಆದರೆ ಇನ್ನೂ ಅದನ್ನು ಮಾಡುತ್ತಿಲ್ಲ ಎನ್ನುವುದು ವಿಷಾಧನಿಯ.
ವೆಂಕಟೇಶ್ ನಾಯ್ಕ್, ಸ್ಕೋಡ್ ವೇಸ್ ಸಂಸ್ಥೆ ಅಧ್ಯಕ್ಷ
ಇದನ್ನೂ ಓದಿ: ಮಕ್ಕಳ ಪಾಲಿಗೆ ವೈರಿ ಆಗಿರುವ HMP ವೈರಸ್.. ವೈದ್ಯರು, ತಜ್ಞರಿಂದ ಅಭಯ
ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಬಾಧಿತರ ಪತ್ತೆ ಹಚ್ಚುವ ಸಮೀಕ್ಷೆ ಮಾಡುವ ಕೆಲಸ ನಡೆದಿದ್ದು, ಭಟ್ಕಳದಲ್ಲಿ ನೂರು ಹೊಸ ಪ್ರಕರಣ ಪತ್ತೆಯಾಗಿವೆ ಎನ್ನಲಾಗಿದೆ. ಇನ್ನು ಕುಮಟಾ, ಅಂಕೋಲಾ, ಹೊನ್ನಾವರ ಭಾಗದಲ್ಲೂ ಎಷ್ಟು ಪ್ರಕರಣ ಇದೆ ಎನ್ನುವ ಬಗ್ಗೆ ಸಮೀಕ್ಷೆ ಮೂಲಕ ತಿಳಿಯಬೇಕಾಗಿದೆ. ಈ ಬಗ್ಗೆ ಸಂಸದರ ಬಳಿ ಕೇಳಿದರೆ ಎಂಡೋಸಲ್ಪಾನ್ ಎರಡನೇ, ಮೂರನೇ ಪೀಳಿಗೆಗೆ ಬರುತ್ತಿರುವುದು ಆತಂಕದ ವಿಚಾರ. ಈ ಬಗ್ಗೆ ಸಂಭಂದಪಟ್ಟ ಸಚಿವರ ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಸುಮಾರು 40 ವರ್ಷದ ಹಿಂದಿನ ಘಟನೆಯಿಂದ ಸಾವಿರಾರು ಜನರು ಅಂಗವೈಕಲ್ಯಕ್ಕೊಳಗಾಗಿ ಇಡೀ ಜೀವನವನ್ನ ಹಾಸಿಗೆ ಮೇಲೆಯೇ ಕಳೆಯುವಂತಾಗಿತ್ತು. ಸದ್ಯ ಎಂಡೋಸಲ್ಫಾನ್ ಎನ್ನುವುದು ಜಿಲ್ಲೆಯಲ್ಲಿಲ್ಲ ಅಂದುಕೊಳ್ಳುವಷ್ಟ್ರಲ್ಲಿ ಹೊಸ ಪ್ರಕರಣಗಳ ಪತ್ತೆಯಾಗ್ತಿವೆ. ಇದೆರಿಂದ ಎಂಡೋಸಲ್ಫಾನ್ ಪರಿಣಾಮ ಇನ್ನು ಜಿಲ್ಲೆಯಲ್ಲಿ ಆಗ್ತಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ