/newsfirstlive-kannada/media/post_attachments/wp-content/uploads/2025/06/GILL_JAISWAL.jpg)
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯೂ ಇಂದಿನಿಂದ ಆರಂಭವಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ಶುಭ್ಮನ್ ಗಿಲ್ ಅವರು ಟಾಸ್ ಸೋತಿದ್ದಾರೆ. ಎದುರಾಳಿ ಆಂಗ್ಲರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ್ದಾರೆ. ಇದರಿಂದ ಭಾರತ ತಂಡ ಮೊದಲ ಬ್ಯಾಟಿಂಗ್ ಮಾಡಲಿದೆ.
ಲೀಡ್ಸ್ನ ಹೆಡಿಂಗ್ಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಲಿದೆ. ಭಾರತ ತಂಡದಲ್ಲಿ ಯುವ ಆಟಗಾರರೇ ತುಂಬಿದ್ದು ಶಕ್ತಿಯುತವಾದ ಬ್ರಿಟಿಷ್ ತಂಡವನ್ನು ಎದುರಿಸಲಿದ್ದಾರೆ.
ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಹೊಸ ನಾಯಕ ಶುಭ್ಮನ್ ಗಿಲ್ ನೇತೃತ್ವದಲ್ಲಿ ಟೆಸ್ಟ್ ಪಂದ್ಯ ಆಡುತ್ತಿದೆ. ಯಶಸ್ವಿ ಜೈಸ್ವಾಲ್ ಓಪನರ್ ಎನ್ನುವುದು ಕನ್ಫರ್ಮ್ ಆಗಿದ್ದು ಇವರ ಜೊತೆ ಇನ್ನೊಬ್ಬ ಆರಂಭಿಕ ಬ್ಯಾಟರ್ ಯಾರು ಎನ್ನವುದು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ. ಅನುಭವಿ ಆಟಗಾರರಾದ ಕನ್ನಡಿಗ ಕೆ.ಎಲ್ ರಾಹುಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಅವರು ತಂಡದಲ್ಲಿ ಇದ್ದಾರೆ. ಇನ್ನು ತಂಡದಲ್ಲಿ ಇನ್ನೊಬ್ಬ ಕನ್ನಡಿಗ ಕರುಣ್ ನಾಯರ್ ಕೂಡ ಆಡುತ್ತಿದ್ದಾರೆ.
ಇದನ್ನೂ ಓದಿ: ಎಚ್ಚರ ಯಶಸ್ವಿ ಜೈಸ್ವಾಲ್..! ಯುವ ಬ್ಯಾಟರ್ ಎದೆಯಲ್ಲಿ ಶುರುವಾಗಿದೆ ನಡುಕ..!
ಜಸ್ಪ್ರೀತ್ ಬುಮ್ರಾ ನೇತೃತ್ವದಲ್ಲಿ ಭಾರತ ತಂಡದ ಬೌಲಿಂಗ್ ಪಡೆ ಮುನ್ನಗ್ಗಲಿದೆ. ಸಿರಾಜ್, ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರು ಎದುರಾಳಿ ಮೇಲೆ ಪರಾಕ್ರಮ ಮೆರೆಯುವ ನಿರೀಕ್ಷೆಯಲ್ಲಿದ್ದಾರೆ. ವಿಕೆಟ್ಕೀಪರ್ ಹಾಗೂ ಉಪನಾಯಕನಾಗಿ ರಿಷಭ್ ಪಂತ್ ಅವರು ತಂಡದಲ್ಲಿದ್ದಾರೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಮೂರು ಪಂದ್ಯಗಳನ್ನು ಗೆದ್ದರೇ ಸರಣಿ ವಶ ಆಗಲಿದೆ. ಸದ್ಯ ಇದು ಮೊದಲ ಪಂದ್ಯವಾಗಿದ್ದು ಭಾರತದ ಯುವ ಆಟಗಾರರು ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವುದು ಕುತೂಹಲವಾಗಿದೆ.
ಟೀಮ್ ಇಂಡಿಯಾದ ಪ್ಲೇಯಿಂಗ್-11
ಯಶಸ್ವಿ ಜೈಸ್ವಾಲ್, ಕೆ.ಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಕರುಣ್ ನಾಯರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ